Tuesday, January 19, 2010

ದಕ್ಷಿಣ ಭಾರತದ ಭ್ರಷ್ಟ 'ಕೋಡಾ'ಗಳು

ಶ್ರೀ ಚಂದ್ರಬಾಬು ನಾಯ್ಡುರವರ ಇತ್ತೀಚಿನ ಆರೋಪಗಳನ್ನು ಗಮನಿಸಿದಲ್ಲಿ, ವಿಶ್ವಸಂಸ್ಥೆಯ ತಂಡವು ಇರಾನ್‌ನ ಅಣುಸ್ಥಾವರಗಳ ಪರಿಶೀಲನೆಗೆ ಭೇಟಿನೀಡಲು ಅನುಮತಿ ಪಡೆಯುವುದು ಓಬಳಾಪುರಂ ಗಣಿಗಳ ಪರಿಶೀಲನೆಗೆ ಅನುಮತಿ ಪಡೆಯುವುದಕ್ಕಿಂತ ಸುಲಭವಾಗಿದೆ. ಭಾರತ ಸರ್ವೇಕ್ಷಣ ಇಲಾಖೆಯವರು ಕೇಂದ್ರ ಮೀಸಲು ಪಡೆಯವರ ರಕ್ಷಣೆಯಿಲ್ಲದೆ ಓಬಳಾಪುರಂ ಗಣಿಗಳನ್ನು ಪ್ರವೇಶಿಸಲು ಹೆದರಿಕೊಳ್ಳುತ್ತಿದ್ದಾರೆಂದು ೨೦ನೇ ನವೆಂಬರ್‌ರಂದು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ನಾಯ್ಡುರವರು ತಿಳಿಸಿದ್ದಾರೆ. ಕಲ್ಲೋಳ್ ಬಿಸ್ವಾಸ್ ಎಂಬ ಅರಣ್ಯಾಧಿಕಾರಿಯನ್ನು ಓಡಿಸಿ ಹೊರಗಟ್ಟಿದ್ದಲ್ಲದೆ ಅವರ ಮೇಲೆ ಸುಳ್ಳು ಕೇಸುಗಳನ್ನು ಸಹ ದಾಖಲಿಸಿದ್ದಾರೆ. ನಾಯ್ಡುರವರ ಪ್ರಕಾರ ಇದರ ಜೊತೆಗೆ ಓಬಳಾಪುರಂ ಗಣಿಗಳ ಪರಿಶೀಲನೆ ಪ್ರಾರಂಭಿಸಬೇಕೆಂದಿದ್ದ ಐ.ಜಿ.ಪಿ. ಸುಬ್ರಹ್ಮಣ್ಯಂ ಅವರನ್ನು ಸಹ ವಿಜಿಲೆನ್ಸ್‌ನ ಉಪಮಹಾ ನಿರೀಕ್ಷಕರು ಹಿಂದಕ್ಕೆ ಕರೆಸಿಕೊಂಡಿದ್ದಾರೆ.
೨೦೦೭ರಲ್ಲಿ ಬ್ರಾಹ್ಮಿನಿ ಸ್ಟೀಲ್ ಕಂಪೆನಿಗೆ ೧೦೬೭೦ ಎಕರೆ ಭೂಮಿಯನ್ನು ಎಕರೆಗೆ ೧೮೦೦೦ ರೂಗಳಂತೆ ನೀಡಲಾಯಿತು. ಅದರ ಶಂಕುಸ್ಥಾಪನೆಯನ್ನು ನೆರವೇರಿಸಿದ ಆಂಧ್ರಪ್ರದೇಶದ ಆಗಿನ ಮುಖ್ಯಮಂತ್ರಿಗಳಾಗಿದ್ದ ವೈ.ಎಸ್.ರಾಜಶೇಖರ ರೆಡ್ಡಿಯವರು ಆ ಕಂಪೆನಿಯು ೨೦೦೯ರ ಹೊತ್ತಿಗೆ ೧೫೦೦೦ ಜನರಿಗೆ ಉದ್ಯೋಗಗಳನ್ನು ಸೃಷ್ಟಿಸುವ ಹಾಗೂ ೨ ದಶಲಕ್ಷ ಟನ್‌ಗಳಷ್ಟು ಉಕ್ಕನ್ನು ತಯಾರಿಸುವ ಸಾಮರ್ಥ್ಯ ಹೊಂದಿರುತ್ತದೆ ಎಂದು ತಿಳಿಸಿದ್ದರು. ಅದೇ ದಿನ ಜನಾರ್ಧನ ರೆಡ್ಡಿ ೭.೫ ಕೋಟಿ ರೂಗಳಷ್ಟು ಮೌಲ್ಯದ ಬುಲೆಟ್ ನಿರೋಧಕ ವೋಲ್ವೋ ಬಸ್ ಒಂದನ್ನು ವೈ.ಎಸ್.ರಾಜಶೇಖರ ರೆಡ್ಡಿಯವರಿಗೆ ಕಾಣಿಕೆಯಾಗಿ ನೀಡಿದರು. ಚಂದ್ರಬಾಬು ನಾಯ್ಡುರವರ ಪ್ರಕಾರ ಬ್ರಾಹ್ಮಿನಿ ಸ್ಟೀಲ್ ಕಂಪೆನಿಗೆ ಮಾತ್ರ ಕಬ್ಬಿಣದ ಅದಿರನ್ನು ಸರಬರಾಜು ಮಾಡಬೇಕೆಂಬ ಉದ್ದೇಶದಿಂದಲೇ ರೆಡ್ಡಿ ಸಹೋದರರಿಗೆ ಓಬಳಾಪುರಂ ಗಣಿಗಳನ್ನು ಮಂಜೂರು ಮಾಡಲಾಗಿತ್ತು. ಅದರ ಬದಲಿಗೆ ಬ್ರಾಹ್ಮಣಿ ಸ್ಟೀಲ್ಸ್‌ನ ಉಪಸಂಸ್ಥೆಯಾಗಿರುವ ಓಬಳಾಪುರಂ ಗಣಿಗಳು ಬ್ರಾಹ್ಮಿನಿ ಸ್ಟೀಲ್ಸ್ ಉಕ್ಕನ್ನು ತಯಾರಿಸಲು ಪ್ರಾರಂಭಿಸುವ ಮೊದಲೇ ಕಬ್ಬಿಣದ ಅದಿರನ್ನು ರಫ್ತುಮಾಡಿ ಅದರಿಂದ ಸಾಕಷ್ಟು ಲಾಭ ಗಳಿಸಿದೆ. ಅಂದರೆ ಸರ್ಕಾರದ ಅದಿರು ಅಥವಾ ಮಣ್ಣನ್ನು ತೆಗೆದುಕೊಂಡು ಅದನ್ನು ಪರದೇಶದವರಿಗೆ ಮಾರಿ ಅದರಿಂದ ಬರುವ ಲಾಭವನ್ನು ತಮ್ಮ ಖಾಸಗಿ ಸ್ಟೀಲ್ ಕೈಗಾರಿಕೆಯಲ್ಲಿ ಬಂಡವಾಳ ಹೂಡುವುದು. ಇದು ಹೇಗಿದೆಯೆಂದರೆ, ಎಂ.ಜಿ.ರಸ್ತೆಯಲ್ಲಿ ೧೦ ಎಕರೆ ಸರ್ಕಾರದ ಜಮೀನನ್ನು ಪಡೆದುಕೊಂಡು ಅದರಲ್ಲಿ ಅರ್ಧ ಜಮೀನನ್ನು ಮಾರಾಟಮಾಡಿ ಉಳಿದರ್ಧ ಸರ್ಕಾರದ ಜಮೀನನ್ನು ಬ್ಯಾಂಕ್‌ಗಳಿಗೆ ಒತ್ತೆಯಿಟ್ಟು ಅಲ್ಲಿ ಕಟ್ಟಡಗಳನ್ನು ನಿರ್ಮಿಸಿ ತಾವು ಅದರ ಬಾಡಿಗೆಯ ಲಾಭವನ್ನು ಪಡೆದುಕೊಳ್ಳುವುದು. ಎಂತಹ ಅದ್ಭುತ ವ್ಯವಹಾರ ಚತುರತೆ! ಇದೇ ಆರೋಪವನ್ನೇ ಆಂಧ್ರ ಪ್ರದೇಶದ ವಿರೋಧ ಪಕ್ಷಗಳು ರೆಡ್ಡಿ ಸಹೋದರರ ಮೇಲೆ ಹೊರಿಸುತ್ತಿವೆ. ಆದರೆ ರೆಡ್ಡಿ ಸಹೋದರರ ಪ್ರಕಾರ ಓಬಳಾಪುರಂ ಗಣಿಗಳ ಭೂಮಿಯನ್ನು ಗುತ್ತಿಗೆ ನೀಡಿರುವ ಸರ್ಕಾರ ಅದರಲ್ಲಿನ ಕಬ್ಬಿಣದ ಅದಿರನ್ನು ಬ್ರಾಹ್ಮಿನಿ ಸ್ಟೀಲ್ ಕಂಪೆನಿಗೇ ಕೊಡಬೇಕೆಂಬ 'ಕ್ಯಾಪ್ಟೀವ್ ಗಣಿ'ಗಳ ಶರತ್ತನ್ನು ಹಾಕಿಲ್ಲ. ಇತರರು ಹೇಳುವಂತೆ ಪರವಾನಗಿ ನೀಡುವ ಸಮಯದಲ್ಲಿ ಸರ್ಕಾರ ಬೇಕೆಂದೇ ಆ ಶರತ್ತನ್ನು ಕೈಬಿಟ್ಟಿದೆ!
ಜನಾರ್ಧನ ರೆಡ್ಡಿಯವರು ಹೇಳಿರುವಂತೆ ವರ್ಷಕ್ಕೆ ೫.೫ರಿಂದ ೬ ದಶಲಕ್ಷ ಟನ್‌ನಂತೆ ಒಟ್ಟು ೧೦೨ ದಶಲಕ್ಷ ಟನ್ ಕಬ್ಬಿಣದ ಅದಿರನ್ನು ತೆಗೆಯಲು ಆಂಧ್ರದ ಅನಂತಪುರ್ ಜಿಲ್ಲೆಯಲ್ಲಿ ಓಬಳಾಪುರಂ ಗಣಿಗಳು ಪರವಾನಗಿ ಪಡೆದಿವೆ. ಅಷ್ಟಲ್ಲದೆ ಆ ಕಂಪೆನಿಯು ಕರ್ನಾಟಕದಲ್ಲಿ ೧೬ ದಶಲಕ್ಷ ಟನ್‌ಗಳಷ್ಟು ಕಬ್ಬಿಣದ ಅದಿರನ್ನು ತೆಗೆಯಲು ಪರವಾನಗಿಗಾಗಿ ಅರ್ಜಿಯನ್ನು ಸಲ್ಲಿಸಿವೆ ಹಾಗೂ ಸರ್ಕಾರದಲ್ಲಿ ಈ ಪ್ರಸ್ತಾವನೆ ಮಂಜೂರಾಗುವ ಹಂತದಲ್ಲಿದೆ. ಅವರೇ ಹೇಳಿರುವಂತೆ ಓಬಳಾಪುರಂ ಗಣಿಗಳು ಕಳೆದ ವರ್ಷ ೧೩೦೦ ಕೋಟಿಗಳಷ್ಟು ಹಣ ಗಳಿಸಿದೆ ಹಾಗೂ ಅದನ್ನು ಬ್ರಾಹ್ಮಿನಿ ಸ್ಟೀಲ್ ಕಂಪೆನಿಯಲ್ಲಿ ಹೂಡಲಾಗಿದೆ. ಅವಶ್ಯಕವಿರುವ ಇನ್ನೂ ೩೦೦೦ ಕೋಟಿಗಳನ್ನು ಹಣಕಾಸು ಸಂಸ್ಥೆಗಳಿಂದ ಪಡೆಯಲು ಉದ್ದೇಶಿಸಲಾಗಿದೆ. ಇಲ್ಲಿರುವ ಬಹುಮುಖ್ಯ ಪ್ರಶ್ನೆಯೆಂದರೆ, ಹೇಗೆ ನಮ್ಮ ಸರ್ಕಾರಗಳು ದೇಶದ ಖನಿಜ ಸಂಪತ್ತನ್ನು ಅಷ್ಟೊಂದು ಕಡಿಮೆ ಹಣಕ್ಕೆ ಮಾರಿಕೊಳ್ಳಬಲ್ಲವು? ಅದರ ಬದಲಿಗೆ ಸರ್ಕಾರಗಳೇ ಸಾರ್ವಜನಿಕ ಕ್ಷೇತ್ರದ ಕಂಪೆನಿಗಳನ್ನು ಸ್ಥಾಪಿಸಿ ಅದರ ಲಾಭವನ್ನು ರಾಜ್ಯದ ಹಿತಕ್ಕಾಗಿ ಬಳಸಿಕೊಳ್ಳಬಹುದಾಗಿತ್ತು ಅಥವಾ ಅಂತಹ ಕಾರ್ಯಕ್ಕಾಗಿ ಜಾಗತಿಕ ಟೆಂಡರ್‌ಗಳನ್ನು ಕರೆಯಬಹುದಾಗಿತ್ತು ಅಥವಾ ಪ್ರತಿಯೊಂದು ಟನ್ ಕಬ್ಬಿಣದ ಅದಿರಿನ ಮೇಲಿನ ಲೆವಿಯನ್ನು ಹೆಚ್ಚಿಸಬಹುದಾಗಿತ್ತು. ಚಂದ್ರಬಾಬು ನಾಯ್ಡುರವರ ಆರೋಪದಂತೆ ಆಂಧ್ರ ಪ್ರದೇಶದ ಸರ್ಕಾರವು ಅನಂತ್‌ಪುರ್ ಜಿಲ್ಲೆಯೊಂದರಿಂದಲೇ ವಾರ್ಷಿಕ ೧೦೦೦೦ ಕೋಟಿ ರೂಗಳನ್ನು ಕಳೆದುಕೊಳ್ಳುತ್ತಿದೆ. ಏಕೆಂದರೆ ಆ ಜಮೀನನ್ನು ಗುತ್ತಿಗೆ ನೀಡಿರುವುದರಿಂದ ಸರ್ಕಾರಕ್ಕೆ ಪ್ರತಿ ವರ್ಷ ಕೇವಲ ೯ ಕೋಟಿ ರೂಗಳಷ್ಟು ಹಣ ಮಾತ್ರ ದೊರಕುತ್ತಿದೆ. ರೆಡ್ಡಿ ಸಹೋದರರ ರೆಡ್ ಗೋಲ್ಡ್ ಕಂಪೆನಿ ಮತ್ತು ಜಗನ್‌ರವರ ಜಗತಿ ಪಬ್ಲಿಕೇಶನ್ಸ್ ನಡುವೆ ವ್ಯವಹಾರದ ಸಂಬಂಧಗಳಿವೆ ಎಂದೂ ಸಹ ನಾಯ್ಡುರವರು ಆರೋಪಿಸಿದ್ದಾರೆ. ಜಗನ್‌ರವರ ಖಾಸಗಿ ದೂರದರ್ಶನ ಚಾನೆಲ್ ಮತ್ತು ಸಾಕ್ಷಿ ವೃತ್ತ ಪತ್ರಿಕೆಗಳನ್ನು ರೆಡ್ಡಿ ಸಹೋದರರೇ ಸಾಕಿ ಸಲಹುತ್ತಿದ್ದಾರೆ. ಇದಕ್ಕುತ್ತರವಾಗಿ ಜನಾರ್ಧನ ರೆಡ್ಡಿಯವರು ಈ ಹೇಳಿಕೆಗಳೆಲ್ಲಾ ಸುಳ್ಳೆಂದೂ ಅವೇನಾದರೂ ಸಾಬೀತಾದಲ್ಲಿ ಅವರು ರಾಜಕೀಯ ಸಂನ್ಯಾಸ ಪಡೆಯುವುದಾಗಿ ಹಾಗೂ ಹೈದರಾಬಾದ್‌ನ ರಸ್ತೆಗಳಲ್ಲಿ ಶಿಕ್ಷೆ ಪಡೆಯುವುದಾಗಿ ತಿಳಿಸಿದ್ದಾರೆ.
ತಮ್ಮ ಧನಬಲದಿಂದಾಗಿ ಕರ್ನಾಟಕ ಮತ್ತು ಆಂಧ್ರದಲ್ಲಿ ಗಣಿ ಮಾಫಿಯಾ ಬಿ.ಜೆ.ಪಿ ಮತ್ತು ಕಾಂಗ್ರೆಸ್‌ಗಳನ್ನು ಅಧಿಕಾರಕ್ಕೆ ತರವಲ್ಲಿ ಪ್ರಮುಖ ಪಾತ್ರ ವಹಿಸಿವೆ. ದೇಶದ ರಾಷ್ಟ್ರೀಯ ಪಕ್ಷಗಳೂ ಸಹ ಅಕ್ರಮ ಗಣಿ ಮಾಫಿಯಾಗಳಿಗೆ ಪರೋಕ್ಷ ಬೆಂಬಲ ನೀಡುತ್ತಾ ಬಂದಿವೆ. ಆಂಧ್ರದ ಕುತ್ತಿಗೆಯನ್ನು ಜಗನ್ ಹಿಡಿದಿದ್ದರೆ ರೆಡ್ಡಿ ಸಹೋದರರು ಕರ್ನಾಟಕದ ಸರ್ಕಾರದ ಕುತ್ತಿಗೆ ಹಿಚುಕಿ ಮುಖ್ಯ ಮಂತ್ರಿಗಳು ಅಸಹಾಕತೆಯಿಂದ ಸಾರ್ವಜನಿಕರೆದುರು ಕಣ್ಣೀರು ಹಾಕುವಂತೆ ಮಾಡಿದ್ದಾರೆ. ರಾಷ್ಟ್ರೀಯ ಪಕ್ಷಗಳು ಇಂತಹ ಮಾಫಿಯಾಗಳ ಕೈಗೆ ಸಿಲುಕುತ್ತಿರುವುದು ದುರದೃಷ್ಟಕರವಾಗಿದೆ. ಆಂಧ್ರದಲ್ಲಿ ವಿರೋಧ ಪಕ್ಷಗಳೆಲ್ಲಾ ಇವರೆದುರು ಒಗ್ಗೂಡಿದ್ದರೆ, ಕರ್ನಾಟಕದ ವಿರೋಧ ಪಕ್ಷಗಳು ಯಾವುದೇ ಆಸಕ್ತಿ ತೋರುತ್ತಿಲ್ಲ. ಇಂತಹ ಗಂಭೀರ ವಿಷಯದ ಬಗ್ಗೆ ತೀರಾ ಅನಾಸಕ್ತಿ ತೋರುತ್ತಿರುವ ಜೆ.ಡಿ.ಎಸ್.ನ ಉದ್ದೇಶದ ಬಗ್ಗೆ ಗುಮಾನಿ ಬರುತ್ತದೆ. ಆದರೆ ಅದರ ತೃತೀಯ ರಂಗದ ಜೊತೆಗಾರರಾಗಿರುವ ತೆಲುಗು ದೇಶಂ ಮತ್ತು ಎಡ ಪಕ್ಷಗಳು ಈ ವಿಷಯವನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದಿವೆ.
ಇಂತಹ ಸಂದರ್ಭದಲ್ಲಿ ಆಂಧ್ರ ಸರ್ಕಾರದ ಸಿ.ಬಿ.ಐ. ತನಿಖೆಯ ಕೋರಿಕೆ ಹಾಗೂ ಉಚ್ಛ ನ್ಯಾಯಾಲಯದ ಸಿ.ಇ.ಸಿ. ವರದಿಗಳು ಸ್ವಾಗತಾರ್ಹ ಅಂಶಗಳಾಗಿವೆ.

Friday, January 15, 2010

ಸ್ವಿಸ್ ಬ್ಯಾಂಕ್‌ಗಳಲ್ಲಿನ ಭಾರತೀಯರ ಹಣ- ಭಾರತಕ್ಕೆ ಮರಳಿ ತರಬಹುದೆ?

2009ರ ಚುನಾವಣೆಗಳ ಪ್ರಚಾರಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳೆಲ್ಲಾ ಸ್ವಿಸ್ ಬ್ಯಾಂಕ್‌ಗಳಲ್ಲಿ ಅಡಗಿಸಿಟ್ಟಿರುವ ಕೋಟಿಗಟ್ಟಲೆ ಭಾರತೀಯ ಕಪ್ಪುಹಣದ ಬಗ್ಗೆ ಮಾತನಾಡಿವೆ. ಬಿ.ಜೆ.ಪಿ.ಯ ಶ್ರೀ ಅದ್ವಾನಿಯವರು ಹಾಗೂ ಕಮ್ಯೂನಿಸ್ಟ್ ಪಕ್ಷದ ಶ್ರೀ ಸೀತಾರಾಂ ಯೆಚೂರಿಯವರು 1.5 ಟ್ರಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ಹಣವನ್ನು ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರು ಅಡಗಿಸಿಟ್ಟಿದ್ದಾರೆ ಎಂದಿದ್ದಾರೆ. ಕೆಲವು ವರದಿಗಳಂತೆ ಕೊಳ್ಳೆಹೊಡೆದು ಸ್ವಿಸ್ ಬ್ಯಾಂಕ್‌ಗಳಲ್ಲಿ ಹಣಕೂಡಿಸಿಟ್ಟಿರುವವರಲ್ಲಿ ಜಗತ್ತಿನಲ್ಲಿ ಭಾರತೀಯರದೇ ಎತ್ತಿದ ಕೈ. ಭಾರತೀಯರದು ಸುಮಾರು 1500 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ಹಣವಿದ್ದರೆ, ರಷಿಯನ್ನರು 480 ಬಿಲಿಯನ್ ಡಾಲರ್‌ಗಳಷ್ಟು ಹಣವಿರಿಸಿ ಎರಡನೇ ಸ್ಥಾನದಲ್ಲಿದ್ದಾರೆ ಹಾಗೂ 96 ಬಿಲಿಯನ್ ಡಾಲರ್‌ಗಳಷ್ಟು ಹಣವಿರಿಸಿರುವ ಚೀನಾದವರು ಐದನೇ ಸ್ಥಾನದಲ್ಲಿದ್ದಾರೆ. ಅಮೆರಿಕದವರಂತೂ ಮೊದಲ ಹತ್ತು ಸ್ಥಾನದಲ್ಲೂ ಇಲ್ಲ. ಇದು ನಮ್ಮ ಭ್ರಷ್ಟತೆಯ ಸೂಚಕವೆ? ಅಮೆರಿಕ ಮತ್ತು ಚೀನಾ ಏಕೆ ಭಾರತ ಮತ್ತು ರಷಿಯಾಕ್ಕಿಂತ ಹೆಚ್ಚು ಅಭಿವೃದ್ಧಿ ಹೊಂದಿವೆ ಎಂಬುದನ್ನೂ ತೋರಿಸುತ್ತದೆ. ಇತ್ತೀಚಿನ ಜಾಗತಿಕ ಆರ್ಥಿಕ ಅಧ್ಯಯನದ ವರದಿಗಳಂತೆ 2002ರಿಂದ 2006ವರೆಗೆ ವಾರ್ಷಿಕ ಭಾರತದಿಂದ 23.7 ಮಿಲಿಯನ್ ಅಮೆರಿಕನ್ ಡಾಲರ್ ಅಥವಾ 136,466 ಕೋಟಿ ರೂಗಳಷ್ಟು ಹಣವನ್ನು ಅಕ್ರಮವಾಗಿ ಸಾಗಿಸಲಾಗಿದೆ. ಅದೇ ಲೆಕ್ಕಾಚಾರದ ಪ್ರಕಾರ 1947ರಿಂದ ಅಕ್ರಮವಾಗಿ ಸಾಗಿಸಿರಬಹುದಾದ ಆ ರೀತಿಯ ಹಣವನ್ನು ಲೆಕ್ಕಹಾಕಿದಲ್ಲಿ ಅದು ಸುಲಭವಾಗಿ 70 ಲಕ್ಷ ಕೋಟಿ ಅಥವಾ 1.4.ಟ್ರಿಲಿಯನ್ ಅಮೆರಿಕನ್ ಡಾಲರ್ ಹಣವಾಗುತ್ತದೆ. ಆ ವರದಿಯ ಪ್ರಕಾರ ಅದರಲ್ಲಿ ಮೂರನೇ ಒಂದು ಭಾಗ ಮಾತ್ರ ಸ್ವಿಸ್ ಬ್ಯಾಂಕ್‌ಗಳಲ್ಲಿದೆ ಹಾಗೂ ಉಳಿದದ್ದು ಜಗತ್ತಿನಾದ್ಯಂತವಿರುವ 69 ತೆರಿಗೆಗಳ್ಳರ ಆಶ್ರಯತಾಣಗಳಲ್ಲಿ ಅಡಗಿಸಿಡಲಾಗಿದೆ. ಕೆಲವು ವರದಿಗಳ ಪ್ರಕಾರ ನೆಹರೂ ಅವಧಿಯಲ್ಲಿ, ರೂಪಾಯಿ ಮತ್ತು ಅಮೆರಿಕದ ಡಾಲರ್‌ನ ವಿನಿಮಯ ಅಂತರ ಅತಿ ಹೆಚ್ಚು ಇದ್ದಾಗಲೇ ಅತಿ ಹೆಚ್ಚು ಹಣದ ಕಳ್ಳಸಾಗಾಣಿಕೆ ನಡೆದಿದೆ. ಬೋಫೋರ್ಸ್‌ನ ಖರೀದಿಯ ಲಂಚದ ಹಣವನ್ನು ಸ್ವಿಸ್ ಬ್ಯಾಂಕ್‌ಗಳಲ್ಲೇ ಅಡಗಿಸಿಡಲಾಗಿದೆಯೆಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಈ ಹಣವನ್ನು ವಾಪಸ್ಸು ತಂದಲ್ಲಿ ಭಾರತದ ಪ್ರತಿ ಹಳ್ಳಿಗೂ 4 ಕೋಟಿ ರೂಗಳನ್ನು ಹಂಚಬಹುದೆಂದು ಅದ್ವಾನಿಯವರು ಹೇಳಿದ್ದಾರೆ. ಈ ಹಣವನ್ನು ತರಲು ಹಿಂದೇಟು ಹಾಕುತ್ತಿರುವ ಯು.ಪಿ.ಎ. ಸರ್ಕಾರದ ಬಗೆಗೆ ವಿರೋಧ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸುತ್ತಿವೆ. ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವರು ಸ್ವಿಸ್ ಸರ್ಕಾರದೊಂದಿಗಿನ ಡಬಲ್ ಟ್ಯಾಕ್ಸೇಶನ್ ಒಪ್ಪಂದದಲ್ಲಿ ತಿದ್ದುಪಡಿ ತರುವ ಬಗೆಗೆ ಮಾತ್ರ ಸರ್ಕಾರಕ್ಕೆ ಆಸಕ್ತಿ ಇದೆಯೆಂದು ಹೇಳಿದ್ದಾರೆ. ಆದರೆ ಭಾರತೀಯ ಗ್ರಾಹಕರ ಬಗೆಗೆ ತನ್ನಲ್ಲಿಗೆ ಯಾವುದೇ ಮೀನು ಹಿಡಿಯುವಂತೆ ಬರಬೇಡಿ, ಬರುವುದಾದಲ್ಲಿ ನಿರ್ದಿಷ್ಟ ವ್ಯಕ್ತಿಯೊಬ್ಬನ ಬಗ್ಗೆ ನಿರ್ದಿಷ್ಟ ತೆರಿಗೆಗಳ್ಳತನದ ಅಥವಾ ಭ್ರಷ್ಟಾಚಾರದ ಸಬೂತುಗಳಿದ್ದಲ್ಲಿ ಅವುಗಳನ್ನು ತೆಗೆದುಕೊಂಡುಬರುವಂತೆ ಸ್ವಿಸ್ ಬ್ಯಾಂಕ್‌ಗಳು ಭಾರತ ಸರ್ಕಾರಕ್ಕೆ ತಿಳಿಸಿವೆ.

ಕಾಂಗ್ರೆಸ್ ಪಕ್ಷ ಮತ್ತು ನೆಹರೂ ಕುಟುಂಬ ಈ ದೇಶವನ್ನು 50ಕ್ಕೂ ಹೆಚ್ಚು ವರ್ಷಗಳು ಆಳಿವೆ. ಯಾವುದೇ ನಿರ್ದಿಷ್ಟ ಸಬೂತಿಲ್ಲದೆ ವಿರೋಧ ಪಕ್ಷಗಳು ಕಾಂಗೆಸ್ ಪಕ್ಷವನ್ನು ಸ್ವಿಸ್ ಬ್ಯಾಂಕ್‌ಗಳಲ್ಲಿ ಅಕ್ರಮ ಹಣ ಕೂಡಿಟ್ಟಿರುವುದಾಗಿ ದೂರುತ್ತಿವೆ. ತುರ್ತುಪರಿಸ್ಥಿತಿಯ ಸಮಯದಲ್ಲಿ ಹಾಗೂ ಬೋಫರ್ಸ್ ಖರೀದಿಯ ಸಮಯದಲ್ಲಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಹೆಚ್ಚು ಹಣವನ್ನು ಕೂಡಿಡಲಾಗಿತ್ತು. ಹಾಗಾದರೆ ಕಾಂಗ್ರೆಸ್ಸೇತರ ಪ್ರಧಾನಮಂತ್ರಿಗಳು ಈ ವಿಷಯವನ್ನೇಕೆ ಕೈಗೆತ್ತಿಕೊಳ್ಳಲಿಲ್ಲ? ಈ ‘ಸ್ವಿಸ್ ಕ್ಲಬ್’ಗಳ ಸದಸ್ಯರಲ್ಲಿ ಇತರರೂ ಇದ್ದಾರೆ- ಎಲ್ಲಾ ಪಕ್ಷಗಳ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಮತ್ತು ಕೈಗಾರಿಕೋದ್ಯಮಿಗಳು. ಇದೇ ಕಾರಣಕ್ಕಾಗಿಯೇ ಯು.ಪಿ.ಎ. ಸರ್ಕಾರ ಸ್ವಿಸ್ ಬ್ಯಾಂಕ್‌ಗಳನ್ನು ಒತ್ತಾಯಿಸಲು ಹಿಂದೇಟು ಹಾಕುತ್ತಿದೆಯೆ? ಯು.ಬಿ.ಎಸ್. ಎಂಬ ಸ್ವಿಸ್ ಬ್ಯಾಂಕ್ ತನ್ನಲ್ಲಿನ ಅಮೆರಿಕದ ಗ್ರಾಹಕರನ್ನು ರಕ್ಷಿಸಲು ಅಮೆರಿಕದ ತೆರಿಗೆ ಇಲಾಖೆಗೆ 780 ಮಿಲಿಯನ್ ಡಾಲರ್ ಪರಿಹಾರವನ್ನು ಕೊಡಲು ಒಪ್ಪಿಕೊಂಡಿರುವಾಗ ಅದನ್ನೇ ಭಾರತ ಸರ್ಕಾರವೇಕೆ ಮಾಡಬಾರದು?

ಯು.ಬಿ.ಎಸ್. ಬ್ಯಾಂಕ್ ಅಮೆರಿಕದ ಸರ್ಕಾರಕ್ಕೆ ಏಕೆ ಪರಿಹಾರ ಧನ ನೀಡಿತೆಂಬುದನ್ನು ವಿವರವಾಗಿ ಗಮನಿಸೋಣ. ತನ್ನ ನಾಗರಿಕರು ತೆರಿಗೆಯಿಂದ ತಪ್ಪಿಸಿಕೊಳ್ಳುವಂತೆ ಮಾಡಲು ಯು.ಬಿ.ಎಸ್. ಅಧಿಕಾರಿಗಳು ಸಹಾಯಮಾಡಿದ್ದಾರೆಂದು ಅಮೆರಿಕದ ಸರ್ಕಾರ ರುಜುವಾತುಗೊಳಿಸಿತು. ಹಾಗಾಗಿ ಅದು ತನ್ನ ಗ್ರಾಹಕರಾಗಿರುವ ಎಲ್ಲಾ ಅಮೆರಿಕದ ನಾಗರಿಕರ ಸ್ವಿಸ್ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡುವಂತೆ ಒತ್ತಾಯಿಸಿತು. ಅಮೆರಿಕದ ಮಾಹಿತಿಯಂತೆ ಕನಿಷ್ಠ 52,೦೦೦ ಅಮೆರಿಕದ ನಾಗರಿಕರು ಸ್ವಿಸ್ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿದ್ದರು ಹಾಗೂ ಅವರೆಲ್ಲ ತೆರಿಗೆಯಿಂದ ತಪ್ಪಿಸಿಕೊಂಡಿದ್ದರು. ಸ್ವಿಟ್ಜರ್‌ಲ್ಯಾಂಡಿನ ಕಾನೂನಿನಂತೆ ತೆರಿಗೆಯಿಂದ ತಪ್ಪಿಸಿಕೊಳ್ಳುವುದು ಅಪರಾಧವಲ್ಲ ಹಾಗೂ 1934ರ ಗೋಪ್ಯತಾ ಅಧಿನಿಯಮದಂತೆ ಗ್ರಾಹಕರ ವಿವರ ನೀಡುವುದರಿಂದ 5೦,೦೦೦ ದಂಡ ಪಾವತಿಸಬೇಕಾಗಬಹುದು ಅಥವಾ ಸೆರೆಮನೆ ವಾಸ ಅನುಭವಿಸಬೇಕಾಗಬಹುದು ಅಥವಾ ಅವೆರಡನ್ನೂ ಅನುಭವಿಸಬೇಕಾಗಬಹುದು. ತನ್ನ ದೇಶದ ಸಮಗ್ರತೆಯ ಉಲ್ಲಂಘನೆಯಾಗುವುದರಿಂದ ಇತರ ಯಾವುದೇ ದೇಶದ ಕಾನೂನು ತನ್ನ ದೇಶದ ಕಾನೂನಿನ ಮೇಲೆ ಒತ್ತಡ ತರುವಹಾಗಿಲ್ಲವೆಂದು ಯು.ಬಿ.ಎಸ್. ಬ್ಯಾಂಕ್ ಹೇಳಿತು. ಆದರೆ ಅವೆರಡೂ ದೇಶಗಳಲ್ಲಿ ಅಪರಾಧಿ ಎಂದು ಪರಿಗಣಿಸಬಹುದಾದ ಗ್ರಾಹಕನಿದ್ದಲ್ಲಿ ಅಂಥವನ ವಿವರಗಳನ್ನು ಸ್ವಿಸ್ ಬ್ಯಾಂಕ್‌ಗಳು ನೀಡಬೇಕಾಗುತ್ತವೆ. ಆದರೆ ಅಮೆರಿಕದ ವಿಷಯದಲ್ಲಿ ಆ ಗ್ರಾಹಕರು ಸ್ವಿಸ್‌ನಲ್ಲಿ ಅಪರಾಧಿಗಳಲ್ಲದಿದ್ದರು ಅಮೆರಿಕ ಸರ್ಕಾರದ ತೀವ್ರ ಒತ್ತಡದಿಂದಾಗಿ ಯು.ಬಿ.ಎಸ್. 3೦೦ ಗ್ರಾಹಕರ ವಿವರಗಳನ್ನು ನೀಡಲು ಸಮ್ಮತಿಸಿತು ಹಾಗೂ ತನ್ನ ಹಿತಾಸಕ್ತಿಯನ್ನು ಮತ್ತು ಇತರ ಗ್ರಾಹಕರ (ಅವರ ವಿವರಗಳನ್ನು ಬಹಿರಂಗಗೊಳಿಸದೆ) ಹಿತಾಸಕ್ತಿಯನ್ನು ಕಾಪಾಡಲು 78೦ ಮಿಲಿಯನ್ ಡಾಲರ್ ಹಣವನ್ನು ಪಾವತಿಸಿತು. ಅಲ್ಲದೆ ಅಮೆರಿಕ ತನ್ನ ದೇಶದಲ್ಲಿ ಸ್ವಿಸ್ ಬ್ಯಾಂಕ್‌ಗಳ ಕಾರ್ಯಾಚರಣೆಯ ಪರವಾನಗಿಯನ್ನು ಹಿಂತೆಗೆದುಕೊಳ್ಳುವುದಾಗಿ ಹೆದರಿಸಿತು. ಈ ಒತ್ತಡಕ್ಕೂ ಸ್ವಿಸ್ ಬ್ಯಾಂಕ್‌ಗಳು ಮಣಿದವು ಏಕೆಂದರೆ, ಅಮೆರಿಕದಲ್ಲಿ ಸ್ವಿಸ್ ಬ್ಯಾಂಕ್‌ಗಳು ಶೇ.65ರಷ್ಟು ಬಂಡವಾಳ ಹೂಡಿಕೆ ಮಾಡಿವೆ. ಆದರೆ ಭಾರತದಲ್ಲಿನ ಅವುಗಳ ಹೂಡಿಕೆ ಶೇ.5ಕ್ಕಿಂತ ಕಡಿಮೆಯಿದೆ.

ಬ್ಯಾಂಕ್‌ಗಳ ಈ ಗೋಪ್ಯತೆಯ ಅಧಿನಿಯಮವೇನು? ಅದರ ಹಿಂದಿನ ಚರಿತ್ರೆಯೇನು?
ಕಳೆದ 3೦೦ ವರ್ಷಗಳಿಂದ ಸ್ವಿಸ್ ಬ್ಯಾಂಕ್‌ಗಳು ಅವುಗಳ ಗೋಪ್ಯತೆಗೆ ಹೆಸರುವಾಸಿಯಾಗಿವೆ. ಸ್ವಿಸ್ ಬ್ಯಾಂಕ್‌ಗಳನ್ನು ಫ್ರೆಂಚ್ ರಾಜರ ಬ್ಯಾಂಕ್‌ಗಳೆಂದು ಕರೆಯಲಾಗುತ್ತಿತ್ತು. 3೦೦ ವರ್ಷಗಳ ಹಿಂದಿನಿಂದಲೇ ಫ್ರೆಂಚ್ ರಾಜರು ಸ್ವಿಸ್ ಬ್ಯಾಂಕ್‌ಗಳನ್ನು ಬಳಸುತ್ತಿದ್ದರು. ನೆಪೋಲಿಯನ್ ಸಹ ಅವುಗಳಲ್ಲಿ ಹಣದ ಠೇವಣಿ ಇಡುತ್ತಿದ್ದ. ರಾಜಮನೆತನಗಳ ಅಧಿಕಾರಿಗಳು, ರಾಜಕಾರಣಿಗಳು ಮತ್ತು ವ್ಯಾಪಾರಸ್ಥರು ಅವುಗಳ ಗ್ರಾಹಕರಾಗಿದ್ದರು. ಅವುಗಳ ಗೋಪ್ಯತೆ ಮತ್ತು ವಿಶ್ವಾಸಾರ್ಹತೆಯಿಂದಲೇ ಅವು ಜನಪ್ರಿಯವಾಗಿದ್ದವು. 20ನೇ ಶತಮಾನದ ಪ್ರಾರಂಭದಲ್ಲಿ ಅದು ಹಲವಾರು ಫ್ರೆಂಚ್ ನಾಗರಿಕರನ್ನು ಗ್ರಾಹಕರನ್ನಾಗಿ ಹೊಂದಿತ್ತು. ಆ ಸಮಯದಲ್ಲಿ ಕೆಲವು ಸ್ವಿಸ್ ಬ್ಯಾಂಕ್ ಅಧಿಕಾರಿಗಳು ಪ್ಯಾರಿಸ್ಸಿನಲ್ಲಿ ತನ್ನ ರಹಸ್ಯ ಗ್ರಾಹಕರಿಗೆ ಸಹಾಯಮಾಡುವ ಸಮಯದಲ್ಲಿ ಸಿಕ್ಕಿಹಾಕಿಕೊಂಡು ಒಂದು ದೊಡ್ಡ ವಿವಾದವೇ ಉಂಟಾಗಿತ್ತು. ಆಗ ಫ್ರೆಂಚ್ ಸರ್ಕಾರವು ಪ್ಯಾರಿಸ್ಸಿನಲ್ಲಿನ ಸ್ವಿಸ್ ಬ್ಯಾಂಕ್ ಕಚೇರಿಗೆ ದಾಳಿನಡೆಸಿ ಫ್ರಾನ್ಸ್‌ನಿಂದ ತೆರಿಗೆಗಳ್ಳತನ ಮಾಡಿ ಹಣ ಸಾಗಿಸುತ್ತಿದ್ದ ಹಲವಾರು ಫ್ರೆಂಚ್ ಖಾತೆದಾರರ ವಿವರಗಳನ್ನು ಸರ್ಕಾರವು ಪಡೆದುಕೊಂಡಿತ್ತು. ಆಗ ವಿರೋಧ ಪಕ್ಷಗಳವರು ಫ್ರಾನ್ಸ್‌ನ ಸಿರಿವಂತ ನಾಗರಿಕರನ್ನು ಅವರ ಹಣದಿಂದಲೇ ಸ್ವಿಸ್ ಬ್ಯಾಂಕ್‌ಗಳು ಜರ್ಮನಿಗೆ ವಿಶ್ವಯುದ್ಧದ ಸಮಯದಲ್ಲಿ ಸಹಾಯಮಾಡಿದೆ ಎಂದು ಅವರನ್ನು ದೂರಿದವು. ಮೊದಲನೆ ವಿಶ್ವಯುದ್ಧದ ನಂತರ1929 ರಲ್ಲಿ ಉಂಟಾದ ಆರ್ಥಿಕ ಹಿಂಜರಿತ ಇಡೀ ವಿಶ್ವವನ್ನೇ ಬಾಧಿಸುತ್ತಿತ್ತು. ಅಲ್ಲದೆ ಆಗ ಜರ್ಮನಿಯಲ್ಲಿ ಹಿಟ್ಲರನ ನಾಜಿ ಪಕ್ಷ ಆಡಳಿತಕ್ಕೆ ಬಂದಿತು. ವಿದೇಶಿ ಬ್ಯಾಂಕ್‌ಗಳಲ್ಲಿ ಹಣ ಇಟ್ಟಿರುವ ಜರ್ಮನ್ ನಾಗರಿಕರನ್ನು ದೇಶದ್ರೋಹಿಗಳೆಂದು ಘೋಷಿಸಿದ. ಅಂಥವರು ವಿವರಗಳನ್ನು ಬಹಿರಂಗಗೊಳಿಸದಿದ್ದಲ್ಲಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ಅವರಿಗೆ ಮರಣದಂಡನೆ ವಿಧಿಸುವುದಾಗಿ ತಿಳಿಸಿದ. ಆ ಸಮಯದಲ್ಲಿ ಇಡೀ ಯೂರೋಪ್ ಮತ್ತು ಇತರ ರಾಷ್ಟ್ರಗಳು ಅತಂತ್ರ ಸ್ಥಿತಿಯಲ್ಲಿದ್ದವು. ಇದರಿಂದಾಗಿ ಹೆಚ್ಚು ಹೆಚ್ಚು ಯೆಹೂದಿ ವ್ಯಾಪಾರಿಗಳು ತಮ್ಮ ಹಣವನ್ನು ಸ್ವಿಸ್ ಬ್ಯಾಂಕ್‌ಗಳಲ್ಲಿ ಕೂಡಿಡತೊಡಗಿದರು. ಸ್ವಿಸ್ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ಕಾರಣಕ್ಕಾಗಿ ಹಿಟ್ಲರ್ ಮೂವರು ಸಿರಿವಂತ ಯೆಹೂದಿ ವ್ಯಾಪಾರಸ್ಥರನ್ನು ಕೊಂದುಹಾಕಿದ್ದ. ತನ್ನ ಗುಪ್ತಚಾರರಿಗೆ ಯೆಹೂದಿ ಖಾತೆದಾರರ ವಿವರಗಳನ್ನು ಪಡೆಯುವಂತೆ ಆದೇಶಿಸಿದ್ದ. ಈ ಸನ್ನಿವೇಶಗಳಿಂದಾಗಿ ಸ್ವಿಸ್ ಸರ್ಕಾರವು ತನ್ನ ಗ್ರಾಹಕರ ಹಿತರಕ್ಷಣೆಗಾಗಿ ಬ್ಯಾಂಕ್ ಗೋಪ್ಯತೆಯನ್ನು ಕಾನೂನಾಗುವಂತೆ ಮಾಡಿತು ಹಾಗೂ ಇದರಿಂದಾಗಿಯೇ1934 ರ ಪ್ರಖ್ಯಾತ ಬ್ಯಾಂಕ್ ಗೋಪ್ಯತಾ ಅಧಿನಿಯಮ ಜಾರಿಗೆ ಬಂದಿತು. ಈ ಅಧಿನಿಯಮದಲ್ಲಿನ ತಿದ್ದುಪಡಿಯನ್ನು ಪಾರ್ಲಿಮೆಂಟ್ ಮಾತ್ರವಲ್ಲ ಈ ವಿಷಯದ ಬಗ್ಗೆ ಮತಚಲಾಯಿಸುವ ಎಲ್ಲಾ ನಾಗರಿಕರ ಸಮ್ಮತಿಯೂ ಬೇಕಾಗಿದೆ.1983 ರಲ್ಲಿ ನಡೆದ ಒಂದು ರೆಫರೆಂಡಮ್‌ನಲ್ಲಿ ಶೇ.೭೩ರಷ್ಟು ಸ್ವಿಸ್ ನಾಗರಿಕರು ಬ್ಯಾಂಕ್ ಗೋಪ್ಯತಾ ಕಾಯಿದೆಯನ್ನು ಮುಂದುವರಿಸುವಂತೆ ಮತಚಲಾಯಿಸಿದರು.

ಸ್ವಿಸ್ ಬ್ಯಾಂಕ್‌ಗಳು ಯಾವಾಗ ಖಾತೆದಾರರ ಮಾಹಿತಿಯ ವಿವರಗಳನ್ನು ಬಹಿರಂಗಗೊಳಿಸುತ್ತವೆ?
ಮಾದಕ ವಸ್ತುಗಳ ಕಳ್ಳಸಾಗಣೆ, ಹವಾಲಾ, ತೆರಿಗೆ ಕಳ್ಳತನ (ತೆರಿಗೆಯಿಂದ ತಪ್ಪಿಸಿಕೊಳ್ಳುವುದಲ್ಲ), ಭಯೋತ್ಪಾದನಾ ಚಟುವಟಿಕೆಗಳು, ದಿವಾಳಿ ಎದ್ದಿರುವಿಕೆ, ವಿವಾಹ ವಿಚ್ಛೇದನಾ ಪ್ರಕರಣ ಮುಂತಾದವುಗಳಲ್ಲಿ ಅವು ವಿವರಗಳನ್ನು ಬಹಿರಂಗಗೊಳಿಸುತ್ತವೆ. ಈ ಪ್ರಕರಣಗಳಲ್ಲೂ ಸಹ ಅಪರಾಧವನ್ನು ನಿಸ್ಸಂಶಯವಾಗಿ ರುಜುವಾತುಗೊಳಿಸಬೇಕು. ಈ ಪ್ರಕರಣಗಳಲ್ಲಿ ಇತರ ದೇಶಗಳ ನಾಗರಿಕರು ತೊಡಗಿದ್ದಲ್ಲಿ ಆ ಅಪರಾಧ ಅವರ ದೇಶದಲ್ಲಿ ಹಾಗೂ ಸ್ವಿಟ್ಜರ್‌ಲ್ಯಾಂಡಿನಲ್ಲೂ ಅಪರಾಧವಾಗಿರಬೇಕು. ಯು.ಬಿ.ಎಸ್. ಬ್ಯಾಂಕ್ ಅಮೆರಿಕದ ತೆರಿಗೆ ಇಲಾಖೆಗೆ ಪರಿಹಾರ ನೀಡುವುದಕ್ಕೆ ಇದೇ ಕಾರಣವಾಗಿತ್ತು. ಇಂತಹ ಪ್ರಕರಣಗಳಲ್ಲಿ ಅವುಗಳ ಗ್ರಾಹಕರು ತೊಡಗಿಲ್ಲದಿದ್ದಲ್ಲಿ ಹಾಗೂ ಅವರ ವಿವರಗಳನ್ನು ಬಹಿರಂಗಗೊಳಿಸಿದ್ದಲ್ಲಿ ಅವರು ಹಾನಿ ಪರಿಹಾರ ಕೋರಲು ಅವರಿಗೆ ಕಾನೂನಿನಂತೆ ಹಕ್ಕಿರುತ್ತದೆ.

ಜನ ಸ್ವಿಸ್ ಬ್ಯಾಂಕ್‌ಗಳಲ್ಲಿ ಏಕೆ ಹಣ ಅಡಗಿಸಿಡುತ್ತಾರೆ?
1. ಅದರ ರಹಸ್ಯ ವಿಧಾನಗಳಿಂದಾಗಿ. ಅವು ಸಂಖ್ಯೆಗಳಿರುವ ಖಾತೆಗಳನ್ನು ಕೊಡುತ್ತವೆ. ಯಾವುದೇ ಹೆಸರು ಅಥವಾ ವಿವರಗಳನ್ನು ಹೊರಗೆಡವುದಿಲ್ಲ.
2. ಅಮೆರಿಕದ ಡಾಲರ್‌ನಂತರ ಸ್ವಿಸ್ ಕರೆನ್ಸಿಯೇ ಸದೃಢವಾದುದು.
3. ಸ್ವಿಸ್ ಬ್ಯಾಂಕ್‌ಗಳು ತಮ್ಮ ಅರ್ಹತೆಗೆ ಆಧಾರವಾಗಿ ಶೇ.45ರಷ್ಟು ಚಿನ್ನವನ್ನು ಹೊಂದಿರುತ್ತವೆ.
4. ಯಾವುದಾದರೂ ಬ್ಯಾಂಕ್ ವಿಫಲವಾದಲ್ಲಿ ಗ್ರಾಹಕ ಗ್ಯಾರಂಟಿ ಒಪ್ಪಂದದಿಂದಾಗಿ ಸ್ವಿಸ್ ಬ್ಯಾಂಕರ್‌ಗಳ ಸಂಘವು ತಕ್ಷಣ ಗ್ರಾಹಕರಿಗೆ ಅವರ ಹಣವನ್ನು ಹಿಂದಿರುಗಿಸುತ್ತದೆ.
5. ಅದೊಂದು ತೆರಿಗೆಗಳ್ಳರ ಸ್ವರ್ಗ. ಅನಿವಾಸಿ ಸ್ವಿಸ್ ನಾಗರಿಕರಿಗೆ ಅವರ ಠೇವಣಿಗಳ ಮೇಲಿನ ಬಡ್ಡಿಯ ಆದಾಯಕ್ಕೆ ಯಾವುದೇ ತೆರಿಗೆಯಿಲ್ಲ (ಅಮೆರಿಕ ಮತ್ತು ಯೂರೋಪಿಯನ್ ನಾಗರಿಕರನ್ನು ಹೊರತುಪಡಿಸಿ ಸ್ವಿಸ್ ಬ್ಯಾಂಕ್‌ಗಳು ಬಡ್ಡಿಯ ಮೇಲಿನ ತೆರಿಗೆಯನ್ನು ಗ್ರಾಹಕರ ವಿವರಗಳನ್ನು ಬಹಿರಂಗಗೊಳಿಸದೆ ಸರ್ಕಾರಗಳಿಗೆ ನೇರವಾಗಿ ಪಾವತಿಸುತ್ತವೆ).

ಸ್ವಿಸ್ ಬ್ಯಾಂಕ್- ಅಷ್ಟೊಂದು ಕೆಟ್ಟದ್ದೆ?
ಖಂಡಿತವಾಗಿಯೂ ಹೌದು. ಏಕೆಂದರೆ ಅದು ಮೊದಲನೆ ಮತ್ತು ಎರಡನೇ ವಿಶ್ವಯುದ್ಧಗಳಲ್ಲಿ ಜರ್ಮನಿಗೆ ಹಣಸಹಾಯ ಮಾಡಿದೆ. ಹಿಟ್ಲರ್ ಯೆಹೂದಿಗಳನ್ನು ಕೊಂದು ಅವರಿಂದ ದೋಚಿಕೊಂಡ ಆಸ್ತಿ ಮತ್ತು ಚಿನ್ನವನ್ನು ಆಧಾರವಾಗಿಟ್ಟು ಆ ಬ್ಯಾಂಕ್‌ಗಳಿಂದ ತನ್ನ ಯುದ್ಧಕ್ಕೆ ಹಣ ಪಡೆಯುತ್ತಿದ್ದ. ಮೊದಲನೆ ವಿಶ್ವಯುದ್ಧದಲ್ಲಿ ಫ್ರೆಂಚ್ ಹಣವನ್ನೇ ಜರ್ಮನಿಗೆ ಅದರ ಫ್ರೆಂಚ್ ಮತ್ತು ವಿಶ್ವದ ಇತರ ದೇಶಗಳ ಮೇಲಿನ ಯುದ್ಧಗಳಿಗೆ ನೀಡಿತು. ಹಿಟ್ಲರ್‌ನ ನರಮೇಧದಲ್ಲಿ ಪ್ರಾಣಕಳೆದುಕೊಂಡ ಲಕ್ಷಾಂತರ ಯೆಹೂದಿಗಳು ಸ್ವಿಸ್ ಬ್ಯಾಂಕ್‌ಗಳಲ್ಲಿ ಇರಿಸಿದ್ದ ಕೋಟ್ಯಾಂತರ ರೂಗಳ ಹಣದ ವಿವರಗಳನ್ನು ಆ ಬ್ಯಾಂಕ್‌ಗಳು ಇದುವರೆಗೂ ಹೊರಗೆಡವಿಲ್ಲ. ಸದ್ದಾಮ್ ಹುಸೇನ್‌ನಂತಹ ವಿಶ್ವದ ಹಲವಾರು ಸರ್ವಾಧಿಕಾರಿಗಳ ಲೂಟಿಯ ಹಣಗಳಿಗೆಲ್ಲ ಆ ಬ್ಯಾಂಕ್‌ಗಳು ಆಶ್ರಯ ನೀಡಿವೆ. ಒಸಾಮ ಬಿನ್ ಲಾಡೆನ್‌ನಂಥವರೂ ಸಹ ಅಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಮೂರನೇ ಜಗತ್ತಿನ ಭ್ರಷ್ಟ ರಾಜಕಾರಣಿಗಳ, ಸೇನೆಯ ಜನರಲ್‌ಗಳ ಪಾಪದ ಹಣದ ಬೊಕ್ಕಸ ಆ ಬ್ಯಾಂಕ್‌ಗಳಲ್ಲಿದೆ. ಗೋಪ್ಯತೆಯ ಹೆಸರಿನಲ್ಲಿ ಸ್ವಿಸ್ ಬ್ಯಾಂಕ್‌ಗಳು ಇಂತಹ ಜನರಿಂದ ತನ್ನ ಬೊಕ್ಕಸವನ್ನು ತುಂಬಿಕೊಂಡಿವೆ. ಸಕಾರಕ್ಕೆ ಮೋಸ ಮಾಡಿ ಕರ ಉಳಿಸುವವರಿಗೆ, ಮಾದಕವಸ್ತುಗಳ ಮಾರಾಟಗಾರರಿಗೆ, ಹವಾಲಾ ಹಣ ವರ್ಗಾವಣೆದಾರರೆಲ್ಲಾ ಈ ಬ್ಯಾಂಕ್‌ಗಳನ್ನು ಉಪಯೋಗಿಸುತ್ತಿದ್ದಾರೆ. ಇವುಗಳ ನಡುವೆ ಹಲವಾರು ಸರ್ಕಾರಗಳು, ಸರ್ಕಾರಿ ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳೂ ಸಹ ಸ್ವಿಸ್ ಬ್ಯಾಂಕ್‌ಗಳಲ್ಲಿ ಹಣ ಹೂಡಿವೆ. ಹಾಗಾಗಿ ಅಲ್ಲಿನ ಎಲ್ಲ ಹಣಕ್ಕೂ ಪಾಪದ ಮಸಿ ಹತ್ತಿಲ್ಲ.
ಸುಮಾರು 500 ಸ್ವಿಸ್ ಬ್ಯಾಂಕ್‌ಗಳಲ್ಲಿರಬಹುದಾದ ಅಂದಾಜು ಹಣ ಎಷ್ಟಿರಬಹುದು?
ವರದಿಗಳ ಪ್ರಕಾರ ಆ ಬ್ಯಾಂಕ್‌ಗಳಲ್ಲಿನ ಹಣ ಸುಮಾರು 4 ಟ್ರಿಲಿಯನ್ ಅಮೆರಿಕನ್ ಡಾಲರ್‌ಗಳು (200 ಲಕ್ಷ ಕೋಟಿ ರೂಪಾಯಿಗಳು). ಅಂದರೆ ಅಮೆರಿಕದ ಒಟ್ಟು ಗೃಹ ಉತ್ಪನ್ನದ ಮೂರನೇ ಒಂದು ಭಾಗ (13 ಟ್ರಿಲಿಯನ್ ಅಮೆರಿಕನ್ ಡಾಲರ್) ಅಥವಾ ಭಾರತದ ಒಟ್ಟು ಗೃಹ ಉತ್ಪನ್ನದ 4.5ರಷ್ಟು (46 ಲಕ್ಷ ಕೋಟಿ ರೂಪಾಯಿಗಳು). ಸ್ವಿಟ್ಜರ್‌ಲ್ಯಾಂಡಿನ ಜನಸಂಖ್ಯೆ 75 ಲಕ್ಷಕ್ಕಿಂತ ಕಡಿಮೆಯಿದೆ ಅಂದರೆ ಭಾರತದ ಜನಸಂಖ್ಯೆಯ ಶೇ.1ಕ್ಕಿಂತ ಕಡಿಮೆ, ಆದರೆ ಅದರ ಒಟ್ಟು ಗೃಹ ಉತ್ಪನ್ನ 381 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು (ಭಾರತದ ಒಟ್ಟು ಗೃಹ ಉತ್ಪನ್ನದ ಮೂರನೇ ಒಂದು ಭಾಗ). ಸ್ವಿಟ್ಜರ್‌ಲ್ಯಾಂಡಿನ ಪ್ರಮುಖ ಆದಾಯ ಬ್ಯಾಂಕಿಂಗ್ ಉದ್ಯಮದಿಂದಲೇ ಬರುತ್ತದೆ.

ಸ್ವಿಸ್ ಬ್ಯಾಂಕ್‌ಗಳು ಪಾರದರ್ಶಕವಾಗುವಂತೆ ಇತರ ಅಭಿವೃದ್ಧಿ ಹೊಂದಿದ ದೇಶಗಳು ಏಕೆ ಒತ್ತಡ ತರುತ್ತಿಲ್ಲ?
ಮೊದಲ ವಿಶ್ವಯುದ್ಧ ಮುಗಿದಾಗಿನಿಂದ ಎಲ್ಲ ಅಭಿವೃದ್ಧಿಹೊಂದಿದ ದೇಶಗಳು ತೀವ್ರ ಪ್ರಯತ್ನಗಳನ್ನು ಮಾಡುತ್ತಲೇ ಇವೆ. ಇತ್ತೀಚಿನ ಆರ್ಥಿಕ ಹಿಂಜರಿತದಿಂದಾಗಿ ಜಿ-20 ರಾಷ್ಟ್ರಗಳು ಮತ್ತು ಓ.ಸಿ.ಇ.ಡಿ. (ಸರ್ವ ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿ ಸಂಸ್ಥೆ) ಸ್ವಿಸ್ ಬ್ಯಾಂಕ್‌ಗಳ ಹಾಗೂ ಇತರ ತೆರಿಗೆ ಕಳ್ಳರ ಆಶ್ರಯ ಸ್ಥಾನಗಳ ಮೇಲೆ ತೀವ್ರ ಒತ್ತಡ ತರುತ್ತಿವೆ. ಓ.ಸಿ.ಇ.ಡಿ. ೩೦ ಅಭಿವೃದ್ಧಿ ದೇಶಗಳನ್ನು ಶಾಶ್ವತ ಸದಸ್ಯರನ್ನಾಗಿ ಹೊಂದಿದೆ. ಭಾರತ ಮತ್ತು ಚೀನಾ ಈ ಸಂಸ್ಥೆಯ ಸದಸ್ಯರಾಗಿಲ್ಲ. ಓ.ಸಿ.ಇ.ಡಿ. ಅಭಿವೃದ್ಧಿ ಹೊಂದಿದ ಪ್ರಜಾಸತ್ತೆಗಳಲ್ಲಿ ಪಾರದರ್ಶಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ತರಲು ಶ್ರಮಿಸುತ್ತಿದೆ. ಅದು ಈಗಾಗಲೇ ಮಲೇಷಿಯಾ ಮತ್ತು ಪರಗ್ವೇಯಂತಹ ತೆರಿಗೆ ಕಳ್ಳರ ಆಶ್ರಯ ಸ್ಥಾನಗಳನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಸ್ವಿಟ್ಜರ್‌ಲ್ಯಾಂಡ್ ಈಗಾಗಲೇ ಪ್ರಸ್ತಾವಿತ ಕಪ್ಪುಪಟ್ಟಿಯಲ್ಲಿದೆ. ಹಾಗಾಗಿ ಸ್ವಿಟ್ಜರ್‌ಲ್ಯಾಂಡಿನ ಮೇಲೆ ಒತ್ತಡ ಹೆಚ್ಚುತ್ತಿದೆ ಹಾಗೂ ಅದು ತಾನು ಪಾರದರ್ಶಕವಾಗುವ ಇಚ್ಛೆ ಸಹ ವ್ಯಕ್ತಪಡಿಸುತ್ತಿದೆ, ಆದರೆ ಅದು ತನ್ನದೇ ದೇಶಗಳ ಸಂಕೀರ್ಣ ಕಾನೂನುಗಳ, ಗ್ರಾಹಕ ಒಪ್ಪಂದಗಳ, ಬಹಿರಂಗಗೊಳಿಸಿದಲ್ಲಿ ಗ್ರಾಹಕರು ಹೂಡಬಹುದಾದ ದಾವೆಗಳ ಆತಂಕದಲ್ಲಿ ಹಾಗೂ ಸ್ವಿಟ್ಜರ್‌ಲ್ಯಾಂಡಿನ ನಾಗರಿಕರ ಸಮ್ಮತಿಯ ಜಾಲದಲ್ಲಿ ಸಿಕ್ಕಿಬಿದ್ದಿದೆ. ಜಗತ್ತಿನ ಎಲ್ಲ ಪ್ರಮುಖ ಬ್ಯಾಂಕ್‌ಗಳು ಸ್ವಿಸ್ ಬ್ಯಾಂಕ್‌ಗಳೊಂದಿಗೆ ತಮ್ಮ ವಹಿವಾಟನ್ನು ನಿಲ್ಲಿಸಿದಲ್ಲಿ ಸ್ವಿಸ್ ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಾರವು, ಆದರೆ ಇದು ನಡೆಯುವುದು ಸಾಧ್ಯವಿಲ್ಲ ಏಕೆಂದರೆ ಸ್ವಿಸ್ ಬ್ಯಾಂಕ್‌ಗಳು ಅಮೆರಿಕ, ಇಂಗ್ಲೆಂಡ್, ರಷಿಯಾ ಮತ್ತು ಯೂರೋಪ್‌ನಂತಹ ಪ್ರಬಲ ರಾಷ್ಟ್ರಗಳಲ್ಲಿ ಪ್ರಮುಖ ಬಂಡವಾಳ ಹೂಡಿಕೆ ಮಾಡಿದೆ. ಈ ಕ್ರಮದಿಂದ ಅವುಗಳ ಆರ್ಥಿಕತೆಯ ಮೇಲೆ ಪ್ರಭಾವ ಬೀರುವುದರಿಂದ ಆ ದೇಶಗಳು ಸಹ ಸಹಕರಿಸಲಾರವು. ಈ ಭೂಗತ ಬ್ಯಾಂಕಿಂಗ್ ವ್ಯವಸ್ಥೆ ಪಾರದರ್ಶಕವಾಗಲು ಹಲವಾರು ವರ್ಷಗಳೇ ಬೇಕಾಗಬಹುದು. ಅವು ತನ್ನ ಬ್ಯಾಂಕ್ ರಹಸ್ಯಗಳನ್ನು ತೆರೆದಿಟ್ಟರೂ ಅದು ಪ್ರಬಲ ದೇಶಗಳಿಗೆ ಮಾತ್ರವಾಗಿರುತ್ತದೆಯೇ ಹೊರತು ಭಾರತದಂತಹ ದೇಶಗಳಿಗಲ್ಲ. ಇಂತಹ ಸಂಕೀರ್ಣತೆಗಳ ನಡುವೆ ಭಾರತ ಸ್ವಿಸ್ ಬ್ಯಾಂಕುಗಳ ಮೇಲೆ ತನ್ನ ದೇಶದ ಠೇವಣಿದಾರರ ವಿವರಗಳನ್ನು ನೀಡುವಂತೆ ಒತ್ತಡ ತರುವುದು ಕಷ್ಟವಾಗುತ್ತದೆ. ಆದರೆ ಒಂದಲ್ಲ ಒಂದು ದಿನ ಭಾರತ ಸಹ ಅಮೆರಿಕದಂತಹ ಒಂದು ಪ್ರಬಲ ರಾಷ್ಟ್ರವಾಗಿ ಇತರ ಪ್ರಬಲ ರಾಷ್ಟ್ರಗಳೊಂದಿಗೆ ಸ್ವಿಸ್ ಬ್ಯಾಂಕ್‌ಗಳ ಮೇಲೆ ಒತ್ತಡ ತರಬಲ್ಲ ರಾಷ್ಟ್ರವಾಗಬಲ್ಲದು ಹಾಗೂ ಭ್ರಷ್ಟರನ್ನು ಬಯಲಿಗೆಳೆಯಬಹುದು.

ಯಾವುದಾದರೂ ದೇಶ ಇದುವರೆಗೆ ಸ್ವಿಸ್ ಬ್ಯಾಂಕ್‌ಗಳಿಂದ ಹಣ ವಾಪಸ್ ಪಡೆದಿದೆಯೆ?

ಸ್ವಿಸ್ ಬ್ಯಾಂಕ್ ಬಲವಂತದಿಂದ ಹಣವನ್ನು ವಾಪಸ್ಸು ನೀಡಿರುವುದು ಕೆಲವೇ ಸನ್ನಿವೇಶಗಳಲ್ಲಿ ಮಾತ್ರ:
1. ಎರಡನೇ ಮಹಾ ವಿಶ್ವಯುದ್ಧದ ನಂತರ ಅದು ಅಮೆರಿಕಕ್ಕೆ, ಫ್ರಾನ್ಸ್‌ಗೆ ಹಾಗೂ ಯು.ಕೆ.ಗೆ (ಅಲೈಡ್ ಸೇನೆಗೆ) ನಾಜಿ ಚಿನ್ನದ ವಿವಾದದಿಂದ ದೂರವಿರಲು ಒಟ್ಟು 65 ದಶಲಕ್ಷ ಡಾಲರ್‌ಗಳನ್ನು ಪಾವತಿಸಿತು.
2. ಎರಡನೇ ಮಹಾ ವಿಶ್ವಯುದ್ಧದ ಸಮಯದಲ್ಲಿ ನಾಜಿಗಳಿಗೆ ಸಹಾಯ ಮಾಡಲಾಗಿದೆ ಹಾಗೂ ನಾಜಿಗಳ ನರಮೇಧದಲ್ಲಿ ಹತರಾದ ಯೆಹೂದಿಗಳ ಖಾತೆಗಳಲ್ಲಿ ಹಣವನ್ನು ತಾನೇ ಉಳಿಸಿಕೊಂಡಿದೆ ಎಂಬ ಆರೋಪದಿಂದ ಮುಕ್ತವಾಗಲು ಸುಮಾರು 20 ದಶಲಕ್ಷ ಅಮೆರಿಕನ್ ಡಾಲರ್ ಹಣವನ್ನು ಯೆಹೂದಿ ಸಂಸ್ಥೆಗಳಿಗೆ ಪಾವತಿಸಿದೆ.
3. ಸೆಪ್ಟೆಂಬರ್ 9/11ರ ದಾಳಿಯ ನಂತರ ಅವು ಬಿನ್ ಲಾಡೆನ್‌ನ ಖಾತೆಗಳನ್ನು ಮುಟ್ಟುಗೋಲು ಮಾಡಿವೆ.
4.ಇತ್ತೀಚೆಗೆ ನ್ಯಾಯಾಲಯದ ಹೊರಗಿನ ಒಪ್ಪಂದದಂತೆ ಅದು ಅಮೆರಿಕದ ಕರ ವಿಭಾಗಕ್ಕೆ 780 ದಶಲಕ್ಷ ಡಾಲರ್ ಹಣವನ್ನು ಪಾವತಿಸಿದೆ.
ಈ ಮೇಲಿನ ಎಲ್ಲಾ ಉದಾಹರಣೆಗಳಲ್ಲಿ ಸ್ವಿಸ್ ಬ್ಯಾಂಕ್ ಯಾವುದೇ ವಿವರಗಳನ್ನು ಕೊಡದೆ ತನ್ನ ಗುಟ್ಟನ್ನು ಕಾಪಾಡಿಕೊಳ್ಳುವುದಕ್ಕಾಗಿ ಈ ಹಣವನ್ನು ಪಾವತಿಸಿದೆ.
ಉಪಸಂಹಾರ
ಸ್ವಿಸ್ ಬ್ಯಾಂಕ್‌ಗಳ ಈ ರಹಸ್ಯ ಸಂಕೇತಗಳ ಚರಿತ್ರೆಯನ್ನು ಗಮನಿಸಿದಲ್ಲಿ ಅವುಗಳಲ್ಲಿರುವ 70 ಲಕ್ಷ ಕೋಟಿ ರೂಗಳ ಭಾರತೀಯ ಹಣವನ್ನು ವಾಪಸ್ಸು ಪಡೆಯುವುದು ಸಾಧ್ಯವೆ? ಇಡೀ ಜಗತ್ತು ಪಾರದರ್ಶಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಯಸಿದಲ್ಲಿ ಹಾಗೂ ಸ್ವಿಸ್ ಬ್ಯಾಂಕ್ ಮತ್ತು ಆ ರೀತಿಯ ಸಂಸ್ಥೆಗಳನ್ನು ಬಹಿಷ್ಕರಿಸುವ ಒತ್ತಡ ತಂದಲ್ಲಿ ಆ ರೀತಿಯ ಅಕ್ರಮ ಹಣವನ್ನು ವಾಪಸ್ಸು ತರಬಹುದು. ಭಾರತದ 120 ಕೋಟಿ ಜನಸಂಖ್ಯೆಯಲ್ಲಿ ನನ್ನ ಅಂದಾಜಿನ ಪ್ರಕಾರ 30 ಲಕ್ಷ ಜನರು ತಲಾವಾರು 3 ಕೋಟಿ ರೂಗಳಷ್ಟು ಕಪ್ಪುಹಣವನ್ನು ಹೊಂದಿದ್ದಾರೆ. ಅಂದರೆ 90 ಲಕ್ಷ ಕೋಟಿ ರೂಗಳಷ್ಟಾಯಿತು ಹಾಗೂ ಇದು ಸ್ವಿಸ್ ಬ್ಯಾಂಕ್‌ಗಳಲ್ಲಿರುವ ಭಾರತಿಯರ ಅಕ್ರಮ ಹಣಕ್ಕಿಂತ ಹೆಚ್ಚಾಗಿದೆ. ನಮ್ಮ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು (ನಿವೃತ್ತ ಹಾಗೂ ಸೇವೆಯಲ್ಲಿರುವವರು), ವ್ಯಾಪಾರಿಗಳು ಸುಲಭವಾಗಿ ಈ 30 ಲಕ್ಷ ಜನರ ಸಂಖ್ಯೆಯಡಿ ಬರುತ್ತಾರೆ. ಹಾಗಿರುವಾಗ ನಾವೇಕೆ ನಮ್ಮ ಹಿತ್ತಲಲ್ಲೇ ಇರುವ ‘ರಹಸ್ಯ ನಿಧಿ’ಯ ಬಗ್ಗೆ ಮಾತನಾಡುತ್ತಿಲ್ಲ? ನಮ್ಮಲ್ಲೇ ಹಲವಾರು ‘ಮಿನಿ ಸ್ವಿಸ್’ ಬ್ಯಾಂಕ್‌ಗಳಿವೆಯಲ್ಲಾ! ನಾವು ಇದನ್ನೇ ಸಂಗ್ರಹಿಸಿದಲ್ಲಿ ಖಂಡಿತವಾಗಿ ನಾವು ನಮ್ಮ ವಿದೇಶಿ ಸಾಲಗಳನ್ನು ಒಂದೇ ಕಂತಿನಲ್ಲಿ ತೀರಿಸಿ ಉಳಿದದ್ದನ್ನು ಹಳ್ಳಿಗಳಿಗೂ ಹಂಚಬಹುದು. 500 ಮತ್ತು 1000 ರೂಗಳ ನೋಟಿನ ಮೇಲೆ ಔಷಧಗಳ ಮೇಲಿನಂತೆ ‘ಅವಧಿ ಮುಕ್ತಾಯ’ (ಎಕ್ಸ್‌ಪೈರಿ ದಿನಾಂಕ) ದಿನಾಂಕವನ್ನು ಮುದ್ರಿಸಬೇಕು. ಜನರು ಅವುಗಳನ್ನು ನವೀಕರಿಸಿಕೊಳ್ಳಲು ಬಂದಾಗ ಅದರ ಮೂಲ ಹಾಗೂ ತೆರಿಗೆ ಪಾವತಿಸಿದ ವಿವರಗಳನ್ನು ಪಡೆಯುವುದು ಸುಲಭವಾಗುತ್ತದೆ. ಇದೊಂದು ಸಣ್ಣ ಉದಾಹರಣೆಯಷ್ಟೆ. ಈ ರೀತಿಯ ಹತ್ತು ಹಲವಾರು ಉಪಾಯಗಳನ್ನು ಭಾರತದ ಬೌದ್ಧಿಕವರ್ಗ ಹಾಗೂ ದಾರ್ಶನಿಕರು ಶೋಧಿಸಬೇಕಾಗುತ್ತದೆ. ಇಂದಿನ ತುರ್ತು ಅವಶ್ಯಕತೆ ಅಂತಹ ದಾರ್ಶನಿಕರು ಸಾರ್ವಜನಿಕ ಕಚೇರಿಗಳನ್ನು ಆಕ್ರಮಿಸಿಕೊಳ್ಳಬೇಕು.

ಚೀನಾದಿಂದ ನಾವು ಬ್ರಹ್ಮಪುತ್ರ ನದಿಯನ್ನು ಉಳಿಸಿಕೊಳ್ಳಬಹುದೆ?






ವಿಶ್ವದ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿರುವ ಅಮೆರಿಕಾವನ್ನು ಕೆಳಕ್ಕಿಳಿಸಿ ಆ ಸ್ಥಾನವನ್ನು ಆಕ್ರಮಿಸಲು ಚೀನಾ ಸಜ್ಜುಗೊಳ್ಳುತ್ತಿದೆ. ಶೇ.14.5ಕ್ಕಿಂತ ಹೆಚ್ಚು ಬೆಳವಣಿಗೆಯ ಗತಿಯನ್ನು ಹೊಂದಿರುವ ಚೀನಾ ತನ್ನ ನಿರಂತರವಾಗಿ ಬೆಳೆಯುತ್ತಿರುವ ಆರ್ಥಿಕತೆಯಿಂದಾಗಿ ಭವಿಷ್ಯದ ನೀರು ಮತ್ತು ವಿದ್ಯುತ್ ಸಮಸ್ಯೆಗಳನ್ನು ನಿಭಾಯಿಸುವತ್ತ ತನ್ನ ದೃಷ್ಟಿ ಹರಿಸಿದೆ. ಯಾವುದೇ ದೇಶದ ಅಭಿವೃದ್ಧಿಗೆ ಆಧಾರ ಸ್ಥಂಭಗಳಾಗಿರುವ ಕೈಗಾರಿಕೆ ಮತ್ತು ಕೃಷಿಗೆ ನೀರು ಮತ್ತು ವಿದ್ಯುತ್ ಅತ್ಯವಶ್ಯಕವಾದುವು. ನೀರನ್ನು ಸಮರ್ಥವಾಗಿ ಬಳಸಿಕೊಳ್ಳದ ಆರೋಪವನ್ನು ವಿಶ್ವಬ್ಯಾಂಕ್ ಚೀನಾ ಮತ್ತು ಭಾರತ ಎರಡರ ಮೇಲೂ ಹೊರಿಸಿದೆ. ಚೀನಾದ ಉತ್ತರ ಭಾಗಗಗಳಲ್ಲಿ ನೀರಿನ ತೀವ್ರ ಕೊರತೆಯಿದ್ದು ಬೀಜಿಂಗ್ ಮತ್ತು ಶಾಂಘಾಯ್ ಸುತ್ತಮುತ್ತಲ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ 2000 ಅಡಿಗಳಿಗಿಂತ ಕೆಳಗೆ ಹೋಗಿದೆ. ಪಶ್ಚಿಮದಿಂದ ಪೂರ್ವಕ್ಕೆ ಹರಿಯುವ ಹಳದಿ ನದಿಯಲ್ಲಿ ವರ್ಷಗಳು ಕಳೆದಂತೆ ನೀರು ಕಡಿಮೆಯಾಗುತ್ತಿದೆ. ಉತ್ತರ ಚೀನಾದ ಜನಸಂಖ್ಯೆ 550 ದಶಲಕ್ಷಗಳಷ್ಟಿದ್ದು ಚೀನಾದ ಕೃಷಿಯೋಗ್ಯ ಭೂಮಿಯ 2/3ರಷ್ಟು ಭಾಗವನ್ನು ಹೊಂದಿದ್ದರೂ ಸಹ ಲಭ್ಯ ಶುದ್ಧ ನೀರಿನ 1/5ರಷ್ಟು ಭಾಗವನ್ನು ಮಾತ್ರ ಹೊಂದಿದೆ. ಆದರೆ 700 ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ದಕ್ಷಿಣ ಚೀನಾ ತಾನು ಪಡೆಯುವ ಹೆಚ್ಚು ಮಳೆಯಿಂದಾಗಿ ಹಾಗೂ ಯಾಂಗ್ಜೀ ನದಿಯಿಂದಾಗಿ ಲಭ್ಯ ಶುದ್ಧ ನೀರಿನ 4/5ರಷ್ಟು ಭಾಗವನ್ನು ಹೊಂದಿದೆ. ಕೈಗಾರಿಕೆ ಮತ್ತು ಕೃಷಿಯಲ್ಲಿ ಮುಂಚೂಣಿಯಲ್ಲಿರುವ ಉತ್ತರ ಚೀನಾ ಅದೇ ಬೆಳವಣಿಗೆಯನ್ನು ಕಾಯ್ದಿಟ್ಟುಕೊಳ್ಳಲು ನೀರಿನ ಕೊರತೆಯಿಂದ ಪರದಾಡುತ್ತಿದೆ. ಹಾಗಾಗಿ ಯಾಂಗ್ಜಿ ಮತ್ತು ಹಳದಿ ನದಿಗಳನ್ನು ಪಶ್ಚಿಮ, ಪೂರ್ವ ಹಾಗೂ ಮಧ್ಯದ ಕಾಲುವೆಗಳಿಂದ ಕೂಡಿಸುವ ಒಂದು ಬೃಹತ್ ಯೋಜನೆಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ.

(ವಿಶ್ವದ ಅತಿ ದೊಡ್ಡ ಅಣೆಕಟ್ಟು- ದಕ್ಷಿಣ ಚೀನಾದಲ್ಲಿನ 3 ಗಾರ್ಜಸ್ ಅಣೆಕಟ್ಟು)

ಚೀನಾದ ಬೃಹತ್ ಆಲೋಚನೆಗಳು

ಚೀನಾದ ಆಲೋಚನೆಗಳು ಯಾವಾಗಲೂ ಬೃಹತ್ ಗಾತ್ರದ್ದಾಗಿರುತ್ತವೆ. ಕ್ರಿ.ಪೂ. 5ನೇ ಶತಮಾನದಿಂದ 15ನೇ ಶತಮಾನದವರೆಗೆ ನಿರ್ಮಿಸಿರುವ ಚೀನಾದ ಮಹಾ ಗೋಡೆ ಸುಮಾರು 5000 ಮೈಲಿಗಳಷ್ಟು ಉದ್ದವಿದೆ. ಚೀನಾವನ್ನು ಆಳಿದ ಪ್ರತಿಯೊಬ್ಬ ಸಾಮ್ರಾಟನೂ ತನ್ನ ಹಿಂದಿನ ಸಾಮ್ರಾಟನಿಗಿಂತ ಬೃಹತ್ ಆಗಿರುವುದನ್ನು ಸಾಧಿಸಲು ಪ್ರಯತ್ನಿಸಿದ್ದಾನೆ. ಚೀನಾದ ಹಿಂದಿನ ನಾಯಕ ಲೆ ಪೆಂಗ್ ದಕ್ಷಿಣದಲ್ಲಿ ಯಾಂಗ್ಜಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ವಿಶ್ವದ ಅತಿ ದೊಡ್ಡ ಅಣೆಕಟ್ಟಾದ 3-ಗಾರ್ಜಸ್ ಅಣೆಕಟ್ಟಿಗೆ ಕಾರಣರಾಗಿದ್ದಾರೆ. ಅಲ್ಲಿನ ಜಲ ವಿದ್ಯುತ್ ಸ್ಥಾವರದಲ್ಲಿ 18ರಿಂದ 20,000 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈಗಿನ ಅಧ್ಯಕ್ಷರಾಗಿರುವ ಹು ಜಿಂಟಾವ್ ಮತ್ತು ಪ್ರಧಾನಿ ವೆನ್ ಜಿಯಾಬೊ ಇಬ್ಬರೂ ಲೆ ಪೆಂಗ್ ರೀತಿಯಲ್ಲಿಯೇ ಜಲ ವಿದ್ಯುತ್ ಇಂಜಿನಿಯರ್‌ಗಳಾಗಿದ್ದು ದಕ್ಷಿಣದ ಯಾಂಗ್ಜಿ ನದಿ ಮತ್ತು ಉತ್ತರದ ಹಳದಿ ನದಿಗಳ ಜೋಡಣೆಯ 400,000 ಕೋಟಿಗಳ ವೆಚ್ಚದ ಪ್ರಾಯೋಜನೆಗೆ ಕೈ ಹಾಕಿದ್ದಾರೆ. ಪ್ರಾಯೋಜನೆಯ ಬಹುಪಾಲು ಕಾರ್ಯವೆಲ್ಲಾ ಮಧ್ಯ ಮತ್ತು ಪೂರ್ವದ ಹಾದಿಗಳಲ್ಲಿ ಮಾಡಲಾಗುತ್ತಿದ್ದು ವಿವಾದಾಸ್ಪದ ಪಶ್ಚಿಮ ಹಾದಿಯ ಕಾರ್ಯ ಇನ್ನೂ ಪ್ರಾರಂಭವಾಗಬೇಕಾಗಿದೆ.

(ಮೂರು ಕೆಂಪನೆ ಸಾಲುಗಳು ಪೂರ್ವದ, ಮಧ್ಯದ ಮತ್ತು ಪಶ್ಚಿಮದ ಹಾದಿಗಳನ್ನು ತೋರಿಸುತ್ತವೆ. ಪಶ್ಚಿಮದ ಚುಕ್ಕಿಯ ಸಾಲು ಬ್ರಹ್ಮಪುತ್ರ ಮತ್ತು ಹಳದಿ ನದಿಯನ್ನು ಜೋಡಿಸುವ ಎರಡನೇ ಹಂತದ ಹಾದಿಯಾಗಿದೆ)

(ಬ್ರಹ್ಮಪುತ್ರಾದ ಮಹಾನ್ ತಿರುವು. ನದಿಯ ತಿರುವಿಗಾಗಿ ಅಣೆಕಟ್ಟು ನಿರ್ಮಿಸಲು ಪ್ರಸ್ತಾವಿತ ಸ್ಥಳ)

ನದಿ ಜೋಡಣೆಯ ಪಶ್ಚಿಮದ ಹಾದಿ ಕಡಿದಾದ ಬೆಟ್ಟಗುಡ್ಡಗಳ ಪ್ರದೇಶವಾಗಿದೆ. ಅಲ್ಲಿ ಕೆಲವೆಡೆ ಸಮುದ್ರದ ಮಟ್ಟಕ್ಕಿಂತ 4000 ಅಡಿಗಳಷ್ಟು ಎತ್ತರ ಸುರಂಗಗಳನ್ನು ಕೊರೆಯಬೇಕಾಗುತ್ತದೆ. ಅದರಲ್ಲಿ ಎರಡು ಹಂತಗಳಿವೆ. ಮೊದಲನೆಯ ಹಂತದಲ್ಲಿ ಯಾಂಗ್ಜಿಯನ್ನು ಬಯಾಂಕ ಪರ್ವತಗಳ ಮೂಲಕ ಹಳದಿ ನದಿಗೆ ಜೋಡಿಸಲಾಗುತ್ತದೆ. ಸುಮಾರು 125000ಕೋಟಿಗಳಷ್ಟು ಖರ್ಚಾಗಬಹುದಾದ ಎರಡನೇ ಹಂತದಲ್ಲಿ ಬ್ರಹ್ಮಪುತ್ರಾ ನದಿಯನ್ನು ಒಂದನೇ ಹಂತದ ಸುರಂಗದ ಮೂಲಕ ಹಳದಿ ನದಿಗೆ ಸೇರಿಸುವುದಾಗಿದೆ. ಮೊದಲನೇ ಹಂತದಲ್ಲಿ ಭೂಕಂಪಗಳ ಸಾಧ್ಯತೆಗಳುಳ್ಳ ಬಯಾಂಕ ಪರ್ವತದಲ್ಲಿ ಸುರಂಗಗಳನ್ನು ತೋಡಬೇಕಾಗಿರುವುದರಿಂದ ಚೀನಿಯರು ಅಣುವಿಸ್ಫೋಟಗಳನ್ನು ಬಳಸಬಹುದೆಂದು ತಜ್ಞರು ಹೇಳುತ್ತಾರೆ. ಈಗಿನ ಚೀನಿ ಸರ್ಕಾರ ವಿವಾದಾಸ್ಪದ ಬ್ರಹ್ಮಪುತ್ರ ನದಿಯನ್ನು ಆಗ್ನೇಯ ದಿಕ್ಕಿನಲ್ಲಿನ ಗೋಬಿ ಮುರುಭೂಮಿಗೂ ಹರಿಸುವ ಆಲೋಚನೆಯನ್ನು ಹೊಂದಿದೆ. ಬ್ರಹ್ಮಪುತ್ರ ನದಿಯ ತಿರುವಿನಲ್ಲಿ ಅಣೆಕಟ್ಟೊಂದನ್ನು ಕಟ್ಟಿ ಅಲ್ಲಿ ದಕ್ಷಿಣ ಚೀನಾದಲ್ಲಿನ 3-ಗಾರ್ಜಸ್ ಅಣೆಕಟ್ಟಿಗಿಂತ ಹೆಚ್ಚು, ಅಂದರೆ 40,000 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಆಲೋಚನೆ ಸಹ ಹೊಂದಿದೆ. ಚೀನಿಯರೇನಾದರೂ ಪಶ್ಚಿಮದ ಈ ಎರಡೂ ಹಂತಗಳನ್ನು ಸಂಪೂರ್ಣಗೊಳಿಸಿದರೆ ಭಾರತ, ಬಾಂಗ್ಲಾದೇಶ, ಮಯನ್ಮಾರ್ ಮತ್ತು ವಿಯೆಟ್ನಾಂ ದೇಶಗಳು ಕಷ್ಟದ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಚೀನಿಯರ ಈ ಆಲೋಚನೆ ಈಗಾಗಲೇ ಈ ದೇಶಗಳಲ್ಲಿ ನಡುಕ ಹುಟ್ಟಿಸಿವೆ. ವಿಯೆಟ್ನಾಂ ಈಗಾಗಲೇ ಈ ಪಶ್ಚಿಮದ ಕಾಲುವೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಭಾರತ ಬ್ರಹ್ಮಪುತ್ರಾ ನದಿಯನ್ನು ತಿರುಗಿಸುವಿಕೆಯ ಬಗೆಗೆ ಹೆಚ್ಚಿನ ಮಾಹಿತಿ ಕೇಳಿದೆ.

ಚೀನಾವನ್ನು ನಂಬಬಹುದೆ?

ವಿದೇಶಿ ಕಾರ್ಯದರ್ಶಿ ನಿರುಪಮಾ ರಾವ್‌ರವರು 2009ರ ನವೆಂಬರ್ 9ರಂದು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಬ್ರಹ್ಮಪುತ್ರಾ ನದಿಗೆ ಅಣೆಕಟ್ಟು ಕಟ್ಟುವ ಯೋಜನೆ ತನಗಿಲ್ಲವೆಂದು ಚೀನಾ ನಿರಂತರವಾಗಿ ಹೇಳುತ್ತಿದೆ ಎಂದರು. ನಮ್ಮ ಪ್ರಧಾನಿಯ ಪತ್ರಕ್ಕೆ ಉತ್ತರವಾಗಿ ಸಹ ಚೀನಾ ಅದನ್ನೇ ಹೇಳಿದೆ. ಅದಾದ ಒಂದು ವಾರದ ನಂತರ ನಿರ್ಮಾಣ ಕಾರ್ಯದ ಉಪಗ್ರಹ ಚಿತ್ರಗಳನ್ನು ಎನ್.ಆರ್.ಎಸ್.ಎ. ಭಾರತ ಸರ್ಕಾರಕ್ಕೆ ನೀಡಿದೆ. ಆ ಚಿತ್ರಗಳಲ್ಲಿ ಬ್ರಹ್ಮಪುತ್ರಾದ ಮಹಾನ್ ತಿರುವಿಗೆ ಹಾದಿಮಾಡಿಕೊಡುವ ಲಾಸಾ- ಮೆಡೋಗ್ ಹೆದ್ದಾರಿಯ ನಿರ್ಮಾಣದ ಚಿತ್ರಗಳೂ ಇವೆ. ಹತ್ತು ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಡೆಂಗ್ ಪಟ್ಟಣಕ್ಕೆ 1000 ಕೋಟಿಗಳ ವೆಚ್ಚದ ನಿರ್ಮಾಣದ ಎಲ್ಲರಲ್ಲೂ ಸಂಶಯ ಮೂಡಿಸುತ್ತಿದೆ. ಏಪ್ರಿಲ್ 2009ರಲ್ಲಿ ಗೆಜೂಬಾ ಕಾರ್ಪೊರೇಶನ್ ಬ್ರಹ್ಮಪುತ್ರಾ ನದಿಗೆ ಮಧ್ಯದಲ್ಲಿ ಜಾಂಗ್ಮೂ ಅಣೆಕಟ್ಟು (ಪ್ರಸ್ತಾವಿತ 5 ಅಣೆಕಟ್ಟುಗಳಲ್ಲಿ ಒಂದು) ಕಟ್ಟಲು ಟೆಂಡರ್ ಪಡೆದುಕೊಂಡಿದೆ (ಈ ಮಾಹಿತಿಯು ಆ ಕಂಪೆನಿಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ).


(ಕೆಂಪು ಸಾಲು ಬ್ರಹ್ಮಪುತ್ರಾ ನದಿಯನ್ನು ಹಳದಿ ನದಿಗೆ ಬಯಾಂಕ ಪರ್ವತಗಳ ಮೂಲಕ ಜೋಡಿಸುವುದನ್ನು ತೋರಿಸುತ್ತದೆ)

ಬ್ರಹ್ಮಪುತ್ರ ನದಿಯೇ ಏಕೆ?
ಯಾರ‍್ಲಾಂಗ್ ತ್ಸಾಂಗ್ಪೊ ಅಥವಾ ಬ್ರಹ್ಮಪುತ್ರಾ ನದಿ ಟಿಬೆಟನ್ ಪ್ರಸ್ಥಭೂಮಿಯಲ್ಲಿದ್ದು ವಿಶ್ವದ ಅತಿ ದೊಡ್ಡ ಮತ್ತು ಅತಿ ಎತ್ತರದ ನದಿಯಾಗಿದೆ.

ಅದು ಕೈಲಾಸ ಪರ್ವತದಲ್ಲಿ, ಸಮುದ್ರ ಮಟ್ಟಕ್ಕಿಂತ 4000 ಅಡಿ ಎತ್ತರದಲ್ಲಿ ಹುಟ್ಟಿ ಟಿಬೆಟ್ (ಚೀನಾ)ನಲ್ಲಿ 1800 ಕಿ.ಮೀ.ಗಳಷ್ಟು ಹರಿದು ದಕ್ಷಿಣಕ್ಕೆ ಸುಮಾರು 300 ಕಿ.ಮೀ.ಗಳಷ್ಟು ಉದ್ದದ ತಿರುವಿನಲ್ಲಿ ತಿರುಗಿ ಭಾರತದಲ್ಲಿನ ಅಸ್ಸಾಂ ಬಯಲು ಪ್ರದೇಶವನ್ನು ಪ್ರವೇಶಿಸುತ್ತದೆ. ಅಲ್ಲಿಂದ ಅದು ಅರುಣಾಚಲ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಮೂಲಕ ಗಂಗಾನದಿಯನ್ನು ಸೇರಿ ಬಾಂಗ್ಲಾದೇಶದ ಮೂಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಈ ಮೇಲಿನ ದೇಶಗಳಲ್ಲಿ ನೀರಾವರಿಗೆ ನೀರನ್ನು ಒದಗಿಸಿದ ನಂತರ ಈ ನದಿಯು ಬಂಗಾಳ ಕೊಲ್ಲಿಯ ಮುಖಜದಲ್ಲಿ ಪ್ರತಿ ಸೆಕೆಂಡಿಗೆ 19,830 ಘನ ಮೀ. ಅಥವಾ ವಾರ್ಷಿಕ 23,000 ಟಿ.ಎಂ.ಸಿ. ನೀರನ್ನು ಹೊರಸೂಸುತ್ತದೆ. ಕೇವಲ 1 ಟಿ.ಎಂ.ಸಿ. ನೀರು 7000 ಹೆಕ್ಟೇರ್ ಕೃಷಿಭೂಮಿಗೆ ನೀರಾವರಿ ನೀರನ್ನು ಒದಗಿಸಬಲ್ಲದು. ನದಿಯ ಪ್ರಾಕೃತಿಕ ಹರಿವನ್ನೇ ಬಳಸಿಕೊಂಡು 150,000 ಮೆಗಾ ವ್ಯಾಟ್‌ಗಿಂತ ಹೆಚ್ಚು ವಿದ್ಯುತ್ತನ್ನು ಉತ್ಪಾದಿಸಬಹುದು. ಬ್ರಹ್ಮಪುತ್ರಾದ ಈ ಮಹಾ ತಿರುವಿನಲ್ಲಿಯೇ ಚೀನಿಯರು ಅಣೆಕಟ್ಟನ್ನು ಕಟ್ಟಿ ವಿದ್ಯುತ್ ಉತ್ಪಾದಿಸಲು ಯೋಜಿಸುತ್ತಿರುವುದು. ಯು- ತಿರುವಿನ ಪ್ರವೇಶ ಸ್ಥಾನದಿಂದ ಯು- ತಿರುವಿನ ಕೊನೆಯ ಸ್ಥಾನಕ್ಕೆ 2500 ಮೀಟರುಗಳ ಎತ್ತರದ ಅಂತರವಿದೆ ಆದರೆ ಆ ತಿರುವಿನ ಉದ್ದ 300 ಕಿ.ಮೀ.ಗಳಷ್ಟಿದೆ. ಆದುದರಿಂದ ಅವರು ಹಿಮಾಲಯದ ಪರ್ವತದ ಮೂಲಕ ಸುರಂಗವೊಂದನ್ನು ಕೊರೆದು ತಿರುವಿನ ಪ್ರವೇಶದಿಂದ ಹೊರ ಹರಿಯುವ ಪ್ರವೇಶಕ್ಕೆ ನೇರ ಸಂಪರ್ಕ ನಿರ್ಮಿಸುವ ಯೋಜನೆ ಹೊಂದಿದ್ದಾರೆ. ಇದರಿಂದ 300 ಕಿ.ಮೀ. ಉದ್ದ ಕೇವಲ 15 ಕಿ.ಮೀ.ಗಳಷ್ಟಾಗುತ್ತದೆ ಆದರೆ ಎತ್ತರದ ಅಂತರ 2500 ಮೀ.ಗಳಷ್ಟು ಇದ್ದೇ ಇರುತ್ತದೆ. ಹಾಗಾಗಿ ನೀರು ಅತ್ಯಂತ ರಭಸವಾಗಿ ಹರಿದು 40,000 ಮೆ.ವ್ಯಾ. ವಿದ್ಯುತ್ ಉತ್ಪಾದಿಸಬಹುದಾಗಿದೆ. ಇಲ್ಲಿ ಉತ್ಪಾದಿತವಾಗುವ ಕೊಂಚ ವಿದ್ಯುತ್ತನ್ನು ಆ ಪರ್ವತಗಳಿಂದ ನೀರನ್ನು ಆಗ್ನೇಯ ಗೋಬಿ ಮರುಭೂಮಿಗೆ ಪಂಪ್ ಮಾಡಲು ಬಳಸಲಾಗುತ್ತದೆ. ಬ್ರಹ್ಮಪುತ್ರಾ ನದಿಯು ಟಿಬೆಟ್(ಚೀನಾ)ನಲ್ಲಿ ಹುಟ್ಟಿ ಅದರ ಮೂಲಕವೇ 1700 ಕಿ.ಮೀ. ಹರಿದು ಬಂದರೂ ಚಾರಿತ್ರಿಕವಾಗಿ ಅದು ಭಾರತ ಮತ್ತು ಬಾಂಗ್ಲಾದೇಶಕ್ಕೆ ಮಾತ್ರ ನೀರುಣಿಸುತ್ತಿತ್ತು. ಅದು ಬೆಟ್ಟಗುಡ್ಡಗಳ ಪ್ರದೇಶವಾಗಿದ್ದುದರಿಂದ ಹಾಗೂ ಅದು ದುಂದುವೆಚ್ಚದ ಕಾರ್ಯವಾಗಿದ್ದುದರಿಂದ ಚೀನಾ ಆ ನೀರನ್ನು ತಡೆದು ಬಳಸಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ಆದರೆ ಈಗ ಚೀನಾ ಈಗ ಸಾಕಷ್ಟು ಸಿರಿವಂತ ದೇಶವಾಗಿರುವುದರಿಂದ ಈಗ ಬೃಹತ್ ಯೋಜನೆಗಳಿಗೆ ಕೈ ಹಾಕುವ ಸಾಮರ್ಥ್ಯ ಅದಕ್ಕಿದೆ.
ಚೀನಾ ಮುಂದಾಲೋಚನೆಯಲ್ಲಿ ಮುಂದು
ಚೀನಾದವರು ಯಾವುದೇ ಪ್ರಾಯೋಜನೆಯನ್ನು ಜಾರಿಗೆ ತರುವ ಮೊದಲು ಅದನ್ನು ಎಲ್ಲ ರೀತಿಯಿಂದಲೂ ಅಧ್ಯಯನ ಮಾಡುತ್ತಾರೆ. ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೂ ಭವಿಷ್ಯದ ಪ್ರಾಯೋಜನೆಗಳ ಅರಿವಿರುತ್ತದೆ. ಯಾಂಗ್ಜಿ ಮತ್ತು ಉತ್ತರದಲ್ಲಿನ ಹಳದಿ ನದಿಯ ಜೋಡಣೆಗಳ ಬಗ್ಗೆ ಮಾವೋ ತ್ಸೆತುಂಗ್ ಐವತ್ತು ವರ್ಷಗಳ ಹಿಂದೆಯೇ ಆಲೋಚಿಸಿದ್ದರು. ಅಂತಹ ಪ್ರಾಯೋಜನೆಯೊಂದನ್ನು ಅನುಷ್ಠಾನಕ್ಕೆ ತರಲು ಅವರು ದಶಕಗಳ ಸಂಶೋಧನೆ ಮತ್ತು ಯೋಜನೆಯನ್ನು ಮಾಡಿದ್ದಾರೆ. ಚೀನಾದಲ್ಲಿ ಒಂದು ಆಡು ಮಾತಿದೆ: ‘ಪ್ರಾಯೋಜನೆಯೊಂದನ್ನು ಯೋಜನಾ ಕೋಣೆಗೆ ತರುವುದು ಕಷ್ಟ, ಆದರೆ ಅಲ್ಲಿಗೆ ಬಂದಲ್ಲಿ ಅದನ್ನು ಏನೇ ಆದರೂ ಅನುಷ್ಠಾನಕ್ಕೆ ತರಲಾಗುತ್ತದೆ’. ಟಿಬೆಟ್ ಬಂಜರು ಭೂಮಿಯಾದರೂ ಚೀನಾಗೆ ಅದು ಏಕೆ ಬೇಕಾಯಿತು? ಏಕೆಂದರೆ ಟಿಬೆಟನ್ ಪ್ರಸ್ಥಭೂಮಿ ದಕ್ಷಿಣ ಏಷಿಯಾದ ಹತ್ತು ಪ್ರಮುಖ ನದಿಗಳ ಉಗಮಸ್ಥಾನವಾಗಿದೆ ಹಾಗೂ ಅದು ಜಗತ್ತಿನ ಅತ್ಯಮೂಲ್ಯ ನೀರಿನ ಸಂಗ್ರಹಾಗಾರವಾಗಿದೆ. ಅಷ್ಟಲ್ಲದೆ ಅಲ್ಲಿ ಗಣಿಗಾರಿಕೆಗೂ ಅವಕಾಶಗಳಿವೆ. ಅದರಿಂದಾಗಿಯೇ ಟಿಬೆಟ್‌ನಿಂದ ಚೀನಾಕ್ಕೆ ಜಗತ್ತಿನ ಅತ್ಯಂತ ಉದ್ದ ವಿದ್ಯುತ್ ರೈಲ್ವೇ ಜಾಲವನ್ನು ನಿರ್ಮಿಸಲು ಮುಂದಾಗಿದೆ. ಈ ರೈಲ್ವೇ ಸಂಪರ್ಕ ಜಾಲಕ್ಕೆ ಹಾಗೂ ಗಣಿಗಾರಿಕೆಗಷ್ಟೇ ಅಲ್ಲ ಚೀನಾದಲ್ಲಿನ ಕೈಗಾರಿಕೆಗಳಿಗೂ ಸಾಕಷ್ಟು ವಿದ್ಯುತ್ ಬೇಕಾಗಿದೆ. ಬ್ರಹ್ಮಪುತ್ರಾ ಅಣೆಕಟ್ಟಿನಿಂದ ಪಶ್ಚಿಮ ಚೀನಾಕ್ಕೆ ನೀರನ್ನು ಪಂಪ್ ಮಾಡಲು ಸಹ ವಿದ್ಯುತ್ ಬೇಕಾಗಿದೆ. ಆಗ್ನೇಯ ಚೀನಾದಲ್ಲಿ ಮರುಭೂಮಿ ವಿಸ್ತರಣೆಯಿಂದಾಗಿ ಚೀನಾ ಪ್ರತಿ ವರ್ಷ 4 ದಶಲಕ್ಷ ಎಕರೆ ಭೂಮಿಯನ್ನು ಕಳೆದುಕೊಳ್ಳುತ್ತಿದೆ. ಆ ಪ್ರದೇಶಗಳು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿವೆ. ಆ ಕಾರಣಗಳಿಂದಾಗಿಯೇ ಚೀನಾ ಇಂದು ಬ್ರಹ್ಮಪುತ್ರಾ ನದಿಯ ನೀರಿಗೆ ಕೈಹಾಕಲು ಮುಂದಾಗುತ್ತಿದೆ. ಇತರ ದೇಶಗಳ ತಜ್ಞರು ಅಭಿಪ್ರಾಯದಂತೆ ಟಿಬೆಟ್ ಪ್ರಸ್ಥಭೂಮಿಯಿಂದ ಪಶ್ಚಿಮ ಚೀನಾಕ್ಕೆ ನೀರನ್ನು ಹರಿಸಲು ಹಿಮಾಲಯದ ಪರ್ವತಗಳ ಮೂಲಕ ಸುರಂಗ ಕೊರೆಯಬೇಕಾಗಿದ್ದಲ್ಲಿ ಅದು ಅಣುಸ್ಫೋಟಕಗಳನ್ನು ಬಳಸದೆ ಕೊರೆಯಲು ಸಾಧ್ಯವಿಲ್ಲ. ಈ ಕಾರಣದಿಂದಾಗಿಯೇ ಶಾಂತಿಯುತ ಬಳಕೆಗಾಗಿ ಅಣುವಿಸ್ಫೋಟಕ್ಕಾಗಿ ಪ್ರಸ್ತಾವನೆ ಮಾಡುವವರೆಗೆ ಚೀನಾ ಸಿ.ಟಿ.ಬಿ.ಟಿ.ಗೆ ಸಹಿಮಾಡಲಿಲ್ಲ.

ಈ ಪ್ರಾಯೋಜನೆಯಿಂದಾಗಿ ಭಾರತ ಮತ್ತು ಬಾಂಗ್ಲಾದೇಶದ ಮೇಲಾಗುವ ಪರಿಣಾಮಗಳೇನು?

ಯುರೇಶಿಯನ್ (ಚೀನಾದ) ಮತ್ತು ಇಂಡಿಯನ್ ಟೆಕ್ಟೋನಿಕ್ ಪ್ಲೇಟ್‌ಗಳ ಘರ್ಷಣೆಯಿಂದಾಗಿ ಬ್ರಹ್ಮಪುತ್ರ ಕಣಿವೆ ಮತ್ತು ಅದರ ಸುತ್ತಮುತ್ತಲ ಪರ್ವತ ಪ್ರದೇಶಗಳು ಭೂಕಂಪನ ಸೂಕ್ಷ್ಮ ಹಾಗೂ ಅಸ್ಥಿರ ಪ್ರದೇಶಗಳಾಗಿವೆ. ಅಲ್ಲಿ ನಡೆದ 1897ರ ಹಾಗೂ 1950ರ ಭೂಕಂಪನಗಳು 8.7 ರಿಕ್ಟರ್ ಸ್ಕೇಲ್‌ನಷ್ಟಿದ್ದು ದಾಖಲಿತ ಚರಿತ್ರೆಯಲ್ಲಿಯೇ ಅತಿ ತೀವ್ರ ಭೂಕಂಪನಗಳಾಗಿವೆ. ಈ ಭೂಕಂಪನಗಳು ತೀವ್ರ ಭೂ ಹಾಗೂ ಶಿಲಾ ಕುಸಿತಗಳನ್ನು ಉಂಟುಮಾಡಿತಲ್ಲದೆ ಕಣಿವೆಗಳಲ್ಲಿ ಬಿರುಕುಗಳನ್ನುಂಟುಮಾಡಿ ಹಲವಾರು ಉಪನದಿಗಳ ಹರಿವಿನ ದಿಕ್ಕನ್ನೇ ಬದಲಾಯಿಸಿತು. ಈ ದೃಷ್ಟಿಯಿಂದಾಗಿ ಪರ್ವತಗಳಲ್ಲಿ ಸುರಂಗಗಳನ್ನು ಕೊರೆಯಲು ಅಣುವಿಸ್ಫೋಟಗಳನ್ನು ಬಳಸುವುದು ಅತ್ಯಂತ ಆಘಾತಕಾರಿಯಾದುದು. ಇದರಿಂದಾಗಿ ಉಂಟಾಗಬಹುದಾದ ಭೂಕುಸಿತದಿಂದಾಗಿ ಪ್ರವಾಹಗಳುಂಟಾಗಿ ಭಾರತದ ಮೂರು ರಾಜ್ಯಗಳು ಹಾಗೂ ಬಾಂಗ್ಲಾದೇಶ ಸಂಪೂರ್ಣವಾಗಿ ನಾಮಾವಶೇಷವಾಗುವ ಅಪಾಯವಿದೆಯೆಂದು ತಜ್ಞರು ಹೇಳುತ್ತಾರೆ.
ಚೀನಿಯರು ಈ ಪ್ರಾಯೋಜನೆಯನ್ನು ಕೈಗೊಂಡಿದ್ದೇ ಆದಲ್ಲಿ ಅವರು ಲಭ್ಯವಿರುವ ಸರಾಸರಿ ವಾರ್ಷಿಕ 70 ಬಿಲಿಯನ್ ಘನ ಮೀಟರ್ ನೀರಿನಲ್ಲಿ 40 ಬಿಲಿಯನ್ ಘನ ಮೀಟರುಗಳಷ್ಟನ್ನು ತಮಗೇ ಬಳಸಿಕೊಳ್ಳುತ್ತಾರೆ. ಇದರಿಂದಾಗಿ ಉತ್ತರ ಮತ್ತು ದಕ್ಷಿಣ ನದಿಜೋಡಣೆಗಳ ಭಾರತದ ಕನಸು ಕನಸಾಗಿಯೇ ಉಳಿಯಬೇಕಾಗುತ್ತದೆ. ಅಷ್ಟಲ್ಲದೆ ಈಶಾನ್ಯ ರಾಜ್ಯಗಳಲ್ಲಿನ 50,000 ಮೆಗಾ ವ್ಯಾಟ್ (ಭಾರತದ ಜಲವಿದ್ಯುತ್ ಸಾಮರ್ಥ್ಯದಲ್ಲಿ ಶೇ.40ರಷ್ಟು) ವಿದ್ಯುತ್ ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತದೆ. ಇದರ ಜೊತೆಗೆ ಮಳೆಗಾಲದಲ್ಲಿ ಪ್ರವಾಹಗಳು ಹಾಗೂ ಬೇಸಿಗೆಯಲ್ಲಿ ನದಿ ತೀರದ ರಾಜ್ಯಗಳಿಗೆ ನೀರಿನ ಕೊರತೆ ಹಾಗೂ ನದಿಯ ಇಕ್ಕೆಲಗಳಲ್ಲಿ ಫಲವತ್ತಾದ ವಂಡು ಸಂಗ್ರಹವಾಗದೆ ತೊಂದರೆಯಾಗುತ್ತದೆ. ಅದು ಬಾಂಗ್ಲಾದ ಭೌಗೋಳಿಕ ಆಕಾರವನ್ನೇ ಬದಲಿಸುವುದಲ್ಲದೆ ವಿನಾಶದ ಅಂಚಿನಲ್ಲಿರುವ ಭಾರತದ ಹುಲಿಗೆ ಕೊನೆಯ ಆಸರೆಯಾಗಿರುವ ವಿಶ್ವ ವಿಖ್ಯಾತ ಮೀಸಲು ಅರಣ್ಯವಾದ ಸುಂದರ್ ಬನ್ ಅರಣ್ಯವನ್ನೂ ನಾಶಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಶತಮಾನಗಳಿಂದ ಈ ನದಿಯನ್ನು ನಂಬಿಕೊಂಡಿರುವ ಭಾರತದ ಮತ್ತು ಬಾಂಗ್ಲಾದೇಶದ 500 ದಶಲಕ್ಷ ಜನರ ಜೀವನೋಪಾಯವನ್ನೇ ನಾಶಮಾಡಿಬಿಡುತ್ತದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಒಂದು ಅಂತರರಾಷ್ಟ್ರೀಯ ಜಲ ಒಪ್ಪಂದವಿದೆ. ಆದರೆ ಚೀನಾದೊಂದಿಗೆ ಯಾವುದೇ ಅಂತಹ ಒಪ್ಪಂದವಿಲ್ಲ. ಪ್ರವಾಹಗಳ ಮುನ್ಸೂಚನೆಗಾಗಿ ಚೀನಾದಲ್ಲಿನ ಬ್ರಹ್ಮಪುತ್ರ ಜಲಾನಯನ ಪ್ರದೇಶಗಳಲ್ಲಿ ಬೀಳುವ ಮಳೆಯ ಬಗೆಗಿನ ಮಾಹಿತಿ ವಿನಿಮಯಕ್ಕಾಗಿ ಮಾತ್ರ ಒಪ್ಪಂದದ ದಸ್ತಾವೇಜನ್ನು ಮಾಡಿಕೊಂಡಿದೆ.

ಅಂತರರಾಷ್ಟ್ರೀಯ ತಕರಾರುಗಳಿಗೆ ಪರಿಹಾರವೇನು?
ಹರಿವ ನೀರಿನ ಜಲಯಾನೇತರ ಬಳಕೆಯ ಅಂತರ ರಾಷ್ಟ್ರೀಯ ಕಾನೂನು ಕೆಳಗಿನ ನದಿತೀರದ ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡುತ್ತದೆ. ಅನುಚ್ಛೇದ 5 ಮತ್ತು 6 ಸಮಾನಾಂತರ ಮತ್ತು ಸರಿಯಾದ ಬಳಕೆಯ ಬಗೆಗೆ ತಿಳಿಸಿದರೆ ಅನುಚ್ಛೇದ 32 ತಾರತಮ್ಯ ಮಾಡದಿರುವುದರ ಬಗೆಗೆ ತಿಳಿಸುತ್ತದೆ. ಅನುಚ್ಛೇದ 7, 8, ಮತ್ತು 9 ಕೆಳಗಿನ ನದಿ ಮುಖಜ ದೇಶಗಳಿಗೆ ಯಾವುದೇ ಗಮನಾರ್ಹ ತೊಂದರೆಯುಂಟು ಮಾಡದಂತೆ, ಸಹಕಾರ ನೀಸುವುದರ ಮೂಲಕ ಮತ್ತು ಮಾಹಿತಿಯನ್ನು ಹಂಚಿಕೊಳ್ಳಬೇಕೆಂಬ ನಿಯಮದ ಬಗ್ಗೆ ತಿಳಿಸುತ್ತದೆ. ಹಾಗಾಗಿ ಭಾರತ ಮತ್ತು ಬಾಂಗ್ಲಾ ದೇಶದೊಂದಿಗೆ ಚೀನಾ ಸಹಕರಿಸಿ ಮಾಹಿತಿಯನ್ನು ನೀಡಬೇಕು. ಆದರೂ ಅದರ ಕಾನೂನುಗಳಡಿ ಅದರ ಗಡಿಯೊಳಗಿನ ನದಿಗಳ ನೀರನ್ನು ಅದು ಬಳಸಿಕೊಳ್ಳಬಹುದು. ಗಂಗಾ ನದಿ ಬಾಂಗ್ಲಾಕ್ಕೆ ಹರಿಯುವ ಹಾದಿಯಲ್ಲಿ ಭಾರತ 1960ರಲ್ಲಿ ಫರಕ್ಕಾ ಅಣೆಕಟ್ಟನ್ನು ಕಟ್ಟಿರುವಂತೆ ಚೀನಾ ಸಹ ಮಾಡಬಹುದು. ತನ್ನ ಸರಿಯಾದ ಪಾಲಿನ ನೀರನ್ನು ಪಡೆಯಲು ಬಾಂಗ್ಲಾ ಭಾರತದೊಂದಿಗೆ 36 ವರ್ಷಗಳ ಕಾನೂನು ಸಮರ ಹಾಗೂ ಅಂತರರಾಷ್ಟ್ರೀಯ ಒತ್ತಡ ತರಬೇಕಾಯಿತು. ನೀರು ಭವಿಷ್ಯದ ನೀಲ ಬಂಗಾರವಾಗಿದೆ ಹಾಗೂ ಆ ಸಿರಿಗಾಗಿ ಭವಿಷ್ಯದಲ್ಲಿ ಹಲವಾರ ಅಂತರರಾಷ್ಟ್ರೀಯ ಸಂಘರ್ಷಗಳು ಹಾಗೂ ದೀರ್ಘ ಕಾನೂನು ಸಮರಗಳು ನಡೆಯಬೇಕಾಗುತ್ತವೆ. ಹಾಗಾಗಿ ಚೀನಾ ತನ್ನ ಪ್ರಾಯೋಜನೆಯನ್ನು ಅನುಷ್ಠಾನಗೊಳಿಸುವ ಮೊದಲು ಭಾರತ ಮತ್ತು ಬಾಂಗ್ಲಾದೇಶದ ಆತಂಕಗಳನ್ನು ಗಮನದಲ್ಲಿರಿಸಿಕೊಳ್ಳಬೇಕಾಗಿದೆ. ಇನ್ನೂ ಉತ್ತಮವಾದುದೆಂದರೆ ಈ ಮೂರು ದೇಶಗಳು ಸೇರಿ ಸಹಕರಿಸಿ ಒಂದು ಜಂಟಿ ಪ್ರಾಯೋಜನೆಯನ್ನು ಸಿದ್ಧಗೊಳಿಸುವುದಾದಲ್ಲಿ ಅದು ಮೂರೂ ರಾಷ್ಟ್ರಗಳಿಗೆ ನೀರು ಹಾಗೂ ವಿದ್ಯುತ್ತನ್ನು ಒದಗಿಸಲು ಸಹಕಾರಿಯಾಗುತ್ತದೆ. ಜಾಗತಿಕ ತಾಪಮಾನ ಏರಿಕೆ ಹಾಗೂ ಆಹಾರ ಅಸುರಕ್ಷತೆಯ ಈ ದಿನಗಳಲ್ಲಿ ಹಿರಿಯಣ್ಣನಾಗಿರುವ ಚೀನಾ ಮನುಕುಲದ ಒಳಿತಿಗಾಗಿ ಅಂತಹ ಸಹಕಾರಕ್ಕೆ ಮುಂದಾಗಬೇಕೇ ಹೊರತು ನೆರೆಹೊರೆಯ ರಾಷ್ಟ್ರಗಳೊಂದಿಗೆ ಸಂಘರ್ಷಕ್ಕಿಳಿಯಬಾರದು. ಅದೇ ರೀತಿ ಭಾರತ ಸಹ ತನ್ನ ನದಿಜೋಡಣೆಯ ಪ್ರಾಯೋಜನೆಗಳಲ್ಲಿ ನೇಪಾಳ, ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳನ್ನು ತನ್ನ ಗಮನದಲ್ಲಿರಿಸಿಕೊಳ್ಳಬೇಕು.

ಇದರಿಂದ ನಮಗೆ ದೊರೆಯುವ ಸಂದೇಶವೇನು?
ಇಲ್ಲಿ ಭಾರತ ಮತ್ತು ಚೀನಾದ ದೃಷ್ಟಿಕೋನದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಚೀನಾ ನದಿಜೋಡಣೆ ಹಾಗೂ ವಿದ್ಯುತ್ ಉತ್ಪಾದನೆಗಾಗಿ ಅಣುಸ್ಫೋಟಕಗಳನ್ನು ಬಳಸಲೂ ಹಿಂಜರಿಯುವುದಿಲ್ಲ. ಆದರೆ ಭಾರತದಲ್ಲಿ ಬ್ರಿಟಿಷರ ಆಡಳಿತದಲ್ಲಿ ರೂಪುಗೊಂಡ ನದಿಜೋಡಣೆಯ ಪರಿಕಲ್ಪನೆಯ ಕಡತಗಳು ಭಾರತದ ನೀರಾವರಿಯ ಇಲಾಖೆಯಲ್ಲಿ ಧೂಳು ಹಿಡಿಯುತ್ತಿವೆ. ನಮ್ಮ ರಾಜಕರಣಿಗಳಿಗೆ ಚೀನೀ ನಾಯಕರಂತಹ ದೃಢ ಸಂಕಲ್ಪವಿರಬೇಕು. ಕಳೆದ ವರ್ಷ ಚೀನಾಕ್ಕೆ ಭೇಟಿ ನೀಡಿದ ನಮ್ಮ ಶಾಸಕರು ಚೀನಿಯರ ಸಾಧನೆಗಳನ್ನು ನಕಲು ಮಾಡಲು ಪ್ರಯತ್ನಿಸುತ್ತಾರೆಂದು ನಾನು ನಂಬಿದ್ದೇನೆ. ಉತ್ತದಲ್ಲಿರುವ ಬೀಜಿಂಗ್ ಮತ್ತು ಶಾಂಘಾಯ್‌ಗೆ ನೀರೊದಗಿಸಲು ಅವರು ನಾಲ್ಕು ಲಕ್ಷ ಕೋಟಿ ಹಣ ಖರ್ಚು ಮಾಡಲು ಅವರು ಸಿದ್ಧರಿರುವಾಗ ನಾವು ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳಿಗೆ ಕೇವಲ 15000 ಕೋಟಿ ಖರ್ಚುಮಾಡಿ ನೀರೊದಗಿಸಲು ನಮಗೆ ಸಾಧ್ಯವಿಲ್ಲವೆ? ನೇತ್ರಾವತಿಯ ನೀರನ್ನು ಗುರುತ್ವಾಕರ್ಷಣೆಯ ಮೂಲಕವೇ ತರುವ ಪರಮಶಿವಯ್ಯನವರ ಪ್ರಾಯೋಜನೆಯನ್ನು ಪರೀಕ್ಷಿಸಿ ಸಾಧ್ಯವಿದ್ದಲ್ಲಿ ಅದನ್ನು ಅಳವಡಿಸಬೇಕು. ಬೆಂಗಳೂರಿಗೆ ನೇತ್ರಾವತಿಯ ನೀರನ್ನು ತರುವಲ್ಲಿ ಯಾವುದೇ ಅಂತರರಾಜ್ಯ ತಕರಾರುಗಳಿಲ್ಲ. ಪ್ರತಿವರ್ಷ ನೇತ್ರಾವತಿ ಮತ್ತು ಕುಮಾರಧಾರ ನದಿಗಳಿಂದ 2200 ಟಿ.ಎಂ.ಸಿ.ಗೂ ಹೆಚ್ಚು ನೀರು ಅರಬ್ಬಿ ಸಮುದ್ರ ಸೇರುತ್ತಿದೆ. ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರು ನೇತ್ರಾವತಿಯನ್ನು ಇತ್ತ ಕಡೆಗೆ ಹರಿಸಲು ಮೊದಲಿನಿಂದಲೂ ವಿರೋಧಿಸುತ್ತಿದ್ದಾರೆ. ಧರ್ಮಸ್ಥಳಕ್ಕೆ ಭೇಟಿನೀಡುವ ಭಕ್ತಾದಿಗಳು ಬಹುಪಾಲು ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳವರೇ ಆಗಿದ್ದಾರೆ. ಅವರ ಟ್ರಸ್ಟ್‌ನ ಬಹುಪಾಲು ಅದಾಯ ಇಡೀ ರಾಜ್ಯದ ಭಕ್ತಾದಿಗಳಿಂದ ಬರುತ್ತಿದೆ. ಹಾಗಿರುವಾಗ ಅವರು ರಾಜ್ಯದ ಇತರ ಜಿಲ್ಲೆಗಳ ಸಮಸ್ಯೆಯನ್ನೂ ಅವರು ಗಮನದಲ್ಲಿರಿಸಿಕೊಳ್ಳಬೇಕು.
ನಮ್ಮ ಮಣ್ಣಿನ ಮಗ ಮತ್ತು ಮಾಜಿ ಪ್ರಧಾನಿ ಶ್ರೀ ದೇವೇಗೌಡರು ಹಾಸನ ಮತ್ತು ಹೇಮಾವತಿಯ ಪರಿಧಿಯ ಆಚೆಗೂ ಆಲೋಚಿಸಬೇಕಾಗಿದೆ. ಅವರು ಅಮರಣಾಂತ ಉಪವಾಸ ಮಾಡಿ ಹಲವು ದಶಕಗಳೇ ಆಗಿದೆ. ಅದಕ್ಕೆ ಅವರ ಆರೋಗ್ಯ ಅನುಮತಿಸದಿದ್ದಲ್ಲಿ ಮಣ್ಣಿನ ಮೊಮ್ಮಗನಾಗಿರುವ ಶ್ರೀ ಕುಮಾರಸ್ವಾಮಿಯವರು ಮುಂದೆ ಬರಬೇಕಾಗಿದೆ. ಅವರಿಗಂತೂ ಅವಕಾಶಗಳೇ ಇದ್ದವು ಆದರೆ ಅವರ ದೃಷ್ಠಿಗೆ ದುರಾಸೆ ಅಡ್ಡವಾಗಿತ್ತು. ಸಿದ್ಧರಾಮಯ್ಯನವರು ವರಣಾ ನಾಲೆಯ ಹೊರಗೆ ಆಲೋಚಿಸುವವರಲ್ಲ. ಯೆಡ್ಯೂರಪ್ಪನವರಂತೂ ಅವರ ಬೆಂಬಲಿಗ ಶಾಸಕರ ಲೆಕ್ಕಾಚಾರದ ಗಣಿತದಲ್ಲೇ ಮುಳುಗಿದ್ದಾರೆ. ಯಾವ ಪಕ್ಷವೂ ತಮ್ಮ ಪ್ರಣಾಲಿಕೆಯಲ್ಲಿ ಪರಮಶಿವಯ್ಯನವರ ವರದಿಯನ್ನು ಸೇರಿಸಲು ತಯಾರಿಲ್ಲ. ಮೊಯ್ಲಿಯವರು ತಾವು ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಬರಪೀಡಿತ ಜಿಲ್ಲೆಗಳಿಗೆ ನೀರು ಒದಗಿಸುವುದಾಗಿ ಹೇಳಿದ್ದರು. ಕಾವೇರಿ ವಿವಾದ ಬರೆಹರಿಸುವಲ್ಲಿ ವಿಫಲರಾದ ಎಸ್.ಎಂ.ಕೃಷ್ಣಾರವರು ಚೀನಾ ಮತ್ತು ಪಾಕಿಸ್ತಾನಗಳ ತಕರಾರುಗಳೊಂದಿಗೆ ಹೆಣಗಾಡುತ್ತಿದ್ದಾರೆ. ತೆಲಂಗಾಣ ಚಳುವಳಿಯಂತೆಯೇ 71 ಬರಪೀಡಿತ ತಾಲ್ಲೂಕುಗಳ ಜನ ಭುಗಿಲೇಳದಿದ್ದಲ್ಲಿ ಅವರಿಗೆ ನ್ಯಾಯ ಸಿಗುವುದು ಮರಿಚೀಕೆಯೇ ಸರಿ.
-ಡಾ. ಮಧು ಸೀತಪ್ಪ
ಸಂಯುಕ್ತ ಕರ್ನಾಟಕ, 19-12-09

ಆಫ್ರಿಕಾದಲ್ಲಿ ಕೃಷಿ: ಹೊಸ ವಸಾಹತಶಾಹಿ ಹುಟ್ಟು


ಹದಿನಾರನೇ ಶತಮಾನದ ಕೊನೆಯ ದಿನವಾದ 31ನೇ ಡಿಸೆಂಬರ್ 1599ರಂದು ರಾಣಿ ಮೊದಲನೇ ಎಲಿಜಬೆತ್ ಈಸ್ಟ್ ಇಂಡಿಯಾ ಕಂಪೆನಿಯ ವರ್ತಕರಿಗೆ ರಾಯಲ್ ಚಾರ್ಟರ್ ಒದಗಿಸುವ ಮೂಲಕ ವಸಾಹತುಶಾಹಿಗೆ ನಾಂದಿ ಹಾಡಿದಳು. ಈಗ 21ನೇ ಶತಮಾನದಲ್ಲಿ ಚೀನಾ, ಕೊರಿಯಾ, ಸೌದಿ ಅರೇಬಿಯಾ ಮತ್ತು ಭಾರತ ದೇಶಗಳು ಆಫ್ರಿಕಾದಲ್ಲಿನ ಕೃಷಿ ಭೂಮಿಯನ್ನು ಸಾರಾಸಗಟು ಖರೀದಿಸುವುದರ ಮೂಲಕ ಅದೇ ವಸಾಹತುಶಾಹಿಯನ್ನು ಪುನಃ ಪ್ರಾರಂಭಿಸುತ್ತಿವೆ. ಕಳೆದ ಮೂರು ವರ್ಷಗಳಲ್ಲಿ ಈ ದೇಶಗಳು ಒಟ್ಟಾಗಿ 150,000 ಕೋಟಿ ರೂಗಳ ಅಥವಾ 30 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ 20 ದಶಲಕ್ಷ ಹೆಕ್ಟೇರ್ ಕೃಷಿ ಭೂಮಿಯನ್ನು ಎಥಿಯೋಪಿಯಾ, ಮೊಜಾಂಬಿಕ್, ಮಡಗಾಸ್ಕರ್ ಮತ್ತು ಅಂಗೋಲಾದಂಥ ದೇಶಗಳಿಂದ ಖರೀದಿಸಿವೆ. ಮೂಲಭೂತ ಸೌಕರ್ಯ, ತಂತ್ರಜ್ಞಾನ ಮತ್ತು ಹಣಸಹಾಯವಿಲ್ಲದಿರುವುದರಿಂದ ಬಹುಪಾಲು ಆಫ್ರಿಕಾದ ದೇಶಗಳೆಲ್ಲಾ ಬಡದೇಶಗಳಾಗಿವೆ. ಅಲ್ಲಿನ ಜನ ಇನ್ನೂ ಪುರಾತನ ಕೃಷಿ ವಿಧಾನಗಳನ್ನೇ ಅನುಸರಿಸುತ್ತಿದ್ದಾರೆ. ಈ ವಿಧಾನಗಳು ಅಷ್ಟು ಉತ್ಪಾದಕವಲ್ಲ. ತಮ್ಮ ಕೃಷಿಯನ್ನೂ ಹಾಗೂ ತನ್ಮೂಲಕ ತಮ್ಮ ಬದುಕನ್ನು ಉತ್ತಮಗೊಳಿಸಿಕೊಳ್ಳಲು ಮೂಲಭೂತ ಸೌಕರ್ಯದ ಅಭಿವೃದ್ಧಿಗಾಗಲೀ ಕೃಷಿಗಾಗಿ ನೀರಿನ ಲಭ್ಯತೆಯನ್ನು ಹೆಚ್ಚಿಸಿಕೊಳ್ಳಲಾಗಲೀ ಅವರಲ್ಲಿ ಬಂಡವಾಳವಿಲ್ಲ. ಅದರ ಜೊತೆಗೆ ಅಲ್ಲಿನ ಭ್ರಷ್ಟ ಸರ್ಕಾರಗಳು, ಮಿಲಿಟರಿ ಸರ್ವಾಧಿಕಾರಿಗಳೂ ಹಾಗೂ ಆಂತರಿಕ ಜನಾಂಗೀಯ ಯುದ್ಧಗಳು ಅವರ ದಿನನಿತ್ಯದ ಬದುಕನ್ನೇ ದುಸ್ತರಗೊಳಿಸಿವೆ. ಈ ಮೊದಲೆಲ್ಲಾ ಪಾಶ್ಚಿಮಾತ್ಯ ದೇಶಗಳು ಹೇಗೆ ಆಫ್ರಿಕಾದ ಸಮೃದ್ಧ ಖನಿಜಗಳನ್ನು ಹಾಗೂ ತೈಲವನ್ನು ಕೊಳ್ಳೆ ಹೊಡೆದಿರುವುದನ್ನು ನಾವೆಲ್ಲಾ ಕಂಡಿದ್ದೇವೆ. ಈಗ ಅಲ್ಲಿನ ಕೃಷಿ ಭೂಮಿಯನ್ನು ಹಾಗೂ ಮಾನವ ಶ್ರಮವನ್ನು ಕೊಳ್ಳೆಹೊಡೆಯಲು ಏಷಿಯಾ ದೇಶಗಳು ಮುಂದಾಗುತ್ತಿರುವುದನ್ನು ಕಾಣುತ್ತಿದ್ದೇವೆ.
ವಿಶ್ವದಲ್ಲಿ ಸೂಪರ್ ಪವರ್‌ಗಳಾಗಿ ಹೊರಹೊಮ್ಮುತ್ತಿರುವ ಚೀನಾ ಮತ್ತು ಭಾರತ ದೇಶಗಳು ನಿರಂತರವಾಗಿ ಹೆಚ್ಚುತ್ತಿರುವ ಆಹಾರ ಬೇಡಿಕೆಯ ಆತಂಕದಲ್ಲಿವೆ. ಅದರ ಜೊತೆಗೆ ಕುಡಿಯುವ ಹಾಗೂ ಕೃಷಿಯೋಗ್ಯ ನೀರಿನ ಕೊರತೆಯೂ ಕಾಡುತ್ತಿದೆ. ವಿಶ್ವಬ್ಯಾಂಕ್‌ನ ಮೂಲಗಳಂತೆ ಚೀನಾ ಶೇ.20.5ರಷ್ಟು ಹಾಗೂ ಭಾರತ ಶೇ.32.5ರಷ್ಟು ಲಭ್ಯ ನೀರನ್ನು ಬಳಕೆಗೆ ಸೆಳೆಯುತ್ತಿವೆ. ಚೀನಾಕ್ಕೆ ಹೋಲಿಸಿದಲ್ಲಿ ಭಾರತ ಹೆಚ್ಚು ಕೃಷಿಯೋಗ್ಯ ಭೂಮಿ ಮತ್ತು ನೀರನ್ನು ಹೊಂದಿದೆ. ಆದರೆ ಎರಡೂ ದೇಶಗಳ ನೀರಿನ ನಿರ್ವಹಣೆ ಹೇಳಿಕೊಳ್ಳಲಾರದ ಹಾಗಿದೆ. ಭಾರತ ಲಭ್ಯ ನೀರಿನಲ್ಲಿ ಶೇ.92ರಷ್ಟನ್ನು ಕೃಷಿಗೆ ಹಾಗೂ ಶೇ.3ರಷ್ಟನ್ನು ಮಾತ್ರ ಕೈಗಾರಿಕೆಗಳಿಗೆ ಬಳಸುತ್ತಿದೆ. ಆದರೆ ಚೀನಾ ಲಭ್ಯ ನೀರಿನಲ್ಲಿ ಶೇ.77ರಷ್ಟನ್ನು ಕೃಷಿಗೆ ಹಾಗೂ ಶೇ.18ರಷ್ಟನ್ನು ಕೈಗಾರಿಕೆಗಳಿಗೆ ಬಳಸುತ್ತಿದೆ. ಅಂತರ್ಜಲ ಮಟ್ಟ ಕಡಿಮೆಯಾಗುತ್ತಿರುವ ಹಾಗೂ ನದಿಗಳು ಬತ್ತಿ ಹೋಗುತ್ತಿರುವ ಉತ್ತರ ಚೀನಾಕ್ಕೆ ದಕ್ಷಿಣದ ಯಾಂಗ್ಸಿ ನದಿಯಿಂದ ಉತ್ತರಕ್ಕೆ, ಬೆಟ್ಟ ಗುಡ್ಡಗಳ ಪ್ರದೇಶಗಳಿಗೆ ನಾಲ್ಕು ಲಕ್ಷ ಕೋಟಿ ರೂಗಳಷ್ಟು ಹಣ ಖರ್ಚುಮಾಡಿ ನೀರನ್ನು ಸರಬರಾಜು ಮಾಡುತ್ತಿದೆ. ಹಾಗಾಗಿ ನೀರು ಅತ್ಯಂತ ದುಬಾರಿಯಾಗುತ್ತಿದ್ದು ಅಭಿವೃದ್ಧಿಯ ಗತಿಯನ್ನು ಕಾಯ್ದುಕೊಳ್ಳಲು ನೀರನ್ನು ಕೈಗಾರಿಕೆಗಳಿಗೆ ಸರಬರಾಜುಮಾಡುವತ್ತು ಗಮನ ಹರಿಸುತ್ತಿದೆ. ಆದರೆ ಭಾರತದಲ್ಲಿ ಸಾವಿರಾರು ಚದರ ಕಿಲೋಮೀಟರುಗಳಷ್ಟು ಶುದ್ಧ ನೀರು ಪ್ರತಿ ವರ್ಷ ಸಾಗರವನ್ನು ಸೇರುತ್ತಿದೆ. ಆ ನೀರನ್ನು ಭವಿಷ್ಯಕ್ಕಾಗಿ ನಿರ್ವಹಿಸುವ ಯಾವುದೇ ಆಲೋಚನೆ ಸರ್ಕಾರಕ್ಕಿದ್ದಂತಿಲ್ಲ. ಹಲವಾರು ದಶಕಗಳಿಂದ ನದಿ ಜೋಡಣೆಯ ಮಾತು ಕೇಳಿಬರುತ್ತಿದ್ದರೂ ನೀರನ್ನು ಭವಿಷ್ಯಕ್ಕಾಗಿ ಸಂರಕ್ಷಿಸುವ ಯಾವುದೇ ನಿರ್ದಿಷ್ಟ ಯೋಜನೆಗಳನ್ನು ಸರ್ಕಾರ ಕೈಗೊಂಡಿಲ್ಲ. ಪ್ರಸ್ತುತ ಕೃಷಿ ಕ್ಷೇತ್ರವು ಅವಶ್ಯಕವಿರುವ 220 ಮಿಲಿಯನ್ ಟನ್‌ಗಳಷ್ಟು ಧಾನ್ಯವನ್ನು ಉತ್ಪಾದಿಸುತ್ತಿದ್ದರೂ ಇನ್ನು ಹತ್ತು ವರ್ಷಗಳಲ್ಲಿ ಆ ಬೇಡಿಕೆ 300 ಮಿಲಿಯನ್ ಟನ್‌ಗಳಷ್ಟಾಗಲಿದೆ. ಆದುದರಿಂದ ಆ ಬೇಡಿಕೆಯ ಪೂರೈಕೆಗಾಗಿ ಹೆಚ್ಚು ಹೆಚ್ಚು ನೀರಿನ ಅವಶ್ಯಕತೆಯಿದೆ ಹಾಗೂ ಆ ಅವಶ್ಯಕತೆಗಾಗಿ ಹೆಚ್ಚು ಹೆಚ್ಚು ಮೂಲಭೂತ ಸೌಲಭ್ಯಗಳ ಪ್ರಾಯೋಜನೆಗಳು ಅವಶ್ಯಕವಿವೆ. ಆ ಪ್ರಾಯೋಜನೆಗಳ ಅಳವಡಿಕೆಗೆ ಬಹಳಷ್ಟು ಸಮಯ ಬೇಕಾಗುತ್ತದೆ. ಹಾಗಾಗಿ ಆಹಾರ ಸುರಕ್ಷತೆಗೆ ಅಪಾಯ ಬರಬಹುದೆನ್ನುವ ಅಂಜಿಕೆಯಿಂದ ಈ ರಾಷ್ಟ್ರಗಳು ಆಫ್ರಿಕಾದಲ್ಲಿನ ಕಡಿಮೆ ಬೆಲೆಯ ಭೂಮಿ ಮತ್ತು ಮಾನವ ಶ್ರಮದಿಂದಾಗಿ ಅಲ್ಲಿ ಬಂಡವಾಳ ಹೂಡಿಕೆ ಶುರುಮಾಡುತ್ತಿವೆ. ನದಿಜೋಡಣೆ ಅಥವಾ ನೀರಿನ ಸೌಲಭ್ಯಗಳನ್ನು ನಿರ್ಮಿಸುವುದು ದುಬಾರಿಯಾದುದೇನೋ ನಿಜ ಆದರೆ ತಮ್ಮಲ್ಲೇ ಸಾಕಷ್ಟು ನೀರನ್ನು ಹೊಂದಿದ್ದರೂ ಆಫ್ರಿಕಾದಂತಹ ಬಡರಾಷ್ಟ್ರಗಳ ನೀರನ್ನು ಮತ್ತು ಸಂಪನ್ಮೂಲಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ. ಸೌದಿ ಅರೇಬಿಯಾ ತನ್ನ ಆಹಾರ ಸುರಕ್ಷಿತತೆಯ ಬಗ್ಗೆ ಚಿಂತಿಸುವುದೇನೋ ಸರಿ ಆದರೆ ಚೀನಾ ಮತ್ತು ಭಾರತ ತಮ್ಮಲ್ಲಿನ ಸಂಪನ್ಮೂಳಗಳನ್ನೇ ಬಳಸದೆ ಇತರ ರಾಷ್ಟ್ರಗಳನ್ನು ತನ್ನ ವಸಾಹತುಗಳನ್ನಾಗಿ ಮಾಡಲು ಹೊರಟಿದೆ.
ಹಲವಾರು ದಶಕಗಳಿಂದ ಆಫ್ರಿಕಾ ಭ್ರಷ್ಟ ಸರಕಾರ ಮತ್ತು ರಾಜಕಾರಣಿಗಳ, ಮಿಲಿಟರಿ ಸರ್ವಾಧಿಕಾರಿಗಳ ಕೊಂಪೆಯಾಗಿವೆ. ಅವೆಲ್ಲಾ ಹಣದಾಸೆಯಿಂದ ತಮ್ಮ ತೈಲ ಮತ್ತು ಖನಿಜಗಳನ್ನು ಮಾರಿಕೊಂಡಿವೆ. ಈಗ ಕೃಷಿ ಭೂಮಿಯ ಲೇವಾದೇವಿಗಾಗಿ ಪ್ರತ್ಯೇಕ ಏಜೆನ್ಸಿಗಳನ್ನು ಸಿದ್ಧಗೊಳಿಸಿವೆ. ಈ ಭೂಮಿಯನ್ನು ಉಚಿತವಾಗಿ, ಗುತ್ತಿಗೆ ಆಧಾರದ ಮೇಲೆ ಅಥವಾ ಪ್ರಾಯೋಜನೆಗಳ ಆಧಾರಗಳ ಮೇಲೆ ನೀಡಬಹುದು. ಇಂತಹ ಭ್ರಷ್ಟ ಸರ್ಕಾರಗಳಿಂದಲೇ ಒಮ್ಮೆ ಸಿರಿವಂತ ರಾಷ್ಟ್ರವಾಗಿದ್ದ ಜಿಂಬಾಬ್ವೆ ಬಡದೇಶವಾಗಿದೆ. ಈಗಿನ ಸರ್ಕಾಗಳು ಒಪ್ಪಂದಕ್ಕೆ ಸಹಿಹಾಕುವುದನ್ನು ಮುಂದಿನ ಸರ್ಕಾರಗಳು ಅವನ್ನು ಪಾಲಿಸುತ್ತವೆಂಬ ಖಾತ್ರಿ ಏನಿದೆ? ಅಂತಹ ಸಮಯಗಳಲ್ಲಿ ಚೀನಾ ಮತ್ತು ಭಾರತದಂತಹ ದೇಶಗಳು ಹಿಂದೊಮ್ಮೆ ಬ್ರಿಟಿಷರು ತಮ್ಮ ಈಸ್ಟ್ ಇಂಡಿಯಾ ಕಂಪೆನಿಯ ಹಿತಾಸಕ್ತಿಗಳನ್ನು ಕಾಪಾಡಲು ಹೊರಟು ಭಾರತವನ್ನು 200 ವರ್ಷಗಳ ಕಾಲ ಆಳಿದಂತೆ ತಮ್ಮ ಶಕ್ತಿಯನ್ನು ಆಪ್ರಿಕಾದಲ್ಲಿನ ಬಡದೇಶಗಳ ಮೇಲೆ ಪ್ರಯೋಗಿಸಬೇಕಾಗುತ್ತದೆ. ಇದಕ್ಕಿಂತ ಹೆಚ್ಚಾಗಿ ಈ ದೇಶಗಳ ಪರವಾಗಿ ಕೃಷಿಯಲ್ಲಿ ತೊಡಗುವ ಕಾರ್ಪೊರೇಟ್‌ಗಳಿಗೆ ಅಲ್ಲಿನ ಮಣ್ಣಿನ ಫಲವತ್ತತೆ ಅಥವಾ ಪರಿಸರವನ್ನು ಸಂರಕ್ಷಿಸಬೇಕೆಂಬ ಕಾಳಜಿಯೇನೂ ಇರುವುದಿಲ್ಲ. ಅವು ಹೆಚ್ಚು ಹಣ ಗಳಿಸುವ ಉದ್ದೇಶದಿಂದ ವಾಣಿಜ್ಯ ಬೆಳೆಗಳನ್ನು, ಏಕ ಬೆಳೆ ಪದ್ಧತಿಯನ್ನು ಹಾಗೂ ಅನೂಚಾನವಾಗಿ ಕೀಟ ಹಾಗೂ ಪೀಡೆ ನಾಶಕಗಳನ್ನು ಬಳಸಿ ಅಲ್ಲಿನ ಪರಿಸರದ ಸಮತೋಲನವನ್ನು ಹಾಳುಗೆಡವುತ್ತಾರೆ. ಅವುಗಳಿಗೆ ಯಾವುದೇ ನಿಯಂತ್ರಣ, ನಿಬಂಧನೆಗಳಿರುವುದಿಲ್ಲ.
ಎಥಿಯೋಪಿಯಾದಲ್ಲಿ ಬೆಳೆಯಲಾಗದ ಬೆಳೆಯಿಲ್ಲ ಹಾಗೂ ಸಾಕಷ್ಟು ಶುದ್ಧ ನೀರು ಲಭ್ಯವಿದೆ. ಆದರೆ ಅವರ ಬಡತನಕ್ಕೆ ಕಾರಣ ಆ ದೇಶ ಲಭ್ಯ ನೀರಿನಲ್ಲಿ ಕೇವಲ ಶೇ.2.5ರಷ್ಟು ನೀರನ್ನು ಮಾತ್ರ ಬಳಸುತ್ತಿದೆ ಹಾಗೂ ಅಲ್ಲಿನ ಶೆ.80ರಷ್ಟು ರೈತರು ಉಳುಮೆಗಾಗಿ ಇನ್ನೂ ಎತ್ತುಗಳನ್ನು ಬಳಸುತ್ತಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಭಾಗವಾಗಿರುವ ಈಗಿನ ಯು.ಪಿ.ಎ. ಸರ್ಕಾರ ಹಲವಾರು ಕಂಪೆನಿಗಳಿಗೆ ಕಡಿಮೆ ಬಡ್ಡಿಯ ಸಾಲಗಳನ್ನು ಕೊಟ್ಟು ಆಫ್ರಿಕಾದಲ್ಲಿ ಕೃಷಿ ಭೂಮಿಯನ್ನು ಕೊಳ್ಳಲು ಪ್ರೋತ್ಸಾಹಿಸುತ್ತಿದೆ. ರಾಷ್ಟ್ರವಾಗಿ ನಾವು ವಸಾಹತು ಶಾಹಿಯ ದಬ್ಬಾಳಿಕೆ ಹಾಗೂ ಕ್ರೌರ್ಯವನ್ನು ಕಂಡಿದ್ದೇವೆ. ಈಗ ನಾವು ಆಫ್ರಿಕಾದಲ್ಲಿ, ನಮಗೆ ಮಹಾತ್ಮನನ್ನು ನೀಡಿದ ನಾಡಿನಲ್ಲಿ ಅದನ್ನೇ ಮಾಡಲು ಹೊರಟಿರುವುದು ಎಂತಹ ವಿಪರ್ಯಾಸವಲ್ಲವೆ? ‘ನೀವು ನಮಗೆ ಗಾಂಧಿಯನ್ನು ನೀಡಿದಿರಿ, ಆದರೆ ನಾವು ನಿಮಗೆ ಮಹಾತ್ಮನನ್ನು ನೀಡಿದೆವು’ ಎಂದು ನೆಲ್ಸನ್ ಮಾಂಡೆಲಾ ಭಾರತಕ್ಕೆ ನೀಡಿದ ಮೊದಲ ಭೇಟಿಯಲ್ಲಿ ಹೇಳಿದ್ದರು. ಗಾಂಧಿ ವಿರೋಧಿಸಿದ ತತ್ವಗಳನ್ನೇ ಈಗಿನ ಸರ್ಕಾರ ಬೆಂಬಲಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ವಿದೇಶಿಯರನ್ನು (ಅವರು ಭಾರತೀಯ ಮೂಲದವರಾಗಿದ್ದರೂ ಸಹ) ಭಾರತದಲ್ಲಿ ಕೃಷಿ ಭೂಮಿಯನ್ನು ಕೊಳ್ಳಲು ಭಾರತ ಸರ್ಕಾರ ಅವಕಾಶ ಕೊಡುವುದಿಲ್ಲ. ಹಾಗಿರುವಾಗ ಎಥಿಯೋಪಿಯಾದಲ್ಲಿ ಕೃಷಿ ಭೂಮಿಯನ್ನು ಕೊಳ್ಳಲು ಭಾರತೀಯ ವ್ಯಾಪಾರಿಗಳಿಗೆ ಕಡಿಮೆ ದರದ ಬಡ್ಡಿಯಲ್ಲಿ ಧನಸಹಾಯ ನೀಡಲು ಈ ಸರ್ಕಾರಕ್ಕೆ ಯಾವ ನೈತಿಕ ಹಕ್ಕಿದೆ. ಆಫ್ರಿಕಾಗೆ ಭಾರತ ಮತ್ತು ಚೀನಾದಂತಹ ದೇಶಗಳಿಂದ ಸಹಾಯ ಬೇಕಿದೆಯೇ ಹೊರತು ತಮ್ಮನ್ನು ಕೊಳ್ಳೆಹೊಡೆಯಿರೆಂದು ಅವು ಕೇಳುತ್ತಿಲ್ಲ. ಈ ವ್ಯಾಪಾರೀ ಕಂಪೆನಿಗಳ ಉದ್ದೇಶ ಬಡವರಿಗೆ ಸಹಾಯಮಾಡುವುದಾದಲ್ಲಿ ಖಂಡಿತವಾಗಿ ಅವು ಆಫ್ರಿಕಾದ ದೇಶದ ಆರ್ಥಿಕತೆಯ ಸುಧಾರಣೆಗೆ ಸಹಾಯಮಾಡುತ್ತವೆ. ಆದರೆ ಹಣ ಮಾಡುವುದಷ್ಟೇ ಅವುಗಳ ಉದ್ದೇಶವಾದಲ್ಲಿ ಈಗಾಗಲೇ ಹದಗೆಟ್ಟಿರುವ ಆ ದೇಶಗಳ ಸ್ಥಿತಿ ಅಧೋಗತಿಗಿಳಿಯುತ್ತದೆ. ಆದರೂ, ವಿಶ್ವ ಸಂಸ್ಥೆಯಂತಹ ಅಂತರ ರಾಷ್ಟ್ರೀಯ ಏಜೆನ್ಸಿಗಳು ಆಪ್ರಿಕಾದ ದೇಶಗಳ ಹಿತಾಸಕ್ತಿಯ ದೃಷ್ಟಿಯಿಂದ ಇಂತಹ ಬಂಡವಾಳ ಹೂಡಿಕೆಯನ್ನು ಪರಿವೀಕ್ಷಿಸುವುದು ಒಳ್ಳೆಯದು.
-ಡಾ.ಮಧು ಸೀತಪ್ಪ
ಸಂಯುಕ್ತ ಕರ್ನಾಟಕ , 8-12-2009