Friday, January 15, 2010

ಚೀನಾದಿಂದ ನಾವು ಬ್ರಹ್ಮಪುತ್ರ ನದಿಯನ್ನು ಉಳಿಸಿಕೊಳ್ಳಬಹುದೆ?






ವಿಶ್ವದ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿರುವ ಅಮೆರಿಕಾವನ್ನು ಕೆಳಕ್ಕಿಳಿಸಿ ಆ ಸ್ಥಾನವನ್ನು ಆಕ್ರಮಿಸಲು ಚೀನಾ ಸಜ್ಜುಗೊಳ್ಳುತ್ತಿದೆ. ಶೇ.14.5ಕ್ಕಿಂತ ಹೆಚ್ಚು ಬೆಳವಣಿಗೆಯ ಗತಿಯನ್ನು ಹೊಂದಿರುವ ಚೀನಾ ತನ್ನ ನಿರಂತರವಾಗಿ ಬೆಳೆಯುತ್ತಿರುವ ಆರ್ಥಿಕತೆಯಿಂದಾಗಿ ಭವಿಷ್ಯದ ನೀರು ಮತ್ತು ವಿದ್ಯುತ್ ಸಮಸ್ಯೆಗಳನ್ನು ನಿಭಾಯಿಸುವತ್ತ ತನ್ನ ದೃಷ್ಟಿ ಹರಿಸಿದೆ. ಯಾವುದೇ ದೇಶದ ಅಭಿವೃದ್ಧಿಗೆ ಆಧಾರ ಸ್ಥಂಭಗಳಾಗಿರುವ ಕೈಗಾರಿಕೆ ಮತ್ತು ಕೃಷಿಗೆ ನೀರು ಮತ್ತು ವಿದ್ಯುತ್ ಅತ್ಯವಶ್ಯಕವಾದುವು. ನೀರನ್ನು ಸಮರ್ಥವಾಗಿ ಬಳಸಿಕೊಳ್ಳದ ಆರೋಪವನ್ನು ವಿಶ್ವಬ್ಯಾಂಕ್ ಚೀನಾ ಮತ್ತು ಭಾರತ ಎರಡರ ಮೇಲೂ ಹೊರಿಸಿದೆ. ಚೀನಾದ ಉತ್ತರ ಭಾಗಗಗಳಲ್ಲಿ ನೀರಿನ ತೀವ್ರ ಕೊರತೆಯಿದ್ದು ಬೀಜಿಂಗ್ ಮತ್ತು ಶಾಂಘಾಯ್ ಸುತ್ತಮುತ್ತಲ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ 2000 ಅಡಿಗಳಿಗಿಂತ ಕೆಳಗೆ ಹೋಗಿದೆ. ಪಶ್ಚಿಮದಿಂದ ಪೂರ್ವಕ್ಕೆ ಹರಿಯುವ ಹಳದಿ ನದಿಯಲ್ಲಿ ವರ್ಷಗಳು ಕಳೆದಂತೆ ನೀರು ಕಡಿಮೆಯಾಗುತ್ತಿದೆ. ಉತ್ತರ ಚೀನಾದ ಜನಸಂಖ್ಯೆ 550 ದಶಲಕ್ಷಗಳಷ್ಟಿದ್ದು ಚೀನಾದ ಕೃಷಿಯೋಗ್ಯ ಭೂಮಿಯ 2/3ರಷ್ಟು ಭಾಗವನ್ನು ಹೊಂದಿದ್ದರೂ ಸಹ ಲಭ್ಯ ಶುದ್ಧ ನೀರಿನ 1/5ರಷ್ಟು ಭಾಗವನ್ನು ಮಾತ್ರ ಹೊಂದಿದೆ. ಆದರೆ 700 ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ದಕ್ಷಿಣ ಚೀನಾ ತಾನು ಪಡೆಯುವ ಹೆಚ್ಚು ಮಳೆಯಿಂದಾಗಿ ಹಾಗೂ ಯಾಂಗ್ಜೀ ನದಿಯಿಂದಾಗಿ ಲಭ್ಯ ಶುದ್ಧ ನೀರಿನ 4/5ರಷ್ಟು ಭಾಗವನ್ನು ಹೊಂದಿದೆ. ಕೈಗಾರಿಕೆ ಮತ್ತು ಕೃಷಿಯಲ್ಲಿ ಮುಂಚೂಣಿಯಲ್ಲಿರುವ ಉತ್ತರ ಚೀನಾ ಅದೇ ಬೆಳವಣಿಗೆಯನ್ನು ಕಾಯ್ದಿಟ್ಟುಕೊಳ್ಳಲು ನೀರಿನ ಕೊರತೆಯಿಂದ ಪರದಾಡುತ್ತಿದೆ. ಹಾಗಾಗಿ ಯಾಂಗ್ಜಿ ಮತ್ತು ಹಳದಿ ನದಿಗಳನ್ನು ಪಶ್ಚಿಮ, ಪೂರ್ವ ಹಾಗೂ ಮಧ್ಯದ ಕಾಲುವೆಗಳಿಂದ ಕೂಡಿಸುವ ಒಂದು ಬೃಹತ್ ಯೋಜನೆಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ.

(ವಿಶ್ವದ ಅತಿ ದೊಡ್ಡ ಅಣೆಕಟ್ಟು- ದಕ್ಷಿಣ ಚೀನಾದಲ್ಲಿನ 3 ಗಾರ್ಜಸ್ ಅಣೆಕಟ್ಟು)

ಚೀನಾದ ಬೃಹತ್ ಆಲೋಚನೆಗಳು

ಚೀನಾದ ಆಲೋಚನೆಗಳು ಯಾವಾಗಲೂ ಬೃಹತ್ ಗಾತ್ರದ್ದಾಗಿರುತ್ತವೆ. ಕ್ರಿ.ಪೂ. 5ನೇ ಶತಮಾನದಿಂದ 15ನೇ ಶತಮಾನದವರೆಗೆ ನಿರ್ಮಿಸಿರುವ ಚೀನಾದ ಮಹಾ ಗೋಡೆ ಸುಮಾರು 5000 ಮೈಲಿಗಳಷ್ಟು ಉದ್ದವಿದೆ. ಚೀನಾವನ್ನು ಆಳಿದ ಪ್ರತಿಯೊಬ್ಬ ಸಾಮ್ರಾಟನೂ ತನ್ನ ಹಿಂದಿನ ಸಾಮ್ರಾಟನಿಗಿಂತ ಬೃಹತ್ ಆಗಿರುವುದನ್ನು ಸಾಧಿಸಲು ಪ್ರಯತ್ನಿಸಿದ್ದಾನೆ. ಚೀನಾದ ಹಿಂದಿನ ನಾಯಕ ಲೆ ಪೆಂಗ್ ದಕ್ಷಿಣದಲ್ಲಿ ಯಾಂಗ್ಜಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ವಿಶ್ವದ ಅತಿ ದೊಡ್ಡ ಅಣೆಕಟ್ಟಾದ 3-ಗಾರ್ಜಸ್ ಅಣೆಕಟ್ಟಿಗೆ ಕಾರಣರಾಗಿದ್ದಾರೆ. ಅಲ್ಲಿನ ಜಲ ವಿದ್ಯುತ್ ಸ್ಥಾವರದಲ್ಲಿ 18ರಿಂದ 20,000 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈಗಿನ ಅಧ್ಯಕ್ಷರಾಗಿರುವ ಹು ಜಿಂಟಾವ್ ಮತ್ತು ಪ್ರಧಾನಿ ವೆನ್ ಜಿಯಾಬೊ ಇಬ್ಬರೂ ಲೆ ಪೆಂಗ್ ರೀತಿಯಲ್ಲಿಯೇ ಜಲ ವಿದ್ಯುತ್ ಇಂಜಿನಿಯರ್‌ಗಳಾಗಿದ್ದು ದಕ್ಷಿಣದ ಯಾಂಗ್ಜಿ ನದಿ ಮತ್ತು ಉತ್ತರದ ಹಳದಿ ನದಿಗಳ ಜೋಡಣೆಯ 400,000 ಕೋಟಿಗಳ ವೆಚ್ಚದ ಪ್ರಾಯೋಜನೆಗೆ ಕೈ ಹಾಕಿದ್ದಾರೆ. ಪ್ರಾಯೋಜನೆಯ ಬಹುಪಾಲು ಕಾರ್ಯವೆಲ್ಲಾ ಮಧ್ಯ ಮತ್ತು ಪೂರ್ವದ ಹಾದಿಗಳಲ್ಲಿ ಮಾಡಲಾಗುತ್ತಿದ್ದು ವಿವಾದಾಸ್ಪದ ಪಶ್ಚಿಮ ಹಾದಿಯ ಕಾರ್ಯ ಇನ್ನೂ ಪ್ರಾರಂಭವಾಗಬೇಕಾಗಿದೆ.

(ಮೂರು ಕೆಂಪನೆ ಸಾಲುಗಳು ಪೂರ್ವದ, ಮಧ್ಯದ ಮತ್ತು ಪಶ್ಚಿಮದ ಹಾದಿಗಳನ್ನು ತೋರಿಸುತ್ತವೆ. ಪಶ್ಚಿಮದ ಚುಕ್ಕಿಯ ಸಾಲು ಬ್ರಹ್ಮಪುತ್ರ ಮತ್ತು ಹಳದಿ ನದಿಯನ್ನು ಜೋಡಿಸುವ ಎರಡನೇ ಹಂತದ ಹಾದಿಯಾಗಿದೆ)

(ಬ್ರಹ್ಮಪುತ್ರಾದ ಮಹಾನ್ ತಿರುವು. ನದಿಯ ತಿರುವಿಗಾಗಿ ಅಣೆಕಟ್ಟು ನಿರ್ಮಿಸಲು ಪ್ರಸ್ತಾವಿತ ಸ್ಥಳ)

ನದಿ ಜೋಡಣೆಯ ಪಶ್ಚಿಮದ ಹಾದಿ ಕಡಿದಾದ ಬೆಟ್ಟಗುಡ್ಡಗಳ ಪ್ರದೇಶವಾಗಿದೆ. ಅಲ್ಲಿ ಕೆಲವೆಡೆ ಸಮುದ್ರದ ಮಟ್ಟಕ್ಕಿಂತ 4000 ಅಡಿಗಳಷ್ಟು ಎತ್ತರ ಸುರಂಗಗಳನ್ನು ಕೊರೆಯಬೇಕಾಗುತ್ತದೆ. ಅದರಲ್ಲಿ ಎರಡು ಹಂತಗಳಿವೆ. ಮೊದಲನೆಯ ಹಂತದಲ್ಲಿ ಯಾಂಗ್ಜಿಯನ್ನು ಬಯಾಂಕ ಪರ್ವತಗಳ ಮೂಲಕ ಹಳದಿ ನದಿಗೆ ಜೋಡಿಸಲಾಗುತ್ತದೆ. ಸುಮಾರು 125000ಕೋಟಿಗಳಷ್ಟು ಖರ್ಚಾಗಬಹುದಾದ ಎರಡನೇ ಹಂತದಲ್ಲಿ ಬ್ರಹ್ಮಪುತ್ರಾ ನದಿಯನ್ನು ಒಂದನೇ ಹಂತದ ಸುರಂಗದ ಮೂಲಕ ಹಳದಿ ನದಿಗೆ ಸೇರಿಸುವುದಾಗಿದೆ. ಮೊದಲನೇ ಹಂತದಲ್ಲಿ ಭೂಕಂಪಗಳ ಸಾಧ್ಯತೆಗಳುಳ್ಳ ಬಯಾಂಕ ಪರ್ವತದಲ್ಲಿ ಸುರಂಗಗಳನ್ನು ತೋಡಬೇಕಾಗಿರುವುದರಿಂದ ಚೀನಿಯರು ಅಣುವಿಸ್ಫೋಟಗಳನ್ನು ಬಳಸಬಹುದೆಂದು ತಜ್ಞರು ಹೇಳುತ್ತಾರೆ. ಈಗಿನ ಚೀನಿ ಸರ್ಕಾರ ವಿವಾದಾಸ್ಪದ ಬ್ರಹ್ಮಪುತ್ರ ನದಿಯನ್ನು ಆಗ್ನೇಯ ದಿಕ್ಕಿನಲ್ಲಿನ ಗೋಬಿ ಮುರುಭೂಮಿಗೂ ಹರಿಸುವ ಆಲೋಚನೆಯನ್ನು ಹೊಂದಿದೆ. ಬ್ರಹ್ಮಪುತ್ರ ನದಿಯ ತಿರುವಿನಲ್ಲಿ ಅಣೆಕಟ್ಟೊಂದನ್ನು ಕಟ್ಟಿ ಅಲ್ಲಿ ದಕ್ಷಿಣ ಚೀನಾದಲ್ಲಿನ 3-ಗಾರ್ಜಸ್ ಅಣೆಕಟ್ಟಿಗಿಂತ ಹೆಚ್ಚು, ಅಂದರೆ 40,000 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಆಲೋಚನೆ ಸಹ ಹೊಂದಿದೆ. ಚೀನಿಯರೇನಾದರೂ ಪಶ್ಚಿಮದ ಈ ಎರಡೂ ಹಂತಗಳನ್ನು ಸಂಪೂರ್ಣಗೊಳಿಸಿದರೆ ಭಾರತ, ಬಾಂಗ್ಲಾದೇಶ, ಮಯನ್ಮಾರ್ ಮತ್ತು ವಿಯೆಟ್ನಾಂ ದೇಶಗಳು ಕಷ್ಟದ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಚೀನಿಯರ ಈ ಆಲೋಚನೆ ಈಗಾಗಲೇ ಈ ದೇಶಗಳಲ್ಲಿ ನಡುಕ ಹುಟ್ಟಿಸಿವೆ. ವಿಯೆಟ್ನಾಂ ಈಗಾಗಲೇ ಈ ಪಶ್ಚಿಮದ ಕಾಲುವೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಭಾರತ ಬ್ರಹ್ಮಪುತ್ರಾ ನದಿಯನ್ನು ತಿರುಗಿಸುವಿಕೆಯ ಬಗೆಗೆ ಹೆಚ್ಚಿನ ಮಾಹಿತಿ ಕೇಳಿದೆ.

ಚೀನಾವನ್ನು ನಂಬಬಹುದೆ?

ವಿದೇಶಿ ಕಾರ್ಯದರ್ಶಿ ನಿರುಪಮಾ ರಾವ್‌ರವರು 2009ರ ನವೆಂಬರ್ 9ರಂದು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಬ್ರಹ್ಮಪುತ್ರಾ ನದಿಗೆ ಅಣೆಕಟ್ಟು ಕಟ್ಟುವ ಯೋಜನೆ ತನಗಿಲ್ಲವೆಂದು ಚೀನಾ ನಿರಂತರವಾಗಿ ಹೇಳುತ್ತಿದೆ ಎಂದರು. ನಮ್ಮ ಪ್ರಧಾನಿಯ ಪತ್ರಕ್ಕೆ ಉತ್ತರವಾಗಿ ಸಹ ಚೀನಾ ಅದನ್ನೇ ಹೇಳಿದೆ. ಅದಾದ ಒಂದು ವಾರದ ನಂತರ ನಿರ್ಮಾಣ ಕಾರ್ಯದ ಉಪಗ್ರಹ ಚಿತ್ರಗಳನ್ನು ಎನ್.ಆರ್.ಎಸ್.ಎ. ಭಾರತ ಸರ್ಕಾರಕ್ಕೆ ನೀಡಿದೆ. ಆ ಚಿತ್ರಗಳಲ್ಲಿ ಬ್ರಹ್ಮಪುತ್ರಾದ ಮಹಾನ್ ತಿರುವಿಗೆ ಹಾದಿಮಾಡಿಕೊಡುವ ಲಾಸಾ- ಮೆಡೋಗ್ ಹೆದ್ದಾರಿಯ ನಿರ್ಮಾಣದ ಚಿತ್ರಗಳೂ ಇವೆ. ಹತ್ತು ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಡೆಂಗ್ ಪಟ್ಟಣಕ್ಕೆ 1000 ಕೋಟಿಗಳ ವೆಚ್ಚದ ನಿರ್ಮಾಣದ ಎಲ್ಲರಲ್ಲೂ ಸಂಶಯ ಮೂಡಿಸುತ್ತಿದೆ. ಏಪ್ರಿಲ್ 2009ರಲ್ಲಿ ಗೆಜೂಬಾ ಕಾರ್ಪೊರೇಶನ್ ಬ್ರಹ್ಮಪುತ್ರಾ ನದಿಗೆ ಮಧ್ಯದಲ್ಲಿ ಜಾಂಗ್ಮೂ ಅಣೆಕಟ್ಟು (ಪ್ರಸ್ತಾವಿತ 5 ಅಣೆಕಟ್ಟುಗಳಲ್ಲಿ ಒಂದು) ಕಟ್ಟಲು ಟೆಂಡರ್ ಪಡೆದುಕೊಂಡಿದೆ (ಈ ಮಾಹಿತಿಯು ಆ ಕಂಪೆನಿಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ).


(ಕೆಂಪು ಸಾಲು ಬ್ರಹ್ಮಪುತ್ರಾ ನದಿಯನ್ನು ಹಳದಿ ನದಿಗೆ ಬಯಾಂಕ ಪರ್ವತಗಳ ಮೂಲಕ ಜೋಡಿಸುವುದನ್ನು ತೋರಿಸುತ್ತದೆ)

ಬ್ರಹ್ಮಪುತ್ರ ನದಿಯೇ ಏಕೆ?
ಯಾರ‍್ಲಾಂಗ್ ತ್ಸಾಂಗ್ಪೊ ಅಥವಾ ಬ್ರಹ್ಮಪುತ್ರಾ ನದಿ ಟಿಬೆಟನ್ ಪ್ರಸ್ಥಭೂಮಿಯಲ್ಲಿದ್ದು ವಿಶ್ವದ ಅತಿ ದೊಡ್ಡ ಮತ್ತು ಅತಿ ಎತ್ತರದ ನದಿಯಾಗಿದೆ.

ಅದು ಕೈಲಾಸ ಪರ್ವತದಲ್ಲಿ, ಸಮುದ್ರ ಮಟ್ಟಕ್ಕಿಂತ 4000 ಅಡಿ ಎತ್ತರದಲ್ಲಿ ಹುಟ್ಟಿ ಟಿಬೆಟ್ (ಚೀನಾ)ನಲ್ಲಿ 1800 ಕಿ.ಮೀ.ಗಳಷ್ಟು ಹರಿದು ದಕ್ಷಿಣಕ್ಕೆ ಸುಮಾರು 300 ಕಿ.ಮೀ.ಗಳಷ್ಟು ಉದ್ದದ ತಿರುವಿನಲ್ಲಿ ತಿರುಗಿ ಭಾರತದಲ್ಲಿನ ಅಸ್ಸಾಂ ಬಯಲು ಪ್ರದೇಶವನ್ನು ಪ್ರವೇಶಿಸುತ್ತದೆ. ಅಲ್ಲಿಂದ ಅದು ಅರುಣಾಚಲ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಮೂಲಕ ಗಂಗಾನದಿಯನ್ನು ಸೇರಿ ಬಾಂಗ್ಲಾದೇಶದ ಮೂಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಈ ಮೇಲಿನ ದೇಶಗಳಲ್ಲಿ ನೀರಾವರಿಗೆ ನೀರನ್ನು ಒದಗಿಸಿದ ನಂತರ ಈ ನದಿಯು ಬಂಗಾಳ ಕೊಲ್ಲಿಯ ಮುಖಜದಲ್ಲಿ ಪ್ರತಿ ಸೆಕೆಂಡಿಗೆ 19,830 ಘನ ಮೀ. ಅಥವಾ ವಾರ್ಷಿಕ 23,000 ಟಿ.ಎಂ.ಸಿ. ನೀರನ್ನು ಹೊರಸೂಸುತ್ತದೆ. ಕೇವಲ 1 ಟಿ.ಎಂ.ಸಿ. ನೀರು 7000 ಹೆಕ್ಟೇರ್ ಕೃಷಿಭೂಮಿಗೆ ನೀರಾವರಿ ನೀರನ್ನು ಒದಗಿಸಬಲ್ಲದು. ನದಿಯ ಪ್ರಾಕೃತಿಕ ಹರಿವನ್ನೇ ಬಳಸಿಕೊಂಡು 150,000 ಮೆಗಾ ವ್ಯಾಟ್‌ಗಿಂತ ಹೆಚ್ಚು ವಿದ್ಯುತ್ತನ್ನು ಉತ್ಪಾದಿಸಬಹುದು. ಬ್ರಹ್ಮಪುತ್ರಾದ ಈ ಮಹಾ ತಿರುವಿನಲ್ಲಿಯೇ ಚೀನಿಯರು ಅಣೆಕಟ್ಟನ್ನು ಕಟ್ಟಿ ವಿದ್ಯುತ್ ಉತ್ಪಾದಿಸಲು ಯೋಜಿಸುತ್ತಿರುವುದು. ಯು- ತಿರುವಿನ ಪ್ರವೇಶ ಸ್ಥಾನದಿಂದ ಯು- ತಿರುವಿನ ಕೊನೆಯ ಸ್ಥಾನಕ್ಕೆ 2500 ಮೀಟರುಗಳ ಎತ್ತರದ ಅಂತರವಿದೆ ಆದರೆ ಆ ತಿರುವಿನ ಉದ್ದ 300 ಕಿ.ಮೀ.ಗಳಷ್ಟಿದೆ. ಆದುದರಿಂದ ಅವರು ಹಿಮಾಲಯದ ಪರ್ವತದ ಮೂಲಕ ಸುರಂಗವೊಂದನ್ನು ಕೊರೆದು ತಿರುವಿನ ಪ್ರವೇಶದಿಂದ ಹೊರ ಹರಿಯುವ ಪ್ರವೇಶಕ್ಕೆ ನೇರ ಸಂಪರ್ಕ ನಿರ್ಮಿಸುವ ಯೋಜನೆ ಹೊಂದಿದ್ದಾರೆ. ಇದರಿಂದ 300 ಕಿ.ಮೀ. ಉದ್ದ ಕೇವಲ 15 ಕಿ.ಮೀ.ಗಳಷ್ಟಾಗುತ್ತದೆ ಆದರೆ ಎತ್ತರದ ಅಂತರ 2500 ಮೀ.ಗಳಷ್ಟು ಇದ್ದೇ ಇರುತ್ತದೆ. ಹಾಗಾಗಿ ನೀರು ಅತ್ಯಂತ ರಭಸವಾಗಿ ಹರಿದು 40,000 ಮೆ.ವ್ಯಾ. ವಿದ್ಯುತ್ ಉತ್ಪಾದಿಸಬಹುದಾಗಿದೆ. ಇಲ್ಲಿ ಉತ್ಪಾದಿತವಾಗುವ ಕೊಂಚ ವಿದ್ಯುತ್ತನ್ನು ಆ ಪರ್ವತಗಳಿಂದ ನೀರನ್ನು ಆಗ್ನೇಯ ಗೋಬಿ ಮರುಭೂಮಿಗೆ ಪಂಪ್ ಮಾಡಲು ಬಳಸಲಾಗುತ್ತದೆ. ಬ್ರಹ್ಮಪುತ್ರಾ ನದಿಯು ಟಿಬೆಟ್(ಚೀನಾ)ನಲ್ಲಿ ಹುಟ್ಟಿ ಅದರ ಮೂಲಕವೇ 1700 ಕಿ.ಮೀ. ಹರಿದು ಬಂದರೂ ಚಾರಿತ್ರಿಕವಾಗಿ ಅದು ಭಾರತ ಮತ್ತು ಬಾಂಗ್ಲಾದೇಶಕ್ಕೆ ಮಾತ್ರ ನೀರುಣಿಸುತ್ತಿತ್ತು. ಅದು ಬೆಟ್ಟಗುಡ್ಡಗಳ ಪ್ರದೇಶವಾಗಿದ್ದುದರಿಂದ ಹಾಗೂ ಅದು ದುಂದುವೆಚ್ಚದ ಕಾರ್ಯವಾಗಿದ್ದುದರಿಂದ ಚೀನಾ ಆ ನೀರನ್ನು ತಡೆದು ಬಳಸಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ಆದರೆ ಈಗ ಚೀನಾ ಈಗ ಸಾಕಷ್ಟು ಸಿರಿವಂತ ದೇಶವಾಗಿರುವುದರಿಂದ ಈಗ ಬೃಹತ್ ಯೋಜನೆಗಳಿಗೆ ಕೈ ಹಾಕುವ ಸಾಮರ್ಥ್ಯ ಅದಕ್ಕಿದೆ.
ಚೀನಾ ಮುಂದಾಲೋಚನೆಯಲ್ಲಿ ಮುಂದು
ಚೀನಾದವರು ಯಾವುದೇ ಪ್ರಾಯೋಜನೆಯನ್ನು ಜಾರಿಗೆ ತರುವ ಮೊದಲು ಅದನ್ನು ಎಲ್ಲ ರೀತಿಯಿಂದಲೂ ಅಧ್ಯಯನ ಮಾಡುತ್ತಾರೆ. ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೂ ಭವಿಷ್ಯದ ಪ್ರಾಯೋಜನೆಗಳ ಅರಿವಿರುತ್ತದೆ. ಯಾಂಗ್ಜಿ ಮತ್ತು ಉತ್ತರದಲ್ಲಿನ ಹಳದಿ ನದಿಯ ಜೋಡಣೆಗಳ ಬಗ್ಗೆ ಮಾವೋ ತ್ಸೆತುಂಗ್ ಐವತ್ತು ವರ್ಷಗಳ ಹಿಂದೆಯೇ ಆಲೋಚಿಸಿದ್ದರು. ಅಂತಹ ಪ್ರಾಯೋಜನೆಯೊಂದನ್ನು ಅನುಷ್ಠಾನಕ್ಕೆ ತರಲು ಅವರು ದಶಕಗಳ ಸಂಶೋಧನೆ ಮತ್ತು ಯೋಜನೆಯನ್ನು ಮಾಡಿದ್ದಾರೆ. ಚೀನಾದಲ್ಲಿ ಒಂದು ಆಡು ಮಾತಿದೆ: ‘ಪ್ರಾಯೋಜನೆಯೊಂದನ್ನು ಯೋಜನಾ ಕೋಣೆಗೆ ತರುವುದು ಕಷ್ಟ, ಆದರೆ ಅಲ್ಲಿಗೆ ಬಂದಲ್ಲಿ ಅದನ್ನು ಏನೇ ಆದರೂ ಅನುಷ್ಠಾನಕ್ಕೆ ತರಲಾಗುತ್ತದೆ’. ಟಿಬೆಟ್ ಬಂಜರು ಭೂಮಿಯಾದರೂ ಚೀನಾಗೆ ಅದು ಏಕೆ ಬೇಕಾಯಿತು? ಏಕೆಂದರೆ ಟಿಬೆಟನ್ ಪ್ರಸ್ಥಭೂಮಿ ದಕ್ಷಿಣ ಏಷಿಯಾದ ಹತ್ತು ಪ್ರಮುಖ ನದಿಗಳ ಉಗಮಸ್ಥಾನವಾಗಿದೆ ಹಾಗೂ ಅದು ಜಗತ್ತಿನ ಅತ್ಯಮೂಲ್ಯ ನೀರಿನ ಸಂಗ್ರಹಾಗಾರವಾಗಿದೆ. ಅಷ್ಟಲ್ಲದೆ ಅಲ್ಲಿ ಗಣಿಗಾರಿಕೆಗೂ ಅವಕಾಶಗಳಿವೆ. ಅದರಿಂದಾಗಿಯೇ ಟಿಬೆಟ್‌ನಿಂದ ಚೀನಾಕ್ಕೆ ಜಗತ್ತಿನ ಅತ್ಯಂತ ಉದ್ದ ವಿದ್ಯುತ್ ರೈಲ್ವೇ ಜಾಲವನ್ನು ನಿರ್ಮಿಸಲು ಮುಂದಾಗಿದೆ. ಈ ರೈಲ್ವೇ ಸಂಪರ್ಕ ಜಾಲಕ್ಕೆ ಹಾಗೂ ಗಣಿಗಾರಿಕೆಗಷ್ಟೇ ಅಲ್ಲ ಚೀನಾದಲ್ಲಿನ ಕೈಗಾರಿಕೆಗಳಿಗೂ ಸಾಕಷ್ಟು ವಿದ್ಯುತ್ ಬೇಕಾಗಿದೆ. ಬ್ರಹ್ಮಪುತ್ರಾ ಅಣೆಕಟ್ಟಿನಿಂದ ಪಶ್ಚಿಮ ಚೀನಾಕ್ಕೆ ನೀರನ್ನು ಪಂಪ್ ಮಾಡಲು ಸಹ ವಿದ್ಯುತ್ ಬೇಕಾಗಿದೆ. ಆಗ್ನೇಯ ಚೀನಾದಲ್ಲಿ ಮರುಭೂಮಿ ವಿಸ್ತರಣೆಯಿಂದಾಗಿ ಚೀನಾ ಪ್ರತಿ ವರ್ಷ 4 ದಶಲಕ್ಷ ಎಕರೆ ಭೂಮಿಯನ್ನು ಕಳೆದುಕೊಳ್ಳುತ್ತಿದೆ. ಆ ಪ್ರದೇಶಗಳು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿವೆ. ಆ ಕಾರಣಗಳಿಂದಾಗಿಯೇ ಚೀನಾ ಇಂದು ಬ್ರಹ್ಮಪುತ್ರಾ ನದಿಯ ನೀರಿಗೆ ಕೈಹಾಕಲು ಮುಂದಾಗುತ್ತಿದೆ. ಇತರ ದೇಶಗಳ ತಜ್ಞರು ಅಭಿಪ್ರಾಯದಂತೆ ಟಿಬೆಟ್ ಪ್ರಸ್ಥಭೂಮಿಯಿಂದ ಪಶ್ಚಿಮ ಚೀನಾಕ್ಕೆ ನೀರನ್ನು ಹರಿಸಲು ಹಿಮಾಲಯದ ಪರ್ವತಗಳ ಮೂಲಕ ಸುರಂಗ ಕೊರೆಯಬೇಕಾಗಿದ್ದಲ್ಲಿ ಅದು ಅಣುಸ್ಫೋಟಕಗಳನ್ನು ಬಳಸದೆ ಕೊರೆಯಲು ಸಾಧ್ಯವಿಲ್ಲ. ಈ ಕಾರಣದಿಂದಾಗಿಯೇ ಶಾಂತಿಯುತ ಬಳಕೆಗಾಗಿ ಅಣುವಿಸ್ಫೋಟಕ್ಕಾಗಿ ಪ್ರಸ್ತಾವನೆ ಮಾಡುವವರೆಗೆ ಚೀನಾ ಸಿ.ಟಿ.ಬಿ.ಟಿ.ಗೆ ಸಹಿಮಾಡಲಿಲ್ಲ.

ಈ ಪ್ರಾಯೋಜನೆಯಿಂದಾಗಿ ಭಾರತ ಮತ್ತು ಬಾಂಗ್ಲಾದೇಶದ ಮೇಲಾಗುವ ಪರಿಣಾಮಗಳೇನು?

ಯುರೇಶಿಯನ್ (ಚೀನಾದ) ಮತ್ತು ಇಂಡಿಯನ್ ಟೆಕ್ಟೋನಿಕ್ ಪ್ಲೇಟ್‌ಗಳ ಘರ್ಷಣೆಯಿಂದಾಗಿ ಬ್ರಹ್ಮಪುತ್ರ ಕಣಿವೆ ಮತ್ತು ಅದರ ಸುತ್ತಮುತ್ತಲ ಪರ್ವತ ಪ್ರದೇಶಗಳು ಭೂಕಂಪನ ಸೂಕ್ಷ್ಮ ಹಾಗೂ ಅಸ್ಥಿರ ಪ್ರದೇಶಗಳಾಗಿವೆ. ಅಲ್ಲಿ ನಡೆದ 1897ರ ಹಾಗೂ 1950ರ ಭೂಕಂಪನಗಳು 8.7 ರಿಕ್ಟರ್ ಸ್ಕೇಲ್‌ನಷ್ಟಿದ್ದು ದಾಖಲಿತ ಚರಿತ್ರೆಯಲ್ಲಿಯೇ ಅತಿ ತೀವ್ರ ಭೂಕಂಪನಗಳಾಗಿವೆ. ಈ ಭೂಕಂಪನಗಳು ತೀವ್ರ ಭೂ ಹಾಗೂ ಶಿಲಾ ಕುಸಿತಗಳನ್ನು ಉಂಟುಮಾಡಿತಲ್ಲದೆ ಕಣಿವೆಗಳಲ್ಲಿ ಬಿರುಕುಗಳನ್ನುಂಟುಮಾಡಿ ಹಲವಾರು ಉಪನದಿಗಳ ಹರಿವಿನ ದಿಕ್ಕನ್ನೇ ಬದಲಾಯಿಸಿತು. ಈ ದೃಷ್ಟಿಯಿಂದಾಗಿ ಪರ್ವತಗಳಲ್ಲಿ ಸುರಂಗಗಳನ್ನು ಕೊರೆಯಲು ಅಣುವಿಸ್ಫೋಟಗಳನ್ನು ಬಳಸುವುದು ಅತ್ಯಂತ ಆಘಾತಕಾರಿಯಾದುದು. ಇದರಿಂದಾಗಿ ಉಂಟಾಗಬಹುದಾದ ಭೂಕುಸಿತದಿಂದಾಗಿ ಪ್ರವಾಹಗಳುಂಟಾಗಿ ಭಾರತದ ಮೂರು ರಾಜ್ಯಗಳು ಹಾಗೂ ಬಾಂಗ್ಲಾದೇಶ ಸಂಪೂರ್ಣವಾಗಿ ನಾಮಾವಶೇಷವಾಗುವ ಅಪಾಯವಿದೆಯೆಂದು ತಜ್ಞರು ಹೇಳುತ್ತಾರೆ.
ಚೀನಿಯರು ಈ ಪ್ರಾಯೋಜನೆಯನ್ನು ಕೈಗೊಂಡಿದ್ದೇ ಆದಲ್ಲಿ ಅವರು ಲಭ್ಯವಿರುವ ಸರಾಸರಿ ವಾರ್ಷಿಕ 70 ಬಿಲಿಯನ್ ಘನ ಮೀಟರ್ ನೀರಿನಲ್ಲಿ 40 ಬಿಲಿಯನ್ ಘನ ಮೀಟರುಗಳಷ್ಟನ್ನು ತಮಗೇ ಬಳಸಿಕೊಳ್ಳುತ್ತಾರೆ. ಇದರಿಂದಾಗಿ ಉತ್ತರ ಮತ್ತು ದಕ್ಷಿಣ ನದಿಜೋಡಣೆಗಳ ಭಾರತದ ಕನಸು ಕನಸಾಗಿಯೇ ಉಳಿಯಬೇಕಾಗುತ್ತದೆ. ಅಷ್ಟಲ್ಲದೆ ಈಶಾನ್ಯ ರಾಜ್ಯಗಳಲ್ಲಿನ 50,000 ಮೆಗಾ ವ್ಯಾಟ್ (ಭಾರತದ ಜಲವಿದ್ಯುತ್ ಸಾಮರ್ಥ್ಯದಲ್ಲಿ ಶೇ.40ರಷ್ಟು) ವಿದ್ಯುತ್ ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತದೆ. ಇದರ ಜೊತೆಗೆ ಮಳೆಗಾಲದಲ್ಲಿ ಪ್ರವಾಹಗಳು ಹಾಗೂ ಬೇಸಿಗೆಯಲ್ಲಿ ನದಿ ತೀರದ ರಾಜ್ಯಗಳಿಗೆ ನೀರಿನ ಕೊರತೆ ಹಾಗೂ ನದಿಯ ಇಕ್ಕೆಲಗಳಲ್ಲಿ ಫಲವತ್ತಾದ ವಂಡು ಸಂಗ್ರಹವಾಗದೆ ತೊಂದರೆಯಾಗುತ್ತದೆ. ಅದು ಬಾಂಗ್ಲಾದ ಭೌಗೋಳಿಕ ಆಕಾರವನ್ನೇ ಬದಲಿಸುವುದಲ್ಲದೆ ವಿನಾಶದ ಅಂಚಿನಲ್ಲಿರುವ ಭಾರತದ ಹುಲಿಗೆ ಕೊನೆಯ ಆಸರೆಯಾಗಿರುವ ವಿಶ್ವ ವಿಖ್ಯಾತ ಮೀಸಲು ಅರಣ್ಯವಾದ ಸುಂದರ್ ಬನ್ ಅರಣ್ಯವನ್ನೂ ನಾಶಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಶತಮಾನಗಳಿಂದ ಈ ನದಿಯನ್ನು ನಂಬಿಕೊಂಡಿರುವ ಭಾರತದ ಮತ್ತು ಬಾಂಗ್ಲಾದೇಶದ 500 ದಶಲಕ್ಷ ಜನರ ಜೀವನೋಪಾಯವನ್ನೇ ನಾಶಮಾಡಿಬಿಡುತ್ತದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಒಂದು ಅಂತರರಾಷ್ಟ್ರೀಯ ಜಲ ಒಪ್ಪಂದವಿದೆ. ಆದರೆ ಚೀನಾದೊಂದಿಗೆ ಯಾವುದೇ ಅಂತಹ ಒಪ್ಪಂದವಿಲ್ಲ. ಪ್ರವಾಹಗಳ ಮುನ್ಸೂಚನೆಗಾಗಿ ಚೀನಾದಲ್ಲಿನ ಬ್ರಹ್ಮಪುತ್ರ ಜಲಾನಯನ ಪ್ರದೇಶಗಳಲ್ಲಿ ಬೀಳುವ ಮಳೆಯ ಬಗೆಗಿನ ಮಾಹಿತಿ ವಿನಿಮಯಕ್ಕಾಗಿ ಮಾತ್ರ ಒಪ್ಪಂದದ ದಸ್ತಾವೇಜನ್ನು ಮಾಡಿಕೊಂಡಿದೆ.

ಅಂತರರಾಷ್ಟ್ರೀಯ ತಕರಾರುಗಳಿಗೆ ಪರಿಹಾರವೇನು?
ಹರಿವ ನೀರಿನ ಜಲಯಾನೇತರ ಬಳಕೆಯ ಅಂತರ ರಾಷ್ಟ್ರೀಯ ಕಾನೂನು ಕೆಳಗಿನ ನದಿತೀರದ ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡುತ್ತದೆ. ಅನುಚ್ಛೇದ 5 ಮತ್ತು 6 ಸಮಾನಾಂತರ ಮತ್ತು ಸರಿಯಾದ ಬಳಕೆಯ ಬಗೆಗೆ ತಿಳಿಸಿದರೆ ಅನುಚ್ಛೇದ 32 ತಾರತಮ್ಯ ಮಾಡದಿರುವುದರ ಬಗೆಗೆ ತಿಳಿಸುತ್ತದೆ. ಅನುಚ್ಛೇದ 7, 8, ಮತ್ತು 9 ಕೆಳಗಿನ ನದಿ ಮುಖಜ ದೇಶಗಳಿಗೆ ಯಾವುದೇ ಗಮನಾರ್ಹ ತೊಂದರೆಯುಂಟು ಮಾಡದಂತೆ, ಸಹಕಾರ ನೀಸುವುದರ ಮೂಲಕ ಮತ್ತು ಮಾಹಿತಿಯನ್ನು ಹಂಚಿಕೊಳ್ಳಬೇಕೆಂಬ ನಿಯಮದ ಬಗ್ಗೆ ತಿಳಿಸುತ್ತದೆ. ಹಾಗಾಗಿ ಭಾರತ ಮತ್ತು ಬಾಂಗ್ಲಾ ದೇಶದೊಂದಿಗೆ ಚೀನಾ ಸಹಕರಿಸಿ ಮಾಹಿತಿಯನ್ನು ನೀಡಬೇಕು. ಆದರೂ ಅದರ ಕಾನೂನುಗಳಡಿ ಅದರ ಗಡಿಯೊಳಗಿನ ನದಿಗಳ ನೀರನ್ನು ಅದು ಬಳಸಿಕೊಳ್ಳಬಹುದು. ಗಂಗಾ ನದಿ ಬಾಂಗ್ಲಾಕ್ಕೆ ಹರಿಯುವ ಹಾದಿಯಲ್ಲಿ ಭಾರತ 1960ರಲ್ಲಿ ಫರಕ್ಕಾ ಅಣೆಕಟ್ಟನ್ನು ಕಟ್ಟಿರುವಂತೆ ಚೀನಾ ಸಹ ಮಾಡಬಹುದು. ತನ್ನ ಸರಿಯಾದ ಪಾಲಿನ ನೀರನ್ನು ಪಡೆಯಲು ಬಾಂಗ್ಲಾ ಭಾರತದೊಂದಿಗೆ 36 ವರ್ಷಗಳ ಕಾನೂನು ಸಮರ ಹಾಗೂ ಅಂತರರಾಷ್ಟ್ರೀಯ ಒತ್ತಡ ತರಬೇಕಾಯಿತು. ನೀರು ಭವಿಷ್ಯದ ನೀಲ ಬಂಗಾರವಾಗಿದೆ ಹಾಗೂ ಆ ಸಿರಿಗಾಗಿ ಭವಿಷ್ಯದಲ್ಲಿ ಹಲವಾರ ಅಂತರರಾಷ್ಟ್ರೀಯ ಸಂಘರ್ಷಗಳು ಹಾಗೂ ದೀರ್ಘ ಕಾನೂನು ಸಮರಗಳು ನಡೆಯಬೇಕಾಗುತ್ತವೆ. ಹಾಗಾಗಿ ಚೀನಾ ತನ್ನ ಪ್ರಾಯೋಜನೆಯನ್ನು ಅನುಷ್ಠಾನಗೊಳಿಸುವ ಮೊದಲು ಭಾರತ ಮತ್ತು ಬಾಂಗ್ಲಾದೇಶದ ಆತಂಕಗಳನ್ನು ಗಮನದಲ್ಲಿರಿಸಿಕೊಳ್ಳಬೇಕಾಗಿದೆ. ಇನ್ನೂ ಉತ್ತಮವಾದುದೆಂದರೆ ಈ ಮೂರು ದೇಶಗಳು ಸೇರಿ ಸಹಕರಿಸಿ ಒಂದು ಜಂಟಿ ಪ್ರಾಯೋಜನೆಯನ್ನು ಸಿದ್ಧಗೊಳಿಸುವುದಾದಲ್ಲಿ ಅದು ಮೂರೂ ರಾಷ್ಟ್ರಗಳಿಗೆ ನೀರು ಹಾಗೂ ವಿದ್ಯುತ್ತನ್ನು ಒದಗಿಸಲು ಸಹಕಾರಿಯಾಗುತ್ತದೆ. ಜಾಗತಿಕ ತಾಪಮಾನ ಏರಿಕೆ ಹಾಗೂ ಆಹಾರ ಅಸುರಕ್ಷತೆಯ ಈ ದಿನಗಳಲ್ಲಿ ಹಿರಿಯಣ್ಣನಾಗಿರುವ ಚೀನಾ ಮನುಕುಲದ ಒಳಿತಿಗಾಗಿ ಅಂತಹ ಸಹಕಾರಕ್ಕೆ ಮುಂದಾಗಬೇಕೇ ಹೊರತು ನೆರೆಹೊರೆಯ ರಾಷ್ಟ್ರಗಳೊಂದಿಗೆ ಸಂಘರ್ಷಕ್ಕಿಳಿಯಬಾರದು. ಅದೇ ರೀತಿ ಭಾರತ ಸಹ ತನ್ನ ನದಿಜೋಡಣೆಯ ಪ್ರಾಯೋಜನೆಗಳಲ್ಲಿ ನೇಪಾಳ, ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳನ್ನು ತನ್ನ ಗಮನದಲ್ಲಿರಿಸಿಕೊಳ್ಳಬೇಕು.

ಇದರಿಂದ ನಮಗೆ ದೊರೆಯುವ ಸಂದೇಶವೇನು?
ಇಲ್ಲಿ ಭಾರತ ಮತ್ತು ಚೀನಾದ ದೃಷ್ಟಿಕೋನದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಚೀನಾ ನದಿಜೋಡಣೆ ಹಾಗೂ ವಿದ್ಯುತ್ ಉತ್ಪಾದನೆಗಾಗಿ ಅಣುಸ್ಫೋಟಕಗಳನ್ನು ಬಳಸಲೂ ಹಿಂಜರಿಯುವುದಿಲ್ಲ. ಆದರೆ ಭಾರತದಲ್ಲಿ ಬ್ರಿಟಿಷರ ಆಡಳಿತದಲ್ಲಿ ರೂಪುಗೊಂಡ ನದಿಜೋಡಣೆಯ ಪರಿಕಲ್ಪನೆಯ ಕಡತಗಳು ಭಾರತದ ನೀರಾವರಿಯ ಇಲಾಖೆಯಲ್ಲಿ ಧೂಳು ಹಿಡಿಯುತ್ತಿವೆ. ನಮ್ಮ ರಾಜಕರಣಿಗಳಿಗೆ ಚೀನೀ ನಾಯಕರಂತಹ ದೃಢ ಸಂಕಲ್ಪವಿರಬೇಕು. ಕಳೆದ ವರ್ಷ ಚೀನಾಕ್ಕೆ ಭೇಟಿ ನೀಡಿದ ನಮ್ಮ ಶಾಸಕರು ಚೀನಿಯರ ಸಾಧನೆಗಳನ್ನು ನಕಲು ಮಾಡಲು ಪ್ರಯತ್ನಿಸುತ್ತಾರೆಂದು ನಾನು ನಂಬಿದ್ದೇನೆ. ಉತ್ತದಲ್ಲಿರುವ ಬೀಜಿಂಗ್ ಮತ್ತು ಶಾಂಘಾಯ್‌ಗೆ ನೀರೊದಗಿಸಲು ಅವರು ನಾಲ್ಕು ಲಕ್ಷ ಕೋಟಿ ಹಣ ಖರ್ಚು ಮಾಡಲು ಅವರು ಸಿದ್ಧರಿರುವಾಗ ನಾವು ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳಿಗೆ ಕೇವಲ 15000 ಕೋಟಿ ಖರ್ಚುಮಾಡಿ ನೀರೊದಗಿಸಲು ನಮಗೆ ಸಾಧ್ಯವಿಲ್ಲವೆ? ನೇತ್ರಾವತಿಯ ನೀರನ್ನು ಗುರುತ್ವಾಕರ್ಷಣೆಯ ಮೂಲಕವೇ ತರುವ ಪರಮಶಿವಯ್ಯನವರ ಪ್ರಾಯೋಜನೆಯನ್ನು ಪರೀಕ್ಷಿಸಿ ಸಾಧ್ಯವಿದ್ದಲ್ಲಿ ಅದನ್ನು ಅಳವಡಿಸಬೇಕು. ಬೆಂಗಳೂರಿಗೆ ನೇತ್ರಾವತಿಯ ನೀರನ್ನು ತರುವಲ್ಲಿ ಯಾವುದೇ ಅಂತರರಾಜ್ಯ ತಕರಾರುಗಳಿಲ್ಲ. ಪ್ರತಿವರ್ಷ ನೇತ್ರಾವತಿ ಮತ್ತು ಕುಮಾರಧಾರ ನದಿಗಳಿಂದ 2200 ಟಿ.ಎಂ.ಸಿ.ಗೂ ಹೆಚ್ಚು ನೀರು ಅರಬ್ಬಿ ಸಮುದ್ರ ಸೇರುತ್ತಿದೆ. ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರು ನೇತ್ರಾವತಿಯನ್ನು ಇತ್ತ ಕಡೆಗೆ ಹರಿಸಲು ಮೊದಲಿನಿಂದಲೂ ವಿರೋಧಿಸುತ್ತಿದ್ದಾರೆ. ಧರ್ಮಸ್ಥಳಕ್ಕೆ ಭೇಟಿನೀಡುವ ಭಕ್ತಾದಿಗಳು ಬಹುಪಾಲು ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳವರೇ ಆಗಿದ್ದಾರೆ. ಅವರ ಟ್ರಸ್ಟ್‌ನ ಬಹುಪಾಲು ಅದಾಯ ಇಡೀ ರಾಜ್ಯದ ಭಕ್ತಾದಿಗಳಿಂದ ಬರುತ್ತಿದೆ. ಹಾಗಿರುವಾಗ ಅವರು ರಾಜ್ಯದ ಇತರ ಜಿಲ್ಲೆಗಳ ಸಮಸ್ಯೆಯನ್ನೂ ಅವರು ಗಮನದಲ್ಲಿರಿಸಿಕೊಳ್ಳಬೇಕು.
ನಮ್ಮ ಮಣ್ಣಿನ ಮಗ ಮತ್ತು ಮಾಜಿ ಪ್ರಧಾನಿ ಶ್ರೀ ದೇವೇಗೌಡರು ಹಾಸನ ಮತ್ತು ಹೇಮಾವತಿಯ ಪರಿಧಿಯ ಆಚೆಗೂ ಆಲೋಚಿಸಬೇಕಾಗಿದೆ. ಅವರು ಅಮರಣಾಂತ ಉಪವಾಸ ಮಾಡಿ ಹಲವು ದಶಕಗಳೇ ಆಗಿದೆ. ಅದಕ್ಕೆ ಅವರ ಆರೋಗ್ಯ ಅನುಮತಿಸದಿದ್ದಲ್ಲಿ ಮಣ್ಣಿನ ಮೊಮ್ಮಗನಾಗಿರುವ ಶ್ರೀ ಕುಮಾರಸ್ವಾಮಿಯವರು ಮುಂದೆ ಬರಬೇಕಾಗಿದೆ. ಅವರಿಗಂತೂ ಅವಕಾಶಗಳೇ ಇದ್ದವು ಆದರೆ ಅವರ ದೃಷ್ಠಿಗೆ ದುರಾಸೆ ಅಡ್ಡವಾಗಿತ್ತು. ಸಿದ್ಧರಾಮಯ್ಯನವರು ವರಣಾ ನಾಲೆಯ ಹೊರಗೆ ಆಲೋಚಿಸುವವರಲ್ಲ. ಯೆಡ್ಯೂರಪ್ಪನವರಂತೂ ಅವರ ಬೆಂಬಲಿಗ ಶಾಸಕರ ಲೆಕ್ಕಾಚಾರದ ಗಣಿತದಲ್ಲೇ ಮುಳುಗಿದ್ದಾರೆ. ಯಾವ ಪಕ್ಷವೂ ತಮ್ಮ ಪ್ರಣಾಲಿಕೆಯಲ್ಲಿ ಪರಮಶಿವಯ್ಯನವರ ವರದಿಯನ್ನು ಸೇರಿಸಲು ತಯಾರಿಲ್ಲ. ಮೊಯ್ಲಿಯವರು ತಾವು ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಬರಪೀಡಿತ ಜಿಲ್ಲೆಗಳಿಗೆ ನೀರು ಒದಗಿಸುವುದಾಗಿ ಹೇಳಿದ್ದರು. ಕಾವೇರಿ ವಿವಾದ ಬರೆಹರಿಸುವಲ್ಲಿ ವಿಫಲರಾದ ಎಸ್.ಎಂ.ಕೃಷ್ಣಾರವರು ಚೀನಾ ಮತ್ತು ಪಾಕಿಸ್ತಾನಗಳ ತಕರಾರುಗಳೊಂದಿಗೆ ಹೆಣಗಾಡುತ್ತಿದ್ದಾರೆ. ತೆಲಂಗಾಣ ಚಳುವಳಿಯಂತೆಯೇ 71 ಬರಪೀಡಿತ ತಾಲ್ಲೂಕುಗಳ ಜನ ಭುಗಿಲೇಳದಿದ್ದಲ್ಲಿ ಅವರಿಗೆ ನ್ಯಾಯ ಸಿಗುವುದು ಮರಿಚೀಕೆಯೇ ಸರಿ.
-ಡಾ. ಮಧು ಸೀತಪ್ಪ
ಸಂಯುಕ್ತ ಕರ್ನಾಟಕ, 19-12-09

1 comment:

  1. dr.madhu,
    Your articles are all thought provoking.The subject matter hat you discuss is worthy & yet so true ,near to our lives& country ,that we can't skip reading the same.If we contribute in any way, any amount on the aticles that you've written about china's fast grwth,can we trust china, save Brahmaputra,surgey to Rivr Netravati -that'll be a service done to Our nation.Congtrats--Keep provoking !!!

    ReplyDelete