Monday, September 20, 2010

ನರೇಗ ಬದಲು ಫೀಡ್ ಎಂಬ ಕಾರ್ಯಕ್ರಮ ಜಾರಿಗೆ ತನ್ನಿ


18-09-2010ರ `ಸಂಯುಕ್ತ ಕರ್ನಾಟಕ'ದಲ್ಲಿ ನನ್ನ ಲೇಖನ ಪ್ರಕಟವಾಗಿದೆ. ಓದಿ ಅಭಿಪ್ರಾಯ ತಿಳಿಸಿ.
ನರೇಗ ಬದಲು ಫೀಡ್ ಎಂಬ ಕಾರ್ಯಕ್ರಮ ಜಾರಿಗೆ ತನ್ನಿ
ಡಾ.ಮಧುಸೀತಪ್ಪ

ಪರಿಸರ ವಿಜ್ಞಾನಿಗಳ ಪ್ರಕಾರ ಇಂಗಾಲದ ಡೈ ಆಕ್ಸೈಡ್ ಹಾಗೂ ಹಸಿರು ಮನೆ ಅನಿಲಗಳು ತಡೆಯಿಲ್ಲದೆ ಹೆಚ್ಚುವರಿಯಾದರೆ ಧೀರ್ಘಾವದಿ ಸರಾಸರಿ ಜಾಗತಿಕ ತಾಪಮಾನ ೧೪ಲಿ ಸೆ.ನಿಂದ ೨೦೯೯ರ ವೇಳೆಗೆ ೨೦.೧ಲಿ ಸೆ.ಗೆ ಹೆಚ್ಚಲಿದೆ. ೧೭೯೦ ಹಾಗೂ ೨೦೧೦ರ ಅವಧಿಯಲ್ಲಿ ಪರಿಸರದಲ್ಲಿ ಇಂಗಾಲ ಶೇ. ೩೩ರಷ್ಟು ಹಾಗೂ ಮಿಥೇನ್ ಅನಿಲ ಶೇ. ೧೪೯ರಷ್ಟು ಹೆಚ್ಚಿದೆ. ಹಸಿರು ಮನೆ ಅನಿಲಗಳಲ್ಲಿ ಇಂಗಾಲವಲ್ಲದೆ ಮೀಥೇನ್, ನೈಟ್ರಸ್ ಆಕ್ಸೈಡ್ ಹಾಗೂ ಹೈಡ್ರೋಫ್ಲೂರೊ ಕಾರ್ಬನ್ ಅನಿಲಗಳಿವೆ. ಅನಿಯಂತ್ರಿತ ಕೈಗಾರಿಕೆ, ಕಲ್ಲಿದ್ದಲು ಹಾಗೂ ಪ್ರಾಕೃತಿಕ ಅನಿಲಗಳಿಂದ ವಿದ್ಯುತ್ ಉತ್ಪಾದನೆ, ಹಳೆ ತಂತ್ರಜ್ಞಾನದಿಂದ ನಡೆಯುವ ಕೈಗಾರಿಕೆಗಳಿಂದ ಹಾಗೂ ಸಾರಿಗೆ ವಾಹನಗಳಿಂದ (ವಿಮಾನ ಹಾಗೂ ಹಡಗುಗಳು), ರಾಸಾಯನಿಕ ಗೊಬ್ಬರಗಳ ಬಳಕೆಯಿಂದ, ಅವೈಜ್ಞಾನಿಕ ವ್ಯವಸಾಯದಿಂದ, ಕೊಳಚೆ ನಿರ್ಮೂಲನದಲ್ಲಿರುವ ಅವ್ಯವಸ್ಥೆಯಿಂದ ಹಸಿರು ಮನೆ ಅನಿಲಗಳ ಅಂಶ ಹೆಚ್ಚುತ್ತಿದೆ. ಪರಿಸರದಲ್ಲಿರುವ ಶೇ. ೮೦ರಷ್ಟು ಇಂಗಾಲ ಪಳೆಯುಳಿಕೆ ಇಂಧನಗಳ ಬಳಕೆಯಿಂದ ಬಂದರೆ ಇನ್ನು ಶೇ. ೨೦ರಷ್ಟು ಅರಣ್ಯ ನಾಶದಿಂದ ಸೇರುತ್ತಿದೆ. ಪರಿಸರದಲ್ಲಿ ಶೇಖರವಾಗುವ ಈ ಅನಿಲಗಳು ಇನ್‌ಫ್ರಾರೆಡ್ ಕಿರಣಗಳನ್ನು ಭೂಮಿಯಲ್ಲಿ ಹಿಡಿದಿಡುವುದರಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಇದು ಹೆಚ್ಚಾಗುವುದರಿಂದ ಸಮುದ್ರದ ಮಟ್ಟ ಏರುವುದಲ್ಲದೆ, ಹಿಮಗಲ್ಲುಗಳು ಕರಗಿ ಬರಗಾಲ ಹಾಗು ಪ್ರವಾಹಗಳು ಸಂಭವಿಸಲಿವೆ. ಮಾರ್ಚ ೨೦೧೦ರ ಜಾಗತಿಕ ತಾಪಮಾನ ೧೪.೫೪ ಡಿಗ್ರಿ ಸೆ., ಅಂದರೆ ಕಳೆದ ೧೩೦ ವರ್ಷಗಳ ಇತಿಹಾಸದಲ್ಲಿ ಅತ್ಯಂತ ಬಿಸಿಯಾದ ಮಾರ್ಚ್ ತಿಂಗಳು ಎಂದು ದಾಖಲೆ ಮಾಡಿದೆ. ಡಿಸೆಂಬರ್ ೨೦೦೯ರ ಕೋಪನ್‌ಹೇಗನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಪರಿಸರ ಸಮಾವೇಶದಲ್ಲಿ ಭಾಗವಹಿಸಿದ್ದ ರಾಷ್ಟ್ರಗಳು ಜಾಗತಿಕ ತಾಪಮಾನ ೨೦೯೯ರ ವೇಳೆಗೆ ೨ ಡಿಗ್ರಿ ಸೆ.ಗಿಂತ ಹೆಚ್ಚಾಗದೆ ಇರುವಂತೆ ನಿರ್ಣಯವನ್ನು ಅಂಗೀಕರಿಸಿತು. ವಿಮರ್ಶಕರ ಪ್ರಕಾರ ಈ ಸಮಾವೇಶ ಅಮೆರಿಕ ಹಾಗೂ ಚೀನಾ ದೇಶಗಳ ಸಂಕುಚಿತ ಮನೋಭಾವದಿಂದ ಪರಿಸರಕ್ಕೆ ಧಕ್ಕೆ ತರುವ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ನಿಯಂತ್ರಿಸುವ ಅಂತಾರಾಷ್ಟ್ರೀಯ ಕಾನೂನನ್ನು ಜಾರಿಗೆ ತರಲು ವಿಫಲವಾದರೂ, ಭಾಗವಹಿಸಿದ್ದ ಎಲ್ಲ ರಾಷ್ಟ್ರಗಳು ಈ ಅನಿಲಗಳನ್ನು ನಿಯಂತ್ರಿಸುವ ಬಗ್ಗೆ ತಮ್ಮ ದೇಶಗಳಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನು ನೀಡಿರುವುದು ಸ್ವಾಗತಾರ್ಹ.
೫ ವರ್ಷಗಳಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಶೇ.೨೬ರಷ್ಟು ತಗ್ಗಿಸುವುದಾಗಿ ಭಾರತ ಜನವರಿ ೨೦೧೦ರಲ್ಲಿ ವಿಶ್ವಸಂಸ್ಥೆಗೆ ಭರವಸೆ ನೀಡಿದೆ. ಹಾಗಾಗಿ ನಾವು ಇಂಗಾಲವನ್ನು ತಗ್ಗಿಸುವ ವಿಧಾನಗಳನ್ನು ಅನುಸರಿಸಬೇಕಾಗಿದೆ. ಇಂಗಾಲವನ್ನು ನಿಯಂತ್ರಿಸಲು ಇರುವ ವಿಧಾನಗಳೆಂದರೆ ಕಾರ್ಬನ್ ಪ್ರಾಜೆಕ್ಟ್ಸ್, ಕಾರ್ಬನ್ ಕ್ರೆಡಿಟ್ಸ್, ಕಾರ್ಬನ್ ಫಾರ್ಮಿಂಗ್ ಹಾಗು ಕಾರ್ಬನ್ ಟ್ಯಾಕ್ಸಿಂಗ್.

ಕಾರ್ಬನ್ ಪ್ರಾಜೆಕ್ಟ್ಸ್ - ನಮ್ಮ ದೇಶದಲ್ಲಿ ಪಳೆಯುಳಿಕೆ ಇಂಧನಗಳಿಂದ ಶೇ.೬೮ರಷ್ಟು ವಿದ್ಯುತ್ ತಯಾರಾಗುತ್ತಿದ್ದರೆ, ಜಲಶಕ್ತಿಯಿಂದ ಶೇ.೨೧, ನವೀಕರಿಸಬಹುದಾದ ಶಕ್ತಿಗಳಿಂದ ಶೇ.೭ ಹಾಗು ಅಣು ಶಕ್ತಿಯಿಂದ ಶೇ.೪ ವಿದ್ಯುತ್ ತಯಾರಿಸಲಾಗುತ್ತಿದೆ. ತಯಾರಾಗುವ ವಿದ್ಯುತ್‌ನಲ್ಲಿ ಶೇ.೩೦ರಿಂದ ಶೇ.೪೫ ವಿದ್ಯುತ್ ಸೋರಿಕೆಯಿಂದ ಅಥವಾ ವಿದ್ಯುತ್ ಕಳ್ಳ ಸಾಗಾಣಿಕೆಯಿಂದ ನಷ್ಟವಾಗುತ್ತಿದೆ. ಪ್ರಸ್ತುತ ೧೪೯,೦೦೦ ಮೆ.ವ್ಯಾ. ವಿದ್ಯುತ್ ನಮ್ಮ ದೇಶದಲ್ಲಿ ಉತ್ಪಾದನೆಯಾಗುತ್ತಿದ್ದರೆ ೨೦೩೦ರ ವೇಳೆಗೆ ೯೫೦,೦೦೦ ಮೆ.ವ್ಯಾ. ವಿದ್ಯುತ್ ಅವಶ್ಯಕತೆಯಿದೆ. ಇಂಗಾಲವನ್ನು ಕಡಿಮೆಗೊಳಿಸಬೇಕಾದರೆ ಅಥವಾ ಕಾರ್ಬನ್ ಕ್ರೆಡಿಟ್ ಅಂತಾರಾಷ್ಟ್ರೀಯ ಕಾನೂನು ಜಾರಿಯಾದಲ್ಲಿ ನಮ್ಮ ದೇಶದ ಪ್ರಗತಿಯನ್ನು ಕಾಯ್ದುಕೊಳ್ಳಲು ನಾವು ಯಥೇಚ್ಛವಾಗಿ ದೊರೆಯುವ ಸೌರಶಕ್ತಿ, ವಾಯುಶಕ್ತಿ, ಜಲಶಕ್ತಿ ಹಾಗೂ ಜೈವಿಕ‌ಇಂಧನಗಳನ್ನು (ಬಯೋಡೀಸೆಲ್) ಬಳಸಿ ಹೆಚ್ಚು ವಿದ್ಯುತ್ ತಯಾರಿಸಲು ಪ್ರೋತ್ಸಾಹಿಸಬೇಕು. ರಾಷ್ಟ್ರದ ಪ್ರತಿಯೊಂದು ದಾರಿ ದೀಪವನ್ನು ಸೌರಶಕ್ತಿಯಿಂದಲೇ ಉರಿಸಬಹುದು. ಗ್ರಾಮಗಳಲ್ಲಿ ಬಯೋಗ್ಯಾಸನ್ನು ಹಾಗೂ ನಗರಗಳಲ್ಲಿರುವ ಕೊಳಚೆ ನೀರಿನಲ್ಲಿರುವ ಮಿಥೇನ್ ಅನಿಲದಿಂದ ವಿದ್ಯುತ್ತನ್ನು ತಯಾರಿಸಬೇಕು. ಅಲ್ಲದೆ ಅಣು ಒಪ್ಪಂದದಂತೆ ಇನ್ನು ೧೦ ವರ್ಷಗಳಲ್ಲಿ ಉತ್ಪಾದಿಸುತ್ತಿರುವ ಅಣುವಿದ್ಯುತ್ತನ್ನು ಶೇ.೧೦ರಿಂದ ಶೇ.೨೦ಕ್ಕೆ ಏರಿಸಬೇಕು. ಕಲ್ಲಿದ್ದಲು ಹಾಗೂ ಪ್ರಾಕೃತಿಕ ಅನಿಲಗಳಿಂದ ಆದಷ್ಟು ಕಡಿಮೆ ವಿದ್ಯುತ್ತನ್ನು ಉತ್ಪಾದಿಸಬೇಕು. ಜತ್ರೋಪ ಸಸಿಗಳನ್ನು ಬೆಳೆಸಲು ಪ್ರೋತ್ಸಾಹಿಸಿ ಬಯೊಡೀಸಲ್ ತಯಾರಿಸುವುದಲ್ಲದೆ ಕಾರ್ಬನ್ ಕ್ರೆಡಿಟ್ ಸಹ ಪಡೆಯಬಹುದು.
ಕಾರ್ಬನ್ ಕ್ರೆಡಿಟ್ಸ್- ಹಳೆಯ ತಂತ್ರಜ್ಞಾನದಿಂದ ನಡೆಯುತ್ತಿರುವ ಕೈಗಾರಿಕೆಗಳಿಗೆ ಸರ್ಕಾರ ಅನುದಾನ ನೀಡಿ ಅವುಗಳನ್ನು `ಇಂಗಾಲ ಸ್ನೇಹಿ' ಕೈಗಾರಿಕೆಗಳಾಗಿ ಪರಿವರ್ತಿಸಬೇಕು, ಪ್ರತಿ ಕೈಗಾರಿಕೆಗೆ ಇಂಗಾಲದ ಮಿತಿಯನ್ನು ಜಾರಿಗೆ ತರಬೇಕು. ಇದನ್ನು ತಲುಪಲಾರದಂತಹ ಕೈಗಾರಿಕೆಗಳು ಗ್ರಾಮಾಂತರ ಪ್ರದೇಶಗಳನ್ನು ಹಾಗೂ ಅರಣ್ಯ ಪ್ರದೇಶಗಳನ್ನು ದತ್ತು ತೆಗೆದುಕೊಂಡು ಮರಗಳನ್ನು ಬೆಳೆಸುವುದರೊಂದಿಗೆ ತಮ್ಮ ಕಾರ್ಪೊರೇಟ್ ಹೊಣೆಗಾರಿಕೆಯನ್ನು ನಿಭಾಯಿಸಬೇಕು.

ಕಾರ್ಬನ್ ಟ್ಯಾಕ್ಸಿಂಗ್- ಖಾಸಗಿ ಸಾರಿಗೆ, ಸರ್ಕಾರಿ ಸಾರಿಗೆ, ವಿಮಾನ ಸಾರಿಗೆ ಕಂಪನಿಗಳ ಮೇಲೆ ಇಂಗಾಲ ತೆರಿಗೆಯನ್ನು ವಿಧಿಸಬೇಕು. ಅನಗತ್ಯವಾಗಿ ಹೆಚ್ಚು ಇಂಗಾಲವನ್ನು ಹೊರಸೂಸುವ ಎಲ್ಲ ವಾಹನಗಳ ಪರವಾನಿಗೆಯನ್ನು ರದ್ದುಗೊಳಿಸಬೇಕು. ರಿಯಲ್ ಎಸ್ಟೇಟ್ ಕಂಪನಿಗಳು ಕಟ್ಟುವ ಪ್ರತಿ ಚದರ ಅಡಿಗೆ ಇಂಗಾಲ ತೆರಿಗೆ ವಿಧಿಸಬೇಕು. ನಗರಗಳಲ್ಲಿರುವ ಎಲ್ಲ ಕಛೇರಿಗಳು ಶಕ್ತಿ ಸಮರ್ಥವಾಗಿ (ಎನರ್ಜಿ ಎಫಿಷಿಯೆಂಟ್) ಪರಿವರ್ತನೆಯಾಗಬೇಕು ಇಲ್ಲದಿದ್ದಲ್ಲಿ ಅವು ಇಂಗಾಲ ತೆರಿಗೆಯನ್ನು ಪಾವತಿಮಾಡಬೇಕು.

ಕಾರ್ಬನ್ ಫಾರ್ಮಿಂಗ್- ನಮ್ಮ ದೇಶದ ಇಂಗಾಲ ಹೊರಸೂಸುವಿಕೆಯನ್ನು ಕಡಿಮೆಮಾಡುವಲ್ಲಿ ನಮ್ಮ ರೈತರದು ಮಹತ್ತರ ಪಾತ್ರವಿದೆ. ಪ್ರತಿಯೊಬ್ಬ ರೈತನಿಗೆ ತಮ್ಮ ಜಮೀನಿನಲ್ಲಿ ಮರಗಳನ್ನು ಬೆಳೆಸಲು ಸರ್ಕಾರ ಹಣವನ್ನು ಕೊಡಬೇಕು- ಅದು ಫಸಲು ಕೊಡುವ ಮಾವಿನ ಮರವಾಗಿರಬಹುದು ಅಥವಾ ತಂಪು ಕೊಡುವ ಹೊಂಗೆ ಮರವಾಗಿರಬಹುದು. ಪ್ರತಿಯೊಂದು ಮರಕ್ಕೆ ವರ್ಷಕ್ಕೆ ಇಂತಿಷ್ಟು ಬಾಡಿಗೆಯೆಂದು ಸರ್ಕಾರ ಪಾವತಿಸಬೇಕು. ಯಾವುದೇ ಮರ ಕಡಿದರೂ ಜಾಮೀನು ನೀಡಲಾಗದ ಅರೆಸ್ಟ್ ವಾರೆಂಟ್ ಜಾರಿಗೊಳಿಸಬೇಕು. ಇಂದಿಗೂ ಶೇ.೯೦ರಷ್ಟು ಗ್ರಾಮಾಂತರ ಪ್ರದೇಶದಲ್ಲಿ ನೀರು ಕಾಯಿಸಲು ಹಾಗು ಅಡಿಗೆ ಮಾಡಲು ಸೌದೆಯನ್ನು ಉಪಯೋಗಿಸುತ್ತಿದ್ದಾರೆ. ಇದರಿಂದ ಮರಗಳು ನಾಶವಾಗುವುದಲ್ಲದೆ ಹೊಗೆಯಿಂದ ಇಂಗಾಲವು ಹೊರಸೂಸುತ್ತದೆ. ಹಾಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೌರ ಒಲೆಗಳನ್ನು ಹಾಗೂ ಅಡಿಗೆಗೆ ಬಯೋಗ್ಯಾಸ್ ಬಳಕೆಯನ್ನು ಪ್ರೋತ್ಸಾಹಿಸಬೇಕು. ಇಂಗಾಲವನ್ನು ಭೂಮಿಯಲ್ಲಿ ಹಿಡಿದಿಡುವ ವ್ಯವಸಾಯ ಪದ್ಧತಿಗಳ ಬಗ್ಗೆ ರೈತರಿಗೆ ವಿವರಿಸಿ ಹೇಳಬೇಕು. ಈ ಪದ್ಧತಿಗಳನ್ನು ಅನುಸರಿಸುವುದರಿಂದ ದೊರಕುವ ವಿಶ್ವಸಂಸ್ಥೆಯ ಸಬ್ಸಿಡಿಯನ್ನು ರೈತರಿಗೆ ತಲುಪಿಸಬೇಕು. ೪೦೦೦ ಕ್ಯೂಬಿಕ್ ಕಿ.ಮಿ.ಗಳಷ್ಟು ಮಳೆ ನೀರು ನಮ್ಮ ದೇಶದಲ್ಲಿ ಆಗುತ್ತಿದೆ. ಆದರೂ ನಾವು ವ್ಯವಸಾಯಕ್ಕೆ, ಕೈಗಾರಿಕೆಗೆ ಹಾಗೂ ಕುಡಿಯುವ ನೀರಿಗೆ ಇನ್ನೂ ಅಂರ್ತಜಲವನ್ನು ಅವಲಂಬಿಸಿದ್ದೇವೆ. ನಮ್ಮ ದೇಶದ ಮೇಲೆ ಬೀಳುವ ಸೌರ ಶಕ್ತಿಯಿಂದ ಇಡಿ ಏಶಿಯಾ ಖಂಡದ ಎಲ್ಲ ದೀಪಗಳನ್ನು ಉರಿಸಬಹುದಾದರೂ ನಮ್ಮ ದೇಶದಲ್ಲಿ ೨೪ ಗಂಟೆ ವಿದ್ಯುತ್ ಪೂರೈಕೆಯಿಲ್ಲ. ಪ್ರಪಂಚದ ಅರ್ಧ ಜನಸಂಖ್ಯೆಗೆ ಆಹಾರ ಬೆಳೆಯುವಷ್ಟು ಫಲವತ್ತಾದ ಭೂಮಿ, ಯಥೇಚ್ಚವಾದ ನೀರಿದ್ದರೂ ವಿಯೆಟ್ನಾಮ್, ಮಲೇಶಿಯಾದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಇಡೀ ವಿಶ್ವಕ್ಕೆ ಸಾಕಾಗುವಷ್ಟು ನುರಿತ ರೈತರು, ಕಾರ್ಮಿಕರು, ಇಂಜಿನಿಯರುಗಳಿದ್ದರೂ ಇವರಿಗೆ ಉದ್ಯೋಗ ಕೊಡಲು ನಮಗಾಗುತ್ತಿಲ್ಲ. ೭೫ ಲಕ್ಷಕ್ಕೂ ಹೆಚ್ಚು ಕೋಟಿ ರೂಗಳು ದೇಶದ ಹೊರಗೆ ಸ್ವಿಸ್ ಬ್ಯಾಂಕುಗಳಲ್ಲಿ ಭೂಗತವಾಗಿದ್ದರೆ, ೯೦ ಲಕ್ಷ ಕೋಟಿ ರೂಗಳು ನಮ್ಮ ದೇಶದಲ್ಲಿ ಕಪ್ಪು ಹಣದ ರೂಪದಲ್ಲಿ ಭೂಗತವಾಗಿದೆ. ಇಷ್ಟು ಹಣವಿದ್ದರೂ ನಾವು ಬೇರೆ ದೇಶಗಳಿಂದ ಸಾಲ ತರುವುದು ತಪ್ಪಿಲ್ಲ. ನಮ್ಮಲ್ಲಿರುವ ಈ ಸಂಪತ್ತನ್ನೂ ಉಪಯೋಗಿಸಿಕೊಳ್ಳಲು ಯೋಜನೆಗಳನ್ನು ರೂಪಿಸಬೇಕು. ಈಗಿರುವ ನರೇಗಾ (NREGA), ಆಹಾರ ಸುರಕ್ಷತೆ ಕಾರ್ಯಕ್ರಮಗಳ ಜೊತೆ ಇಂಗಾಲ ತಗ್ಗಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು ಅಥವಾ ಫೀಡ್ (FEED) ಎಂಬ ಕಾರ್ಯಕ್ರಮದ ಅಡಿಯಲ್ಲಿ ಈ ಮೂರು ಕಾರ್ಯಕ್ರಮಗಳನ್ನು ಜೋಡಿಸಿ ಆಹಾರ (ಫುಡ್), ಶಕ್ತಿ (ಎನರ್ಜಿ), ಉದ್ಯೋಗ (ಎಂಪ್ಲಾಯ್ಮೆಂಟ್) ಪರಿಸರ (ಎನವಿರಾನ್‌ಮೆಂಟ್) ಮತ್ತು ಅಭಿವೃದ್ಧಿ (ಡೆವೆಲಪಮೆಂಟ್) ಕಾಯಕ್ರಮವನ್ನು ರೂಪಿಸಬಹುದು. ನರೇಗಾ ಕಾರ್ಯಕ್ರಮಕ್ಕೆ ಪ್ರತಿವರ್ಷ ೪೦,೦೦೦ ಕೋಟಿಗೂ ಹೆಚ್ಚು ಹಣ ಕೇಂದ್ರ ಸರ್ಕಾರ ವೆಚ್ಚಮಾಡುತ್ತಿದೆ. ಇದರಲ್ಲಿ ಶೇ.೪೦%ರಷ್ಟು ಹಣ ದುರುಪಯೋಗವಾಗುತ್ತಿದ್ದರೂ ಈ ಕಾರ್ಯಕ್ರಮಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ನಾವು ಕಾಣಬಹುದುಬಹುತೇಕ ಇಂಗಾಲವು ನಗರಗಳಲ್ಲಿ ಹೊರಸೂಸಿದರೆ ಅದನ್ನು ನಿಯಂತ್ರಿಸುವ ಶಕ್ತಿ ಗ್ರಾಮೀಣ ಪ್ರದೇಶಗಳಲ್ಲಿದೆ. ಇನ್ನು ಮುಂದೆ ಇಂಗಾಲ ಮಿತಿ ಅಂತರಾಷ್ಟ್ರೀಯ ಕಾನೂನು ಜಾರಿಗೆ ಬರುವುದರಿಂದ ನಾವು ಇಂಗಾಲ ಮಿತಿಯ ಬಗ್ಗೆ ಹೆಚ್ಚು ಗಮನಹರಿಸಬೇಕು.

ಇಂಗಾಲ ಮಿತಿಗೊಳಸದಿದ್ದರೆ ನಮ್ಮ ದೇಶದ ಕೈಗಾರಿಕೋತ್ಪಾದನೆ ಮತ್ತು ಆರ್ಥಿಕತೆಯ ಮೇಲೆ ಬಾರಿ ಪೆಟ್ಟಾಗುತ್ತದೆ. ನಮ್ಮ ದೇಶವನ್ನು ಇಂಗಾಲ ಹಾಗೂ ಪರಿಸರ ಸ್ನೇಹಿಯನ್ನಾಗಿ ಮಾಡಲು ಹೆಚ್ಚು ಬಂಡವಾಳ ಹೂಡಬೇಕಾಗುತ್ತದೆ. ನಮ್ಮಲ್ಲಿರುವ ಸೌರ, ವಾಯು, ಜಲ ಶಕ್ತಿಗಳನ್ನೂ, ಅರಣ್ಯ, ಮಳೆನೀರು, ನುರಿತ ಕಾರ್ಮಿಕ ವರ್ಗವನ್ನೂ, ಫಲವತ್ತಾದ ಭೂಮಿ, ಕಪ್ಪು ಹಣವನ್ನೊಳಗೊಂಡ `ಫೀಡ್' ಎಂಬ ಕಾರ್ಯಕ್ರಮ ರಚನೆಮಾಡಲು ಕೇಂದ್ರ ಸರ್ಕಾರ ಚಿಂತಿಸಬೇಕು. ಸ್ವಿಸ್‌ಬ್ಯಾಂಕ್‌ನಲ್ಲಿರುವ ಹಣ ತರಲಾಗದಿದ್ದರೂ, ನಮ್ಮ ದೇಶದಲ್ಲಿ ಭೂಗತವಾಗಿರುವ ೯೦ ಲಕ್ಷ ಕೋಟಿಗೂ ಹೆಚ್ಚು ಕಪ್ಪು ಹಣವನ್ನು ಫೀಡ್ ಕಾರ್ಯಕ್ರಮದ ಹೆಸರಲ್ಲಿ ತೆರಿಗೆ ವಿನಾಯಿತಿ ಬಾಂಡ್ಸ್ ಮಾಡಿ ಹೊರತಂದರೆ ಈ ಕಾರ್ಯಕ್ರಮಕ್ಕೆ ಬೇಕಾಗುವ ಹಣ ದೊರೆಯುವುದಲ್ಲದೆ, ರಾಷ್ಟ್ರೀಯ ನದಿ ಜೋಡಣೆಯಂತಹ ಯೋಜನೆಗಳಿಗೂ ಹಣ ದೊರೆಯುವುದು. ನರೇಗಾ ಕಾರ್ಯಕ್ರಮದಲ್ಲಿ ದುರುಪಯೋಗವಾಗಿರುವ ಅನುಭವದಿಂದ ಪಾಠ ಕಲಿತು ಹಣ ಸೋರುವಿಕೆಯನ್ನು ತಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಫೀಡ್ ಕಾರ್ಯಕ್ರಮ ದೇಶದ ಪಟ್ಟಭದ್ರ ಹಿತಾಸಕ್ತಿಗಳಿಗೆ ಫೀಡ್ ಮಾಡದೆ ದೇಶದ ಅಭಿವೃದ್ಧಿಗೆ ಫೀಡ್ ಮಾಡುವಂತೆ ಎಲ್ಲ ಮುನ್ನೆಚ್ಚರಿಕೆಯನ್ನು ವಹಿಸಬೇಕು.

No comments:

Post a Comment