Friday, January 15, 2010

ಸ್ವಿಸ್ ಬ್ಯಾಂಕ್‌ಗಳಲ್ಲಿನ ಭಾರತೀಯರ ಹಣ- ಭಾರತಕ್ಕೆ ಮರಳಿ ತರಬಹುದೆ?

2009ರ ಚುನಾವಣೆಗಳ ಪ್ರಚಾರಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳೆಲ್ಲಾ ಸ್ವಿಸ್ ಬ್ಯಾಂಕ್‌ಗಳಲ್ಲಿ ಅಡಗಿಸಿಟ್ಟಿರುವ ಕೋಟಿಗಟ್ಟಲೆ ಭಾರತೀಯ ಕಪ್ಪುಹಣದ ಬಗ್ಗೆ ಮಾತನಾಡಿವೆ. ಬಿ.ಜೆ.ಪಿ.ಯ ಶ್ರೀ ಅದ್ವಾನಿಯವರು ಹಾಗೂ ಕಮ್ಯೂನಿಸ್ಟ್ ಪಕ್ಷದ ಶ್ರೀ ಸೀತಾರಾಂ ಯೆಚೂರಿಯವರು 1.5 ಟ್ರಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ಹಣವನ್ನು ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರು ಅಡಗಿಸಿಟ್ಟಿದ್ದಾರೆ ಎಂದಿದ್ದಾರೆ. ಕೆಲವು ವರದಿಗಳಂತೆ ಕೊಳ್ಳೆಹೊಡೆದು ಸ್ವಿಸ್ ಬ್ಯಾಂಕ್‌ಗಳಲ್ಲಿ ಹಣಕೂಡಿಸಿಟ್ಟಿರುವವರಲ್ಲಿ ಜಗತ್ತಿನಲ್ಲಿ ಭಾರತೀಯರದೇ ಎತ್ತಿದ ಕೈ. ಭಾರತೀಯರದು ಸುಮಾರು 1500 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ಹಣವಿದ್ದರೆ, ರಷಿಯನ್ನರು 480 ಬಿಲಿಯನ್ ಡಾಲರ್‌ಗಳಷ್ಟು ಹಣವಿರಿಸಿ ಎರಡನೇ ಸ್ಥಾನದಲ್ಲಿದ್ದಾರೆ ಹಾಗೂ 96 ಬಿಲಿಯನ್ ಡಾಲರ್‌ಗಳಷ್ಟು ಹಣವಿರಿಸಿರುವ ಚೀನಾದವರು ಐದನೇ ಸ್ಥಾನದಲ್ಲಿದ್ದಾರೆ. ಅಮೆರಿಕದವರಂತೂ ಮೊದಲ ಹತ್ತು ಸ್ಥಾನದಲ್ಲೂ ಇಲ್ಲ. ಇದು ನಮ್ಮ ಭ್ರಷ್ಟತೆಯ ಸೂಚಕವೆ? ಅಮೆರಿಕ ಮತ್ತು ಚೀನಾ ಏಕೆ ಭಾರತ ಮತ್ತು ರಷಿಯಾಕ್ಕಿಂತ ಹೆಚ್ಚು ಅಭಿವೃದ್ಧಿ ಹೊಂದಿವೆ ಎಂಬುದನ್ನೂ ತೋರಿಸುತ್ತದೆ. ಇತ್ತೀಚಿನ ಜಾಗತಿಕ ಆರ್ಥಿಕ ಅಧ್ಯಯನದ ವರದಿಗಳಂತೆ 2002ರಿಂದ 2006ವರೆಗೆ ವಾರ್ಷಿಕ ಭಾರತದಿಂದ 23.7 ಮಿಲಿಯನ್ ಅಮೆರಿಕನ್ ಡಾಲರ್ ಅಥವಾ 136,466 ಕೋಟಿ ರೂಗಳಷ್ಟು ಹಣವನ್ನು ಅಕ್ರಮವಾಗಿ ಸಾಗಿಸಲಾಗಿದೆ. ಅದೇ ಲೆಕ್ಕಾಚಾರದ ಪ್ರಕಾರ 1947ರಿಂದ ಅಕ್ರಮವಾಗಿ ಸಾಗಿಸಿರಬಹುದಾದ ಆ ರೀತಿಯ ಹಣವನ್ನು ಲೆಕ್ಕಹಾಕಿದಲ್ಲಿ ಅದು ಸುಲಭವಾಗಿ 70 ಲಕ್ಷ ಕೋಟಿ ಅಥವಾ 1.4.ಟ್ರಿಲಿಯನ್ ಅಮೆರಿಕನ್ ಡಾಲರ್ ಹಣವಾಗುತ್ತದೆ. ಆ ವರದಿಯ ಪ್ರಕಾರ ಅದರಲ್ಲಿ ಮೂರನೇ ಒಂದು ಭಾಗ ಮಾತ್ರ ಸ್ವಿಸ್ ಬ್ಯಾಂಕ್‌ಗಳಲ್ಲಿದೆ ಹಾಗೂ ಉಳಿದದ್ದು ಜಗತ್ತಿನಾದ್ಯಂತವಿರುವ 69 ತೆರಿಗೆಗಳ್ಳರ ಆಶ್ರಯತಾಣಗಳಲ್ಲಿ ಅಡಗಿಸಿಡಲಾಗಿದೆ. ಕೆಲವು ವರದಿಗಳ ಪ್ರಕಾರ ನೆಹರೂ ಅವಧಿಯಲ್ಲಿ, ರೂಪಾಯಿ ಮತ್ತು ಅಮೆರಿಕದ ಡಾಲರ್‌ನ ವಿನಿಮಯ ಅಂತರ ಅತಿ ಹೆಚ್ಚು ಇದ್ದಾಗಲೇ ಅತಿ ಹೆಚ್ಚು ಹಣದ ಕಳ್ಳಸಾಗಾಣಿಕೆ ನಡೆದಿದೆ. ಬೋಫೋರ್ಸ್‌ನ ಖರೀದಿಯ ಲಂಚದ ಹಣವನ್ನು ಸ್ವಿಸ್ ಬ್ಯಾಂಕ್‌ಗಳಲ್ಲೇ ಅಡಗಿಸಿಡಲಾಗಿದೆಯೆಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಈ ಹಣವನ್ನು ವಾಪಸ್ಸು ತಂದಲ್ಲಿ ಭಾರತದ ಪ್ರತಿ ಹಳ್ಳಿಗೂ 4 ಕೋಟಿ ರೂಗಳನ್ನು ಹಂಚಬಹುದೆಂದು ಅದ್ವಾನಿಯವರು ಹೇಳಿದ್ದಾರೆ. ಈ ಹಣವನ್ನು ತರಲು ಹಿಂದೇಟು ಹಾಕುತ್ತಿರುವ ಯು.ಪಿ.ಎ. ಸರ್ಕಾರದ ಬಗೆಗೆ ವಿರೋಧ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸುತ್ತಿವೆ. ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವರು ಸ್ವಿಸ್ ಸರ್ಕಾರದೊಂದಿಗಿನ ಡಬಲ್ ಟ್ಯಾಕ್ಸೇಶನ್ ಒಪ್ಪಂದದಲ್ಲಿ ತಿದ್ದುಪಡಿ ತರುವ ಬಗೆಗೆ ಮಾತ್ರ ಸರ್ಕಾರಕ್ಕೆ ಆಸಕ್ತಿ ಇದೆಯೆಂದು ಹೇಳಿದ್ದಾರೆ. ಆದರೆ ಭಾರತೀಯ ಗ್ರಾಹಕರ ಬಗೆಗೆ ತನ್ನಲ್ಲಿಗೆ ಯಾವುದೇ ಮೀನು ಹಿಡಿಯುವಂತೆ ಬರಬೇಡಿ, ಬರುವುದಾದಲ್ಲಿ ನಿರ್ದಿಷ್ಟ ವ್ಯಕ್ತಿಯೊಬ್ಬನ ಬಗ್ಗೆ ನಿರ್ದಿಷ್ಟ ತೆರಿಗೆಗಳ್ಳತನದ ಅಥವಾ ಭ್ರಷ್ಟಾಚಾರದ ಸಬೂತುಗಳಿದ್ದಲ್ಲಿ ಅವುಗಳನ್ನು ತೆಗೆದುಕೊಂಡುಬರುವಂತೆ ಸ್ವಿಸ್ ಬ್ಯಾಂಕ್‌ಗಳು ಭಾರತ ಸರ್ಕಾರಕ್ಕೆ ತಿಳಿಸಿವೆ.

ಕಾಂಗ್ರೆಸ್ ಪಕ್ಷ ಮತ್ತು ನೆಹರೂ ಕುಟುಂಬ ಈ ದೇಶವನ್ನು 50ಕ್ಕೂ ಹೆಚ್ಚು ವರ್ಷಗಳು ಆಳಿವೆ. ಯಾವುದೇ ನಿರ್ದಿಷ್ಟ ಸಬೂತಿಲ್ಲದೆ ವಿರೋಧ ಪಕ್ಷಗಳು ಕಾಂಗೆಸ್ ಪಕ್ಷವನ್ನು ಸ್ವಿಸ್ ಬ್ಯಾಂಕ್‌ಗಳಲ್ಲಿ ಅಕ್ರಮ ಹಣ ಕೂಡಿಟ್ಟಿರುವುದಾಗಿ ದೂರುತ್ತಿವೆ. ತುರ್ತುಪರಿಸ್ಥಿತಿಯ ಸಮಯದಲ್ಲಿ ಹಾಗೂ ಬೋಫರ್ಸ್ ಖರೀದಿಯ ಸಮಯದಲ್ಲಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಹೆಚ್ಚು ಹಣವನ್ನು ಕೂಡಿಡಲಾಗಿತ್ತು. ಹಾಗಾದರೆ ಕಾಂಗ್ರೆಸ್ಸೇತರ ಪ್ರಧಾನಮಂತ್ರಿಗಳು ಈ ವಿಷಯವನ್ನೇಕೆ ಕೈಗೆತ್ತಿಕೊಳ್ಳಲಿಲ್ಲ? ಈ ‘ಸ್ವಿಸ್ ಕ್ಲಬ್’ಗಳ ಸದಸ್ಯರಲ್ಲಿ ಇತರರೂ ಇದ್ದಾರೆ- ಎಲ್ಲಾ ಪಕ್ಷಗಳ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಮತ್ತು ಕೈಗಾರಿಕೋದ್ಯಮಿಗಳು. ಇದೇ ಕಾರಣಕ್ಕಾಗಿಯೇ ಯು.ಪಿ.ಎ. ಸರ್ಕಾರ ಸ್ವಿಸ್ ಬ್ಯಾಂಕ್‌ಗಳನ್ನು ಒತ್ತಾಯಿಸಲು ಹಿಂದೇಟು ಹಾಕುತ್ತಿದೆಯೆ? ಯು.ಬಿ.ಎಸ್. ಎಂಬ ಸ್ವಿಸ್ ಬ್ಯಾಂಕ್ ತನ್ನಲ್ಲಿನ ಅಮೆರಿಕದ ಗ್ರಾಹಕರನ್ನು ರಕ್ಷಿಸಲು ಅಮೆರಿಕದ ತೆರಿಗೆ ಇಲಾಖೆಗೆ 780 ಮಿಲಿಯನ್ ಡಾಲರ್ ಪರಿಹಾರವನ್ನು ಕೊಡಲು ಒಪ್ಪಿಕೊಂಡಿರುವಾಗ ಅದನ್ನೇ ಭಾರತ ಸರ್ಕಾರವೇಕೆ ಮಾಡಬಾರದು?

ಯು.ಬಿ.ಎಸ್. ಬ್ಯಾಂಕ್ ಅಮೆರಿಕದ ಸರ್ಕಾರಕ್ಕೆ ಏಕೆ ಪರಿಹಾರ ಧನ ನೀಡಿತೆಂಬುದನ್ನು ವಿವರವಾಗಿ ಗಮನಿಸೋಣ. ತನ್ನ ನಾಗರಿಕರು ತೆರಿಗೆಯಿಂದ ತಪ್ಪಿಸಿಕೊಳ್ಳುವಂತೆ ಮಾಡಲು ಯು.ಬಿ.ಎಸ್. ಅಧಿಕಾರಿಗಳು ಸಹಾಯಮಾಡಿದ್ದಾರೆಂದು ಅಮೆರಿಕದ ಸರ್ಕಾರ ರುಜುವಾತುಗೊಳಿಸಿತು. ಹಾಗಾಗಿ ಅದು ತನ್ನ ಗ್ರಾಹಕರಾಗಿರುವ ಎಲ್ಲಾ ಅಮೆರಿಕದ ನಾಗರಿಕರ ಸ್ವಿಸ್ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡುವಂತೆ ಒತ್ತಾಯಿಸಿತು. ಅಮೆರಿಕದ ಮಾಹಿತಿಯಂತೆ ಕನಿಷ್ಠ 52,೦೦೦ ಅಮೆರಿಕದ ನಾಗರಿಕರು ಸ್ವಿಸ್ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿದ್ದರು ಹಾಗೂ ಅವರೆಲ್ಲ ತೆರಿಗೆಯಿಂದ ತಪ್ಪಿಸಿಕೊಂಡಿದ್ದರು. ಸ್ವಿಟ್ಜರ್‌ಲ್ಯಾಂಡಿನ ಕಾನೂನಿನಂತೆ ತೆರಿಗೆಯಿಂದ ತಪ್ಪಿಸಿಕೊಳ್ಳುವುದು ಅಪರಾಧವಲ್ಲ ಹಾಗೂ 1934ರ ಗೋಪ್ಯತಾ ಅಧಿನಿಯಮದಂತೆ ಗ್ರಾಹಕರ ವಿವರ ನೀಡುವುದರಿಂದ 5೦,೦೦೦ ದಂಡ ಪಾವತಿಸಬೇಕಾಗಬಹುದು ಅಥವಾ ಸೆರೆಮನೆ ವಾಸ ಅನುಭವಿಸಬೇಕಾಗಬಹುದು ಅಥವಾ ಅವೆರಡನ್ನೂ ಅನುಭವಿಸಬೇಕಾಗಬಹುದು. ತನ್ನ ದೇಶದ ಸಮಗ್ರತೆಯ ಉಲ್ಲಂಘನೆಯಾಗುವುದರಿಂದ ಇತರ ಯಾವುದೇ ದೇಶದ ಕಾನೂನು ತನ್ನ ದೇಶದ ಕಾನೂನಿನ ಮೇಲೆ ಒತ್ತಡ ತರುವಹಾಗಿಲ್ಲವೆಂದು ಯು.ಬಿ.ಎಸ್. ಬ್ಯಾಂಕ್ ಹೇಳಿತು. ಆದರೆ ಅವೆರಡೂ ದೇಶಗಳಲ್ಲಿ ಅಪರಾಧಿ ಎಂದು ಪರಿಗಣಿಸಬಹುದಾದ ಗ್ರಾಹಕನಿದ್ದಲ್ಲಿ ಅಂಥವನ ವಿವರಗಳನ್ನು ಸ್ವಿಸ್ ಬ್ಯಾಂಕ್‌ಗಳು ನೀಡಬೇಕಾಗುತ್ತವೆ. ಆದರೆ ಅಮೆರಿಕದ ವಿಷಯದಲ್ಲಿ ಆ ಗ್ರಾಹಕರು ಸ್ವಿಸ್‌ನಲ್ಲಿ ಅಪರಾಧಿಗಳಲ್ಲದಿದ್ದರು ಅಮೆರಿಕ ಸರ್ಕಾರದ ತೀವ್ರ ಒತ್ತಡದಿಂದಾಗಿ ಯು.ಬಿ.ಎಸ್. 3೦೦ ಗ್ರಾಹಕರ ವಿವರಗಳನ್ನು ನೀಡಲು ಸಮ್ಮತಿಸಿತು ಹಾಗೂ ತನ್ನ ಹಿತಾಸಕ್ತಿಯನ್ನು ಮತ್ತು ಇತರ ಗ್ರಾಹಕರ (ಅವರ ವಿವರಗಳನ್ನು ಬಹಿರಂಗಗೊಳಿಸದೆ) ಹಿತಾಸಕ್ತಿಯನ್ನು ಕಾಪಾಡಲು 78೦ ಮಿಲಿಯನ್ ಡಾಲರ್ ಹಣವನ್ನು ಪಾವತಿಸಿತು. ಅಲ್ಲದೆ ಅಮೆರಿಕ ತನ್ನ ದೇಶದಲ್ಲಿ ಸ್ವಿಸ್ ಬ್ಯಾಂಕ್‌ಗಳ ಕಾರ್ಯಾಚರಣೆಯ ಪರವಾನಗಿಯನ್ನು ಹಿಂತೆಗೆದುಕೊಳ್ಳುವುದಾಗಿ ಹೆದರಿಸಿತು. ಈ ಒತ್ತಡಕ್ಕೂ ಸ್ವಿಸ್ ಬ್ಯಾಂಕ್‌ಗಳು ಮಣಿದವು ಏಕೆಂದರೆ, ಅಮೆರಿಕದಲ್ಲಿ ಸ್ವಿಸ್ ಬ್ಯಾಂಕ್‌ಗಳು ಶೇ.65ರಷ್ಟು ಬಂಡವಾಳ ಹೂಡಿಕೆ ಮಾಡಿವೆ. ಆದರೆ ಭಾರತದಲ್ಲಿನ ಅವುಗಳ ಹೂಡಿಕೆ ಶೇ.5ಕ್ಕಿಂತ ಕಡಿಮೆಯಿದೆ.

ಬ್ಯಾಂಕ್‌ಗಳ ಈ ಗೋಪ್ಯತೆಯ ಅಧಿನಿಯಮವೇನು? ಅದರ ಹಿಂದಿನ ಚರಿತ್ರೆಯೇನು?
ಕಳೆದ 3೦೦ ವರ್ಷಗಳಿಂದ ಸ್ವಿಸ್ ಬ್ಯಾಂಕ್‌ಗಳು ಅವುಗಳ ಗೋಪ್ಯತೆಗೆ ಹೆಸರುವಾಸಿಯಾಗಿವೆ. ಸ್ವಿಸ್ ಬ್ಯಾಂಕ್‌ಗಳನ್ನು ಫ್ರೆಂಚ್ ರಾಜರ ಬ್ಯಾಂಕ್‌ಗಳೆಂದು ಕರೆಯಲಾಗುತ್ತಿತ್ತು. 3೦೦ ವರ್ಷಗಳ ಹಿಂದಿನಿಂದಲೇ ಫ್ರೆಂಚ್ ರಾಜರು ಸ್ವಿಸ್ ಬ್ಯಾಂಕ್‌ಗಳನ್ನು ಬಳಸುತ್ತಿದ್ದರು. ನೆಪೋಲಿಯನ್ ಸಹ ಅವುಗಳಲ್ಲಿ ಹಣದ ಠೇವಣಿ ಇಡುತ್ತಿದ್ದ. ರಾಜಮನೆತನಗಳ ಅಧಿಕಾರಿಗಳು, ರಾಜಕಾರಣಿಗಳು ಮತ್ತು ವ್ಯಾಪಾರಸ್ಥರು ಅವುಗಳ ಗ್ರಾಹಕರಾಗಿದ್ದರು. ಅವುಗಳ ಗೋಪ್ಯತೆ ಮತ್ತು ವಿಶ್ವಾಸಾರ್ಹತೆಯಿಂದಲೇ ಅವು ಜನಪ್ರಿಯವಾಗಿದ್ದವು. 20ನೇ ಶತಮಾನದ ಪ್ರಾರಂಭದಲ್ಲಿ ಅದು ಹಲವಾರು ಫ್ರೆಂಚ್ ನಾಗರಿಕರನ್ನು ಗ್ರಾಹಕರನ್ನಾಗಿ ಹೊಂದಿತ್ತು. ಆ ಸಮಯದಲ್ಲಿ ಕೆಲವು ಸ್ವಿಸ್ ಬ್ಯಾಂಕ್ ಅಧಿಕಾರಿಗಳು ಪ್ಯಾರಿಸ್ಸಿನಲ್ಲಿ ತನ್ನ ರಹಸ್ಯ ಗ್ರಾಹಕರಿಗೆ ಸಹಾಯಮಾಡುವ ಸಮಯದಲ್ಲಿ ಸಿಕ್ಕಿಹಾಕಿಕೊಂಡು ಒಂದು ದೊಡ್ಡ ವಿವಾದವೇ ಉಂಟಾಗಿತ್ತು. ಆಗ ಫ್ರೆಂಚ್ ಸರ್ಕಾರವು ಪ್ಯಾರಿಸ್ಸಿನಲ್ಲಿನ ಸ್ವಿಸ್ ಬ್ಯಾಂಕ್ ಕಚೇರಿಗೆ ದಾಳಿನಡೆಸಿ ಫ್ರಾನ್ಸ್‌ನಿಂದ ತೆರಿಗೆಗಳ್ಳತನ ಮಾಡಿ ಹಣ ಸಾಗಿಸುತ್ತಿದ್ದ ಹಲವಾರು ಫ್ರೆಂಚ್ ಖಾತೆದಾರರ ವಿವರಗಳನ್ನು ಸರ್ಕಾರವು ಪಡೆದುಕೊಂಡಿತ್ತು. ಆಗ ವಿರೋಧ ಪಕ್ಷಗಳವರು ಫ್ರಾನ್ಸ್‌ನ ಸಿರಿವಂತ ನಾಗರಿಕರನ್ನು ಅವರ ಹಣದಿಂದಲೇ ಸ್ವಿಸ್ ಬ್ಯಾಂಕ್‌ಗಳು ಜರ್ಮನಿಗೆ ವಿಶ್ವಯುದ್ಧದ ಸಮಯದಲ್ಲಿ ಸಹಾಯಮಾಡಿದೆ ಎಂದು ಅವರನ್ನು ದೂರಿದವು. ಮೊದಲನೆ ವಿಶ್ವಯುದ್ಧದ ನಂತರ1929 ರಲ್ಲಿ ಉಂಟಾದ ಆರ್ಥಿಕ ಹಿಂಜರಿತ ಇಡೀ ವಿಶ್ವವನ್ನೇ ಬಾಧಿಸುತ್ತಿತ್ತು. ಅಲ್ಲದೆ ಆಗ ಜರ್ಮನಿಯಲ್ಲಿ ಹಿಟ್ಲರನ ನಾಜಿ ಪಕ್ಷ ಆಡಳಿತಕ್ಕೆ ಬಂದಿತು. ವಿದೇಶಿ ಬ್ಯಾಂಕ್‌ಗಳಲ್ಲಿ ಹಣ ಇಟ್ಟಿರುವ ಜರ್ಮನ್ ನಾಗರಿಕರನ್ನು ದೇಶದ್ರೋಹಿಗಳೆಂದು ಘೋಷಿಸಿದ. ಅಂಥವರು ವಿವರಗಳನ್ನು ಬಹಿರಂಗಗೊಳಿಸದಿದ್ದಲ್ಲಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ಅವರಿಗೆ ಮರಣದಂಡನೆ ವಿಧಿಸುವುದಾಗಿ ತಿಳಿಸಿದ. ಆ ಸಮಯದಲ್ಲಿ ಇಡೀ ಯೂರೋಪ್ ಮತ್ತು ಇತರ ರಾಷ್ಟ್ರಗಳು ಅತಂತ್ರ ಸ್ಥಿತಿಯಲ್ಲಿದ್ದವು. ಇದರಿಂದಾಗಿ ಹೆಚ್ಚು ಹೆಚ್ಚು ಯೆಹೂದಿ ವ್ಯಾಪಾರಿಗಳು ತಮ್ಮ ಹಣವನ್ನು ಸ್ವಿಸ್ ಬ್ಯಾಂಕ್‌ಗಳಲ್ಲಿ ಕೂಡಿಡತೊಡಗಿದರು. ಸ್ವಿಸ್ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ಕಾರಣಕ್ಕಾಗಿ ಹಿಟ್ಲರ್ ಮೂವರು ಸಿರಿವಂತ ಯೆಹೂದಿ ವ್ಯಾಪಾರಸ್ಥರನ್ನು ಕೊಂದುಹಾಕಿದ್ದ. ತನ್ನ ಗುಪ್ತಚಾರರಿಗೆ ಯೆಹೂದಿ ಖಾತೆದಾರರ ವಿವರಗಳನ್ನು ಪಡೆಯುವಂತೆ ಆದೇಶಿಸಿದ್ದ. ಈ ಸನ್ನಿವೇಶಗಳಿಂದಾಗಿ ಸ್ವಿಸ್ ಸರ್ಕಾರವು ತನ್ನ ಗ್ರಾಹಕರ ಹಿತರಕ್ಷಣೆಗಾಗಿ ಬ್ಯಾಂಕ್ ಗೋಪ್ಯತೆಯನ್ನು ಕಾನೂನಾಗುವಂತೆ ಮಾಡಿತು ಹಾಗೂ ಇದರಿಂದಾಗಿಯೇ1934 ರ ಪ್ರಖ್ಯಾತ ಬ್ಯಾಂಕ್ ಗೋಪ್ಯತಾ ಅಧಿನಿಯಮ ಜಾರಿಗೆ ಬಂದಿತು. ಈ ಅಧಿನಿಯಮದಲ್ಲಿನ ತಿದ್ದುಪಡಿಯನ್ನು ಪಾರ್ಲಿಮೆಂಟ್ ಮಾತ್ರವಲ್ಲ ಈ ವಿಷಯದ ಬಗ್ಗೆ ಮತಚಲಾಯಿಸುವ ಎಲ್ಲಾ ನಾಗರಿಕರ ಸಮ್ಮತಿಯೂ ಬೇಕಾಗಿದೆ.1983 ರಲ್ಲಿ ನಡೆದ ಒಂದು ರೆಫರೆಂಡಮ್‌ನಲ್ಲಿ ಶೇ.೭೩ರಷ್ಟು ಸ್ವಿಸ್ ನಾಗರಿಕರು ಬ್ಯಾಂಕ್ ಗೋಪ್ಯತಾ ಕಾಯಿದೆಯನ್ನು ಮುಂದುವರಿಸುವಂತೆ ಮತಚಲಾಯಿಸಿದರು.

ಸ್ವಿಸ್ ಬ್ಯಾಂಕ್‌ಗಳು ಯಾವಾಗ ಖಾತೆದಾರರ ಮಾಹಿತಿಯ ವಿವರಗಳನ್ನು ಬಹಿರಂಗಗೊಳಿಸುತ್ತವೆ?
ಮಾದಕ ವಸ್ತುಗಳ ಕಳ್ಳಸಾಗಣೆ, ಹವಾಲಾ, ತೆರಿಗೆ ಕಳ್ಳತನ (ತೆರಿಗೆಯಿಂದ ತಪ್ಪಿಸಿಕೊಳ್ಳುವುದಲ್ಲ), ಭಯೋತ್ಪಾದನಾ ಚಟುವಟಿಕೆಗಳು, ದಿವಾಳಿ ಎದ್ದಿರುವಿಕೆ, ವಿವಾಹ ವಿಚ್ಛೇದನಾ ಪ್ರಕರಣ ಮುಂತಾದವುಗಳಲ್ಲಿ ಅವು ವಿವರಗಳನ್ನು ಬಹಿರಂಗಗೊಳಿಸುತ್ತವೆ. ಈ ಪ್ರಕರಣಗಳಲ್ಲೂ ಸಹ ಅಪರಾಧವನ್ನು ನಿಸ್ಸಂಶಯವಾಗಿ ರುಜುವಾತುಗೊಳಿಸಬೇಕು. ಈ ಪ್ರಕರಣಗಳಲ್ಲಿ ಇತರ ದೇಶಗಳ ನಾಗರಿಕರು ತೊಡಗಿದ್ದಲ್ಲಿ ಆ ಅಪರಾಧ ಅವರ ದೇಶದಲ್ಲಿ ಹಾಗೂ ಸ್ವಿಟ್ಜರ್‌ಲ್ಯಾಂಡಿನಲ್ಲೂ ಅಪರಾಧವಾಗಿರಬೇಕು. ಯು.ಬಿ.ಎಸ್. ಬ್ಯಾಂಕ್ ಅಮೆರಿಕದ ತೆರಿಗೆ ಇಲಾಖೆಗೆ ಪರಿಹಾರ ನೀಡುವುದಕ್ಕೆ ಇದೇ ಕಾರಣವಾಗಿತ್ತು. ಇಂತಹ ಪ್ರಕರಣಗಳಲ್ಲಿ ಅವುಗಳ ಗ್ರಾಹಕರು ತೊಡಗಿಲ್ಲದಿದ್ದಲ್ಲಿ ಹಾಗೂ ಅವರ ವಿವರಗಳನ್ನು ಬಹಿರಂಗಗೊಳಿಸಿದ್ದಲ್ಲಿ ಅವರು ಹಾನಿ ಪರಿಹಾರ ಕೋರಲು ಅವರಿಗೆ ಕಾನೂನಿನಂತೆ ಹಕ್ಕಿರುತ್ತದೆ.

ಜನ ಸ್ವಿಸ್ ಬ್ಯಾಂಕ್‌ಗಳಲ್ಲಿ ಏಕೆ ಹಣ ಅಡಗಿಸಿಡುತ್ತಾರೆ?
1. ಅದರ ರಹಸ್ಯ ವಿಧಾನಗಳಿಂದಾಗಿ. ಅವು ಸಂಖ್ಯೆಗಳಿರುವ ಖಾತೆಗಳನ್ನು ಕೊಡುತ್ತವೆ. ಯಾವುದೇ ಹೆಸರು ಅಥವಾ ವಿವರಗಳನ್ನು ಹೊರಗೆಡವುದಿಲ್ಲ.
2. ಅಮೆರಿಕದ ಡಾಲರ್‌ನಂತರ ಸ್ವಿಸ್ ಕರೆನ್ಸಿಯೇ ಸದೃಢವಾದುದು.
3. ಸ್ವಿಸ್ ಬ್ಯಾಂಕ್‌ಗಳು ತಮ್ಮ ಅರ್ಹತೆಗೆ ಆಧಾರವಾಗಿ ಶೇ.45ರಷ್ಟು ಚಿನ್ನವನ್ನು ಹೊಂದಿರುತ್ತವೆ.
4. ಯಾವುದಾದರೂ ಬ್ಯಾಂಕ್ ವಿಫಲವಾದಲ್ಲಿ ಗ್ರಾಹಕ ಗ್ಯಾರಂಟಿ ಒಪ್ಪಂದದಿಂದಾಗಿ ಸ್ವಿಸ್ ಬ್ಯಾಂಕರ್‌ಗಳ ಸಂಘವು ತಕ್ಷಣ ಗ್ರಾಹಕರಿಗೆ ಅವರ ಹಣವನ್ನು ಹಿಂದಿರುಗಿಸುತ್ತದೆ.
5. ಅದೊಂದು ತೆರಿಗೆಗಳ್ಳರ ಸ್ವರ್ಗ. ಅನಿವಾಸಿ ಸ್ವಿಸ್ ನಾಗರಿಕರಿಗೆ ಅವರ ಠೇವಣಿಗಳ ಮೇಲಿನ ಬಡ್ಡಿಯ ಆದಾಯಕ್ಕೆ ಯಾವುದೇ ತೆರಿಗೆಯಿಲ್ಲ (ಅಮೆರಿಕ ಮತ್ತು ಯೂರೋಪಿಯನ್ ನಾಗರಿಕರನ್ನು ಹೊರತುಪಡಿಸಿ ಸ್ವಿಸ್ ಬ್ಯಾಂಕ್‌ಗಳು ಬಡ್ಡಿಯ ಮೇಲಿನ ತೆರಿಗೆಯನ್ನು ಗ್ರಾಹಕರ ವಿವರಗಳನ್ನು ಬಹಿರಂಗಗೊಳಿಸದೆ ಸರ್ಕಾರಗಳಿಗೆ ನೇರವಾಗಿ ಪಾವತಿಸುತ್ತವೆ).

ಸ್ವಿಸ್ ಬ್ಯಾಂಕ್- ಅಷ್ಟೊಂದು ಕೆಟ್ಟದ್ದೆ?
ಖಂಡಿತವಾಗಿಯೂ ಹೌದು. ಏಕೆಂದರೆ ಅದು ಮೊದಲನೆ ಮತ್ತು ಎರಡನೇ ವಿಶ್ವಯುದ್ಧಗಳಲ್ಲಿ ಜರ್ಮನಿಗೆ ಹಣಸಹಾಯ ಮಾಡಿದೆ. ಹಿಟ್ಲರ್ ಯೆಹೂದಿಗಳನ್ನು ಕೊಂದು ಅವರಿಂದ ದೋಚಿಕೊಂಡ ಆಸ್ತಿ ಮತ್ತು ಚಿನ್ನವನ್ನು ಆಧಾರವಾಗಿಟ್ಟು ಆ ಬ್ಯಾಂಕ್‌ಗಳಿಂದ ತನ್ನ ಯುದ್ಧಕ್ಕೆ ಹಣ ಪಡೆಯುತ್ತಿದ್ದ. ಮೊದಲನೆ ವಿಶ್ವಯುದ್ಧದಲ್ಲಿ ಫ್ರೆಂಚ್ ಹಣವನ್ನೇ ಜರ್ಮನಿಗೆ ಅದರ ಫ್ರೆಂಚ್ ಮತ್ತು ವಿಶ್ವದ ಇತರ ದೇಶಗಳ ಮೇಲಿನ ಯುದ್ಧಗಳಿಗೆ ನೀಡಿತು. ಹಿಟ್ಲರ್‌ನ ನರಮೇಧದಲ್ಲಿ ಪ್ರಾಣಕಳೆದುಕೊಂಡ ಲಕ್ಷಾಂತರ ಯೆಹೂದಿಗಳು ಸ್ವಿಸ್ ಬ್ಯಾಂಕ್‌ಗಳಲ್ಲಿ ಇರಿಸಿದ್ದ ಕೋಟ್ಯಾಂತರ ರೂಗಳ ಹಣದ ವಿವರಗಳನ್ನು ಆ ಬ್ಯಾಂಕ್‌ಗಳು ಇದುವರೆಗೂ ಹೊರಗೆಡವಿಲ್ಲ. ಸದ್ದಾಮ್ ಹುಸೇನ್‌ನಂತಹ ವಿಶ್ವದ ಹಲವಾರು ಸರ್ವಾಧಿಕಾರಿಗಳ ಲೂಟಿಯ ಹಣಗಳಿಗೆಲ್ಲ ಆ ಬ್ಯಾಂಕ್‌ಗಳು ಆಶ್ರಯ ನೀಡಿವೆ. ಒಸಾಮ ಬಿನ್ ಲಾಡೆನ್‌ನಂಥವರೂ ಸಹ ಅಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಮೂರನೇ ಜಗತ್ತಿನ ಭ್ರಷ್ಟ ರಾಜಕಾರಣಿಗಳ, ಸೇನೆಯ ಜನರಲ್‌ಗಳ ಪಾಪದ ಹಣದ ಬೊಕ್ಕಸ ಆ ಬ್ಯಾಂಕ್‌ಗಳಲ್ಲಿದೆ. ಗೋಪ್ಯತೆಯ ಹೆಸರಿನಲ್ಲಿ ಸ್ವಿಸ್ ಬ್ಯಾಂಕ್‌ಗಳು ಇಂತಹ ಜನರಿಂದ ತನ್ನ ಬೊಕ್ಕಸವನ್ನು ತುಂಬಿಕೊಂಡಿವೆ. ಸಕಾರಕ್ಕೆ ಮೋಸ ಮಾಡಿ ಕರ ಉಳಿಸುವವರಿಗೆ, ಮಾದಕವಸ್ತುಗಳ ಮಾರಾಟಗಾರರಿಗೆ, ಹವಾಲಾ ಹಣ ವರ್ಗಾವಣೆದಾರರೆಲ್ಲಾ ಈ ಬ್ಯಾಂಕ್‌ಗಳನ್ನು ಉಪಯೋಗಿಸುತ್ತಿದ್ದಾರೆ. ಇವುಗಳ ನಡುವೆ ಹಲವಾರು ಸರ್ಕಾರಗಳು, ಸರ್ಕಾರಿ ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳೂ ಸಹ ಸ್ವಿಸ್ ಬ್ಯಾಂಕ್‌ಗಳಲ್ಲಿ ಹಣ ಹೂಡಿವೆ. ಹಾಗಾಗಿ ಅಲ್ಲಿನ ಎಲ್ಲ ಹಣಕ್ಕೂ ಪಾಪದ ಮಸಿ ಹತ್ತಿಲ್ಲ.
ಸುಮಾರು 500 ಸ್ವಿಸ್ ಬ್ಯಾಂಕ್‌ಗಳಲ್ಲಿರಬಹುದಾದ ಅಂದಾಜು ಹಣ ಎಷ್ಟಿರಬಹುದು?
ವರದಿಗಳ ಪ್ರಕಾರ ಆ ಬ್ಯಾಂಕ್‌ಗಳಲ್ಲಿನ ಹಣ ಸುಮಾರು 4 ಟ್ರಿಲಿಯನ್ ಅಮೆರಿಕನ್ ಡಾಲರ್‌ಗಳು (200 ಲಕ್ಷ ಕೋಟಿ ರೂಪಾಯಿಗಳು). ಅಂದರೆ ಅಮೆರಿಕದ ಒಟ್ಟು ಗೃಹ ಉತ್ಪನ್ನದ ಮೂರನೇ ಒಂದು ಭಾಗ (13 ಟ್ರಿಲಿಯನ್ ಅಮೆರಿಕನ್ ಡಾಲರ್) ಅಥವಾ ಭಾರತದ ಒಟ್ಟು ಗೃಹ ಉತ್ಪನ್ನದ 4.5ರಷ್ಟು (46 ಲಕ್ಷ ಕೋಟಿ ರೂಪಾಯಿಗಳು). ಸ್ವಿಟ್ಜರ್‌ಲ್ಯಾಂಡಿನ ಜನಸಂಖ್ಯೆ 75 ಲಕ್ಷಕ್ಕಿಂತ ಕಡಿಮೆಯಿದೆ ಅಂದರೆ ಭಾರತದ ಜನಸಂಖ್ಯೆಯ ಶೇ.1ಕ್ಕಿಂತ ಕಡಿಮೆ, ಆದರೆ ಅದರ ಒಟ್ಟು ಗೃಹ ಉತ್ಪನ್ನ 381 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು (ಭಾರತದ ಒಟ್ಟು ಗೃಹ ಉತ್ಪನ್ನದ ಮೂರನೇ ಒಂದು ಭಾಗ). ಸ್ವಿಟ್ಜರ್‌ಲ್ಯಾಂಡಿನ ಪ್ರಮುಖ ಆದಾಯ ಬ್ಯಾಂಕಿಂಗ್ ಉದ್ಯಮದಿಂದಲೇ ಬರುತ್ತದೆ.

ಸ್ವಿಸ್ ಬ್ಯಾಂಕ್‌ಗಳು ಪಾರದರ್ಶಕವಾಗುವಂತೆ ಇತರ ಅಭಿವೃದ್ಧಿ ಹೊಂದಿದ ದೇಶಗಳು ಏಕೆ ಒತ್ತಡ ತರುತ್ತಿಲ್ಲ?
ಮೊದಲ ವಿಶ್ವಯುದ್ಧ ಮುಗಿದಾಗಿನಿಂದ ಎಲ್ಲ ಅಭಿವೃದ್ಧಿಹೊಂದಿದ ದೇಶಗಳು ತೀವ್ರ ಪ್ರಯತ್ನಗಳನ್ನು ಮಾಡುತ್ತಲೇ ಇವೆ. ಇತ್ತೀಚಿನ ಆರ್ಥಿಕ ಹಿಂಜರಿತದಿಂದಾಗಿ ಜಿ-20 ರಾಷ್ಟ್ರಗಳು ಮತ್ತು ಓ.ಸಿ.ಇ.ಡಿ. (ಸರ್ವ ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿ ಸಂಸ್ಥೆ) ಸ್ವಿಸ್ ಬ್ಯಾಂಕ್‌ಗಳ ಹಾಗೂ ಇತರ ತೆರಿಗೆ ಕಳ್ಳರ ಆಶ್ರಯ ಸ್ಥಾನಗಳ ಮೇಲೆ ತೀವ್ರ ಒತ್ತಡ ತರುತ್ತಿವೆ. ಓ.ಸಿ.ಇ.ಡಿ. ೩೦ ಅಭಿವೃದ್ಧಿ ದೇಶಗಳನ್ನು ಶಾಶ್ವತ ಸದಸ್ಯರನ್ನಾಗಿ ಹೊಂದಿದೆ. ಭಾರತ ಮತ್ತು ಚೀನಾ ಈ ಸಂಸ್ಥೆಯ ಸದಸ್ಯರಾಗಿಲ್ಲ. ಓ.ಸಿ.ಇ.ಡಿ. ಅಭಿವೃದ್ಧಿ ಹೊಂದಿದ ಪ್ರಜಾಸತ್ತೆಗಳಲ್ಲಿ ಪಾರದರ್ಶಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ತರಲು ಶ್ರಮಿಸುತ್ತಿದೆ. ಅದು ಈಗಾಗಲೇ ಮಲೇಷಿಯಾ ಮತ್ತು ಪರಗ್ವೇಯಂತಹ ತೆರಿಗೆ ಕಳ್ಳರ ಆಶ್ರಯ ಸ್ಥಾನಗಳನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಸ್ವಿಟ್ಜರ್‌ಲ್ಯಾಂಡ್ ಈಗಾಗಲೇ ಪ್ರಸ್ತಾವಿತ ಕಪ್ಪುಪಟ್ಟಿಯಲ್ಲಿದೆ. ಹಾಗಾಗಿ ಸ್ವಿಟ್ಜರ್‌ಲ್ಯಾಂಡಿನ ಮೇಲೆ ಒತ್ತಡ ಹೆಚ್ಚುತ್ತಿದೆ ಹಾಗೂ ಅದು ತಾನು ಪಾರದರ್ಶಕವಾಗುವ ಇಚ್ಛೆ ಸಹ ವ್ಯಕ್ತಪಡಿಸುತ್ತಿದೆ, ಆದರೆ ಅದು ತನ್ನದೇ ದೇಶಗಳ ಸಂಕೀರ್ಣ ಕಾನೂನುಗಳ, ಗ್ರಾಹಕ ಒಪ್ಪಂದಗಳ, ಬಹಿರಂಗಗೊಳಿಸಿದಲ್ಲಿ ಗ್ರಾಹಕರು ಹೂಡಬಹುದಾದ ದಾವೆಗಳ ಆತಂಕದಲ್ಲಿ ಹಾಗೂ ಸ್ವಿಟ್ಜರ್‌ಲ್ಯಾಂಡಿನ ನಾಗರಿಕರ ಸಮ್ಮತಿಯ ಜಾಲದಲ್ಲಿ ಸಿಕ್ಕಿಬಿದ್ದಿದೆ. ಜಗತ್ತಿನ ಎಲ್ಲ ಪ್ರಮುಖ ಬ್ಯಾಂಕ್‌ಗಳು ಸ್ವಿಸ್ ಬ್ಯಾಂಕ್‌ಗಳೊಂದಿಗೆ ತಮ್ಮ ವಹಿವಾಟನ್ನು ನಿಲ್ಲಿಸಿದಲ್ಲಿ ಸ್ವಿಸ್ ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಾರವು, ಆದರೆ ಇದು ನಡೆಯುವುದು ಸಾಧ್ಯವಿಲ್ಲ ಏಕೆಂದರೆ ಸ್ವಿಸ್ ಬ್ಯಾಂಕ್‌ಗಳು ಅಮೆರಿಕ, ಇಂಗ್ಲೆಂಡ್, ರಷಿಯಾ ಮತ್ತು ಯೂರೋಪ್‌ನಂತಹ ಪ್ರಬಲ ರಾಷ್ಟ್ರಗಳಲ್ಲಿ ಪ್ರಮುಖ ಬಂಡವಾಳ ಹೂಡಿಕೆ ಮಾಡಿದೆ. ಈ ಕ್ರಮದಿಂದ ಅವುಗಳ ಆರ್ಥಿಕತೆಯ ಮೇಲೆ ಪ್ರಭಾವ ಬೀರುವುದರಿಂದ ಆ ದೇಶಗಳು ಸಹ ಸಹಕರಿಸಲಾರವು. ಈ ಭೂಗತ ಬ್ಯಾಂಕಿಂಗ್ ವ್ಯವಸ್ಥೆ ಪಾರದರ್ಶಕವಾಗಲು ಹಲವಾರು ವರ್ಷಗಳೇ ಬೇಕಾಗಬಹುದು. ಅವು ತನ್ನ ಬ್ಯಾಂಕ್ ರಹಸ್ಯಗಳನ್ನು ತೆರೆದಿಟ್ಟರೂ ಅದು ಪ್ರಬಲ ದೇಶಗಳಿಗೆ ಮಾತ್ರವಾಗಿರುತ್ತದೆಯೇ ಹೊರತು ಭಾರತದಂತಹ ದೇಶಗಳಿಗಲ್ಲ. ಇಂತಹ ಸಂಕೀರ್ಣತೆಗಳ ನಡುವೆ ಭಾರತ ಸ್ವಿಸ್ ಬ್ಯಾಂಕುಗಳ ಮೇಲೆ ತನ್ನ ದೇಶದ ಠೇವಣಿದಾರರ ವಿವರಗಳನ್ನು ನೀಡುವಂತೆ ಒತ್ತಡ ತರುವುದು ಕಷ್ಟವಾಗುತ್ತದೆ. ಆದರೆ ಒಂದಲ್ಲ ಒಂದು ದಿನ ಭಾರತ ಸಹ ಅಮೆರಿಕದಂತಹ ಒಂದು ಪ್ರಬಲ ರಾಷ್ಟ್ರವಾಗಿ ಇತರ ಪ್ರಬಲ ರಾಷ್ಟ್ರಗಳೊಂದಿಗೆ ಸ್ವಿಸ್ ಬ್ಯಾಂಕ್‌ಗಳ ಮೇಲೆ ಒತ್ತಡ ತರಬಲ್ಲ ರಾಷ್ಟ್ರವಾಗಬಲ್ಲದು ಹಾಗೂ ಭ್ರಷ್ಟರನ್ನು ಬಯಲಿಗೆಳೆಯಬಹುದು.

ಯಾವುದಾದರೂ ದೇಶ ಇದುವರೆಗೆ ಸ್ವಿಸ್ ಬ್ಯಾಂಕ್‌ಗಳಿಂದ ಹಣ ವಾಪಸ್ ಪಡೆದಿದೆಯೆ?

ಸ್ವಿಸ್ ಬ್ಯಾಂಕ್ ಬಲವಂತದಿಂದ ಹಣವನ್ನು ವಾಪಸ್ಸು ನೀಡಿರುವುದು ಕೆಲವೇ ಸನ್ನಿವೇಶಗಳಲ್ಲಿ ಮಾತ್ರ:
1. ಎರಡನೇ ಮಹಾ ವಿಶ್ವಯುದ್ಧದ ನಂತರ ಅದು ಅಮೆರಿಕಕ್ಕೆ, ಫ್ರಾನ್ಸ್‌ಗೆ ಹಾಗೂ ಯು.ಕೆ.ಗೆ (ಅಲೈಡ್ ಸೇನೆಗೆ) ನಾಜಿ ಚಿನ್ನದ ವಿವಾದದಿಂದ ದೂರವಿರಲು ಒಟ್ಟು 65 ದಶಲಕ್ಷ ಡಾಲರ್‌ಗಳನ್ನು ಪಾವತಿಸಿತು.
2. ಎರಡನೇ ಮಹಾ ವಿಶ್ವಯುದ್ಧದ ಸಮಯದಲ್ಲಿ ನಾಜಿಗಳಿಗೆ ಸಹಾಯ ಮಾಡಲಾಗಿದೆ ಹಾಗೂ ನಾಜಿಗಳ ನರಮೇಧದಲ್ಲಿ ಹತರಾದ ಯೆಹೂದಿಗಳ ಖಾತೆಗಳಲ್ಲಿ ಹಣವನ್ನು ತಾನೇ ಉಳಿಸಿಕೊಂಡಿದೆ ಎಂಬ ಆರೋಪದಿಂದ ಮುಕ್ತವಾಗಲು ಸುಮಾರು 20 ದಶಲಕ್ಷ ಅಮೆರಿಕನ್ ಡಾಲರ್ ಹಣವನ್ನು ಯೆಹೂದಿ ಸಂಸ್ಥೆಗಳಿಗೆ ಪಾವತಿಸಿದೆ.
3. ಸೆಪ್ಟೆಂಬರ್ 9/11ರ ದಾಳಿಯ ನಂತರ ಅವು ಬಿನ್ ಲಾಡೆನ್‌ನ ಖಾತೆಗಳನ್ನು ಮುಟ್ಟುಗೋಲು ಮಾಡಿವೆ.
4.ಇತ್ತೀಚೆಗೆ ನ್ಯಾಯಾಲಯದ ಹೊರಗಿನ ಒಪ್ಪಂದದಂತೆ ಅದು ಅಮೆರಿಕದ ಕರ ವಿಭಾಗಕ್ಕೆ 780 ದಶಲಕ್ಷ ಡಾಲರ್ ಹಣವನ್ನು ಪಾವತಿಸಿದೆ.
ಈ ಮೇಲಿನ ಎಲ್ಲಾ ಉದಾಹರಣೆಗಳಲ್ಲಿ ಸ್ವಿಸ್ ಬ್ಯಾಂಕ್ ಯಾವುದೇ ವಿವರಗಳನ್ನು ಕೊಡದೆ ತನ್ನ ಗುಟ್ಟನ್ನು ಕಾಪಾಡಿಕೊಳ್ಳುವುದಕ್ಕಾಗಿ ಈ ಹಣವನ್ನು ಪಾವತಿಸಿದೆ.
ಉಪಸಂಹಾರ
ಸ್ವಿಸ್ ಬ್ಯಾಂಕ್‌ಗಳ ಈ ರಹಸ್ಯ ಸಂಕೇತಗಳ ಚರಿತ್ರೆಯನ್ನು ಗಮನಿಸಿದಲ್ಲಿ ಅವುಗಳಲ್ಲಿರುವ 70 ಲಕ್ಷ ಕೋಟಿ ರೂಗಳ ಭಾರತೀಯ ಹಣವನ್ನು ವಾಪಸ್ಸು ಪಡೆಯುವುದು ಸಾಧ್ಯವೆ? ಇಡೀ ಜಗತ್ತು ಪಾರದರ್ಶಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಯಸಿದಲ್ಲಿ ಹಾಗೂ ಸ್ವಿಸ್ ಬ್ಯಾಂಕ್ ಮತ್ತು ಆ ರೀತಿಯ ಸಂಸ್ಥೆಗಳನ್ನು ಬಹಿಷ್ಕರಿಸುವ ಒತ್ತಡ ತಂದಲ್ಲಿ ಆ ರೀತಿಯ ಅಕ್ರಮ ಹಣವನ್ನು ವಾಪಸ್ಸು ತರಬಹುದು. ಭಾರತದ 120 ಕೋಟಿ ಜನಸಂಖ್ಯೆಯಲ್ಲಿ ನನ್ನ ಅಂದಾಜಿನ ಪ್ರಕಾರ 30 ಲಕ್ಷ ಜನರು ತಲಾವಾರು 3 ಕೋಟಿ ರೂಗಳಷ್ಟು ಕಪ್ಪುಹಣವನ್ನು ಹೊಂದಿದ್ದಾರೆ. ಅಂದರೆ 90 ಲಕ್ಷ ಕೋಟಿ ರೂಗಳಷ್ಟಾಯಿತು ಹಾಗೂ ಇದು ಸ್ವಿಸ್ ಬ್ಯಾಂಕ್‌ಗಳಲ್ಲಿರುವ ಭಾರತಿಯರ ಅಕ್ರಮ ಹಣಕ್ಕಿಂತ ಹೆಚ್ಚಾಗಿದೆ. ನಮ್ಮ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು (ನಿವೃತ್ತ ಹಾಗೂ ಸೇವೆಯಲ್ಲಿರುವವರು), ವ್ಯಾಪಾರಿಗಳು ಸುಲಭವಾಗಿ ಈ 30 ಲಕ್ಷ ಜನರ ಸಂಖ್ಯೆಯಡಿ ಬರುತ್ತಾರೆ. ಹಾಗಿರುವಾಗ ನಾವೇಕೆ ನಮ್ಮ ಹಿತ್ತಲಲ್ಲೇ ಇರುವ ‘ರಹಸ್ಯ ನಿಧಿ’ಯ ಬಗ್ಗೆ ಮಾತನಾಡುತ್ತಿಲ್ಲ? ನಮ್ಮಲ್ಲೇ ಹಲವಾರು ‘ಮಿನಿ ಸ್ವಿಸ್’ ಬ್ಯಾಂಕ್‌ಗಳಿವೆಯಲ್ಲಾ! ನಾವು ಇದನ್ನೇ ಸಂಗ್ರಹಿಸಿದಲ್ಲಿ ಖಂಡಿತವಾಗಿ ನಾವು ನಮ್ಮ ವಿದೇಶಿ ಸಾಲಗಳನ್ನು ಒಂದೇ ಕಂತಿನಲ್ಲಿ ತೀರಿಸಿ ಉಳಿದದ್ದನ್ನು ಹಳ್ಳಿಗಳಿಗೂ ಹಂಚಬಹುದು. 500 ಮತ್ತು 1000 ರೂಗಳ ನೋಟಿನ ಮೇಲೆ ಔಷಧಗಳ ಮೇಲಿನಂತೆ ‘ಅವಧಿ ಮುಕ್ತಾಯ’ (ಎಕ್ಸ್‌ಪೈರಿ ದಿನಾಂಕ) ದಿನಾಂಕವನ್ನು ಮುದ್ರಿಸಬೇಕು. ಜನರು ಅವುಗಳನ್ನು ನವೀಕರಿಸಿಕೊಳ್ಳಲು ಬಂದಾಗ ಅದರ ಮೂಲ ಹಾಗೂ ತೆರಿಗೆ ಪಾವತಿಸಿದ ವಿವರಗಳನ್ನು ಪಡೆಯುವುದು ಸುಲಭವಾಗುತ್ತದೆ. ಇದೊಂದು ಸಣ್ಣ ಉದಾಹರಣೆಯಷ್ಟೆ. ಈ ರೀತಿಯ ಹತ್ತು ಹಲವಾರು ಉಪಾಯಗಳನ್ನು ಭಾರತದ ಬೌದ್ಧಿಕವರ್ಗ ಹಾಗೂ ದಾರ್ಶನಿಕರು ಶೋಧಿಸಬೇಕಾಗುತ್ತದೆ. ಇಂದಿನ ತುರ್ತು ಅವಶ್ಯಕತೆ ಅಂತಹ ದಾರ್ಶನಿಕರು ಸಾರ್ವಜನಿಕ ಕಚೇರಿಗಳನ್ನು ಆಕ್ರಮಿಸಿಕೊಳ್ಳಬೇಕು.

No comments:

Post a Comment