Friday, February 12, 2010

ಬೆಂದ ಕಾಳೂರು ಅಥವಾ ಬೆಂದ ಬೆಂಗಳೂರು?

ಬಿ.ಬಿ.ಎಂ.ಪಿ.- ಬೆಂದ ಬೆಂಗಳೂರು ಮಹಾನಗರ ಪಾಲಿಕೆ

ಲಾಸ್ ಏಂಜಲ್ಸ್ ಮತ್ತು ಬೆಂಗಳೂರಿನ ನಡುವಿರುವ ವ್ಯತ್ಯಾಸವೇನು? ಎರಡೂ ಸಿಲಿಕಾನ್ ನಗರಗಳೆ. ಲಾಸ್ ಏಂಜಲ್ಸ್ ಒಟ್ಟು ಗೃಹ ಉತ್ಪನ್ನ ವಾರ್ಷಿಕ ೭೯೨ ಅಮೆರಿಕನ್ ಡಾಲರ್ಗಳಷ್ಟಿದೆ ಅಂದರೆ ಅಮೆರಿಕದ ಒಟ್ಟು ಗೃಹ ಉತ್ಪನ್ನದ ಶೇ.೬ರಷ್ಟು. ಬೆಂಗಳೂರಿನ ಒಟ್ಟು ಗೃಹ ಉತ್ಪನ್ನ ೬೯ ಬಿಲಿಯನ್ ಅಮೆರಿಕನ್ ಡಾಲರ್ಗಳಷ್ಟಿದೆ, ಅಂದರೆ ಭಾರತದ ಒಟ್ಟು ಗೃಹ ಉತ್ಪನ್ನದ ಶೇ.೬ರಷ್ಟು. ಲಾಸ್ ಏಂಜಲ್ಸ್ ಸರಾಸರಿ ಮಳೆ ವಾರ್ಷಿಕ ೩೩೫ ಮಿ.ಮೀ. ಆದರೆ ಬೆಂಗಳೂರಿನ ವಾರ್ಷಿಕ ಮಳೆ ೭೩೩ ಮಿ.ಮೀ.ಗಳಷ್ಟಿದೆ. ೧೩ ಮಿಲಿಯನ್ ಜನಸಂಖ್ಯೆಯ ಲಾಸ್ ಏಂಜಲ್ಸ್ ವಾರ್ಷಿಕ ೭೦೦ ಬಿಲಿಯನ್ ಲೀಟರ್ ನೀರನ್ನು ಬಳಸುತ್ತಿದೆ, ಆದರೆ ಮಿಲಿಯನ್ ಜನಸಂಖ್ಯೆಯ ಬೆಂಗಳೂರು ವಾರ್ಷಿಕ ೩೦೮ ಬಿಲಿಯನ್ ಲೀಟರ್ ನೀರನ್ನು ಬಳಸುತ್ತಿದೆ. ಅಂದರೆ, ಲಾಸ್ ಏಂಜಲ್ಸ್ನಲ್ಲಿ ಬಿಲಿಯನ್ ಲೀಟರ್ ನೀರು .೧೨ ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಒಟ್ಟು ಗೃಹ ಉತ್ಪನ್ನಕ್ಕೆ ಕಾರಣವಾದರೆ, ಬೆಂಗಳೂರಿನಲ್ಲಿ . ಬಿಲಿಯನ್ ಡಾಲರ್ ಲೀಟರ್ಗಳಷ್ಟು ನೀರು ಬಿಲಿಯನ್ ಅಮೆರಿಕನ್ ಡಾಲರ್ಗಳಷ್ಟು ಮೌಲ್ಯದ ಒಟ್ಟು ಗೃಹ ಉತ್ಪನ್ನಕ್ಕೆ ಕಾರಣವಾಗುತ್ತಿದೆ. ಬೆಂಗಳೂರಿನಲ್ಲಿ ೩೦೬ ಬಿಲಿಯನ್ ಲೀಟರ್ ನೀರಿನಲ್ಲಿ ಕನಿಷ್ಠ ಶೇ.೩೬ರಷ್ಟು ನೀರು ಸೋರಿಕೆಯಿಂದ ನಷ್ಟವಾಗುತ್ತಿದೆ. ಬೆಂಗಳೂರು ನೀರು ಸರಬರಾಜು ಮಂಡಲಿಯು ಪ್ರತಿ ಕಿಲೋ ಲೀಟರಿಗೆ ರೂ.೪೬ ಖರ್ಚುಮಾಡುತ್ತದೆ ಹಾಗೂ ಗ್ರಾಹಕರಿಂದ ಕೇವಲ ರೂ.೧೬ನ್ನು ಪ್ರತಿ ಕಿಲೋ ಲೀಟರಿಗೆ ಪಡೆಯುತ್ತಿದೆ. ಇದರಿಂದಾಗಿ ಅದು ಪ್ರತಿ ಕಿಲೋ ಲೀಟರ್ ನೀರಿನಿಂದ ರೂ.೩೦ ನಷ್ಟ ಅನುಭವಿಸುತ್ತಿದೆ. ಲಾಸ್ ಏಂಜಲ್ಸ್ ಮಾನಕಗಳನುಸಾರ ಬೆಂಗಳೂರಿನಲ್ಲಿ ಕೈಗಾರಿಕೆಗಳ ಅಭಿವೃದ್ಧಿಗಾಗಿ ವಾರ್ಷಿಕ ೧೧೪ ಬಿಲಿಯನ್ ಲೀಟರ್ ಹೆಚ್ಚುವರಿ ನೀರಿನ ಅವಶ್ಯಕತೆಯಿದೆ. ಗ್ರಾಮೀಣ ಜನರ ವಲಸೆ ಹಾಗೂ ಆರ್ಥಿಕ ಪರಿಸ್ಥಿತಿಗಳ ವಲಸೆಯಿಂದಾಗಿ ಇನ್ನು ೧೫ ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ ದ್ವಿಗುಣಗೊಳ್ಳಲಿದೆ. ಅಂದರೆ ೨೦೨೫ರ ಹೊತ್ತಿಗೆ ಬೆಂಗಳೂರಿಗೆ ವಾರ್ಷಿಕ ೮೪೮ ಬಿಲಿಯನ್ ಲೀಟರ್ ನೀರು ಬೇಕಾಗುತ್ತದೆ.

ಗಂಗಾ, ಚೋಳ, ವಿಜಯನಗರದ ದೊರೆಗಳಿಂದ ಹಿಡಿದು ಮೊಘಲ್ ಮತ್ತು ಬ್ರಿಟಿಷರು ಸಹ ಬೆಂಗಳೂರಿನಲ್ಲಿ ಆಡಳಿತ ನಡೆಸಿದರು ಅಥವಾ ಅದರ ನಿಯಂತ್ರಣದಲ್ಲಿದ್ದರು. ಗಂಗಾ ಮತ್ತು ಚೋಳರ ಸಮಯದಲ್ಲಿ ನಗರದ ಸುತ್ತ ಮುತ್ತ ಕೆರೆಗಳನ್ನು ಸ್ಥಾಪಿಸಿ ಅವುಗಳ ನಡುವೆ ಸಂಪರ್ಕ ಇರಿಸಿ ನಗರದ ನೀರಿನ ಅವಶ್ಯಕತೆಗಳನ್ನು ಪೂರೈಸಲಾಗುತ್ತಿತ್ತು. ಬೆಂಗಳೂರಿನಲ್ಲಿ ೨೫೨ ಕೆರೆಗಳಿದ್ದವು. ಆದರೆ ಈಗ ಅಧಿಕೃತ ಅಂಕಿಅಂಶಗಳನ್ವಯ ೧೧೦ ಕೆರೆಗಳಿವೆ ಹಾಗೂ ಅವುಗಳಲ್ಲಿ ೫೨ ಮಾತ್ರ ಜೀವಂತವಾಗಿದೆ. ಕೆಲವು ಕೆರೆಗಳು ರಾಜ್ಯ ಸಾರಿಗೆ ಬಸ್ನಿಲ್ದಾಣ, ಕಂಠೀರವ ಕ್ರೀಡಾಂಗಣ ಮತ್ತು ಹಾಕಿ ಕ್ರೀಡಾಂಗಣಗಳಂತಹ ಆಧುನಿಕ ರಚನೆಗಳಿಗೆ ತಮ್ಮನ್ನು ಬಲಿಕೊಟ್ಟುಕೊಂಡು ಕೆರೆಗೆ `ಹಾರ'ವಾದವು. ಇನ್ನು ಕೆಲವು ವಿವೇಚನಾರಹಿತ ಆಲೋಚನೆಯಿಂದ ಎಚ್.ಬಿ.ಆರ್.ನಂತಹ ಬಡಾವಣೆಗಳ ರಚನೆಗೆ ಬಲಿಯಾದರೆ, ಉಳಿದವು ದುರಾಸೆಯ ರಾಜಕಾರಣಿಗಳಿಗೆ ಹಾಗೂ ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ಬಲಿಯಾದವು. ೧೯೦೫ರಲ್ಲಿ ಇಡೀ ದಕ್ಷಿಣ ಏಷಿಯಾದಲ್ಲಿಯೇ ವಿದ್ಯುಚ್ಛಕ್ತಿಯನ್ನು ಪಡೆದ ಮೊಟ್ಟ ಮೊದಲ ನಗರ ಬೆಂಗಳೂರು. ಆನಂತರ ಹೆಸರಘಟ್ಟದ ಜಲಾಶಯವನ್ನು ನಿರ್ಮಿಸಲಾಯಿತು. ೧೯೨೫ ತೀವ್ರ ಬರಗಾಲದಿಂದ ಹೆಸರಘಟ್ಟದ ಕೆರೆ ಒಣಗಿಹೋಯಿತು. ಆಗ ವಿಶ್ವೇಶ್ವರಯ್ಯನವರ ಸಲಹೆಯ ಮೇರೆಗೆ ಹೆಚ್ಚುವರಿ ಬೇಡಿಕೆಯನ್ನು ಪೂರೈಸಲು ೧೯೩೩ರಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ನಿರ್ಮಿಸಲಾಯಿತು. ಸ್ವಾತಂತ್ರ್ಯಾನಂತರ ಬೆಂಗಳೂರಿರುವ ಸುರಕ್ಷಿತ ಸ್ಥಾನದಿಂದಾಗಿ ಹಾಗೂ ಭಾರತ- ಪಾಕ್ ಮತ್ತು ಭಾರತ- ಚೀನಾ ಸಂಘರ್ಷಗಳಿಂದಾಗಿ ಬಹುಪಾಲು ಸಾರ್ವಜನಿಕ ಕ್ಷೇತ್ರದ ಪ್ರಾಯೋಜನೆಗಳೆಲ್ಲಾ ಬೆಂಗಳೂರಿಗೇ ದೊರೆತವು. ಕ್ಷಿಪ್ರ ನಗರೀಕರಣ ಹಾಗೂ ಕೈಗಾರಿಕೀಕರಣದಿಂದಾಗಿ ನಗರದ ನೀರಿನ ದಾಹ ಹೆಚ್ಚುತ್ತಾ ಹೋಯಿತು. ಅದರಿಂದಾಗಿ ೧೯೬೫ರಲ್ಲಿ ನಗರಕ್ಕೆ ನೀರು ಸರಬರಾಜು ಮಾಡಲು ಕಾವೇರಿ ನೀರು ಸರಬರಾಜಿನ ಮೊದಲನೇ ಹಂತ ಪ್ರಾರಂಭವಾಯಿತು. ೧೯೭೦ರಲ್ಲಿ ಬೆಂಗಳೂರಿನ ಭವಿಷ್ಯವನ್ನು ಮನಗಂಡ ಶ್ರೀ ಬಾಳಿಗಾರವರು ಆಗಿನ ಮುಖ್ಯ ಮಂತ್ರಿಗಳಾಗಿದ್ದ ಶ್ರೀ ದೇವರಾಜ ಅರಸ್ರವರ ಬೆಂಬಲದಿಂದ ಇಲ್ಲಿ ಸಿಲಿಕಾನ್ ಕಣಿವೆ ಸ್ಥಾಪಿಸುವ ಕನಸು ಕಂಡು ಇನ್ನಷ್ಟು ನಗರೀಕರಣಕ್ಕೆ ಉತ್ತೇಜನ ನೀಡಿದರು. ಈಗ ಕಾವೇರಿ ನೀರು ಬೆಂಗಳೂರಿನ ಕೇಂದ್ರ ಭಾಗ ಹಾಗೂ ಹಳೆ ನಗರಕ್ಕೆ ದೊರಕುತ್ತಿದೆ. ನಗರದ ಕೇಂದ್ರ ಭಾಗದ ಶೇ.೧೦ ರಷ್ಟು ವಾರ್ಡ್ಗಳು ಹಾಗೂ ಬೃಹತ್ ಬೆಂಗಳೂರಿಗೆ ಹೊಸದಾಗಿ ಸೇರ್ಪಡೆಯಾದ ೭೯ ಹೊಸ ವಾರ್ಡ್ಗಳಿಗೆ ಅಂತರ್ಜಲ ಸರಬರಾಜಾಗುತ್ತಿದೆ. ಅಂದರೆ ಇಡೀ ಬೆಂಗಳೂರು ನಗರದ ಶೇ.೩೫ರಷ್ಟು ಭಾಗಗಳಿಗೆ ಅಂತರ್ಜಲವೇ ಜೀವಜಲವಾಗಿದೆ. ಇಂದು ನಗರದಲ್ಲಿ ೧೫೦,೦೦೦ಕ್ಕೂ ಹೆಚ್ಚು ಖಾಸಗಿ ಹಾಗೂ ಸುಮಾರು ೧೦,೦೦೦ ಸರ್ಕಾರಿ ಕೊಳವೆ ಬಾವಿಗಳಿವೆ. ಹೊಸ ವಾರ್ಡ್ಗಳಲ್ಲಿ ಪ್ರತಿ ನಲವತ್ತು ಅಡಿಗಳಿಗೊಂದರಾಂತೆ ಕೊಳವೆ ಬಾವಿಗಳಿವೆ. ಕೆಲವು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ೧೨೦೦ ಅಡಿಗಳಿಗಿಂತಲೂ ಕೆಳಕ್ಕೆ ತಲುಪಿದೆ. ಅಲ್ಲದೆ ಮಾನವ ಮತ್ತು ಕೈಗಾರಿಕಾ ತ್ಯಾಜ್ಯಗಳ ವಿವೇಚನಾರಹಿತ ವಿಲೇವಾರಿಯಿಂದ ಅಂತರ್ಜಲವೂ ಮಲಿನಗೊಳ್ಳುತ್ತಿದೆ.
ಜಲಾಶಯಗಳಲ್ಲಿನ ನೀರನ್ನು ನಗರಕ್ಕೆ ಪಂಪ್ ಮಾಡಲಾಗುತ್ತಿದೆ. ಇತ್ತೀಚಿನ ವಿದ್ಯುತ್ ದರದ ಏರಿಕೆಯಿಂದ ಜಲಮಂಡಳಿ ದಿನವೊಂದಕ್ಕೆ ರೂ ೬೦ ಲಕ್ಷಗಳಷ್ಟು ವಿದ್ಯುತ್ ಬಿಲ್ ಪಾವತಿಸುತ್ತಿದ್ದು ಅದರ ಹೊರೆ ಇನ್ನಷ್ಟು ಹೆಚ್ಚಿದೆ. ಶೇ.೩೬ ರಷ್ಟು ನೀರಿನ ಸೋರಿಕೆಯಿಂದಾಗಿ ಪ್ರತಿ ದಿನ ರೂ..೪೩ ಕೋಟಿಗಳಷ್ಟು ಹಣ ನಷ್ಟವಾಗುತ್ತಿದೆ.

ಕ್ರೈಸಿಲ್ ಕ್ರೆಡಿಟ್ ರೇಟಿಂಗ್ನಂತೆ ಸಮಸ್ಯೆಗಳನ್ನು ಬಗೆಹರಿಸಲು ಬೆಂಗಳೂರು ನಗರಕ್ಕೆ ಮುಂದಿನ ವರ್ಷಗಳಲ್ಲಿ ರೂ.೩೬,೦೦೦ ಕೋಟಿಗಳ ಅವಶ್ಯಕತೆಯಿದೆ ಹಾಗೂ ಅದರಲ್ಲಿ ರೂ.೧೧,೦೦೦ ಕೋಟಿಗಳನ್ನು ಜಲಮಂಡಳಿಯೇ ಖರ್ಚುಮಾಡಬೇಕಾಗಿದೆ. ರಾಜ್ಯದ ಒಟ್ಟು ಆದಾಯದಲ್ಲಿ ಬೆಂಗಳೂರಿನ ಪಾಲು ಬಹುಪಾಲು ಅರ್ಧದಷ್ಟಿದೆ. ಬೆಂಗಳೂರು ನಗರ ಸುಸ್ಥಿರವಾಗಿದ್ದು ಅಭಿವೃದ್ಧಿಯನ್ನು ಕಾಣಬೇಕಾದಲ್ಲಿ ಮೊದಲಿಗೆ ನಾವು ಅದರ ದಾಹ ತಣಿಸಬೇಕಾಗಿದೆ. ಹಾಗಾಗಿ ಜಲಮಂಡಳಿಯು ಕಾವೇರಿಯನ್ನು ಹೊರತುಪಡಿಸಿ ಇತರ ಆಯ್ಕೆಗಳತ್ತ ಗಮನ ಹರಿಸಬೇಕಾಗಿದೆ. ಬೆಂಗಳೂರಿನ ವಾರ್ಷಿಕ ಮಳೆಯ ೭೩೩ ಮಿ.ಮೀ.ಗಳಲ್ಲಿ ಸರಾಸರಿ ದಿನವೊಂದಕ್ಕೆ ೪೦೦ ಮಿಲಿಯನ್ ಲೀಟರ್ಗಳಷ್ಟು ಮಳೆನೀರನ್ನು ಸಂಗ್ರಹಿಸಬಹುದಾಗಿದೆ. ಆದರೆ ಈಗಿರುವ ಕೆರೆಗಳು ಇದರಲ್ಲಿ ಅರ್ಧದಷ್ಟು ನೀರನ್ನು ಮಾತ್ರ ಸಂಗ್ರಹಿಸಬಲ್ಲವು. ಅದನ್ನು ಸಂಗ್ರಹಿಸುವ ಮೊದಲು ಕೆರೆಗಳ ಹೂಳನ್ನು ತೆಗೆಸಿ ಶುಚಿಗೊಳಿಸಿ ಅವುಗಳೊಳಕ್ಕೆ ಯಾವುದೇ ಮಾನವ ಅಥವಾ ಕೈಗಾರಿಕಾ ತ್ಯಾಜ್ಯಗಳು ಬರದಂತೆ ಎಚ್ಚರಿಕೆ ವಹಿಸಬೇಕು.
ಇತರ ನದಿಗಳ ನೀರನ್ನು ಬೆಂಗಳೂರಿಗೆ ತರಬಹುದೆ? ಇದರಲ್ಲೂ ಎರಡು ಸಾಧ್ಯತೆಗಳಿವೆ. ಒಂದು ಕುಣಿಗಲ್ ಕೆರೆಯಿಂದ ಹೇಮಾವತಿ ನದಿ ಹಾಗೂ ಮತ್ತೊಂದು ನೇತ್ರಾವತಿ ನದಿ. ತಜ್ಞರ ಪ್ರಕಾರ ಬೆಂಗಳೂರಿಗೆ ಸರಬರಾಜು ಮಾಡಲು ಬೇಕಾಗುವಷ್ಟು ನೀರು ಹೇಮಾವತಿಯಲ್ಲಿದೆ ಆದರೆ ಅದನ್ನು ಲಿಫ್ಟ್ ಮಾಡಿ ಸಾಗಿಸಬೇಕು ಹಾಗೂ ಅದಕ್ಕೆ ವಿದ್ಯುಚ್ಛಕ್ತಿಯ ಅವಶ್ಯಕತೆಯಿದೆ. ಆದರೆ, ನೇತ್ರಾವತಿ ಬೆಂಗಳೂರಿಗೆ ಮಾತ್ರವಲ್ಲ ಮಧ್ಯ ಕರ್ನಾಟಕದ ೧೦ ಬರಪೀಡಿತ ಜಿಲ್ಲೆಗಳಿಗೂ ನೀರನ್ನು ಒದಗಿಸಬಲ್ಲದು. ಸರ್ಕಾರ ಪರಮಶಿವಯ್ಯನವರ ವರದಿಯನ್ನು ಜಾರಿಗೆ ತಂದಲ್ಲಿ ಬೆಂಗಳೂರಿಗೆ ನೀರು ಗುರುತ್ವಾಕರ್ಷಣೆಯ ಮೂಲಕವೇ ತಲುಪುತ್ತದೆ. ಇದು ಪರಿಸರ ಸ್ನೇಹಿ ಹಾಗೂ ಕಡಿಮೆ ಖರ್ಚಿನ ವಿಧಾನವೂ ಆಗಿದೆ. ಇದನ್ನು ಬಳಸಿ ಕೆಂಗೇರಿ ಮತ್ತು ಹೆಬ್ಬಾಳದ ನಡುವೆ ಅರೆ ವೃತ್ತಾಕಾರದ ಕಾಲುವೆಗಳನ್ನು ರಚಿಸಿ ಅದು ಅಂತರ್ಜಲ ಮರುಪೂರಣ ಮಾಡುವುದಲ್ಲದೆ ಮಳೆ ನೀರನ್ನೂ ಸಂಗ್ರಹಿಸುವಂತೆ ಮಾಡಬಹುದು. ರಚನೆಗಳನ್ನು ಪ್ರವಾಸ ಹಾಗೂ ಮನರಂಜನೆಗೂ ಬಳಸಬಹುದು.
ಲಾಸ್ ಏಂಜಲ್ಸ್ಗೆ ಶೇ.೪೬ರಷ್ಟು ನೀರು ಡೆಲ್ಟಾದಿಂದ ೪೪೬ ಮೈಲು ಉದ್ದದ ಕೊಳವೆಗಳ ಮೂಲಕ ಸ್ಯಾನ್ ಜೋಕ್ವಿನ್ ಕಣಿವೆಯ ಮೂಲಕ ಹಾಯಿಸಿ ಸರಬರಾಜು ಮಾಡಲಾಗುತ್ತಿದೆ. ಅದರ ಹಾದಿಯಲ್ಲಿ ತೆಹಚಾಪಿ ಪರ್ವತಗಳಲ್ಲಿ ನೀರನ್ನು ೨೦೦೦ ಅಡಿ ಎತ್ತರದವರೆಗೂ ಪಂಪ್ ಮಾಡಬೇಕಾಗುತ್ತದೆ. ಚೀನಾದಲ್ಲಿ ಬೀಜಿಂಗ್ ಮತ್ತು ಶಾಂಫಾಯ್ಗೆ ನೀರು ಸರಬರಾಜು ಮಾಡಲು ದಕ್ಷಿಣದ ಯಾಂಗ್ಜೆ ನದಿಯಿಂದ ೨೫೦೦ ರಿಂದ ೩೦೦೦ ಕಿ.ಮೀ.ಗಳಷ್ಟು ದೂರ ನೀರನ್ನು ಪಂಪ್ ಮಾಡಲಾಗುತ್ತಿದೆ. ಆದರೆ ಕೆಲವು ಪರಿಸರವಾದಿಗಳ ಸೋಗಿನಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳು ಅಥವಾ ರಾಜಕಾರಣಿಗಳು ನೇತ್ರಾವತಿಯ ಬೃಹತ್ ಮಳೆನೀರು ಕೊಯ್ಲಿನ ಪ್ರಾಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಶೇ.೯೦ರಷ್ಟು ಹೋಟೆಲ್ ಉದ್ಯಮದವರು ಹಾಗೂ ಇತರ ಹತ್ತು ಲಕ್ಷ ಜನ ಕರಾವಳಿ ಜಿಲ್ಲೆಯವರಾಗಿದ್ದು ಅವರಿಗೆ ನೇತ್ರಾವತಿ ಪ್ರಾಯೋಜನೆಯನ್ನು ವಿವರಿಸಿ ಹೇಳಬೇಕಾಗಿದೆ. ನಮ್ಮಲ್ಲಿ ಮುಂದಾಲೋಚನೆ ಇಲ್ಲದಿದ್ದಲ್ಲಿ ನಮ್ಮ ಬೆಂಗಳೂರು ಒಣಗಿ ಬೆಂದ ಬೆಂಗಳೂರಾಗುವ ದಿನಗಳು ಬಹಳ ದೂರವಿಲ್ಲ.

ದೊರೆ ವೀರ ಬಲ್ಲಾಳ ಬೆಂಗಳೂರಿನ ಕಾಡುಗಳಲ್ಲಿ ಭೇಟೆಗಾಗಿ ಹೊರಟು ದಾರಿ ತಪ್ಪಿ ಬಳಲಿದ್ದಾಗ ಅಜ್ಜಿಯೊಬ್ಬಳು ಬೆಂದ ಕಾಳುಗಳನ್ನು ನೀಡಿ ಉಪಚರಿಸಿದ ನೆನಪಿಗಾಗಿ ಬೆಂದಕಾಳೂರು ಎಂಬ ಹೆಸರು ಬಂದಿದೆ. ಅದೇ ವೀರ ಬಲ್ಲಾಳ ಇನ್ನು ೧೫ ವರ್ಷಗಳ ನಂತರ ಬೆಂಗಳೂರಿಗೆ ಭೇಟಿ ನೀಡಿದಲ್ಲಿ ಆತನ ಬಾಯಾರಿಕೆ ತಣಿಸಲು ಇಲ್ಲಿ ತೊಟ್ಟು ನೀರೂ ಉಳಿದಿರುವುದಿಲ್ಲ. ಆಗ ಬೆಂಗಳೂರಿನ ಹೆಸರನ್ನು ನಾವು ಬೆಂದ ಬೆಂಗಳೂರು ಎಂದು ಬದಲಿಸಬೇಕಾಗುತ್ತದೆ. ಆದರೆ ಬಿ.ಬಿ.ಎಂ.ಪಿ. ಎಂಬ ಸಂಕ್ಷೇಪ ಪದವನ್ನು ಬದಲಿಸಲೇ ಬೇಕಾಗಿಲ್ಲ, ಏಕೆಂದರೆ ಅದು ಬೆಂದ ಬೆಂಗಳೂರು ಮಹಾನಗರ ಪಾಲಿಕೆಯಾಗಿರುತ್ತದೆ.

No comments:

Post a Comment