Friday, January 15, 2010

ಆಫ್ರಿಕಾದಲ್ಲಿ ಕೃಷಿ: ಹೊಸ ವಸಾಹತಶಾಹಿ ಹುಟ್ಟು


ಹದಿನಾರನೇ ಶತಮಾನದ ಕೊನೆಯ ದಿನವಾದ 31ನೇ ಡಿಸೆಂಬರ್ 1599ರಂದು ರಾಣಿ ಮೊದಲನೇ ಎಲಿಜಬೆತ್ ಈಸ್ಟ್ ಇಂಡಿಯಾ ಕಂಪೆನಿಯ ವರ್ತಕರಿಗೆ ರಾಯಲ್ ಚಾರ್ಟರ್ ಒದಗಿಸುವ ಮೂಲಕ ವಸಾಹತುಶಾಹಿಗೆ ನಾಂದಿ ಹಾಡಿದಳು. ಈಗ 21ನೇ ಶತಮಾನದಲ್ಲಿ ಚೀನಾ, ಕೊರಿಯಾ, ಸೌದಿ ಅರೇಬಿಯಾ ಮತ್ತು ಭಾರತ ದೇಶಗಳು ಆಫ್ರಿಕಾದಲ್ಲಿನ ಕೃಷಿ ಭೂಮಿಯನ್ನು ಸಾರಾಸಗಟು ಖರೀದಿಸುವುದರ ಮೂಲಕ ಅದೇ ವಸಾಹತುಶಾಹಿಯನ್ನು ಪುನಃ ಪ್ರಾರಂಭಿಸುತ್ತಿವೆ. ಕಳೆದ ಮೂರು ವರ್ಷಗಳಲ್ಲಿ ಈ ದೇಶಗಳು ಒಟ್ಟಾಗಿ 150,000 ಕೋಟಿ ರೂಗಳ ಅಥವಾ 30 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ 20 ದಶಲಕ್ಷ ಹೆಕ್ಟೇರ್ ಕೃಷಿ ಭೂಮಿಯನ್ನು ಎಥಿಯೋಪಿಯಾ, ಮೊಜಾಂಬಿಕ್, ಮಡಗಾಸ್ಕರ್ ಮತ್ತು ಅಂಗೋಲಾದಂಥ ದೇಶಗಳಿಂದ ಖರೀದಿಸಿವೆ. ಮೂಲಭೂತ ಸೌಕರ್ಯ, ತಂತ್ರಜ್ಞಾನ ಮತ್ತು ಹಣಸಹಾಯವಿಲ್ಲದಿರುವುದರಿಂದ ಬಹುಪಾಲು ಆಫ್ರಿಕಾದ ದೇಶಗಳೆಲ್ಲಾ ಬಡದೇಶಗಳಾಗಿವೆ. ಅಲ್ಲಿನ ಜನ ಇನ್ನೂ ಪುರಾತನ ಕೃಷಿ ವಿಧಾನಗಳನ್ನೇ ಅನುಸರಿಸುತ್ತಿದ್ದಾರೆ. ಈ ವಿಧಾನಗಳು ಅಷ್ಟು ಉತ್ಪಾದಕವಲ್ಲ. ತಮ್ಮ ಕೃಷಿಯನ್ನೂ ಹಾಗೂ ತನ್ಮೂಲಕ ತಮ್ಮ ಬದುಕನ್ನು ಉತ್ತಮಗೊಳಿಸಿಕೊಳ್ಳಲು ಮೂಲಭೂತ ಸೌಕರ್ಯದ ಅಭಿವೃದ್ಧಿಗಾಗಲೀ ಕೃಷಿಗಾಗಿ ನೀರಿನ ಲಭ್ಯತೆಯನ್ನು ಹೆಚ್ಚಿಸಿಕೊಳ್ಳಲಾಗಲೀ ಅವರಲ್ಲಿ ಬಂಡವಾಳವಿಲ್ಲ. ಅದರ ಜೊತೆಗೆ ಅಲ್ಲಿನ ಭ್ರಷ್ಟ ಸರ್ಕಾರಗಳು, ಮಿಲಿಟರಿ ಸರ್ವಾಧಿಕಾರಿಗಳೂ ಹಾಗೂ ಆಂತರಿಕ ಜನಾಂಗೀಯ ಯುದ್ಧಗಳು ಅವರ ದಿನನಿತ್ಯದ ಬದುಕನ್ನೇ ದುಸ್ತರಗೊಳಿಸಿವೆ. ಈ ಮೊದಲೆಲ್ಲಾ ಪಾಶ್ಚಿಮಾತ್ಯ ದೇಶಗಳು ಹೇಗೆ ಆಫ್ರಿಕಾದ ಸಮೃದ್ಧ ಖನಿಜಗಳನ್ನು ಹಾಗೂ ತೈಲವನ್ನು ಕೊಳ್ಳೆ ಹೊಡೆದಿರುವುದನ್ನು ನಾವೆಲ್ಲಾ ಕಂಡಿದ್ದೇವೆ. ಈಗ ಅಲ್ಲಿನ ಕೃಷಿ ಭೂಮಿಯನ್ನು ಹಾಗೂ ಮಾನವ ಶ್ರಮವನ್ನು ಕೊಳ್ಳೆಹೊಡೆಯಲು ಏಷಿಯಾ ದೇಶಗಳು ಮುಂದಾಗುತ್ತಿರುವುದನ್ನು ಕಾಣುತ್ತಿದ್ದೇವೆ.
ವಿಶ್ವದಲ್ಲಿ ಸೂಪರ್ ಪವರ್‌ಗಳಾಗಿ ಹೊರಹೊಮ್ಮುತ್ತಿರುವ ಚೀನಾ ಮತ್ತು ಭಾರತ ದೇಶಗಳು ನಿರಂತರವಾಗಿ ಹೆಚ್ಚುತ್ತಿರುವ ಆಹಾರ ಬೇಡಿಕೆಯ ಆತಂಕದಲ್ಲಿವೆ. ಅದರ ಜೊತೆಗೆ ಕುಡಿಯುವ ಹಾಗೂ ಕೃಷಿಯೋಗ್ಯ ನೀರಿನ ಕೊರತೆಯೂ ಕಾಡುತ್ತಿದೆ. ವಿಶ್ವಬ್ಯಾಂಕ್‌ನ ಮೂಲಗಳಂತೆ ಚೀನಾ ಶೇ.20.5ರಷ್ಟು ಹಾಗೂ ಭಾರತ ಶೇ.32.5ರಷ್ಟು ಲಭ್ಯ ನೀರನ್ನು ಬಳಕೆಗೆ ಸೆಳೆಯುತ್ತಿವೆ. ಚೀನಾಕ್ಕೆ ಹೋಲಿಸಿದಲ್ಲಿ ಭಾರತ ಹೆಚ್ಚು ಕೃಷಿಯೋಗ್ಯ ಭೂಮಿ ಮತ್ತು ನೀರನ್ನು ಹೊಂದಿದೆ. ಆದರೆ ಎರಡೂ ದೇಶಗಳ ನೀರಿನ ನಿರ್ವಹಣೆ ಹೇಳಿಕೊಳ್ಳಲಾರದ ಹಾಗಿದೆ. ಭಾರತ ಲಭ್ಯ ನೀರಿನಲ್ಲಿ ಶೇ.92ರಷ್ಟನ್ನು ಕೃಷಿಗೆ ಹಾಗೂ ಶೇ.3ರಷ್ಟನ್ನು ಮಾತ್ರ ಕೈಗಾರಿಕೆಗಳಿಗೆ ಬಳಸುತ್ತಿದೆ. ಆದರೆ ಚೀನಾ ಲಭ್ಯ ನೀರಿನಲ್ಲಿ ಶೇ.77ರಷ್ಟನ್ನು ಕೃಷಿಗೆ ಹಾಗೂ ಶೇ.18ರಷ್ಟನ್ನು ಕೈಗಾರಿಕೆಗಳಿಗೆ ಬಳಸುತ್ತಿದೆ. ಅಂತರ್ಜಲ ಮಟ್ಟ ಕಡಿಮೆಯಾಗುತ್ತಿರುವ ಹಾಗೂ ನದಿಗಳು ಬತ್ತಿ ಹೋಗುತ್ತಿರುವ ಉತ್ತರ ಚೀನಾಕ್ಕೆ ದಕ್ಷಿಣದ ಯಾಂಗ್ಸಿ ನದಿಯಿಂದ ಉತ್ತರಕ್ಕೆ, ಬೆಟ್ಟ ಗುಡ್ಡಗಳ ಪ್ರದೇಶಗಳಿಗೆ ನಾಲ್ಕು ಲಕ್ಷ ಕೋಟಿ ರೂಗಳಷ್ಟು ಹಣ ಖರ್ಚುಮಾಡಿ ನೀರನ್ನು ಸರಬರಾಜು ಮಾಡುತ್ತಿದೆ. ಹಾಗಾಗಿ ನೀರು ಅತ್ಯಂತ ದುಬಾರಿಯಾಗುತ್ತಿದ್ದು ಅಭಿವೃದ್ಧಿಯ ಗತಿಯನ್ನು ಕಾಯ್ದುಕೊಳ್ಳಲು ನೀರನ್ನು ಕೈಗಾರಿಕೆಗಳಿಗೆ ಸರಬರಾಜುಮಾಡುವತ್ತು ಗಮನ ಹರಿಸುತ್ತಿದೆ. ಆದರೆ ಭಾರತದಲ್ಲಿ ಸಾವಿರಾರು ಚದರ ಕಿಲೋಮೀಟರುಗಳಷ್ಟು ಶುದ್ಧ ನೀರು ಪ್ರತಿ ವರ್ಷ ಸಾಗರವನ್ನು ಸೇರುತ್ತಿದೆ. ಆ ನೀರನ್ನು ಭವಿಷ್ಯಕ್ಕಾಗಿ ನಿರ್ವಹಿಸುವ ಯಾವುದೇ ಆಲೋಚನೆ ಸರ್ಕಾರಕ್ಕಿದ್ದಂತಿಲ್ಲ. ಹಲವಾರು ದಶಕಗಳಿಂದ ನದಿ ಜೋಡಣೆಯ ಮಾತು ಕೇಳಿಬರುತ್ತಿದ್ದರೂ ನೀರನ್ನು ಭವಿಷ್ಯಕ್ಕಾಗಿ ಸಂರಕ್ಷಿಸುವ ಯಾವುದೇ ನಿರ್ದಿಷ್ಟ ಯೋಜನೆಗಳನ್ನು ಸರ್ಕಾರ ಕೈಗೊಂಡಿಲ್ಲ. ಪ್ರಸ್ತುತ ಕೃಷಿ ಕ್ಷೇತ್ರವು ಅವಶ್ಯಕವಿರುವ 220 ಮಿಲಿಯನ್ ಟನ್‌ಗಳಷ್ಟು ಧಾನ್ಯವನ್ನು ಉತ್ಪಾದಿಸುತ್ತಿದ್ದರೂ ಇನ್ನು ಹತ್ತು ವರ್ಷಗಳಲ್ಲಿ ಆ ಬೇಡಿಕೆ 300 ಮಿಲಿಯನ್ ಟನ್‌ಗಳಷ್ಟಾಗಲಿದೆ. ಆದುದರಿಂದ ಆ ಬೇಡಿಕೆಯ ಪೂರೈಕೆಗಾಗಿ ಹೆಚ್ಚು ಹೆಚ್ಚು ನೀರಿನ ಅವಶ್ಯಕತೆಯಿದೆ ಹಾಗೂ ಆ ಅವಶ್ಯಕತೆಗಾಗಿ ಹೆಚ್ಚು ಹೆಚ್ಚು ಮೂಲಭೂತ ಸೌಲಭ್ಯಗಳ ಪ್ರಾಯೋಜನೆಗಳು ಅವಶ್ಯಕವಿವೆ. ಆ ಪ್ರಾಯೋಜನೆಗಳ ಅಳವಡಿಕೆಗೆ ಬಹಳಷ್ಟು ಸಮಯ ಬೇಕಾಗುತ್ತದೆ. ಹಾಗಾಗಿ ಆಹಾರ ಸುರಕ್ಷತೆಗೆ ಅಪಾಯ ಬರಬಹುದೆನ್ನುವ ಅಂಜಿಕೆಯಿಂದ ಈ ರಾಷ್ಟ್ರಗಳು ಆಫ್ರಿಕಾದಲ್ಲಿನ ಕಡಿಮೆ ಬೆಲೆಯ ಭೂಮಿ ಮತ್ತು ಮಾನವ ಶ್ರಮದಿಂದಾಗಿ ಅಲ್ಲಿ ಬಂಡವಾಳ ಹೂಡಿಕೆ ಶುರುಮಾಡುತ್ತಿವೆ. ನದಿಜೋಡಣೆ ಅಥವಾ ನೀರಿನ ಸೌಲಭ್ಯಗಳನ್ನು ನಿರ್ಮಿಸುವುದು ದುಬಾರಿಯಾದುದೇನೋ ನಿಜ ಆದರೆ ತಮ್ಮಲ್ಲೇ ಸಾಕಷ್ಟು ನೀರನ್ನು ಹೊಂದಿದ್ದರೂ ಆಫ್ರಿಕಾದಂತಹ ಬಡರಾಷ್ಟ್ರಗಳ ನೀರನ್ನು ಮತ್ತು ಸಂಪನ್ಮೂಲಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ. ಸೌದಿ ಅರೇಬಿಯಾ ತನ್ನ ಆಹಾರ ಸುರಕ್ಷಿತತೆಯ ಬಗ್ಗೆ ಚಿಂತಿಸುವುದೇನೋ ಸರಿ ಆದರೆ ಚೀನಾ ಮತ್ತು ಭಾರತ ತಮ್ಮಲ್ಲಿನ ಸಂಪನ್ಮೂಳಗಳನ್ನೇ ಬಳಸದೆ ಇತರ ರಾಷ್ಟ್ರಗಳನ್ನು ತನ್ನ ವಸಾಹತುಗಳನ್ನಾಗಿ ಮಾಡಲು ಹೊರಟಿದೆ.
ಹಲವಾರು ದಶಕಗಳಿಂದ ಆಫ್ರಿಕಾ ಭ್ರಷ್ಟ ಸರಕಾರ ಮತ್ತು ರಾಜಕಾರಣಿಗಳ, ಮಿಲಿಟರಿ ಸರ್ವಾಧಿಕಾರಿಗಳ ಕೊಂಪೆಯಾಗಿವೆ. ಅವೆಲ್ಲಾ ಹಣದಾಸೆಯಿಂದ ತಮ್ಮ ತೈಲ ಮತ್ತು ಖನಿಜಗಳನ್ನು ಮಾರಿಕೊಂಡಿವೆ. ಈಗ ಕೃಷಿ ಭೂಮಿಯ ಲೇವಾದೇವಿಗಾಗಿ ಪ್ರತ್ಯೇಕ ಏಜೆನ್ಸಿಗಳನ್ನು ಸಿದ್ಧಗೊಳಿಸಿವೆ. ಈ ಭೂಮಿಯನ್ನು ಉಚಿತವಾಗಿ, ಗುತ್ತಿಗೆ ಆಧಾರದ ಮೇಲೆ ಅಥವಾ ಪ್ರಾಯೋಜನೆಗಳ ಆಧಾರಗಳ ಮೇಲೆ ನೀಡಬಹುದು. ಇಂತಹ ಭ್ರಷ್ಟ ಸರ್ಕಾರಗಳಿಂದಲೇ ಒಮ್ಮೆ ಸಿರಿವಂತ ರಾಷ್ಟ್ರವಾಗಿದ್ದ ಜಿಂಬಾಬ್ವೆ ಬಡದೇಶವಾಗಿದೆ. ಈಗಿನ ಸರ್ಕಾಗಳು ಒಪ್ಪಂದಕ್ಕೆ ಸಹಿಹಾಕುವುದನ್ನು ಮುಂದಿನ ಸರ್ಕಾರಗಳು ಅವನ್ನು ಪಾಲಿಸುತ್ತವೆಂಬ ಖಾತ್ರಿ ಏನಿದೆ? ಅಂತಹ ಸಮಯಗಳಲ್ಲಿ ಚೀನಾ ಮತ್ತು ಭಾರತದಂತಹ ದೇಶಗಳು ಹಿಂದೊಮ್ಮೆ ಬ್ರಿಟಿಷರು ತಮ್ಮ ಈಸ್ಟ್ ಇಂಡಿಯಾ ಕಂಪೆನಿಯ ಹಿತಾಸಕ್ತಿಗಳನ್ನು ಕಾಪಾಡಲು ಹೊರಟು ಭಾರತವನ್ನು 200 ವರ್ಷಗಳ ಕಾಲ ಆಳಿದಂತೆ ತಮ್ಮ ಶಕ್ತಿಯನ್ನು ಆಪ್ರಿಕಾದಲ್ಲಿನ ಬಡದೇಶಗಳ ಮೇಲೆ ಪ್ರಯೋಗಿಸಬೇಕಾಗುತ್ತದೆ. ಇದಕ್ಕಿಂತ ಹೆಚ್ಚಾಗಿ ಈ ದೇಶಗಳ ಪರವಾಗಿ ಕೃಷಿಯಲ್ಲಿ ತೊಡಗುವ ಕಾರ್ಪೊರೇಟ್‌ಗಳಿಗೆ ಅಲ್ಲಿನ ಮಣ್ಣಿನ ಫಲವತ್ತತೆ ಅಥವಾ ಪರಿಸರವನ್ನು ಸಂರಕ್ಷಿಸಬೇಕೆಂಬ ಕಾಳಜಿಯೇನೂ ಇರುವುದಿಲ್ಲ. ಅವು ಹೆಚ್ಚು ಹಣ ಗಳಿಸುವ ಉದ್ದೇಶದಿಂದ ವಾಣಿಜ್ಯ ಬೆಳೆಗಳನ್ನು, ಏಕ ಬೆಳೆ ಪದ್ಧತಿಯನ್ನು ಹಾಗೂ ಅನೂಚಾನವಾಗಿ ಕೀಟ ಹಾಗೂ ಪೀಡೆ ನಾಶಕಗಳನ್ನು ಬಳಸಿ ಅಲ್ಲಿನ ಪರಿಸರದ ಸಮತೋಲನವನ್ನು ಹಾಳುಗೆಡವುತ್ತಾರೆ. ಅವುಗಳಿಗೆ ಯಾವುದೇ ನಿಯಂತ್ರಣ, ನಿಬಂಧನೆಗಳಿರುವುದಿಲ್ಲ.
ಎಥಿಯೋಪಿಯಾದಲ್ಲಿ ಬೆಳೆಯಲಾಗದ ಬೆಳೆಯಿಲ್ಲ ಹಾಗೂ ಸಾಕಷ್ಟು ಶುದ್ಧ ನೀರು ಲಭ್ಯವಿದೆ. ಆದರೆ ಅವರ ಬಡತನಕ್ಕೆ ಕಾರಣ ಆ ದೇಶ ಲಭ್ಯ ನೀರಿನಲ್ಲಿ ಕೇವಲ ಶೇ.2.5ರಷ್ಟು ನೀರನ್ನು ಮಾತ್ರ ಬಳಸುತ್ತಿದೆ ಹಾಗೂ ಅಲ್ಲಿನ ಶೆ.80ರಷ್ಟು ರೈತರು ಉಳುಮೆಗಾಗಿ ಇನ್ನೂ ಎತ್ತುಗಳನ್ನು ಬಳಸುತ್ತಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಭಾಗವಾಗಿರುವ ಈಗಿನ ಯು.ಪಿ.ಎ. ಸರ್ಕಾರ ಹಲವಾರು ಕಂಪೆನಿಗಳಿಗೆ ಕಡಿಮೆ ಬಡ್ಡಿಯ ಸಾಲಗಳನ್ನು ಕೊಟ್ಟು ಆಫ್ರಿಕಾದಲ್ಲಿ ಕೃಷಿ ಭೂಮಿಯನ್ನು ಕೊಳ್ಳಲು ಪ್ರೋತ್ಸಾಹಿಸುತ್ತಿದೆ. ರಾಷ್ಟ್ರವಾಗಿ ನಾವು ವಸಾಹತು ಶಾಹಿಯ ದಬ್ಬಾಳಿಕೆ ಹಾಗೂ ಕ್ರೌರ್ಯವನ್ನು ಕಂಡಿದ್ದೇವೆ. ಈಗ ನಾವು ಆಫ್ರಿಕಾದಲ್ಲಿ, ನಮಗೆ ಮಹಾತ್ಮನನ್ನು ನೀಡಿದ ನಾಡಿನಲ್ಲಿ ಅದನ್ನೇ ಮಾಡಲು ಹೊರಟಿರುವುದು ಎಂತಹ ವಿಪರ್ಯಾಸವಲ್ಲವೆ? ‘ನೀವು ನಮಗೆ ಗಾಂಧಿಯನ್ನು ನೀಡಿದಿರಿ, ಆದರೆ ನಾವು ನಿಮಗೆ ಮಹಾತ್ಮನನ್ನು ನೀಡಿದೆವು’ ಎಂದು ನೆಲ್ಸನ್ ಮಾಂಡೆಲಾ ಭಾರತಕ್ಕೆ ನೀಡಿದ ಮೊದಲ ಭೇಟಿಯಲ್ಲಿ ಹೇಳಿದ್ದರು. ಗಾಂಧಿ ವಿರೋಧಿಸಿದ ತತ್ವಗಳನ್ನೇ ಈಗಿನ ಸರ್ಕಾರ ಬೆಂಬಲಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ವಿದೇಶಿಯರನ್ನು (ಅವರು ಭಾರತೀಯ ಮೂಲದವರಾಗಿದ್ದರೂ ಸಹ) ಭಾರತದಲ್ಲಿ ಕೃಷಿ ಭೂಮಿಯನ್ನು ಕೊಳ್ಳಲು ಭಾರತ ಸರ್ಕಾರ ಅವಕಾಶ ಕೊಡುವುದಿಲ್ಲ. ಹಾಗಿರುವಾಗ ಎಥಿಯೋಪಿಯಾದಲ್ಲಿ ಕೃಷಿ ಭೂಮಿಯನ್ನು ಕೊಳ್ಳಲು ಭಾರತೀಯ ವ್ಯಾಪಾರಿಗಳಿಗೆ ಕಡಿಮೆ ದರದ ಬಡ್ಡಿಯಲ್ಲಿ ಧನಸಹಾಯ ನೀಡಲು ಈ ಸರ್ಕಾರಕ್ಕೆ ಯಾವ ನೈತಿಕ ಹಕ್ಕಿದೆ. ಆಫ್ರಿಕಾಗೆ ಭಾರತ ಮತ್ತು ಚೀನಾದಂತಹ ದೇಶಗಳಿಂದ ಸಹಾಯ ಬೇಕಿದೆಯೇ ಹೊರತು ತಮ್ಮನ್ನು ಕೊಳ್ಳೆಹೊಡೆಯಿರೆಂದು ಅವು ಕೇಳುತ್ತಿಲ್ಲ. ಈ ವ್ಯಾಪಾರೀ ಕಂಪೆನಿಗಳ ಉದ್ದೇಶ ಬಡವರಿಗೆ ಸಹಾಯಮಾಡುವುದಾದಲ್ಲಿ ಖಂಡಿತವಾಗಿ ಅವು ಆಫ್ರಿಕಾದ ದೇಶದ ಆರ್ಥಿಕತೆಯ ಸುಧಾರಣೆಗೆ ಸಹಾಯಮಾಡುತ್ತವೆ. ಆದರೆ ಹಣ ಮಾಡುವುದಷ್ಟೇ ಅವುಗಳ ಉದ್ದೇಶವಾದಲ್ಲಿ ಈಗಾಗಲೇ ಹದಗೆಟ್ಟಿರುವ ಆ ದೇಶಗಳ ಸ್ಥಿತಿ ಅಧೋಗತಿಗಿಳಿಯುತ್ತದೆ. ಆದರೂ, ವಿಶ್ವ ಸಂಸ್ಥೆಯಂತಹ ಅಂತರ ರಾಷ್ಟ್ರೀಯ ಏಜೆನ್ಸಿಗಳು ಆಪ್ರಿಕಾದ ದೇಶಗಳ ಹಿತಾಸಕ್ತಿಯ ದೃಷ್ಟಿಯಿಂದ ಇಂತಹ ಬಂಡವಾಳ ಹೂಡಿಕೆಯನ್ನು ಪರಿವೀಕ್ಷಿಸುವುದು ಒಳ್ಳೆಯದು.
-ಡಾ.ಮಧು ಸೀತಪ್ಪ
ಸಂಯುಕ್ತ ಕರ್ನಾಟಕ , 8-12-2009

No comments:

Post a Comment