Friday, June 4, 2010

ಬರಲಿದೆ ಕಾರ್ಬನ್ ಕ್ರೆಡಿಟ್ ಕಾರ್ಡ್ ಅಥವಾ ಇಂಗಾಲವನ್ನು ಇಳಿಸಿ-ಪರಿಸರವನ್ನು ಉಳಿಸಿ



ಜೂನ್ 5- ಇಂದು ವಿಶ್ವ ಪರಿಸರ ದಿನ. ಅದಕ್ಕಾಗಿ ಈ ವಿಶೇಷ ಲೇಖನ. ಈ ಲೇಖನವನ್ನು ಈ ದಿನದ (05/06/2010) 'ವಿಜಯ ಕರ್ನಾಟಕ'ದಲ್ಲೂ ಓದಬಹುದು.

ಪರಿಸರ ವಿಜ್ಞಾನಿಗಳ ಪ್ರಕಾರ ಇಂಗಾಲದ ಡೈ ಆಕ್ಸೈಡ್ ಹಾಗೂ ಹಸಿರು ಮನೆ ಅನಿಲಗಳು ತಡೆಯಿಲ್ಲದೆ ಹೆಚ್ಚುವರಿಯಾದರೆ ಧೀರ್ಘಾವದಿ ಸರಾಸರಿ ಜಾಗತಿಕ ತಾಪಮಾನ ೧೪ ಡಿಗ್ರಿ ಸೆಲ್ಶಿಯಸ್‌ನಿಂದ ೨೦೯೯ರ ವೇಳೆಗೆ ೨೦.೧ ಡಿಗ್ರಿ ಸೆಲ್ಶಿಯಸ್‌ಗೆ ಹೆಚ್ಚಲಿದೆ. ೧೭೯೦ ಹಾಗು ೨೦೧೦ರ ಅವಧಿಯಲ್ಲಿ ಪರಿಸರದಲ್ಲಿ ಇಂಗಾಲ ಶೇ. ೩೩%ರಷ್ಟು ಹಾಗೂ ಮಿಥೇನ್ ಅನಿಲ ಶೇ. ೧೪೯ರಷ್ಟು ಹೆಚ್ಚಿದೆ. ಹಸಿರು ಮನೆ ಅನಿಲಗಳಲ್ಲಿ ಇಂಗಾಲವಲ್ಲದೆ ಮೀಥೇನ್, ನೈಟ್ರಸ್ ಆಕ್ಸೈಡ್ ಹಾಗೂ ಹೈಡ್ರೋಫ್ಲೂರೊ ಕಾರ್ಬನ್ ಅನಿಲಗಳಿವೆ. ಅನಿಯಂತ್ರಿತ ಕೈಗಾರಿಕೆ, ಕಲ್ಲಿದ್ದಲು ಹಾಗೂ ಪ್ರಾಕೃತಿಕ ಅನಿಲಗಳಿಂದ ವಿದ್ಯುತ್ ಉತ್ಪಾದನೆ, ಹಳೆ ತಂತ್ರಜ್ಞಾನದಿಂದ ನಡೆಯುವ ಕೈಗಾರಿಕೆಗಳಿಂದ ಹಾಗೂ ಸಾರಿಗೆ ವಾಹನಗಳಿಂದ (ವಿಮಾನ ಹಾಗೂ ಹಡಗುಗಳು), ರಾಸಾಯನಿಕ ಗೊಬ್ಬರಗಳ ಬಳಕೆಯಿಂದ, ಅವೈಜ್ಞಾನಿಕ ವ್ಯವಸಾಯದಿಂದ, ಕೊಳಚೆ ನಿರ್ಮೂಲನದಲ್ಲಿರುವ ಅವ್ಯವಸ್ಥೆಯಿಂದ ಹಸಿರು ಮನೆ ಅನಿಲಗಳ ಅಂಶ ಹೆಚ್ಚುತ್ತಿದೆ. ಪರಿಸರದಲ್ಲಿರುವ ಶೇ. ೮೦ರಷ್ಟು ಇಂಗಾಲ ಪಳೆಯುಳಿಕೆ ಇಂಧನಗಳ ಬಳಕೆಯಿಂದ ಬಂದರೆ ಇನ್ನು ಶೇ. ೨೦ರಷ್ಟು ಅರಣ್ಯ ನಾಶದಿಂದ ಸೇರುತ್ತಿದೆ. ಪರಿಸರದಲ್ಲಿ ಶೇಖರವಾಗುವ ಈ ಅನಿಲಗಳು ಇನ್‌ಫ್ರಾರೆಡ್ ಕಿರಣಗಳನ್ನು ಭೂಮಿಯಲ್ಲಿ ಹಿಡಿದಿಡುವುದರಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಇದು ಹೆಚ್ಚಾಗುವುದರಿಂದ ಸಮುದ್ರದ ಮಟ್ಟ ಏರುವುದಲ್ಲದೆ, ಹಿಮಗಲ್ಲುಗಳು ಕರಗುವುದರಿಂದ ಬರಗಾಲ ಹಾಗು ಪ್ರವಾಹಗಳು ಸಂಭವಿಸಲಿವೆ. ಮಾರ್ಚ ೨೦೧೦ರ ಜಾಗತಿಕ ತಾಪಮಾನ ೧೪.೫೪ ಡಿಗ್ರಿ ಸೆಲ್ಶಿಯಸ್, ಅಂದರೆ ಕಳೆದ ೧೩೦ ವರ್ಷಗಳ ಇತಿಹಾಸದಲ್ಲಿ ಅತ್ಯಂತ ಬಿಸಿಯಾದ ಮಾರ್ಚ್ ತಿಂಗಳು ಎಂದು ದಾಖಲೆ ಮಾಡಿದೆ. ಡಿಸೆಂಬರ್೨೦೦೯ರ ಕೋಪನ್‌ಹೇಗನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಪರಿಸರ ಸಮಾವೇಶದಲ್ಲಿ ಭಾಗವಹಿಸಿದ್ದ ರಾಷ್ಟ್ರಗಳು ಜಾಗತಿಕ ತಾಪಮಾನ ೨ ಡಿಗ್ರಿ ಸೆ.ಗಿಂತ ಹೆಚ್ಚಾಗದೆ ಇರುವಂತೆ ನಿರ್ಣಯವನ್ನು ಅಂಗೀಕರಿಸಿತು. ವಿಮರ್ಶಕರ ಪ್ರಕಾರ ಈ ಸಮಾವೇಶ ಅಮೆರಿಕ ಹಾಗೂ ಚೀನಾ ದೇಶಗಳ ಸಂಕುಚಿತ ಮನೋಭಾವದಿಂದ ಪರಿಸರಕ್ಕೆ ಧಕ್ಕೆ ತರುವ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ನಿಯಂತ್ರಿಸುವ ಅಂತಾರಾಷ್ಟ್ರೀಯ ಕಾನೂನನ್ನು ಜಾರಿಗೆ ತರಲು ವಿಫಲವಾದರೂ, ಭಾಗವಹಿಸಿದ್ದ ಎಲ್ಲ ರಾಷ್ಟ್ರಗಳು ಈ ಅನಿಲಗಳನ್ನು ನಿಯಂತ್ರಿಸುವ ಬಗ್ಗೆ ತಮ್ಮ ದೇಶಗಳಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನು ನೀಡಿರುವುದು ಸ್ವಾಗತಾರ್ಹ.
ವಿಶ್ವದ ಶೇ. ೩೩ ಇಂಗಾಲವನ್ನು ಅಮೆರಿಕ, ಶೇ.೨೩ನ್ನು ಯೂರೋಪಿಯನ್ ಯೂನಿಯನ್ ದೇಶಗಳು, ಶೇ. ೮ ಚೈನಾ, ಶೇ. ೬ ಜಪಾನ್, ಶೇ.೪ನ್ನು ಭಾರತ ದೇಶ ಹೊರಸೂಸಿದರೆ ಇನ್ನುಳಿದ ಶೇ.೩೩ ಇಂಗಾಲವನ್ನು ಇತರೆ ದೇಶಗಳು ಹೊರಸೂಸುತ್ತಿವೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಶೇ.೭೦ರಷ್ಟು ಇಂಗಾಲವನ್ನು ಹೊರಸೂಸುತ್ತಿವೆ. ಇತ್ತೀಚೆಗೆ ಚೀನಾ ಹಾಗು ಭಾರತ ತ್ವರಿತ ರೀತಿಯಲ್ಲಿ ಮುಂದುವರಿಯುತ್ತಿರುವುದರಿಂದ ಹಾಗೂ ಕೈಗಾರಿಕೋತ್ಪಾದನೆ ಹೆಚ್ಚಿರುವುದರಿಂದ, ಅಭಿವೃದ್ಧಿಶೀಲ ರಾಷ್ಟ್ರಗಳಂತೆ ಅಡಿವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಬೇಕಾಗಿರುವುದರಿಂದ ಈ ದೇಶಗಳು ಸಹ ಹೆಚ್ಚು ಇಂಗಾಲವನ್ನು ಹೊರಸೂಸಲು ಪ್ರಾರಂಭಿಸಿವೆ. ವಿಶ್ವದ ಕೇವಲ ಶೇ. ೪.೫೩ರಷ್ಟು ಜನಸಂಖ್ಯೆ ಹೊಂದಿರುವ ಅಮೆರಿಕಾ ಜಾಗತಿಕ ತಾಪಮಾನ ಹೆಚ್ಚಾಗಲು ಬಹುಮುಖ್ಯ ಕಾರಣವಾಗಿದೆ. ನಾಮಕಾವಸ್ಥೆಗೆ ೧೯೯೭ರಲ್ಲಿ ಜಪಾನಿನ ಕ್ಯೋಟೊನಲ್ಲಿ ನಡೆದ ಅಂತರರಾಷ್ಟ್ರೀಯ ಪರಿಸರ ಸಮಾವೇಶದಲ್ಲಿ ಮಂಡಿಸಿದ ಕ್ಯೋಟೊ ಪ್ರೊಟೊಕಾಲ್‌ಗೆ ಅಮೆರಿಕಾ ಸಹಿ ಹಾಕಿದ್ದರೂ, ಇದನ್ನು ತನ್ನ ದೇಶದಲ್ಲಾಗಲಿ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾನೂನಾಗಿ ಪರಿವರ್ತಿಸುವಲ್ಲಿ ವಿಫಲವಾಗಿದೆ. ಎಲ್ಲ ರಾಷ್ಟ್ರಗಳ ಪೈಕಿ ಕೇವಲ ಯೂರೋಪಿಯನ್ ಯೂನಿಯನ್ ರಾಷ್ಟ್ರಗಳು ಕ್ಯೋಟೊ ಪ್ರೊಟೊಕಾಲನ್ನು ಶಿಸ್ತಿನಿಂದ ಪಾಲಿಸುತ್ತಿವೆ. ಕ್ಯೋಟೊ ಪರಿಸರ ನಿಯಮಾವಳಿಯ ಪ್ರಕಾರ ಪ್ರತಿ ರಾಷ್ಟ್ರಕ್ಕೆ ಒಂದು ವರ್ಷಕ್ಕೆ ನಿರ್ದಿಷ್ಟ ಇಂಗಾಲವನ್ನು ಹೊರಸೂಸುವ ಮಿತಿಯಿರುತ್ತದೆ. ಈ ಮಿತಿಯು ನಿವ್ವಳ ಗೃಹ ಉತ್ಪನ್ನ (ಜಿ.ಡಿ.ಪಿ), ಜನಸಂಖ್ಯೆ ಹಾಗೂ ಕೈಗಾರಿಕೋತ್ಪನ್ನ ಆಧಾರಿತವಾಗಿರುತ್ತದೆ.
ಪ್ರತಿ ರಾಷ್ಟ್ರವು ತನಗೆ ದೊರೆತಿರುವ ಇಂಗಾಲ ಹೊರಸೂಸುವ ಮಿತಿಯೊಳಗೆ ಕೆಲಸ ಮಾಡಬೇಕು. ಹಾಗೆಂದು ದೇಶದ ಆರ್ಥಿಕತೆಗೆ ಧಕ್ಕೆ ಬರದಂತೆ ಇಂಗಾಲವನ್ನು ತಗ್ಗಿಸುವ ವಿಧಾನಗಳನ್ನು ವಿದ್ಯುಚ್ಛಕ್ತಿ ಉತ್ಪಾದನೆಯಲ್ಲಿ, ಕೈಗಾರಿಕೆಯಲ್ಲಿ, ವ್ಯವಸಾಯ ವಿಧಾನಗಳಲ್ಲಿ, ಸಾರಿಗೆ ವ್ಯವಸ್ಥೆಯಲ್ಲಿ ಮತ್ತು ಕೊಳಚೆ ನಿರ್ಮೂಲನದಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿ ಕಾರ್ಖಾನೆಗೆ ಇಂಗಾಲದ ಮಿತಿಯನ್ನು ನಿಗದಿಗೊಳಿಸಲಾಗುತ್ತದೆ. ಉದಾಹರಣೆಗೆ ಟೊಯೋಟೊ ಕಾರ್ಖಾನೆಯು ೧೦,೦೦೦ ಕಾರುಗಳ ಉತ್ಪಾದನೆಗೆ ಪ್ರತಿ ವರ್ಷ ೧೦೦,೦೦೦ ಟನ್ ಇಂಗಾಲವನ್ನು ಹೊರಸೂಸಿದರೆ, ಸರ್ಕಾರ ಕೇವಲ ೮೦,೦೦೦ ಟನ್ ಇಂಗಾಲದ ಮಿತಿಯನ್ನು ಅದರ ಮೇಲೆ ಹೇರಿದರೆ, ಈ ಕಾರ್ಖಾನೆ ತನ್ನ ಉತ್ಪಾದನೆಯನ್ನು ಉಳಿಸಿಕೊಳ್ಳಲು ಅಥವಾ ಉತ್ಪಾದನೆಯನ್ನು ಹೆಚ್ಚಿಸಲು ನೂತನ ತಂತ್ರಜ್ಞಾನವನ್ನು ಅಳವಡಿಸಿ ತನಗೆ ದೊರೆತಿರುವ ಕಾರ್ಬನ್ ಕ್ರೆಡಿಟ್ ಮಿತಿಯೊಳಗೆ ಕೆಲಸಮಾಡಬೇಕಾಗುತ್ತದೆ. ಹಾಗಾಗದಿದ್ದಲ್ಲಿ ಕಡಿಮೆ ಇಂಗಾಲವನ್ನು ಹೊರಸೂಸುವ ಬೇರೆ ಕಾರ್ಖಾನೆಯಿಂದ ಕಾರ್ಬನ್ ಕ್ರೆಡಿಟ್ ಅನ್ನು ಕೊಂಡುಕೊಳ್ಳಬೇಕು ಅಥವಾ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಕಡಿಮೆ ಇಂಗಾಲವನ್ನು ಹೊರಸೂಸುವ ಯೋಜನೆಗಳಿಗೆ ಪ್ರೋತ್ಸಾಹಿಸಿ ಕಾರ್ಬನ್ ಕ್ರೆಡಿಟ್ ಪಡೆಯಬಹುದು. ಈಗಾಗಲೆ ೫ ಅಂತರರಾಷ್ಟ್ರೀಯ ಸಂಸ್ಥೆಗಳು ಕಾರ್ಬನ್ ಕ್ರೆಡಿಟ್ ವ್ಯಾಪಾರದಲ್ಲಿ ತೊಡಗಿವೆ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ಪ್ರತಿ ವರ್ಷ ಬೆಳೆಯುತ್ತಿದೆ. ವಿಶ್ವ ಸಂಸ್ಥೆಯ ಯು.ಎನ್.ಎಫ್.ಸಿ.ಸಿ. ಸಂಸ್ಥೆಯು ಕಾರ್ಬನ್ ಕ್ರೆಡಿಟ್‌ನ ಎಲೆಕ್ಟ್ರಾನಿಕ್ ಪ್ರಮಾಣಪತ್ರಗಳನ್ನು ಸಂಸ್ಥೆಗಳ ಇಂಗಾಲ ಹೊರಸೂಸುವ ಆಧಾರದ ಮೇಲೆ ವಿತರಿಸುತ್ತದೆ. ೧ ಟನ್ ಕಾರ್ಬನ್ ಕ್ರೆಡಿಟ್ ಪ್ರಮಾಣಪತ್ರಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ೧೫ರಿಂದ ೨೦ ಯೂರೋ ಡಾಲರುಗಳ ಬೆಲೆಯಿದೆ. ಇತ್ತೀಚೆಗೆ ಬಾರತದ ಜಿಂದಾಲ್ ಕಾರ್ಖಾನೆಯು ಸ್ಟೀಲ್ ತಯಾರಿಸಲು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದರಿಂದ ವರ್ಷಕ್ಕೆ ೧.೫ ಕೋಟಿ ಟನ್ ಕಡಿಮೆ ಇಂಗಾಲವನ್ನು ಹೊರಸೂಸುತ್ತಿರುವುದರಿಂದ ೨೨೫ ಮಿಲಿಯನ್ ಯೂರೊ ಡಾಲರುಗಳ ಮೌಲ್ಯದ ಕಾರ್ಬನ್ ಕ್ರೆಡಿಟ್ ಗಳಿಸುತ್ತಿದೆ. ಈ ಕಾರ್ಖಾನೆ ಪರಿಸರ ಸ್ನೇಹಿಯಾಗಿರುವುದಲ್ಲದೆ ಹಣವನ್ನು ಗಳಿಸುತ್ತಿದೆ. ಇದೆ ರೀತಿ ಯಾವುದಾದರೂ ಕೈಗಾರಿಕೆ ನಗರ ಪ್ರದೇಶದ ಕೊಳಚೆ ನೀರಿನಲ್ಲಿರುವ ಮಿಥೇನ್ ಅನಿಲವನ್ನು ಬಳಸಿ ಡೀಸಲ್ ಉತ್ಪಾದಿಸಿ ಅದನ್ನು ತನ್ನ ಕಾರ್ಖಾನೆಗೆ ಬಳಿಸಿಕೊಂಡರೆ ಅದಕ್ಕೂ ಕಾರ್ಬನ್ ಕ್ರೆಡಿಟ್ ದೊರೆಯುತ್ತದೆ. ಇದಲ್ಲದೆ ನೀರಿಲ್ಲದ ಬರಪೀಡಿತ ಜಿಲ್ಲೆಗಳಲ್ಲಿ ಬಯೋಡೀಸಲ್‌ಗೆ ಬೇಕಾಗುವ ಜತ್ರೋಪ ಸಸಿಗಳನ್ನು ಬೆಳೆಸುವುದರಿಂದ ರೈತರ ಜೀವನೋಪಾಯವಾಗುವುದರ ಜೊತೆಗೆ ಇದರ ಬೀಜಗಳನ್ನು ಖರೀದಿಸುವ ಇಂಡಿಯನ್ ಪೆಟ್ರೋಲಿಯಮ್ ಸಂಸ್ಥೆಗಳು ಕಾರ್ಬನ್ ಕ್ರೆಡಿಟ್‌ನಿಂದ ಹಣ ಸಂಪಾದಿಸಬಹುದು. ಸದ್ಯಕ್ಕೆ ಯೂರೋಪಿಯನ್ ರಾಷ್ಟ್ರಗಳ ಕಾರ್ಖಾನೆಗಳು ಮಾತ್ರ ಕಾರ್ಬನ್ ಕ್ರೆಡಿಟ್‌ಗಳನ್ನು ಖರೀದಿಸುತ್ತಿವೆ. ಇನ್ನು ಕೆಲವು ವರ್ಷಗಳಲ್ಲಿ ಕ್ಯೋಟೊ ಪ್ರೋಟೊಕಾಲ್ ತರಹ ಇಂಗಾಲ ಹೊರಸೂಸುವಿಕೆಯನ್ನು ನಿಯಂತ್ರಿಸುವ ಕಡ್ಡಾಯ ಅಂತರರಾಷ್ಟ್ರೀಯ ಕಾನೂನು ಜಾರಿಯಾದಲ್ಲಿ ಕಾರ್ಬನ್ ಕ್ರೆಡಿಟ್ ವಿಶ್ವದ ಪ್ರತಿಯೊಂದು ಉದ್ಯಮದ ಮೇಲೂ ಪರಿಣಾಮ ಬೀರಲಿದೆ.
೫ ವರ್ಷಗಳಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಶೇ.೨೬ರಷ್ಟು ತಗ್ಗಿಸುವುದಾಗಿ ಭಾರತ ಜನವರಿ ೨೦೧೦ರಲ್ಲಿ ವಿಶ್ವಸಂಸ್ಥೆಗೆ ಭರವಸೆ ನೀಡಿದೆ. ಹಾಗಾಗಿ ನಾವು ಇಂಗಾಲವನ್ನು ತಗ್ಗಿಸುವ ವಿಧಾನಗಳನ್ನು ಅನುಸರಿಸಬೇಕಾಗಿದೆ. ಇಂಗಾಲವನ್ನು ನಿಯಂತ್ರಿಸಲು ಇರುವ ವಿಧಾನಗಳೆಂದರೆ ಕಾರ್ಬನ್ ಪ್ರಾಜೆಕ್ಟ್ಸ್, ಕಾರ್ಬನ್ ಕ್ರೆಡಿಟ್ಸ್, ಕಾರ್ಬನ್ ಫಾರ್ಮಿಂಗ್ ಹಾಗು ಕಾರ್ಬನ್ ಟ್ಯಾಕ್ಸಿಂಗ್.
ಕಾರ್ಬನ್ ಪ್ರಾಜೆಕ್ಟ್ಸ್ - ನಮ್ಮ ದೇಶದಲ್ಲಿ ಪಳೆಯುಳಿಕೆ ಇಂಧನಗಳಿಂದ ಶೇ.೬೮ರಷ್ಟು ವಿದ್ಯುತ್ ತಯಾರಾಗುತ್ತಿದ್ದರೆ, ಜಲಶಕ್ತಿಯಿಂದ ಶೇ.೨೧, ನವೀಕರಿಸಬಹುದಾದ ಶಕ್ತಿಗಳಿಂದ ಶೇ.೭ ಹಾಗು ಅಣು ಶಕ್ತಿಯಿಂದ ಶೇ.೪ ವಿದ್ಯುತ್ ತಯಾರಿಸಲಾಗುತ್ತಿದೆ. ತಯಾರಾಗುವ ವಿದ್ಯುತ್‌ನಲ್ಲಿ ಶೇ.೩೦ ರಿಂದ ಶೇ.೪೫ ವಿದ್ಯುತ್ ಸೋರಿಕೆಯಿಂದ ಅಥವಾ ವಿದ್ಯುತ್ ಕಳ್ಳ ಸಾಗಾಣಿಕೆಯಿಂದ ನಷ್ಟವಾಗುತ್ತಿದೆ. ಪ್ರಸ್ತುತ ೧೪೯,೦೦೦ ಮೆ.ವ್ಯಾ. ವಿದ್ಯುತ್ ನಮ್ಮ ದೇಶದಲ್ಲಿ ಉತ್ಪಾದನೆಯಾಗುತ್ತಿದ್ದರೆ ೨೦೩೦ರ ವೇಳೆಗೆ ೯೫೦,೦೦೦ ಮೆ.ವ್ಯಾ. ವಿದ್ಯುತ್ ಅವಶ್ಯಕತೆಯಿದೆ. ಇಂಗಾಲವನ್ನು ಕಡಿಮೆಗೊಳಿಸಬೇಕಾದರೆ ಅಥವಾ ಕಾರ್ಬನ್ ಕ್ರೆಡಿಟ್ ಅಂತಾರಾಷ್ಟ್ರೀಯ ಕಾನೂನು ಜಾರಿಯಾದಲ್ಲಿ ನಮ್ಮ ದೇಶದ ಪ್ರಗತಿಯನ್ನು ಕಾಯ್ದು ಕೊಳ್ಳಲು ನಾವು ಯಥೇಚ್ಛವಾಗಿ ದೊರೆಯುವ ಸೌರಶಕ್ತಿ, ವಾಯುಶಕ್ತಿ, ಜಲಶಕ್ತಿ ಹಾಗೂ ಜೈವಿಕ‌ಇಂಧನಗಳನ್ನು (ಬಯೋಡೀಸೆಲ್) ಬಳಸಿ ಹೆಚ್ಚು ವಿದ್ಯುತ್ ತಯಾರಿಸಲು ಪ್ರೋತ್ಸಾಹಿಸಬೇಕು. ರಾಷ್ಟ್ರದ ಪ್ರತಿಯೊಂದು ದಾರಿ ದೀಪವನ್ನು ಸೌರಶಕ್ತಿಯಿಂದಲೇ ಉರಿಸಬಹುದು. ಗ್ರಾಮಗಳಲ್ಲಿ ಬಯೋಗ್ಯಾಸನ್ನು ಹಾಗೂ ನಗರಗಳಲ್ಲಿರುವ ಕೊಳಚೆ ನೀರಿನಲ್ಲಿರುವ ಮಿಥೇನ್ ಅನಿಲದಿಂದ ವಿದ್ಯುತ್ತನ್ನು ತಯಾರಿಸಬೇಕು. ಅಲ್ಲದೆ ಅಣು ಒಪ್ಪಂದದಂತೆ ಇನ್ನು ೧೦ ವರ್ಷಗಳಲ್ಲಿ ಉತ್ಪಾದಿಸುತ್ತಿರುವ ಅಣುವಿದ್ಯುತ್ತನ್ನು ಶೇ.೧೦ರಿಂದ ಶೇ.೨೦ಕ್ಕೆ ಏರಿಸಬೇಕು. ಕಲ್ಲಿದ್ದಲು ಹಾಗೂ ಪ್ರಾಕೃತಿಕ ಅನಿಲಗಳಿಂದ ಆದಷ್ಟು ಕಡಿಮೆ ವಿದ್ಯುತ್ತನ್ನು ಉತ್ಪಾದಿಸಬೇಕು. ಜತ್ರೋಪ ಸಸಿಗಳನ್ನು ಬೆಳೆಸಲು ಪ್ರೋತ್ಸಾಹಿಸಿ ಬಯೊಡೀಸಲ್ ತಯಾರಿಸುವುದಲ್ಲದೆ ಕಾರ್ಬನ್ ಕ್ರೆಡಿಟ್ ಸಹ ಪಡೆಯಬಹುದು.
ಕಾರ್ಬನ್ ಕ್ರೆಡಿಟ್ಸ್- ಹಳೆಯ ತಂತ್ರಜ್ಞಾನದಿಂದ ನಡೆಯುತ್ತಿರುವ ಕೈಗಾರಿಕೆಗಳಿಗೆ ಸರ್ಕಾರ ಅನುದಾನ ನೀಡಿ ಅವುಗಳನ್ನು `ಇಂಗಾಲ ಸ್ನೇಹಿ' ಕೈಗಾರಿಕೆಗಳಾಗಿ ಪರಿವರ್ತಿಸಬೇಕು, ಪ್ರತಿ ಕೈಗಾರಿಕೆಗೆ ಇಂಗಾಲದ ಮಿತಿಯನ್ನು ಜಾರಿಗೆ ತರಬೇಕು. ಇದನ್ನು ತಲುಪಲಾರದಂತಹ ಕೈಗಾರಿಕೆಗಳು ಗ್ರಾಮಾಂತರ ಪ್ರದೇಶಗಳನ್ನು ಹಾಗೂ ಅರಣ್ಯ ಪ್ರದೇಶಗಳನ್ನು ದತ್ತು ತೆಗೆದುಕೊಂಡು ಮರಗಳನ್ನು ಬೆಳೆಸುವುದರೊಂದಿಗೆ ತಮ್ಮ ಕಾರ್ಪೊರೇಟ್ ಹೊಣೆಗಾರಿಕೆಯನ್ನು ನಿಭಾಯಿಸಬೇಕು.
ಕಾರ್ಬನ್ ಫಾರ್ಮಿಂಗ್- ನಮ್ಮ ದೇಶದ ಇಂಗಾಲ ಹೊರಸೂಸುವಿಕೆಯನ್ನು ಕಡಿಮೆಮಾಡುವಲ್ಲಿ ನಮ್ಮ ರೈತರದು ಮಹತ್ತರ ಪಾತ್ರವಿದೆ. ಪ್ರತಿಯೊಬ್ಬ ರೈತನಿಗೆ ತಮ್ಮ ಜಮೀನಿನಲ್ಲಿ ಮರಗಳನ್ನು ಬೆಳೆಸಲು ಸರ್ಕಾರ ಹಣವನ್ನು ಕೊಡಬೇಕು- ಅದು ಫಸಲು ಕೊಡುವ ಮಾವಿನ ಮರವಾಗಿರಬಹುದು ಅಥವಾ ತಂಪು ಕೊಡುವ ಹೊಂಗೆ ಮರವಾಗಿರಬಹುದು. ಪ್ರತಿಯೊಂದು ಮರಕ್ಕೆ ವರ್ಷಕ್ಕೆ ಇಂತಿಷ್ಟು ಬಾಡಿಗೆಯೆಂದು ಸರ್ಕಾರ ಪಾವತಿಸಬೇಕು. ಯಾವುದೇ ಮರ ಕಡಿದರೂ ಜಾಮೀನು ನೀಡಲಾಗದ ಅರೆಸ್ಟ್ ವಾರೆಂಟ್ ಜಾರಿಗೊಳಿಸಬೇಕು. ಇಂದಿಗೂ ಶೇ.೯೦ರಷ್ಟು ಗ್ರಾಮಾಂತರ ಪ್ರದೇಶದಲ್ಲಿ ನೀರು ಕಾಯಿಸಲು ಹಾಗು ಅಡಿಗೆ ಮಾಡಲು ಸೌದೆಯನ್ನು ಉಪಯೋಗಿಸುತ್ತಿದ್ದಾರೆ. ಇದರಿಂದ ಮರಗಳು ನಾಶವಾಗುವುದಲ್ಲದೆ ಹೊಗೆಯಿಂದ ಇಂಗಾಲವು ಹೊರಸೂಸುತ್ತದೆ. ಹಾಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೌರ ಒಲೆಗಳನ್ನು ಹಾಗೂ ಅಡಿಗೆಗೆ ಬಯೋಗ್ಯಾಸ್ ಬಳಕೆಯನ್ನು ಪ್ರೋತ್ಸಾಹಿಸಬೇಕು. ಇಂಗಾಲವನ್ನು ಭೂಮಿಯಲ್ಲಿ ಹಿಡಿದಿಡುವ ವ್ಯವಸಾಯ ಪದ್ಧತಿಗಳ ಬಗ್ಗೆ ರೈತರಿಗೆ ವಿವರಿಸಿ ಹೇಳಬೇಕು. ಈ ಪದ್ಧತಿಗಳನ್ನು ಅನುಸರಿಸುವುದರಿಂದ ದೊರಕುವ ವಿಶ್ವಸಂಸ್ಥೆಯ ಸಬ್ಸಿಡಿಯನ್ನು ರೈತರಿಗೆ ತಲುಪಿಸಬೇಕು. ಈಗಿರುವ ನರೇಗಾ (ಓಂಖ‌ಇ‌ಉಂ), ಆಹಾರ ಸುರಕ್ಷತೆ ಕಾರ್ಯಕ್ರಮಗಳ ಜೊತೆ ಇಂಗಾಲ ತಗ್ಗಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು ಅಥವಾ ಫೀಡ್ (ಈ‌ಇ‌ಇ‌ಆ) ಎಂಬ ಕಾರ್ಯಕ್ರಮದ ಅಡಿಯಲ್ಲಿ ಈ ಮೂರು ಕಾರ್ಯಕ್ರಮಗಳನ್ನು ಜೋಡಿಸಿ ಆಹಾರ (ಫುಡ್), ಶಕ್ತಿ (ಎನರ್ಜಿ), ಪರಿಸರ (ಎನವಿರಾನ್‌ಮೆಂಟ್) ಮತ್ತು ಅಭಿವೃದ್ಧಿ (ಡೆವೆಲಪಮೆಂಟ್) ಕಾಯಕ್ರಮವನ್ನು ರೂಪಿಸಬಹುದು.
ಕಾರ್ಬನ್ ಟ್ಯಾಕ್ಸಿಂಗ್- ಖಾಸಗಿ ಸಾರಿಗೆ, ಸರ್ಕಾರಿ ಸಾರಿಗೆ, ವಿಮಾನ ಸಾರಿಗೆ ಕಂಪನಿಗಳ ಮೇಲೆ ಇಂಗಾಲ ತೆರಿಗೆಯನ್ನು ವಿಧಿಸಬೇಕು. ಅನಗತ್ಯವಾಗಿ ಹೆಚ್ಚು ಇಂಗಾಲವನ್ನು ಹೊರಸೂಸುವ ಎಲ್ಲ ವಾಹನಗಳ ಪರವಾನಿಗೆಯನ್ನು ರದ್ದುಗೊಳಿಸಬೇಕು. ರಿಯಲ್ ಎಸ್ಟೇಟ್ ಕಂಪನಿಗಳು ಕಟ್ಟುವ ಪ್ರತಿ ಚದರ ಅಡಿಗೆ ಇಂಗಾಲ ತೆರಿಗೆ ವಿಧಿಸಬೇಕು. ನಗರಗಳಲ್ಲಿರುವ ಎಲ್ಲ ಕಛೇರಿಗಳು ಶಕ್ತಿ ಸಮರ್ಥವಾಗಿ (ಎನರ್ಜಿ ಎಫಿಷಿಯೆಂಟ್) ಪರಿವರ್ತನೆಯಾಗಬೇಕು ಇಲ್ಲದಿದ್ದಲ್ಲಿ ಅವು ಇಂಗಾಲ ತೆರಿಗೆಯನ್ನು ಪಾವತಿಮಾಡಬೇಕು.
ಇಂದು ವಿಶ್ವ ಪರಿಸರ ದಿನ. ಪ್ರತಿಯೊಬ್ಬ ಪ್ರಜೆಯು ತನ್ನ ದಿನ ನಿತ್ಯದ ಬದುಕಿನಲ್ಲಿ ಇಂಗಾಲವನ್ನು ಇಳಿಸಲು ಪ್ರಯತ್ನಿಸಬಹುದು. ಅನಗತ್ಯ ವಿದ್ಯುತ್ ಬಳಕೆ, ನೀರಿನ ದುರ್ಬಳಕೆ, ಅನಗತ್ಯ ಕಾಗದ ಅಥವಾ ಪ್ಲಾಸ್ಟಿಕ್ ಬಳಕೆ, ಅನಗತ್ಯ ವಾಹನಬಳಕೆ ಮುಂತಾದವುಗಳನ್ನು ನಿಲ್ಲಿಸಬೇಕು. ನಮ್ಮ ದಿನನಿತ್ಯದ ಪ್ರತಿಯೊಂದು ಹೆಜ್ಜೆಯಲ್ಲಿ ನಾವು ಪರಿಸರ ಮಾಲಿನ್ಯವಾಗದಂತೆ ತಡೆಯಬಹುದು. ಮುಂದೊಂದು ದಿನ ಇಂಗಾಲ ಹೊರಸೂಸುವಿಕೆ ಎಷ್ಟು ಪ್ರಾಮುಖ್ಯತೆ ಪಡೆಯುತ್ತದೆಯೆಂದರೆ ವಿಶ್ವದ ಪ್ರತಿಯೊಬ್ಬ ಪ್ರಜೆಗೂ ಇಂಗಾಲ ಮಿತಿ ಬರಬಹುದು. ಹೇಗೆ ಒಂದು ಕೈಗಾರಿಕೆ ಅಥವಾ ಕಾರ್ಖಾನೆಗೆ ಇಂಗಾಲ ಮಿತಿ ಬರಲಿದೆಯೊ ಅದೇ ರೀತಿ ಮುಂದೊಂದು ದಿನ ಪ್ರತಿಯೊಂದು ಕುಟುಂಬಕ್ಕೆ ಇಂಗಾಲ ಮಿತಿ ಬರಬಹುದು. ಧೂಮಪಾನ ಮಾಡುವವರು ಮಾಡದೆ ಇರುವವರ ಬಳಿ ಕಾರ್ಬನ್ ಕ್ರೆಡಿಟ್ ಪಡೆಯಬೇಕಾಗುತ್ತದೆ. ಹೆಚ್ಚು ವಾಹನಗಳನ್ನಿಡಬೇಕೆಂದು ಬಯಸುವವರೂ ವಾಹನಗಳಿಲ್ಲದಿರುವವರ ಬಳಿ ಕಾರ್ಬನ್ ಕ್ರೆಡಿಟ್ ಪಡೆಯಬೇಕಾಗಬಹುದು. ಯಾವುದೇ ವಾಹನ ಖರೀದಿಸುವುದರ ಮೊದಲು ಮರಗಳನ್ನು ಪೋಷಿಸುತ್ತಿರುವ ಸಾಕ್ಷಿ ಪತ್ರವನ್ನು ತೋರಿಸಬೇಕಾಗಬಹುದು. ಹೈಸ್ಪೀಡ್ ಫ್ಯಾನ್ಸಿ ಕಾರುಗಳು ಅಥವಾ ಬೈಕುಗಳನ್ನು ಖರೀದಿಸುವವರು ಎರಡು ಪಟ್ಟು ಹೆಚ್ಚು ಹಣವನ್ನು ತೆರಿಗೆ ರೀತಿಯಲ್ಲಿ ಪಾವತಿಸಬೇಕಾಗಬಹುದು. ಅನಗತ್ಯವಾಗಿ ಖಾಸಗಿ ಪಾರ್ಟಿಗಳನ್ನು ಮಾಡುವವರು ಹಾಗೂ ಸಾವಿರಾರು ಮಂದಿಯನ್ನು ಮದುವೆ ಅಥವಾ ನಾಮಕರಣ ಅಥವಾ ಬಾಡು ಊಟಗಳಿಗೆ ಆಹ್ವಾನಿಸುವವರ ಮೇಲೆ ಕಾರ್ಬನ್ ತೆರಿಗೆ ಬೀಳಬಹುದು. ಹಾಗೆಯೇ ಮನುಷ್ಯ ಅಥವಾ ಪ್ರಾಣಿ ಸತ್ತ ಮೇಲೆ ಅದನ್ನು ಸುಡಬೇಕೋ ಅಥವಾ ಹೂಳಬೇಕೊ, ಯಾವುದರಿಂದ ಪರಿಸರಕ್ಕೆ ಹೆಚ್ಚು ಹಾನಿಕರ ಎಂಬ ವಾದ ವಿವಾದ ಅಥವಾ ಕಾನೂನು ಜಾರಿಗೆ ಪ್ರಯತ್ನಗಳು ನಡೆದರೂ ಸಹ ಆಶ್ಚರ್ಯ ಪಡಬೇಕಾಗಿಲ್ಲ. ವಿಶ್ವ ಪರಿಸರದ ದಿನಾಚರಣೆಯಾದ ಇಂದು ಮಿತ್ರರಿಗೆ ನನ್ನ ಸಂದೇಶ- ಇಂಗಾಲವನ್ನು ಇಳಿಸಿ, ಪರಿಸರವನ್ನು ಉಳಿಸಿ.
ಡಾ.ಮಧುಸೀತಪ್ಪ

ಶಿವಪ್ಪ ಕಾಯೋ ತಂದೆ, ಬಾಯಾರಿಕೆಯನ್ನು ತಾಳಲಾರೆ ಕಾಪಾಡೆಯ? ಶಿವನೇ.....!


ಇತ್ತೀಚೆಗೆ ನಾನು `ವಿಜಯ ಕರ್ನಾಟಕ' ಪತ್ರಿಕೆಯಲ್ಲಿ ನೇತ್ರಾವತಿ ತಿರುವಿಗೆ ಸಂಬಂಧ ಪಟ್ಟಂತೆ ಲೇಖನವೊಂದನ್ನು ಬರೆದಿದ್ದೆ. ಅದಕ್ಕೆ ಸಂಬಂಧಪಟ್ಟಂತೆ ಮಿತ್ರ ಪತ್ರಕರ್ತ ವಿನಾಯಕ್ ಭಟ್ ಅವರು ಪ್ರತಿಕ್ರಿಯಿಸಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ವಿನಾಯಕ್ ಅವರು ವ್ಯಕ್ತಪಡಿಸಿರುವ ಕೆಲವು ಬೇಸರ- ಕಳಕಳಿಗೆ ನನ್ನ ಕೈಲಾದಮಟ್ಟಿಗೆ ಉತ್ತರಿಸಲು ಪ್ರಯತ್ನಪಡುತ್ತೇನೆ. ಹಾಗೂ ಇದು ಮುಕ್ತವಾಗಿ ಸಾರ್ವಜನಿಕ ವಲಯಗಳಲ್ಲಿ ಚರ್ಚೆಯಾಗಲು ಅವಕಾಶ ದೊರದಂತಾಗಿದೆ. ಇದಲ್ಲದೆ ಅನೇಕ ವರ್ಷಗಳಿಂದ ವ್ಯವಸ್ಥಿತವಾಗಿ ಪರಮಶಿವಯ್ಯನವರ ಯೋಜನೆಯ ಬಗ್ಗೆ ಅಪಪ್ರಚಾರ ಮಾಡುತ್ತಿರುವವರಿಗೆ ಉತ್ತರ ಕೊಡಲು ಅವಕಾಶ ದೊರೆತಂತಾಗಿದೆ.
ನೇತ್ರಾವತಿ ನದಿಯ ಬೃಹತ್ ಮಳೆ ಕೊಯ್ಲು ಯೋಜನೆ ಜಾರಿಯ ಬಗ್ಗೆ ಹೋರಾಟ ನಡೆಸಿರುವ ಇಳಿವಯಸ್ಸಿನ ೯೧ ವರ್ಷದ `ಯುವಕ' ಡಾ.ಪರಮಶಿವಯ್ಯನವರ ಪರವಾಗಿ ನಾನು ಹೇಳ ಹೊರಟಿರುವುದಿಷ್ಟೇ- ದಕ್ಷಿಣ ಕನ್ನಡದ ಜೀವನದಿಯಾದ ನೇತ್ರಾವತಿ ದೇಶದಲ್ಲಿ ಉದ್ದವನ್ನು ಮಾತ್ರ ಪರಿಗಣಿಸಿದಲ್ಲಿ ಚಿಕ್ಕ ನದಿಯಾಗಿರ ಬಹುದು. ಆದರೆ ಇದರಲ್ಲಿರುವ ನೀರಿನ ಪ್ರಮಾಣವು ನಾಲ್ಕು ರಾಜ್ಯಗಳಿಗೆ ನೀರುಣಿಸುವ ಕಾವೇರಿ ನದಿಗಿಂತ ಹೆಚ್ಚು. ಇದು ಸೂರ್ಯನ ಬೆಳಕು ಹಾಗೂ ಪಶ್ಚಿಮ ಘಟ್ಟದಲ್ಲಿರುವ ಕಾಡಿನ ಹಸಿರಿನಷ್ಟೇ ನಿಚ್ಚಳ ಸತ್ಯ!! ಪಾಣಿ ಮಂಗಳೂರಿನ ಮಾಪನದ ಅಂಕಿ ಅಂಶಗಳ ಅನ್ವಯ ಈ ನದಿಯಿಂದ ಸರಿಸುಮಾರು ೪೪೦ ಟಿ‌ಎಂಸಿ ನೀರು ಸಮುದ್ರದತ್ತ ದಾಪುಗಾಲು ಹಾಕುವ ಸಂದರ್ಭದಲ್ಲಿ ಮಾರ್ಗಮಧ್ಯದಲ್ಲಿರುವ ಅನೇಕ ಹಳ್ಳ-ಕೊಳ್ಳಗಳಿಂದ ೭೫ ಟಿ‌ಎಂಸಿಯಷ್ಟು ನೀರು ಇದರ ಜೊತೆಯಾಗುತ್ತದೆ. ಅಂದರೆ ಒಟ್ಟಾರೆ ೫೧೫ ಟಿ‌ಎಂಸಿ ನೀರು ಸಮುದ್ರದ ತೆಕ್ಕೆಯಲ್ಲಿ ಕರಗುತ್ತದೆ! ಇದು ಕರ್ನಾಟಕ ನೀರಾವರಿ ಇಲಾಖೆಯಿಂದ ತಿಳಿದು ಬಂದಿರುವ ಮಾಹಿತಿ (ನನ್ನ ಬಳಿ ಸಾಕ್ಷಿ ಇದೆ).
ಇಲ್ಲಿ ನಾನು ಮತ್ತೊಂದು ಸಂಗತಿಯನ್ನು ಸ್ಪಷ್ಟ ಪಡಿಸಲು ಇಷ್ಟ ಪಡುತ್ತೇನೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸುತ್ತಮುತ್ತಲಿರುವ ಇರುವ ಇಪ್ಪತ್ತೆರಡು ನದಿಗಳ ನೀರು ಅರಬ್ಬೀ ಸಮುದ್ರಕ್ಕೆ ಸೇರುತ್ತದೆ (೩೦೧೬ ಟಿ‌ಎಂಸಿ). ಅಂದರೆ ನೇತ್ರಾವತಿ ನದಿಯಿಂದ ಮಾತ್ರ ಅರಬ್ಬೀ ಸಮುದ್ರ ಜೀವಿಸಿಲ್ಲ. ಮುಂಗಾರು ಮಳೆಯ ಸಂದರ್ಭದಲ್ಲಿ ಈ ಜೀವನದಿಯಿಂದ ಪ್ರತಿದಿನ ೪೧೫ ಟಿ‌ಎಂಸಿಯಷ್ಟು ನೀರು ಸಮುದ್ರದ ಪಾಲಾದರೆ, ಉಳಿದ ೨೧ ನದಿಗಳು ಮತ್ತು ಅನೇಕ ಹಳ್ಳಗಳಿಂದ ೨೪೦೦ ಟಿ‌ಎಂಸಿಯಷ್ಟು ಸಿಹಿ ನೀರು ಸಮುದ್ರದಲ್ಲಿ ಕರಗುತ್ತದೆ. ಈ ಅಂಕಿ ಅಂಶಗಳನ್ನು ಏಕೆ ನಿಮ್ಮ ಮುಂದೆ ಇಡಲು ಇಚ್ಚಿಸುತ್ತೇನೆ ಎಂದರೆ, ವಿನಾಯಕ ಭಟ್ಟರು ತಮ್ಮ ಲೇಖನದಲ್ಲಿ ಈ ಯೋಜನೆಯಿಂದ ಸಮುದ್ರದ ಉಪ್ಪಿನಾಂಶ ಹೆಚ್ಚಾಗುತ್ತದೆ ಹಾಗೂ ನೇತ್ರಾವತಿ ನದಿಗೆ ಸಮುದ್ರದ ನೀರು ನುಗ್ಗುವುದರಿಂದ ನದಿಯ ಉಪ್ಪಿನಾಂಶವು ಹೆಚ್ಚಾಗುತ್ತದೆ ಎಂದಿದ್ದಾರೆ. ಈ ಯೋಜನೆಗೆ ನೇತ್ರಾವತಿ ನದಿಯಿಂದ ಕೇವಲ ೪೦ ಟಿ.ಎಂ.ಸಿ ನೀರನ್ನು ಮಾತ್ರ ಬಳಸುತ್ತೇವೆ. ಅಂದರೆ ನೇತ್ರಾವತಿಯ ಮಳೆಗಾಲದ ೪೧೫ ಟಿ.ಎಂ.ಸಿ.ಯಲ್ಲಿ ಕೇವಲ ಶೇ.೧೦ರಷ್ಟು ನೀರು ಕಡಿಮೆಯಾಗುವುದರಿಂದ ನದಿಯ ನೀರಿನ ಲವಣಾಂಶಗಳಾಗಲಿ ಅಥವಾ ಉಪ್ಪಿನಾಂಶವಾಗಲಿ ಅಥವಾ ಸಿಹಿ ನೀರಿನ ಜೀವರಾಶಿಯ ಆಹಾರಕ್ಕಾಗಲಿ ತೊಂದರೆಯಾಗುತ್ತದೆನ್ನುವುದು ಹಾಸ್ಯಾಸ್ಪದ. ಮತ್ತೊಂದು ಅವರ ಪ್ರಶ್ನೆಯೆಂದರೆ, ಸಮುದ್ರಕ್ಕೆ ಸೇರುವ ನದಿ ನೀರು ಕಡಿಮೆಯಾದರೆ ಸಮುದ್ರದ ಉಪ್ಪಿನಾಂಶ ಹೆಚ್ಚಾಗುವ ಆತಂಕ. ನೇತ್ರಾವತಿ ನದಿ ಸಮುದ್ರ ಸೇರುವ ಆಜು ಬಾಜಿನಲ್ಲಿ ಸುಮಾರು ೨೦೦೦ ಟಿ.ಎಂ.ಸಿ.ಯಷ್ಟು ನೀರು ಉಳಿದ ೨೧ ನದಿಗಳಿಂದ ಹಾಗು ಅನೇಕ ಹಳ್ಳಗಳಿಂದ ಮಳೆಗಾಲದಲ್ಲಿ ಸೇರುತ್ತದೆ. ಇದಲ್ಲದೆ ಸಮುದ್ರದ ಸಾವಿರಾರು ಚದರ ಕಿ.ಮಿ.ಗಳ ಮೇಲೆ ೪೫೦೦ ಮಿ.ಮಿ.ಗಿಂತ ಹೆಚ್ಚು ಮಳೆ ಬೀಳುವುದರಿಂದ ಸಾವಿರಾರು ಟಿ.ಎಂ.ಸಿ.ಯಷ್ಟು ಸಿಹಿ ನೀರು ಸಮುದ್ರಕ್ಕೆ ಸೇರುತ್ತಿರುವಾಗ ಸಮುದ್ರದ ಉಪ್ಪಿನಾಂಶ ಹೆಚ್ಚಾಗಿ ಮೀನುಗಾರರ ಜೀವನೋಪಾಯಕ್ಕೆ ತೊಂದರೆಯಾಗುತ್ತದೆ ಎಂದು ವಾದಿಸುವವರಿಗೆ ಏನೆನ್ನಬೇಕೊ ನನಗೆ ತಿಳಿಯುತ್ತಿಲ್ಲ. ಏಕೆಂದರೆ ಅರಬ್ಬೀ ಸಮುದ್ರದಂತಹ ಅಕ್ಷಯಪಾತ್ರೆಗೆ ಅಸಂಖ್ಯಾತ ನದಿಗಳ ನೀರು, ಆಕಾಶದಿಂದ ಬೀಳುವ ಮಳೆಯೆ ನೀರು ಬಂದು ಸೇರುತ್ತಲೇ ಇರುತ್ತದೆ. ಹೇಗೆ ಮನುಷ್ಯನಿಗೆ ತನ್ನ ದೇಹದಲ್ಲಾಗುವ ಸಣ್ಣಪುಟ್ಟ ಶಾರೀರಿಕ ಏರುಪೇರನ್ನು ಸಹಿಸಿಕೊಳ್ಳುವ ವ್ಯವಸ್ಥೆ ಇದೆಯೋ ಅದೆ ರೀತಿ ಪರಿಸರದ ವ್ಯವಸ್ಥೆಯಲ್ಲೂ ಇಂತಹ ಸಣ್ಣಪುಟ್ಟ ಏರುಪೇರನ್ನು ಸಹಿಸಿಕೊಳ್ಳಲು ವ್ಯವಸ್ಥೆ ಇದೆ.
ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಬದುಕಬಲ್ಲ ಜೀವರಾಶಿಗೆ ಹಾಗು ಔಷದೀಯ ಸಸ್ಯರಾಶಿಗೆ ತೊಂದರೆಯಾಗುವ ಆತಂಕ- ಈ ಯೋಜನೆಯಲ್ಲಿ ಪಶ್ಚಿಮ ಘಟ್ಟಗಳ ತುದಿಯ ನೇತ್ರಾವತಿ ನದಿಯ ಒಟ್ಟು ಜಲಾಯನ ಪ್ರದೇಶದ ಶೇ.೧೦ರಷ್ಟು ಪ್ರದೇಶದಲ್ಲಿ ಮಾತ್ರ ಮಳೆ ಕೊಯ್ಲು ಮಾಡಲಾಗುತ್ತದೆ. ಉಳಿದ ಶೇ.೯೦ ಜಲಾಯನ ಪ್ರದೇಶಲ್ಲಿ ವರ್ಷದ ೧೫೦ ದಿನಗಳಲ್ಲಿ ಕನಿಷ್ಠ ೪೪೦೦ ಮಿಮೀ ಮಳೆ ಬೀಳುವುದರಿಂದ ಜೀವರಾಶಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಪರಿಸರವಾದದಲ್ಲಿ ಪ್ರಾಣಿ, ಸಸ್ಯಗಳ ಸುರಕ್ಷತೆಯ ಬಗ್ಗೆ ಒಂದು ವಾದವಾದರೆ ಮಾನವ ಸುರಕ್ಷತೆಯ ಬಗ್ಗೆ ಇನ್ನೊಂದು ವಾದ. ಮಾನವ ಜಾತಿ ಅತಿ ಬುದ್ಧಿಜೀವಿಯಾಗಿರುವುದರಿಂದ ನಾವು ತೆಗೆದುಕೊಳ್ಳುವ ನಿರ್ಣಯಗಳಿಂದ ಇತರೆ ಜೀವರಾಶಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಯಾವುದೇ ಒಂದು ಕಡೆ ನಮ್ಮ ವಾದ ವಾಲುವುದು ಸರಿಯಲ್ಲ. ಏಕೆಂದರೆ ಭಾರತದ ಸಂವಿಧಾನದ ಅಡಿಯಲ್ಲಿ ಎಲ್ಲ ಪ್ರಜೆಗಳಿಗೂ ಇತರೆ ಜೀವರಾಶಿಯೊಡನೆ ಬದುಕುವ ಹಕ್ಕನ್ನು ಕಲ್ಪಿಸಲಾಗಿದೆ.

೧೯೧೩ರಲ್ಲಿ ನೇತ್ರಾವತಿ ನದಿ ಬತ್ತಿತ್ತು ಎಂದು ಮಾತ್ರ ತಿಳಿಸಲಾಗಿದೆ. ಆದರೆ ವಿನಾಯಕ್ ಅವರು ಎರಡು ಮುಖ್ಯ ಪ್ರವಾಹಗಳ (೧೯೨೪, ೧೯೭೪) ಬಗ್ಗೆ ತಿಳಿಸೇ ಇಲ್ಲ. ಆ ಎರಡು ಸಂದರ್ಭದಲ್ಲಿ ಬಂಟ್ವಾಳವು ಸಂಪೂರ್ಣ ಮುಳುಗಿ ಅಲ್ಲಿದ್ದ ನಿವಾಸಿಗಳು ಗುಳೆ ಎದ್ದು ಹೋಗಿದ್ದರು. ಅಷ್ಟಲ್ಲದೆ ಈ ನದಿಯಿಂದ ಅನೇಕ ಸಲ ತೀರದ ಪ್ರದೇಶಗಳು ಪ್ರವಾಹ ಪೀಡೆಯಿಂದ ಬಳಲಿದೆ.
ಅರಣ್ಯನಾಶದ ಬಗ್ಗೆ ಆತಂಕ- ಇದುವರೆಗೆ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಆಗಿರುವ ಅರಣ್ಯ ನಾಶಗಳ ಕೆಲವು ವಿವರಗಳು ಈ ಮುಂದೆ ಕೊಡಲಾಗಿದೆ. ಅರಣ್ಯ ನಾಶದ ಮುಖ್ಯ ಕಾರಣಗಳೆಂದರೆ ಜಮೀನಿನ ಒತ್ತುವರಿ ಮತ್ತು ಮರಗಳ ಕಳ್ಳ ಸಾಗಾಣಿಕೆ. ಇದಲ್ಲದೆ ಕೊಂಕಣ ರೈಲು ಯೋಜನೆಯ ಅನುಷ್ಠಾನದಲ್ಲಿ ೨೦೦೦ ಹೆಕ್ಟೆರುಗಳಿಗಿಂತ ಹೆಚ್ಚು ಅರಣ್ಯ ನಾಶವಾದದ್ದಲ್ಲದೆ, ೪೦ ಸುರಂಗಗಳ ಕೊರೆಯುವಿಕೆಯಿಂದ ಹಲವಾರು ದೊಡ್ಡ ಪ್ರಮಾಣದ ಭೂ ಕುಸಿತಗಳಾಗಿವೆ. ಇದಲ್ಲದೆ ಸಕಲೇಶಪುರದಿಂದ- ಮಂಗಳೂರಿನವರೆಗೆ ಕೈಗೆತ್ತಿಕೊಳ್ಳುವ ಡಬಲ್ ರೋಡ್ ರಚನೆಯಿಂದಲೂ ಸಹ ಅರಣ್ಯ ನಾಶವಾಗುವುದಲ್ಲದೆ, ಭೂ ಕುಸಿತ ಸಂಭವಿಸುವ ಸಾಧ್ಯತೆಗಿಳಿವೆ. ಹಾಗೆಂದು ಅಭಿವೃದ್ಧಿಯ ವಿಚಾರದಲ್ಲಾಗಲಿ ಅಥವಾ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲವು ತ್ಯಾಗ ಬಲಿದಾನಗಳನ್ನು ಮಾಡಬೇಕಾಗುತ್ತದೆ. ಯಾವುದೇ ಒಂದು ಮರವನ್ನು ಕಡಿದರೆ ಅದರ ಬದಲಿಗೆ ಮತ್ತೊಂದು ಗಿಡ ನೆಡಬೇಕೆಂದು ಒ‌ಔ‌ಇ‌ಈ ತಿಳಿಸಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದರ ಲಿಖಿತ ಭರವಸೆಯ ವಿನಃ ಕೇಂದ್ರ ಅರಣ್ಯ ಇಲಾಖೆ ಇಂತಹ ಯೋಜನೆಗಳಿಗೆ ಅವಕಾಶ ಕೊಡುವುದಿಲ್ಲ.

ಶೋಲಾ ಅರಣ್ಯದ ನಾಶ- ಕೆಲವು ಪರಿಸರವಾದಿಗಳ ಪ್ರಕಾರ ಪಶ್ಚಿಮ ಘಟ್ಟಗಳ ತುದಿಯಲ್ಲಿರುವ ಮಾರ್ಶ್‌ಲ್ಯಾಂಡ್ಸ್ ಹಾಗೂ ನೀರಾವರಿ ಭೂಮಿಗಳು ಮಳೆಯ ನೀರನ್ನು ಸ್ಪಂಜಿನಂತೆ ಹೀರಿ ಭೂಮಿಯ ಒಳ ಪದರಗಳಲ್ಲಿರುವ ಕಾಲುವೆಗಳಿಗೆ ನೀರನ್ನು ಒದಗಿಸುವುದರ ಮೂಲಕ ಸಣ್ಣ ನೀರಿನ ಝರಿಗಳಿಗೆ ಕಾರಣವಾಗುತ್ತದೆ. ೧೦೩೦ ಮೀಟರ್ ಎತ್ತರದಲ್ಲಿ ಈ ಯೋಜನೆಯಲ್ಲಿ ಮಳೆ ಕೊಯ್ಲು ಮಾಡುವುದರಿಂದ ಈ ಪರಿಸರ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂಬ ವಾದವಿದೆ. ಈ ಯೋಜನೆಯಲ್ಲಿ ರನ್ ಆಫ್ ವಾಟರ್ ಅಥವಾ ಭೂಮಿಯ ಮೇಲೆ ಬಿದ್ದು ಹರಿದು ಹೋಗುವ ನೀರನ್ನು ಕೊಯ್ಲು ಮಾಡುವುದರಿಂದ, ಸ್ಪಂಜ್‌ಗಳಂತೆ ವರ್ತಿಸುವ ವೆಟ್‌ಲ್ಯಾಂಡ್‌ಗಳಿಗೆ ಅಥವಾ ಸಣ್ಣ ಝರಿಗಳ ಉತ್ಪಾದನೆಗೆ ಯಾವುದೇ ಧಕ್ಕೆಯಾಗುವುದಿಲ್ಲ.

ಈ ಯೋಜನೆಗಾಗಿ ಕನಿಷ್ಠ ೦.೫ ಮೀ.ನಿಂದ ಗರಿಷ್ಠ ೫ ಮೀ ಪ್ರಮಾಣದ ಪ್ರೀ-ಸ್ಟ್ರೆಸ್ಡ್ ಆರ್.ಸಿ.ಸಿ. ಕೊಳವೆಗಳನ್ನು ಬಳಕೆ ಮಾಡಲಾಗುತ್ತದೆ. ನೂತನ ಮಾದರಿಯ ತಂತ್ರ ಜ್ಞಾನದಿಂದ ಕೊಳವೆಗಳನ್ನು ಅಳವಡಿಸುವುದರಿಂದ ಯಾವುದೇ ರೀತಿಯ ಬೃಹತ್ ಯತ್ರೋಪಕರಣಗಳ ಬಳಕೆಯ ಅವಶ್ಯಕತೆ ಇರುವುದಿಲ್ಲ. ನನ್ನ ಲೇಖನದಲ್ಲಿ ಈ ಪೈಪ್ ಅಳವಡಿಕೆಗೆ ಬೇಕಾಗುವ ಸ್ಥಳ ೭೩೦ ಹೆಕ್ಟೇರ್ ಎಂದು ಬರೆದಿದ್ದೆ. ಕ್ಷಮಿಸಿ ಅದು ಕಣ್ ತಪ್ಪಿನಿಂದ ಆದದ್ದು- ೧೮೦ ಹೆಕ್ಟೇರ್‌ನಷ್ಟು ಮಾತ್ರ ಬೇಕಾಗುತ್ತದೆ (ಪೂರಕ ದಾಖಲೆಗಳು ನನ್ನ ಬಳಿ ಇವೆ). ಬೇಕಾಗುವ ಕಾಲುವೆಯ ಉದ್ದ ಮತ್ತು ಅಗಲವನ್ನು ಲೆಕ್ಕಹಾಕಿದರೆ ೧೮೦ ಹೆಕ್ಟೇರ್‌ಗಳಷ್ಟು ಪ್ರದೇಶ ಮಾತ್ರ ಬೇಕಾಗುತ್ತದೆ. ಈ ೧೮೦ ಹೆಕ್ಟೇರ್‌ಗಳಲ್ಲಿ ಅರಣ್ಯ ಪ್ರದೇಶವಲ್ಲದೆ, ಕಾಫಿ ಹಾಗು ರಬ್ಬರ್ ಎಸ್ಟೇಟ್‌ಗಳು, ಸ್ಕ್ರಬ್
ಏರಿಯಾ ಮತ್ತು ಹಳ್ಳ, ಮಾರ್ಜಿನ್‌ಗಳು ಸೇರಿವೆ.

ಪಶ್ಚಿಮ ಘಟ್ಟದಂತಹ ಅಪೂರ್ವ ಸಂಪತ್ತು ಹೊಂದಿರುವ ಈ ಜಿಲ್ಲೆಗಳು ಬೇಸಿಗೆಯಲ್ಲಿ ನೀರಿನ ಕೊರತೆ ಎದುರಿಸುತ್ತಿವೆ, ಅದರ ಬಗ್ಗೆ ನಮಗೂ ಕಾಳಜಿ ಇದೆ. ಇತ್ತೀಚೆಗೆ ೬೦,೦೦೦ ಜನಸಂಖ್ಯೆ ಇರುವ ಕುಂದಾಪುರಕ್ಕೆ ಸರ್ಕಾರ ೫೦ ಕೋಟಿ ಕೊಟ್ಟಿರುವುದು ಸ್ವಾಗತಾರ್ಹ. ಅಂದರೆ ಪ್ರತಿ ತಲೆಗೆ ೮,೦೦೦ ರೂಗಳು. ಇದರ ಆಧಾರಿತ ೬೦ ಲಕ್ಷ ಜನಸಂಖ್ಯೆ ಇರುವ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಿಗೆ ೫೦೦೦ ಕೋಟಿಗಳನ್ನು ಮಂಜೂರು ಮಾಡಿದರೆ ಈ ಜಿಲ್ಲೆಗಳಲ್ಲಿ ನೀರಿನ ಬವಣೆಯನ್ನು ಶಾಶ್ವತವಾಗಿ ಪರಿಹರಿಸಬಹುದು. ಏಕೆಂದರೆ ೪೪೦೦ ಮಿಮೀ ಮಳೆಯಾಗುವ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವವಿದೆ ಎಂದರೆ ಇಷ್ಟು ವರ್ಷ ನಮ್ಮನಾಳಿದ ಸರ್ಕಾರಗಳಿಗೆ ನಾಚಿಕೆಯಾಗಬೇಕು. ಈ ರಾಜಕಾರಣಿಗಳ ಬೇಜವಾಬ್ದಾರಿಯಿಂದ ಮಳೆಗಾಲದಲ್ಲಿಯೂ ನೀರಿಗಾಗಿ ಪರೆದಾಡುವ ಪರಿಸ್ಥಿತಿ ನಮ್ಮ ಬರಪೀಡಿತ ಜಿಲ್ಲೆಗಳಲ್ಲಿ ತಲೆದೋರಿದೆ. ಇದನ್ನು ಸಮಸ್ತ ಕನ್ನಡಿಗರೂ ಬಲ್ಲರು. ಬೆಳೆಯುತ್ತಿರುವ ನಗರವಾದ ಮಂಗಳೂರನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಮಾಡಿರುವುದರಿಂದ ದಿನವೊಂದಕ್ಕೆ ೫೦೦ ಮಿಲಿಯನ್ ಗ್ಯಾಲನ್‌ಗಳಷ್ಟು ನೀರು ಬೇಕೆಂದು ಹೇಳಿದ್ದಾರೆ! ಇದು ಸತ್ಯಕ್ಕೆ ದೂರವಾದುದು. ನನಗೆ ತಿಳಿದಿರುವ ಮಟ್ಟಿಗೆ ೮೫ ಲಕ್ಷ ಜನ ಸಂಖ್ಯೆಯಿರುವ ಬೆಂಗಳೂರಿಗೆ ದಿನವೊಂದಕ್ಕೆ ಬೇಕಾಗಿರುವ ನೀರಿನ ಪ್ರಮಾಣ ಕೇವಲ ೧೭೭ ಮಿಲಿಯನ್ ಗ್ಯಾಲನ್ ನೀರು. ೫೦೦ ಮಿ.ಗ್ಯಾಲನ್/ಪ್ರತಿ ದಿನಕ್ಕೆ ಬೇಕಾದರೂ ವರ್ಷಕ್ಕೆ ೩೧ ಟಿ.ಎಂ.ಸಿ.ಯಾಗುತ್ತದೆ? ೩೦೧೬ ಟಿ.ಎಂ.ಸಿ. ನೀರು ಸಮುದ್ರಕ್ಕೆ ಪಾಲಾಗುವುದನ್ನು ತಡೆದು ೬೦ ಟಿ‌ಎಂಸಿಯಷ್ಟು ಮಳೆ ನೀರನ್ನು ಶೇಖರಿಸಿದರೆ ಇಡಿ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಿಗೆ ಶಾಶ್ವತ ನೀರಿನ ಪೂರೈಕೆ ಮಾಡಬಹುದು.

ವಿನಾಯಕ್ ಅವರು ತಿಳಿಸಿರುವಂತೆ ನಾನು ದೂರದ ಬ್ರಿಟನ್ನಿನಲ್ಲಿ ಕುಳಿತು ಈ ಯೋಜನೆಯ ಬಗ್ಗೆ ಮಾತನಾಡುತ್ತಿಲ್ಲ. ದೆಹಲಿಯಲ್ಲಿರುವ ಮಿತ್ರರು ಕರ್ನಾಟಕ್ಕೆ ಬರುವುದಕ್ಕಿಂತ ಹೆಚ್ಚು ಸಲ ಈ ಕೆಲಸಕ್ಕಾಗಿ ಭಾರತಕ್ಕೆ ಬರುತ್ತಿರುತ್ತೇನೆ. ನಾನು ಪ್ರತಿಬಾರಿ ಬಂದಾಗಲು ಇವರು ನನ್ನ ಜೊತೆ ಬಂದರೆ ನಾನು ಸುತ್ತಾಡಿರುವ ಹಳ್ಳಿಗಳ ನಿಜ ಪರಿಸ್ಥಿತಿಯನ್ನು ಕಾಣಬಹುದು. ಯಾರೇ ಆಗಲಿ ಸತ್ತ ವ್ಯಕ್ತಿಯಿಂದ ಕಣ್ಣನ್ನು ಪಡೆಯುತ್ತಾರೆಯೇ ವಿನಃ ಬದುಕಿರುವ ವ್ಯಕ್ತಿಯಿಂದ ಅಲ್ಲ. ಮುಂಗಾರು ಮಳೆ ಸಂದರ್ಭದಲ್ಲಿ ಸಮುದ್ರಕ್ಕೆ ಹರಿದು ಹೋಗುವ ನೇತ್ರಾವತಿನದಿಯ ನೀರಿನಲ್ಲಿ ಕೇವಲ ಶೇ.೧೦ರಷ್ಟು ನೀರನ್ನಷ್ಟೇ ಬರಪೀಡಿತ ಪ್ರದೇಶಗಳು ಕೇಳುವುದು. ಈ ಯೋಜನೆ ಜಾರಿಯಾದರೆ ಬರಪೀಡಿತ ಜಿಲ್ಲೆಗಳು ಶಾಶ್ವತವಾಗಿ ಮರಭೂಮಿಯಾಗುವುದು ತಪ್ಪುತ್ತದೆ.
ಡಾ.ಮಧು ಸೀತಪ್ಪ

ಬರಪೀಡಿತ ಜಿಲ್ಲೆಗಳಿಗೆ ಬೇಕು ನೇತ್ರಾವತಿಯ ಬೈಪಾಸ್ ಸರ್ಜರಿ



೪೪೦೦ ಮಿ.ಮಿ. ಮಳೆಯಾಗುವ ಕರಾವಳಿ ಪ್ರದೇಶದಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವವಿರುವಾಗ ಸರಾಸರಿ ೬೭೪ ಮಿ.ಮೀ. ಮಳೆಯಾಗುವ ಬರಡು ಭೂಮಿಯಲ್ಲಿ ಮಳೆಗಾಲದಲ್ಲೂ ನೀರಿಗೆ ಪರದಾಡುವ ಪರಿಸ್ಥಿತಿ ಎಂದರೆ ಆಶ್ಚರ್ಯವಿಲ್ಲ. ಸರ್ಕಾರದ ಅಂಕಿ ಅಂಶಗಳ ಅನ್ವಯ ಬರಪೀಡಿತ ಜಿಲ್ಲೆಗಳಲ್ಲಿ ೪೮೬ರಿಂದ ೭೦೦ ಮಿ. ಮೀ. ಮಳೆಯಾಗುತ್ತದೆ. ಕನಿಷ್ಠ ೫೦ ಮಿ. ಮೀ. ಮಳೆ ರಭಸವಾಗಿ ಮೂರು ಗಂಟೆ ಕಾಲ ಸುರಿದರೆ ಕೆರೆಗಳಿಗೆ ನೀರು ಬರುತ್ತದೆ. ಈ ಜಿಲ್ಲೆಗಳಲ್ಲಿ ವಾರ್ಷಿಕ ೧೭ರಿಂದ ೪೫ ದಿನಗಳು ಮಳೆಯಾಗುತ್ತದೆ. ಎರಡು ಗಂಟೆಗೂ ಹೆಚ್ಚು ಮಳೆಯಾಗುವ ದಿನಗಳು ತೀರ ವಿರಳ. ಮಳೆಯಾದರೂ ಈ ಬಿಸಿಲುನಾಡಿನಲ್ಲಿ ನೀರು ಆವಿಯಾಗುವುದರಿಂದ, ಭೂಮಿಗೆ ಜಿನುಗುವುದರಿಂದ ಹಾಗು ಅಂತರ್ಜಲ ಇಂಗಿರುವುದರಿಂದ ಕೆರೆಗಳಲ್ಲಿ ನೀರು ಕೆಲವು ತಿಂಗಳುಗಳಿಗಿಂತ ಹೆಚ್ಚು ನಿಲ್ಲಲಾರದು. ಸತತವಾಗಿ ಹಾಗು ನಿರ್ದಿಷ್ಟ ಕಾಲದಲ್ಲಿ ಮಳೆಯಾಗದ ಕಾರಣ ಹಾಗು ಮಳೆಯಾಗುವ ದಿನಗಳು ಕ್ರಮೇಣ ಕಡಿಮೆಯಾಗುತ್ತಿರುವುದರಿಂದ ಕೆರೆಗಳಲ್ಲಿ ನೀರು ಶೇಖರಣೆಯಾಗುತ್ತಿಲ್ಲ. ಜಿಲ್ಲೆಗಳಲ್ಲಿ ಒಟ್ಟು ೧೫,೪೪೨ ಕೆರೆಗಳಿವೆ. ೨೦೦೬ರಲ್ಲಿ ಶೇ.೯೦ರಷ್ಟು ಕೆರೆಗಳಿಗೆ, ೨೦೦೭ರಲ್ಲಿ ಶೇ.೪೫ ಹಾಗೂ ೨೦೦೮ರಲ್ಲಿ ಶೇ.೯೦ರಷ್ಟು ಕೆರೆಗಳಿಗೆ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಒಂದು ತೊಟ್ಟು ನೀರು ಸಹ ಬಂದಿಲ್ಲ. ಇಲ್ಲಿ ನಾನು ರಾಜಸ್ತಾನದ ಲಾಪೋಡಿಯ ಗ್ರಾಮವಾಗಲಿ ಅಥವಾ ಪಾಕಿಸ್ತಾನದ ಹೆಸರಿಲ್ಲದ ಪ್ರದೇಶದ ಬಗ್ಗೆಯಾಗಲಿ ಅಥವಾ ನಂದಿ ಬೆಟ್ಟದ ಸಣ್ಣ ಹಳ್ಳದ ಬಗ್ಗೆ ಬರೆಯುತ್ತಿಲ್ಲ. ೩ ಕೋಟಿ ಜನಸಂಖ್ಯೆಯ ಹಳೆ ಮೈಸೂರಿನ ೧೪ ಬರಪೀಡಿತ ಜಿಲ್ಲೆಗಳ ೮೬ ತಾಲ್ಲೂಕುಗಳು ಹಾಗು ೩,೨೫೦೦೦ ಕೋಟಿ ಗೃಹ ಉತ್ಪನ್ನ ಮಾಡುವ ಬೆಂಗಳೂರು ನಗರದ ನೀರಿನ ಬವಣೆಯ ಬಗ್ಗೆ. ನಮ್ಮ ರಾಜ್ಯದಲ್ಲಿ ನೀರಿನ ಹಂಚಿಕೆಯ ವಿಷಯದಲ್ಲಿ ಸಾಕಷ್ಟು ಅಸಮತೋಲನ ಆಗಿದೆ. ಹಳೆ ಮೈಸೂರು ಪ್ರಾಂತ್ಯಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ. ಆದುದರಿಂದಲೆ ೧೪ ಜಿಲ್ಲೆಗಳ ೮೬ ತಾಲ್ಲೂಕುಗಳು ಬರಪೀಡಿತವಾಗಿವೆ. ಪರಮಶಿವಯ್ಯನವರ ಯೋಜನೆ ಈ ಅಸಮತೋಲನವನ್ನು ನಿವಾರಿಸುವಲ್ಲಿ ಉಪಯೋಗವಾಗಬಹುದು. ಈ ಯೋಜನೆ ೮೬ ತಾಲ್ಲೂಕುಗಳಲ್ಲದೆ ಬೆಂಗಳೂರು ನಗರಕ್ಕೂ ನೀರನ್ನು ತರಲಿದೆ.
ಹಳೆ ಮೈಸೂರಿನ ೧೪ ಜಿಲ್ಲೆಗಳ ಪೈಕಿ (ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡು) ೩೭.೧೪ ಲಕ್ಷ ಹೆಕ್ಟೇರುಗಳಷ್ಟು ಭೂಮಿ ಬಿತ್ತನೆಯಾಗುವ ಪ್ರದೇಶ, ಅದರಲ್ಲಿ ೭.೨೫ ಲಕ್ಷ ಹೆಕ್ಟೇರುಗಳಷ್ಟು ಅಂದರೆ ಶೇ.೧೯%ರಷ್ಟು ಭೂಮಿಗೆ ನೀರಾವರಿ ದೊರತಿದೆ. ಕಾವೇರಿಯಿಂದ ಒಟ್ಟು ೭,೬೯,೯೮೮ ಹೆಕ್ಟೇರುಗಳಷ್ಟು ಭೂಮಿಗೆ ನೀರಾವರಿಯಾಗುತ್ತಿದೆ. ಕೆ.ಆರ್.ಎಸ್. ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶದ ವಿವಿಧ ಬೆಳೆಗಳಿಗೆ ೬೧.೨೦ ಟಿ.ಎಂ.ಸಿ.ಯಷ್ಟು ನೀರನ್ನು ನಾವು ಈಗಾಗಲೆ ಉಪಯೋಗಿಸುತ್ತಿದ್ದರೆ ಅದನ್ನು ೩೮.೯೮ ಟಿ.ಎಂ.ಸಿ.ಗೆ ಇಳಿಸಲು ಟ್ರಿಬ್ಯೂನಲ್ ಆದೇಶಿಸಿದೆ. ಕಾವೇರಿ ಟ್ರಿಬ್ಯೂನಲ್ ವರದಿಯಂತೆ ೨೭೦ ಟಿ.ಎಂ.ಸಿ.ಯಷ್ಟು ನೀರು ಕಾವೇರಿಯಿಂದ ದೊರೆತಿದ್ದರೂ ಅದರಲ್ಲಿ ೭೦ಚಟಿ.ಎಂ.ಸಿ.ಯಷ್ಟು ನೀರು ಕಾವೇರಿ ಜಲಾಯನ ಪ್ರದೇಶದಲ್ಲಿ ಬರುವ ಕೆರೆಗಳ ಲೆಕ್ಕದಲ್ಲಿದೆ. ನೀರಾವರಿ ಇಲಾಖೆಯ ಅನ್ವಯ ಕೆರೆಗಳಿಂದ ಕೇವಲ ೧೫ ಟಿ.ಎಂ.ಸಿ.ಯಷ್ಟು ನೀರು ಮಾತ್ರ ನಮಗೆ ದೊರಕುತ್ತಿದೆ. ಇದಲ್ಲದೆ ತಮಿಳುನಾಡಿಗೆ ಕೇಂದ್ರ ಸರ್ಕಾರ ಬಿಳೆಗೊಂಡ್ಲುವಿನಲ್ಲಿ ಅಳವಡಿಸಿರುವ ಮಾಪನದ ಅನ್ವಯ ೧೪೮ ಟಿ.ಎಂ.ಸಿ.ಯಷ್ಟು ಹೆಚ್ಚುವರಿ ಪ್ರತಿ ಸಾಲು ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ (೧೯೦+೧೪೮). ಅಂದರೆ ತಮಿಳುನಾಡಿಗೆ ಕಾವೇರಿ ಟ್ರಿಬ್ಯೂನಲ್ ವರದಿಯಂತೆ ೧೯೦ ಟಿ.ಎಂ.ಸಿ. ನೀರಲ್ಲದೆ ೧೪೮ ಟಿ.ಎಂ.ಸಿ.ಯಷ್ಟು ಹೆಚ್ಚುವರಿ ನೀರು ಹರಿದು ಹೋಗುತ್ತಿದೆ. ಈ ಹೆಚ್ಚುವರಿ ನೀರು ನ್ಯಾಯಯುತವಾಗಿ ಉತ್ಪತ್ತಿಯಾಗುವ ರಾಜ್ಯಕ್ಕೆ ಸೇರಬೇಕಾದದ್ದು. ಟ್ರಿಬ್ಯೂನಲ್ ವರದಿಯು ಸಹ ಹೆಚ್ಚುವರಿ ನೀರು ಯಾರಿಗೆ ಸೇರಬೇಕೆಂದು ಎಲ್ಲೂ ಹೇಳಿಲ್ಲ. ಆದರೆ ೨೦೦೫ರಲ್ಲಿ ಡಿ.ಎಂ.ಕೆ.ಯನ್ನು ಮೆಚ್ಚಿಸಲು ಯು.ಪಿ.ಎ. ಸರ್ಕಾರ ಹೆಚ್ಚುವರಿ ನೀರನ್ನು ಹೇಗೆ ಹಂಚಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ಸಲಹೆ ಕೇಳಿದೆ. ಈ ವಿಚಾರವನ್ನು ಸರ್ವೋಚ್ಛ ನ್ಯಾಯಾಲಯ ಇನ್ನು ಕೈಗೆತ್ತಿಕೊಂಡಿಲ್ಲ. ತಮಿಳುನಾಡಿಗೆ ಈ ವಿವಾದ ನ್ಯಾಯಾಲಯದಲ್ಲಿ ಹೆಚ್ಚು ದಶಕಗಳು ಉಳಿದಷ್ಟು, ೧೪೮ ಟಿ.ಎಂ.ಸಿ.ಯಷ್ಟು ಹೆಚ್ಚುವರಿ ನೀರು ಪ್ರತಿಸಾಲು ಹರಿದು ಹೋಗುತ್ತಿರುತ್ತದೆ. ಕಳೆದ ಮೂರು ದಶಕಗಳ ನಮ್ಮ ರಾಷ್ಟ್ರದ ರಾಜಕಾರಣ ಗಮನಿಸಿದರೆ ಯಾವುದೇ ಪಕ್ಷ ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯಬೇಕಾದರೆ ತಮಿಳುನಾಡಿನ ಪಕ್ಷಗಳ ಬೆಂಬಲ ಅತ್ಯಗತ್ಯ. ಅಂದರೆ ಕಾವೇರಿಯಿಂದ ಹಳೆ ಮೈಸೂರಿನ ಬರಪೀಡಿತ ಜಿಲ್ಲೆಗಳು ನೀರು ಪಡೆಯುವುದು ನನಸಾಗದ ಕನಸು.
ಕೃಷ್ಣಾ ನದಿಯಿಂದ ನಮ್ಮ ರಾಜ್ಯಕ್ಕೆ ೭೩೪ ಟಿ.ಎಂ.ಸಿ. ಸ್ಕೀಮ್ `ಎ'ನಿಂದ ಹಾಗೂ ೨೭೮ ಟಿ.ಎಂ.ಸಿ. ಸ್ಕೀಮ್ `ಬಿ'ನಿಂದ ಮಂಜೂರಾಗಿದೆ. ಅಂದರೆ ಒಟ್ಟು ೧೦೧೨ ಟಿ.ಎಂ.ಸಿ.ಯಷ್ಟು ನೀರು. ಇದರಲ್ಲಿ ತುಂಗಾಭದ್ರಾ ನದಿಯ ೪೫೦ ಟಿ.ಎಂ.ಸಿ.ಯಷ್ಟು ನೀರು ಸೇರಿದೆ. ಹಳೆ ಮೈಸೂರಿಗೆ ಸ್ಕೀಮ್ `ಎ'ನಿಂದ ೯೬ ಹಾಗೂ ಸ್ಕೀಮ್ `ಬಿ'ನಿಂದ ೨೨ ಟಿ.ಎಂ.ಸಿ.ಯಷ್ಟು ದೊರೆತಿದೆ. ನ್ಯಾಯಯುತವಾಗಿ ಹಳೆ ಮೈಸೂರಿನ ಪಾಲಿನ ತುಂಗಭದ್ರಾ ನದಿಯ ೪೫೦ರಲ್ಲಿ ಕನಿಷ್ಠ ೨೫೦ ಟಿ.ಎಂ.ಸಿ.ಯಷ್ಟಾದರೂ ನೀರು ಕೊಡಬೇಕಾಗಿತ್ತು. ೧೦೧೨ ಟಿ.ಎಂ.ಸಿ.ಯಲ್ಲಿ ಶೇ.೮೦ರಷ್ಟು ಹೈದರಾಬಾದ್ ಕರ್ನಾಟಕಕ್ಕೆ ನಮ್ಮ ಸರ್ಕಾರ ಕೊಟ್ಟರೆ, ಉಳಿದ ಶೇ.೧೦% (೧೦೦ ಟಿ.ಎಂ.ಸಿ) ಆಂಧ್ರಪ್ರದೇಶಕ್ಕೆ ಹೋಗುತ್ತಿದೆ. ಇದಲ್ಲದೆ ತೆಲುಗು ಗಂಗಾ ಅಡಿಯಲ್ಲಿ ತಮಿಳುನಾಡಿನ ಚೆನ್ನೈಗೆ ಕೃಷ್ಣಾ ನದಿಯ ಕರ್ನಾಟಕದ ಪಾಲಿನಲ್ಲಿ ೫ ಟಿ.ಎಂ.ಸಿ. ನೀರು ಹೋಗುತ್ತಿದೆ. ಈಗಾಗಲೆ ಅಣೆಕಟ್ಟುಗಳನ್ನು ಕಟ್ಟಿ ಕಾಲುವೆಗಳ ಮೂಲಕ ನೀರನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಆಂಧ್ರಪ್ರದೇಶವು ರಾಷ್ಟ್ರದ ರಾಜಕಾರಣದಲ್ಲಿ ತಮಿಳುನಾಡಿನಷ್ಟೇ ಬಲಿಷ್ಠವಾದದ್ದು ಹಾಗೂ ಹೈದರಾಬಾದ್ ಕರ್ನಾಟಕ ಪ್ರಾಂತ್ಯ ನಮ್ಮ ರಾಜ್ಯ ರಾಜಕಾರಣದಲ್ಲಿ ಪ್ರಬಲವಾಗಿದೆ. ಕಾಂಗ್ರೆಸ್, ಜೆ.ಡಿ.ಎಸ್ ಹಾಗು ಬಿ.ಜೆ.ಪಿ. ಪಕ್ಷಗಳು ಈ ಪ್ರಾಂತ್ಯದ ಬೆಂಬಲವಿಲ್ಲದೆ ಸರ್ಕಾರ ರಚಿಸಲು ಸಾಧ್ಯವಿಲ್ಲ. ಅಂದರೆ ಬರಪೀಡಿತ ಹಳೆ ಮೈಸೂರು ಪ್ರಾಂತ್ಯದ ಎರಡನೆಯ ಕನಸು ಸಹ ಭಗ್ನವಾದಂತೆ.
ಹೇಮಾವತಿ ನದಿಯಿಂದ ಈಗಾಗಲೆ ೫೫ ಟಿ.ಎಂ.ಸಿ.ಯಷ್ಟು ನೀರನ್ನು ನಾವು ಬಳಸುತ್ತದ್ದೇವೆ. ಇದು ಕಾವೇರಿಯ ಉಪನದಿಯಾಗಿರುವುದರಿಂದ ಕಾವೇರಿ ಟ್ರಿಬ್ಯೂನಲ್‌ನ ಭೂತಗನ್ನಡಿಯಡಿಯಲ್ಲಿ ಬರುತ್ತದೆ. ಟ್ರಿಬ್ಯೂನಲ್ ಕೇವಲ ೪೫ ಟಿ.ಎಂ.ಸಿ.ಯಷ್ಟು ನೀರನ್ನು ಮಾತ್ರ ಬಳಸಿ ಎಂದು ಆದೇಶಿಸಿದೆ. ಈಗಾಗಲೆ ಹೇಮಾವತಿ ಯೋಜನೆಯಡಿಯಲ್ಲಿ ಬರುವ ಪ್ರದೇಶಗಳಿಗೆ ನೀರುಣಿಸಲು ಸಾದ್ಯವಾಗುತ್ತಿಲ್ಲ. ಇರುವ ಒಂದೇ ಮಾರ್ಗವೆಂದರೆ ನೇತ್ರಾವತಿಯ ಬೃಹತ್ ಮಳೆ ಕೊಯ್ಲು ಯೋಜನೆ. ಆದುದರಿಂದಲೆ ನಾವು ಈ ಯೋಜನೆಯ ಅನುಷ್ಠಾನಕ್ಕೆ ಒತ್ತಾಯಿಸುತ್ತಿದ್ದೇವೆ. ಆದರೆ ನಮ್ಮನ್ನು ನೀತಿಗೆಟ್ಟವರು ಎಂದು ಕೆಲವರು ಬಣ್ಣಿಸಿದರೆ, ಇನ್ನು ಕೆಲವರು ಪರಿಸರ ವಿರೋಧಿಗಳೆಂಬ ಪಟ್ಟ ಕಟ್ಟಿದ್ದಾರೆ. ಪರಮಶಿವಯ್ಯನವರ ಯೋಜನೆಯಿಂದ ಬರಪೀಡಿತ ಜಿಲ್ಲೆಗಳಲ್ಲದೆ, ಬೆಂಗಳೂರು ನಗರಕ್ಕೂ ನೀರು ದೊರೆಯಲಿದೆ. ಶೇ.೯೦ರಷ್ಟು ಹೋಟೆಲ್ ಉದ್ಯಮದವರಲ್ಲದೆ ಸುಮಾರು ೮ ಲಕ್ಷ ಕರಾವಳಿಯ ಜನರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂಬುದನ್ನು ಅನಗತ್ಯ ಹೇಳಿಕೆಗಳು ಕೊಡುವ ಮುಂಚೆ ಈ ನಾಯಕರು ಯೋಚನೆ ಮಾಡಬೇಕು. ನಾನು ಈ ಲೇಖನದಲ್ಲಿ ವಿವರಿಸಿರುವಂತೆ ಬರಪೀಡಿತ ಜಿಲ್ಲೆಗಳ ನೀರಿನ ಬವಣೆಯ ನಿವಾರಣೆಗೆ ಒಂದು ಕಡೆ ತಮಿಳುನಾಡು, ಇನ್ನೊಂದು ಕಡೆ ಆಂಧ್ರ ಪ್ರದೇಶ (ಹೈದರಾಬಾದ್ ಕರ್ನಾಟಕ) ಹಾಗೂ ಕರಾವಳಿಯ ಪರಿಸರವಾದಿಗಳ ವಿರೋಧವಿದೆ. ಇದು ಹೇಗಿದೆಯೆಂದರೆ ಇತ್ತ ದರಿ, ಅತ್ತ ಪುಲಿ, ಹಿತ್ತಲಲ್ಲಿ ಮತ್ತೊಂದು ಪುಲಿಯೆಂಬಂತೆ.
ಪಶ್ಚಿಮ ಘಟ್ಟಗಳ ಪರಿಸರಕ್ಕೆ ಮಾರಕವಾದ ಗುಂಡ್ಯ ಯೋಜನೆಯ ವಿರೋಧಿಸಿದ ಲೇಖನಗಳಲ್ಲಿ ಪ್ರಥಮ ಲೇಖನ ನನ್ನದಾಗಿತ್ತು. ಇದಲ್ಲದೆ ಚೀನಾ ದೇಶ ಅಣ್ವಸ್ತ್ರಗಳಿಂದ ಹಿಮಾಲಯ ಪರ್ವತದಲ್ಲಿ ರಂಧ್ರ ಕೊರೆದು ಬ್ರಹ್ಮಪುತ್ರ ನದಿಯನ್ನು ತಿರುಗಿಸುವ ವಿರೋಧವಾಗಿಯೂ ನಾನು ಲೇಖನ ಬರೆದಿದ್ದೆ. ಇದಲ್ಲದೆ ವಿಶ್ವೇಶ್ವರ ಭಟ್ಟರು ಚೀನಾದಿಂದ ಬಂದ ಮೇಲೆ ಬ್ರಹ್ಮಪುತ್ರ ನದಿಯ ಬಗ್ಗೆ ಏನಾದರೂ ಪ್ರಸ್ತಾಪವಾಯಿತೆ ಎಂದು ಸಹ ವಿಚಾರಿಸಿದ್ದೇನೆ. ಬೆಳೆಯುತ್ತಿರುವ ಜನಸಂಖ್ಯೆ, ಆಹಾರ ಹಾಗೂ ನೀರಿನ ಕೊರತೆ ಮತ್ತು ದೇಶದ ಆರ್ಥಿಕ ಬೆಳೆವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಬರಪೀಡಿತ ಜಿಲ್ಲೆಗಳಂತೆ ನೀರಿನ ಬವಣೆಯನ್ನು ಎದುರಿಸುತ್ತಿರುವ ಉತ್ತರ ಚೀನಾದ ಹಳದಿ ನದಿ ಅಥವಾ ಯೆಲ್ಲೊ ರಿವರ್‌ಗೆ ದಕ್ಷಿಣದ ಯಾಂಗ್ಸೆ ನದಿಯಿಂದ ೨೦೦೦ ಕಿ.ಮೀ.ಗಳಿಗೂ ಹೆಚ್ಚು ದೂರಕ್ಕೆ ನೀರನ್ನು ಪಂಪ್ ಮಾಡಲಾಗುತ್ತಿದೆ. ಇದಲ್ಲದೆ ಏಷ್ಯಾ ಖಂಡದ ಬಹುತೇಕ ನದಿಗಳು ಉಗಮವಾಗುವ ಟಿಬೆಟಿಯನ್ ಪ್ಲಾಟೊನಿಂದ ಚೀನಾಕ್ಕೆ ಬಯಾಂಕ ಪರ್ವತಗಳಲ್ಲಿ ಅಣ್ವಸ್ತ್ರಗಳಿಂದ ಕಾಲುವೆಗಳನ್ನು ಮಾಡಿ ನೀರನ್ನು ಕೊಂಡೊಯ್ಯಲು ಚೀನಾ ಕಾಮಗಾರಿಯನ್ನು ಪ್ರಾರಂಭಿಸಿದೆ. ಇಷ್ಟಲ್ಲದೆ ಆಫ್ರಿಕಾ ಖಂಡದ ಇಥಿಯೋಪಿಯದಂತಹ ರಾಷ್ಟ್ರಗಳಲ್ಲಿ ಚೀನಾ ಅಲ್ಲದೆ ಭಾರತದ ಕಂಪನಿಗಳು ಕಡಿಮೆ ದರದಲ್ಲಿ ಆಹಾರ ಉತ್ಪಾದನೆಗೆ ಲಕ್ಷಾಂತರ ಹೆಕ್ಟೇರುಗಳಷ್ಟು ಜಮೀನನ್ನು ಖರೀದಿಸಿವೆ. ಸಾವಿರಾರು ಟಿ.ಎಂ.ಸಿ.ಯಷ್ಟು ಸಿಹಿ ನೀರು ನಮ್ಮ ರಾಷ್ಟ್ರದಲ್ಲಿ ಸಮುದ್ರ ಪಾಲಾಗುತ್ತಿದೆ. ಶೇ.೯೦ರಷ್ಟು ಮಂದಿ ನಮ್ಮ ರಾಷ್ಟ್ರದಲ್ಲಿ ವ್ಯವಸಾಯವನ್ನು ಅವಲಂಬಿಸಿದ್ದರೂ ವ್ಯವಸಾಯಕ್ಕೆ ಬೇಕಿರುವ ನೀರನ್ನೊದಗಿಸದೆ ರಾಷ್ಟ್ರಕ್ಕೆ ಅಗತ್ಯವಿರುವ ಧವಸದಾನ್ಯಗಳನ್ನು ಬೆಳೆಯಲಿಕ್ಕಾಗದೆ, ವಿಯೆಟ್ನಾಮ್, ಮಲೇಶಿಯಾದಿಂದ ಅಕ್ಕಿಯನ್ನು ಅಮದು ಮಾಡಿಕೊಳ್ಳುವ ಪರಿಸ್ಥಿತಿ ಭಾರತ ಎದುರಿಸುತ್ತಿದೆ. ಇನ್ನು ಮುಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಬನ್ ಕ್ರೆಡಿಟ್ ಜಾರಿಗೆ ಬರಲಿದೆ. ಅಂದರೆ ಪ್ರತಿ ದೇಶದಲ್ಲಿ ವಾಹನ ಹಾಗೂ ಕೈಗಾರಿಕೆಗಳಿಂದ ಭೂಮಿಗೆ ಉಗುಳುವ ಇಂಗಾಲವನ್ನು ಹೀರಲು ಮರಗಳನ್ನು ಬೆಳೆಸಬೇಕಾಗುತ್ತದೆ. ಅರ್ಥಿಕತೆ, ಆಹಾರ, ಕಾರ್ಬನ್ ಕ್ರೆಡಿಟ್, ಕೈಗಾರಿಕೆ, ವ್ಯವಸಾಯ ಹಾಗೂ ಮುಖ್ಯವಾಗಿ ಕುಡಿಯುವುದಕ್ಕೆ ನೀರು ಅತ್ಯವಶ್ಯಕ.
ಅಂಕಿ ಅಂಶಗಳ ಪ್ರಕಾರ ಹಳೆ ಮೈಸೂರಿನ ಬರಪೀಡಿತ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ೧೯೯೭ರಲ್ಲಿ ೨೪ ಮೀಟರ್ ಇದ್ದದ್ದು ೨೦೦೪ರಲ್ಲಿ ೪೧ ಮೀಟರುಗಳಿಗೆ ಕುಸಿದಿದೆ. ೫೭ ತಾಲ್ಲುಕುಗಳಲ್ಲಿ ಅಂರ್ತಜಲ ಸಂದಿಗ್ಧ ಮಟ್ಟಕ್ಕೆ ತಲುಪಿದೆ. ೧೪,೨೫೭ ವಸತಿ ಪ್ರದೇಶದಲ್ಲಿ ಫ್ಲೋರೈಡ್ ಹಾಗು ನೈಟ್ರೇಟ್ ಲವಣಗಳು ಹಾನಿಕಾರಕ ಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿವೆ. ೩೧.೨೦ ಲಕ್ಷ ಸಣ್ಣ ಹಾಗೂ ಅತಿ ಸಣ್ಣ ರೈತ ಕುಟುಂಬಗಳು ಜೀವನೋಪಾಯಕ್ಕೆ ವ್ಯವಸಾಯವನ್ನು ಅವಲಂಬಿಸಿದೆ. ವ್ಯವಸಾಯವಿರಲಿ ಕುಡಿಯಲು ಶುದ್ದ ನೀರಿಲ್ಲದೆ ತವಕಿಸುತ್ತಿವೆ. ಈ ಬರಪೀಡಿತ ಜಿಲ್ಲೆಗಳಿಗೆ ನೀರು ಬರುವ ಎಲ್ಲ ಮಾರ್ಗಗಳು ಮುಚ್ಚಿಹೋಗಿವೆ. ಈ ಪ್ರದೇಶಕ್ಕೆ ನೀರಿನ ಹಂಚಿಕೆಯ ವಿಚಾರದಲ್ಲಿ ರಾಜ್ಯ ಹಾಗು ಕೇಂದ್ರ ಸರ್ಕಾರಗಳಿಂದ ಅನ್ಯಾಯವಾಗಿದೆ. ಹೃದಯದಲ್ಲಿ ಹೇಗೆ ಟ್ರಿಪಲ್ ವೆಸೆಲ್ ಬ್ಲಾಕ್ ಆದಾಗ ಬೈಪಾಸ್ ಸರ್ಜರಿ ಅಗತ್ಯವೊ ಹಾಗೆ ಬರಪೀಡಿತ ಜಿಲ್ಲೆಗಳು ಸಾಯದೆ ಉಳಿಯ ಬೇಕಾದರೆ ಇರುವ ಒಂದೆ ಮಾರ್ಗ ಯಾವುದಾದರು ನದಿಯ ಬೈಪಾಸ್ ಸರ್ಜರಿ. ಏಕೆಂದರೆ ಬರಪೀಡಿತ ಜಿಲ್ಲೆಗಳಲ್ಲಿ ಅಂತರ್ಜಲ ಅಭಿವೃದ್ಧಿಯಾಗಬೇಕಾದರೆ, ಕೆರೆಗಳಲ್ಲಿ ೩೬೫ ದಿನ ಕನಿಷ್ಠ ೩ ಮೀಟರುಗಳಷ್ಟು ನೀರು ಸತತವಾಗಿ ೨೫ಕ್ಕೂ ಹೆಚ್ಚು ವರ್ಷಗಳು ನಿಲ್ಲಬೇಕು. ಒತ್ತುವರಿಯಾಗಿರುವ ಅರಣ್ಯ ಪ್ರದೇಶವನ್ನು ತೆರುವು ಮಾಡಿ ಶೇ.೮%ರಷ್ಟು ಇರುವ ಅರಣ್ಯ ಪ್ರದೇಶವನ್ನು ಶೇ.೩೦ಕ್ಕೆ ಏರಿಸಬೇಕು. ಇದನ್ನು ಕೇವಲ ನೀರಿನ ಶೇಖರಣೆ, ಮಳೆ ಕೊಯ್ಲು, ಮಿತವಾದ ನೀರಿನ ಬಳಕೆ ಅಥವಾ ಕೆರೆಗಳ ಅಭಿವೃದ್ಧಿಯಿಂದ ಮಾತ್ರ ಮಾಡಲು ಸಾದ್ಯವಿಲ್ಲ. ಇವೆಲ್ಲವೂ ಹೃದ್ರೋಗಿ ಕೊಲೆಸ್ಟ್ರಾಲ್ ತಗ್ಗಿಸುವುದು, ಧೂಮಪಾನ ಬಿಡುವುದು ಹಾಗೂ ದೇಹದ ತೂಕವನ್ನು ಕರಗಿಸುವ ವಿಧಾನಗಳಂತೆ. ಯಾವುದಾದರೂ ನದಿಯಿಂದ ಬೈಪಾಸ್ ಸರ್ಜರಿ ಅತ್ಯಗತ್ಯ ಇರುವಂತೆ ೧೫,೪೪೨ ಕೆರೆಗಳಿಗೆ ಆಂಜಿಯೊ ಪ್ಲಾಸ್ಟಿಯೂ ಅಗತ್ಯವಿದೆ. ಕೆರೆಗಳ ಅಬಿವೃದ್ಧಿ ಪ್ರಾಧಿಕಾರ ರಚಿಸಿ ಕೆರೆಗಳ ಜೀರ್ಣೋದ್ದಾರ ಕಾರ್ಯವು ಪ್ರಾರಂಭವಾಗಬೇಕು. ಯಾವ ನದಿಯಿಂದ ಡಾ.ಯಡಿಯೂರಪ್ಪನವರು ಬೈಪಾಸ್ ಮಾಡುತ್ತಾರೊ ಇದು ಅವರ ವಿವೇಚನೆಗೆ ಬಿಟ್ಟದ್ದು. ನನಗೆ ಕಂಡುಬರುವಂತೆ ನೇತ್ರಾವತಿ ನದಿಯಲ್ಲದೆ ಬೇರೆ ಮಾರ್ಗ ಅವರಿಗಿಲ್ಲ. ಬರಪೀಡಿತ ಜಿಲ್ಲೆಯ ಜನ ಮೊಸಳೆ ಕಣ್ಣೀರಿನ ಜಾಣ ಉಪಾಯಗಳನ್ನು ರಾಜಕಾರಣಿಗಳು ಹಾಗು ಪರಿಸರವಾದದ ಸೋಗಿನಲ್ಲಿರುವ ಬುದ್ಧಿಜೀವಿಗಳಿಂದ ಪದೇ ಪದೇ ಕೇಳಿ ಬೇಸತ್ತಿದ್ದಾರೆ. ಬಣ್ಣದ ಕನಸೊ, ನನಸಾಗದ ಕನಸೊ ಆದರೆ ನೇತ್ರಾವತಿಯ ತಿರುವೇ ಶಿವ ಶಿವ ಎನ್ನುವವರ ದುಃಸ್ವಪ್ನ ಬರಪೀಡಿತ ಜನರಿಗೆ ಬೀಳದಿರಲಿ ಎಂದು ಆಶಿಸುತ್ತೇನೆ.
ಡಾ.ಮಧು ಸೀತಪ್ಪ