Friday, February 12, 2010

ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಅಥವಾ ಅಕ್ಕಿ ಮೇಲೆ ಆಸೆ ಬೆಕ್ಕಿನ ಮೇಲೆ ಪ್ರೀತಿ

ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಅಥವಾ ಅಕ್ಕಿ ಮೇಲೆ ಆಸೆ ಬೆಕ್ಕಿನ ಮೇಲೆ ಪ್ರೀತಿ

ಅಂದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎಂಬ ಪ್ರಶ್ನೆ ಎಲ್ಲೆಡೆ ಕೇಳಿ ಬರುತ್ತಿದೆ. ನಮ್ಮ ಕೋಲಾರ ಜಿಲ್ಲೆಯಿಂದ ಇಬ್ಬರು ಪ್ರಭಾವಿ ರಾಜಕಾರಣಿಗಳು ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾರೆ. ಆದರೂ ಸಹ ಇವರಿಬ್ಬರೂ ಶಾಶ್ವತ ನೀರಾವರಿಯ ಬಗ್ಗೆ ಸಕಾರಾತ್ಮಕವಾದ ಹೇಳಿಕೆ ನೀಡಿಲ್ಲ. ಒಬ್ಬರು ಜನಾಂದೋಲನ ನಡೆಯಬೇಕು ಎಂದರೆ, ಮತ್ತೊಬ್ಬರು ಎಲ್ಲಿಂದಲೊ ನಿಮಗೆ ನೀರು ತಂದು ಕೊಡುತ್ತೇನೆ, ಎಲ್ಲಿಂದ ಅಂತ ಕೇಳಬೇಡಿ ಅಂತಾರೆ. ಜನಾಂದೋಲನ ನಡೆಯಬೇಕು ನಿಜ ಸ್ವಾಮಿ, ನಿಮ್ಮ ವಿರುದ್ದವಾಗಿ! ಏಕೆಂದರೆ ೫ ಬಾರಿ ಸತತವಾಗಿ ಎಂ.ಪಿ.ಯಾಗಿ ಜನರ ನೀರಿನ ಸಮಸ್ಯೆಗಳನ್ನು ನಿರ್ಲಕ್ಷ ಮಾಡಿದ್ದಕ್ಕಾಗಿ. ಈಗಲೂ ಸಹ ನೀವು ನಿಮ್ಮ ಕಂಟ್ರಾಕ್ಟರುಗಳಿಗೆ ಹಣ ಸಿಗುವ ಕೆರೆ ಹೂಳೆತ್ತುವ ನರೇಗಾ ಕಾರ್ಯಕ್ರಮಗಳಿಗೆ ಹೆಚ್ಚು ಗಮನ ಹರಿಸುತ್ತಿರುವುದು ವಿಷಾದಕರ. ಮತ್ತೊಬ್ಬ ಸಚಿವರು ಎಲ್ಲಿಂದಲೊ ನೀರು ತರುತ್ತೇನೆ ಅಂತಾರೆ, ಎಲ್ಲಿಂದ ಸ್ವಾಮಿ? ಹೇಮಾವತಿಯೊ ಅಥವಾ ಭದ್ರಾ ಮೆಲ್ದಂಡೆ ಯೋಜನೆಯೊ? ಈ ಎರಡೂ ನದಿಗಳಲ್ಲಿ ಈಗಾಗಲೇ ಒಪ್ಪಂದ ಆಗಿರುವ ಜಿಲ್ಲೆಗಳಿಗೆ ಒದಗಿಸಲು ನೀರಿಲ್ಲ. ಇನ್ನು ಹೇಗೆ ನಮ್ಮ ಜಿಲ್ಲೆಗಳಿಗೆ ನೀರು ಬರುತ್ತದೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಒಟ್ಟು ಇರುವ ನೀರು ಕೇವಲ ೨೧ ಟಿ.ಎಂ.ಸಿ. ಹಾಗು ಇದನ್ನು ಪಂಪ್ ಮಾಡಬೇಕಾಗುತ್ತದೆ. ಇದು ಕೇವಲ ಪೇಪರ್ ಪ್ರಾಜೆಕ್ಟ್, ಕೋಲಾರ ಜಿಲ್ಲೆಯ ೧೮ ಕೆರೆಗಳಿಗೆ ನೀರು ಸಿಗುವುದು ಒಂದು ಮರೀಚಿಕೆಯಷ್ಟೆ. ಭಧ್ರ ಮೇಲ್ದಂಡೆ ಸ್ವಾಗತಿಸುವ ರಾಜಕಾರಣಿಗಳು ವಾಸ್ತವಾಂಶಗಳನ್ನು ಅರಿತು ಶಾಶ್ವತ ನೀರಾವರಿಯ ಕುರಿತು ಹೋರಾಟಕ್ಕೆ ಇಳಿಯುವುದು ಒಳ್ಳೆಯದು.

ಎರಡೂ ಜಿಲ್ಲೆಗಳಲ್ಲಿ ಸರಾಸರಿ ೭೪೫ ಮಿ.ಮೀ. ವಾರ್ಷಿಕ ಮಳೆಯಾಗುತ್ತದೆ. ಮಳೆ ಕೊಯ್ಲಿನಿಂದ ಸುಮಾರು ೮.೪೨ ಟಿ.ಎಮ್.ಸಿ ನೀರನ್ನು ಶೇಖರಿಸಬಹುದಾಗಿದೆ. ಎರಡೂ ಜಿಲ್ಲೆಗಳಿಗೆ ಒಟ್ಟು ೬೦ ಟಿ.ಎಂ.ಸಿ. ನೀರು ಬೇಕಾಗುತ್ತದೆ. ಅಂದರೆ ನಮಗೆ ಸುಮಾರು ೫೦ ಟಿ,ಎಂ.ಸಿ.ಗಳಷ್ಟು ನೀರು ಪ್ರತಿ ವರ್ಷ ಕೊರತೆ ಇದೆ. ಈಗಾಗಲೆ ನಾವು ಕೊಳವೆಬಾವಿಗಳಿಂದ ಶೆ. ೯೦ ರಷ್ಟು ಅಂತರ್ಜಲ ಉಪಯೋಗಿಸಿಕೊಂಡು ಬಿಟ್ಟಿದ್ದೇವೆ. ಸತತವಾಗಿ ಎರಡು ವರ್ಷ ಮಳೆ ಬಾರದಿದ್ದಲ್ಲಿ ಎರಡು ಜಿಲ್ಲೆಯ ಜನ ವಲಸೆ ಹೋಗಬೇಕಾಗುತ್ತದೆ. ಇಂತಹ ಧಾರುಣ ಪರಿಸ್ಥಿತಿ ಎದುರಾಗಿದ್ದರೂ ನಮ್ಮ ಜಿಲ್ಲೆಯ ರಾಜ ಕಾರಣಿಗಳ ಅಸಡ್ಡೆ ವರ್ತನೆ ಬಹಳ ಶೋಚನೀಯವಾದದ್ದು.

ಈಗಿನ ಸರ್ಕಾರ ಪರಮಶಿವಯ್ಯನವರ ವರದಿಯನ್ನು ಜಾರಿಗೊಳಿಸಲು ಉತ್ಸುಕರಾಗಿದ್ದಾರೆ. ಆದರೆ ಇವರೆಗೆ ಹಿಂದಿನ ಸರ್ಕಾರಗಳ ಬೇಜವಾಬ್ದಾರಿಯಿಂದ ಡಿ.ಪಿ.ಅರ್.- ಡಿಟೆಲ್ಡ್ ಪ್ರಾಜೆಕ್ಟ್ ರಿಪೋರ್‍ಟ್ ಸಿದ್ಧವಾಗಿಲ್ಲ. ಎನ್.ಅರ್.ಎಸ್.ಎ. ಜೂನ್ ತಿಂಗಳ ವೇಳೆಗೆ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಇದರ ಸಮೇತ ಡಿ.ಪಿ.ಅರ್. ಸಹ ಸಿದ್ಧವಾಗಬೇಕು ಹಾಗೂ ಇದರ ಬಗ್ಗೆ ತಾಂತ್ರಿಕ ಸಮಿತಿಯಿಂದ ಪರಿಶೀಲನೆಯಾಗಬೇಕು. ಈ ಬಾರಿಯ ಬಜೆಟ್‌ನಲ್ಲಿಯೂ ಬರ ಪೀಡಿತ ಜಿಲ್ಲೆಗಳಿಗೆ ಹಣ ಮೀಸಲಿಡುವ ನಿಟ್ಟಿನಲ್ಲಿ ಸರ್ಕಾರದ ವಲಯಗಳಲ್ಲಿ ಗಹನವಾಗಿ ಚರ್ಚೆ ನಡೆಯುತ್ತಿದೆ. ಯಾವದೇ ಆಸಕ್ತಿಯುಳ್ಳ ರಾಜಕಾರಣಿಗಳು ತಮಗಿರುವ ಸಂಪರ್ಕಗಳ ಮೂಲಕ ಎಲ್ಲ ಕೆಲಸಗಳು ಸುಗಮವಾಗಿ ನಡೆಯಲು ಸಹಕರಿಸಿದರೆ ಈ ಯೋಜನೆ ಒಂದು ಹಂತಕ್ಕೆ ತಲಪುತ್ತದೆ.

ಈ ಯೋಜನೆ ಸಾಧುವಾಗಲು ರಾಜ್ಯ ಸರ್ಕಾರವಲ್ಲದೆ ಕೆಂದ್ರ ಸರ್ಕಾರದ ಪಾತ್ರವು ಬಹು ಮುಖ್ಯವಾಗಿ ಬೇಕಾಗುತ್ತದೆ. ಕರಾವಳಿಯ ಜಾರ್ಜ್ ಫರ್ನಾಂಡಿಸ್ ರ್‍ಯೆಲ್ವೆ ಮಂತ್ರಿಯಾಗಿದ್ದಾಗ ಕೊಂಕಣ ರ್‍ಯೆಲ್ವೆ ಪ್ರಾಜೆಕ್ಟ್ ಜಾರಿಯಾಯ್ತು. ಇದರಲ್ಲಿ ಸುಮಾರು ೪೦೦೦ ಹೆಕ್ಟೆರುಗಳಷ್ಟು ಅರಣ್ಯ ನಾಶವಾದರೂ ಕರಾವಳಿಯ ಯಾವುದೇ ಪರಿಸರವಾದಿಗಳು ಚಕಾರವೆತ್ತಲಿಲ್ಲ. ಆದರೆ ಈಗ ಪರಿಸರವಾದಿಗಳ ಸೋಗಿನಲ್ಲಿರುವ ಕೆಲವು ರಾಜಕಾರಣಿಗಳು, ಧರ್ಮಾಧಿಕಾರಿಗಳು ಈ ಯೋಜನೆಗೆ ಆಕ್ಷೇಪ ವ್ಯಕ್ತ ಪಡಿಸುತ್ತಿದ್ದಾರೆ. ನಮ್ಮ ಜಿಲ್ಲೆಂii ಕರಾವಳಿ ಮೂಲದ ಮಂತ್ರಿಗಳ ಆಶೀರ್ವಾದವು ಇವರಿಗಿದೆ ಅಂತ ಕೆಲವು ಬಲ್ಲ ಮೂಲಗಳು ತಿಳಿಸಿದೆ. ಈ ಮಂತ್ರಿಗಳು ಪುತ್ತೂರಿನಲ್ಲಿ ಕೊಟ್ಟಿರುವ ಹೇಳಿಕೆ ಹಾಗು ತುಳು ಸಮ್ಮೇಳನದ ಮುಖ್ಯ ಅತಿಥಿಯಾದದ್ದು ಈ ಸಂದೇಹಕ್ಕೆ ಪೂರಕವಾಗಿದೆ ಹಾಗೂ ಈ ಮಂತ್ರಿಗಳು ಬೇರೆ ಯಾವುದೋ ನದಿಯ ನೀರನ್ನು ತರುತ್ತೇನೆ ಎಂದು ಹೇಳಿರುವುದು ಸಂಶಯಕ್ಕೆ ಆಸ್ಪದ ಮಾಡಿಕೊಟ್ಟಿದೆ. ಮಾಧ್ಯಮಗಳಲ್ಲಿ ಇಷ್ಟು ಚರ್ಚೆಯಾದರೂ ಯಾವುದೇ ಹೇಳಿಕೆ ನೀಡದಿರುವುದು ಇವರಿಗೆ ರಾಜಕೀಯ ಪುನರ್ಜನ್ಮ ಕೊಟ್ಟ ಚಿಕ್ಕಬಳ್ಳಾಪುರದ ಮತದಾರರಲ್ಲಿ ನೋವು ತಂದಿದೆ. ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಧೋರಣೆ ಇದ್ದರೆ ಈ ಯೋಜನೆಯ ಅನುಷ್ಟಾನಕ್ಕೆ ತೊಂದರೆ ಬರುತ್ತದೆ. ಇಂಥಹ ಪರಿಸ್ತಿತಿಯಲ್ಲಿ ಎಂ.ವಿ. ಕೃಷ್ಣಪ್ಪ ಅಥವಾ ಟಿ.ಚನ್ನಯ್ಯ ಕೇಂದ್ರ ಸಚಿವರಾಗಿದ್ದರೆ ಈ ಧಾರುಣ ಪರಿಸ್ಥಿತಿ ನಮ್ಮ ಜಿಲ್ಲೆಗಳಿಗೆ ಬರುತ್ತಿರಲಿಲ್ಲ.








1 comment:

  1. ಪ್ರಿಯರೆ,
    ನನ್ನ ಕಾಮೆಂಟ್ ದೀರ್ಘವಾಯಿತೆಂದು ಕಾಮೆಂಟ್ ಬಾಕ್ಸ್ ಹೇಳುತ್ತಿದೆ. ನಿಮ್ಮ ಇ-ಮೈಲ್ ತಿಳಿಸಿದರೆ ನನ್ನ ಕಾಮೆಂಟ್ ಕಳಿಸುತ್ತೇನೆ.
    ನನ್ನ ಇ-ಮೈಲ್: nesara.mudrana@gmail.com
    ನನ್ನ ಬ್ಲಾಗ್: www.sundararao.blogspot.com

    ReplyDelete