Thursday, August 12, 2010

ಬರಪೀಡಿತ ಜಿಲ್ಲೆಗಳಿಗೆ ಬೇಕು ನೇತ್ರಾವತಿಯ ಬೈಪಾಸ್ ಸರ್ಜರಿ

ನನ್ನ ಈ ಲೇಖನ ಇಂದಿನ (12/08/2010) `ಸಂಯುಕ್ತ ಕರ್ನಾಟಕ'ದಲ್ಲಿ ಪ್ರಕಟವಾಗಿದೆ. ಓದಿ ತಮ್ಮ ಅಭಿಪ್ರಾಯ ತಿಳಿಸಿ:

೧೮೯೫ರಲ್ಲಿ ಬ್ರಿಟಿಷರು ಇಂದಿನ ಕೇರಳದಲ್ಲಿರುವ ಪಶ್ಚಿಮಾಭಿಮುಖವಾಗಿ ಹರಿಯುತ್ತಿದ್ದ ಪೆರಿಯಾರ್ ನದಿಗೆ ಪಶ್ಚಿಮಘಟ್ಟಗಳಲ್ಲಿ ಅಣೆಕಟ್ಟು ಕಟ್ಟಿ ಕಾಲುವೆ ಮಾಡಿ ಪೂರ್ವಭಿಮುಖವಾಗಿ ಹರಿಸಿ ತಮಿಳುನಾಡಿನ ಬರಪೀಡಿತ ಜಿಲ್ಲೆಗಳಿಗೆ ಹರಿಸುವುದಲ್ಲದೆ ವೇಗೈ ನದಿಗೆ ಜೋಡಣೆ ಮಾಡಿದರು, ಈ ಯೋಜನೆ ಇಂದಿಗೂ ಯಶಸ್ವಿಯಾಗಿ ತಮಿಳುನಾಡಿನ ಬರಪೀಡಿತ ಜಿಲ್ಲೆಗಳಿಗೆ ನೀರುಣಿಸುತ್ತಿದೆ. ಅದೆ ರೀತಿ ಸ್ವಾತಂತ್ರ ಬಂದ ನಂತರ ಭಾರತದ ಮೂಲಕ ಪಾಕಿಸ್ತಾನಕ್ಕೆ ಹರಿಯುವ ಇಂಡಸ್ ನದಿಯ ಹಂಚಿಕೆ ವಿಚಾರದಲ್ಲಿ ವಿವಾದವಾದಾಗ ಪೂರ್ವದ ಉಪನದಿಗಳನ್ನು ಭಾರತಕ್ಕೆ ಕೊಟ್ಟು ಪಶ್ಚಿಮದ ಉಪನದಿಗಳನ್ನು ಪಾಕಿಸ್ತಾನಕ್ಕೆ ನೀಡಲಾಯಿತು, ಹಾಗೂ ಪೂರ್ವ ಉಪನದಿಗಳಿಂದ ನೀರು ಪಡೆಯುತ್ತಿದ್ದ ಪಾಕಿಸ್ತಾನದ ಪ್ರದೇಶಕ್ಕೆ ಅಮೇರಿಕಾ, ಇಂಗ್ಲೆಂಡ್ ಹಾಗು ವಿಶ್ವ ಬ್ಯಾಂಕಿನ ನೆರವನ್ನು ಕೊಟ್ಟು ಪಶ್ಚಿಮದ ಉಪನದಿಗಳ ಹೆಚ್ಚುವರಿ ನೀರನ್ನು ಪೂರ್ವಕ್ಕೆ ತಿರುಗಿಸಲಾಯಿತು. ಚೀನಾ ದೇಶದಲ್ಲಿ ದಕ್ಷಿಣದ ಯಾಂಗ್ಸೆ ನದಿಯನ್ನು ಉತ್ತರದ ಹಳದಿ ನದಿಗೆ ಜೋಡಿಸಲಾಗಿದೆ. ಇದಲ್ಲದೆ ಹಿಮಾಲಯದ ಬಯಾಂಕ ಪರ್ವತಗಳಲ್ಲಿ ಅಣ್ವಸ್ತ್ರಗಳಿಂದ ಕಾಲುವೆ ಕೊರೆದು ಚೈನಾದ ಮರಳುಗಾಡಿಗೆ ಬ್ರಹ್ಮಪುತ್ರ ನದಿಯನ್ನು ಹರಿಸುವ ಯೋಜನೆ ಸಿದ್ಧಗೊಂಡಿದೆ. ಇದಲ್ಲದೆ ವಿಶ್ವದಲ್ಲಿ ಅನೇಕ ನದಿ ತಿರುವು ಯೋಜನೆಗಳು ಅನುಷ್ಠಾನವಾಗಿವೆ. ಆಗಿನ ಎನ್.ಡಿ.ಎ. ಸರ್ಕಾರ ಮಹತ್ತರ ರಾಷ್ಟ್ರೀಯ ನದಿ ಜೋಡಣೆಯ ಕನಸನ್ನು ಕಂಡಿತ್ತು. ಗಂಗಾ ಹಾಗೂ ಬ್ರಹ್ಮಪುತ್ರ ನದಿಗಳು ಅಂತರರಾಷ್ಟ್ರೀಯ ನದಿಗಳಾಗಿರುವುದರಿಂದ ಬೇರೆ ದೇಶಗಳ ಅಕ್ಷೇಪಣೆ ಬರಬಹುದು. ಆದರೆ ಮಹಾನದಿ-ಗೋದಾವರಿಯಿಂದ ಪ್ರತಿವರ್ಷ ಸಮುದ್ರಕ್ಕೆ ಹರಿಯುವ ೯೩೦ ಟಿ.ಎಂ.ಸಿ.ಗೂ ಹೆಚ್ಚು ನೀರನ್ನು ಕೃಷ್ಣಾ -ಪೆನ್ನಾರ್-ಪಾಲಾರ್-ಕಾವೇರಿ-ಗುಂಡಾರ್-ವೇಗೈ ನದಿಗಳಿಗೆ ಜೋಡಿಸಿದರೆ ಆಂಧ್ರ-ಕರ್ನಾಟಕ-ತಮಿಳುನಾಡಿಗೆ ಉಪಯೋಗವಾಗಲಿದೆ. ಇದರಿಂದ ಕಾವೇರಿ ಡೆಲ್ಟಾ ಪ್ರದೇಶಕ್ಕೆ ಹೆಚ್ಚು ನೀರು ದೊರೆತರೆ, ಕಾವೇರಿಯ ಮೇಲ್‌ಹರಿವಿನಲ್ಲಿರುವ ಕರ್ನಾಟಕದ ಬರಪೀಡಿತ ಜಿಲ್ಲೆಗಳಿಗೆ ನೀರೊದಗಿಸಿ, ಕಾವೇರಿ ವಿವಾದಕ್ಕೂ ತೆರೆಯೆಳೆಯಬಹುದು. ಪೆನಿನ್ಸೂಲಾರ್ ರಿವರ್ ಗ್ರಿಡ್ ಯೋಜನೆಯಲ್ಲಿ ಈ ನದಿಗಳಲ್ಲದೆ ನೇತ್ರಾವತಿ-ಹೇಮಾವತಿ ಜೋಡಣೆಯು ಒಂದು ಭಾಗವಾಗಿದೆ. ಆದರೆ ಪರಮಶಿವಯ್ಯನವರ ವರದಿಯಂತೆ ನೇತ್ರಾವತಿ ನದಿಯ ಜಲಾನಯನದ ಪ್ರದೇಶದಲ್ಲಿ ಮಳೆ ಕೊಯ್ಲು ಮಾಡಿ ಕೇವಲ ೪೨ ಟಿ.ಎಂ.ಸಿ.ಯಷ್ಟು ನೀರನ್ನು ೪೦೦೦ದಿಂದ ೬೦೦೦ ಮಿ.ಮೀ. ಮಳೆಯಾಗುವ ಜುಲೈ-ಸೆಪ್ಟೆಂಬರ್ ತಿಂಗಳಲ್ಲಿ ಪೂರ್ವಕ್ಕೆ ಹರಿಸಿ, ಹೇಮಾವತಿಯಲ್ಲಿರುವ ಹೆಚ್ಚುವರಿ ನೀರಿಗೆ ಬೆರೆಸಿ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಕೊಡಲಾಗುತ್ತದೆ. ಈ ಯೋಜನೆಯಲ್ಲಿ ಪಶ್ಚಿಮ ಘಟ್ಟಗಳಲ್ಲಿ ಯಾವುದೇ ಅಣೆಕಟ್ಟನ್ನು ಕಟ್ಟುವುದಿಲ್ಲ ಹಾಗೂ ಪಶ್ಚಿಮ ಘಟ್ಟಗಳನ್ನು ಸೀಳುವ ಅವಶ್ಯಕತೆಯಿಲ್ಲ. ಮೋಹನ್ ಹೆಗಡೆಯವರು ಯೋಜನೆಯ ಬಗ್ಗೆ ಸರಿಯಾಗಿ ಅರಿತು, ಅವಶ್ಯಕತೆಯಿದ್ದರೆ ಪರಮಶಿವಯ್ಯನವರನ್ನು ಭೇಟಿ ಮಾಡಿ ಚರ್ಚಿಸಿದರೆ ಅವರಿಗಿರುವ ಆತಂಕ ದೂರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಮಿತಿಯಾದ ರೀತಿಯಲ್ಲಿ ನದಿ ಜೋಡಣೆಗಳು ಯಶಸ್ವಿಯಾಗಿರುವ ಅನೇಕ ಉದಾಹರಣೆಗಳಿದ್ದರೆ, ದುರಾಸೆಯಿಂದ ಮಾಡಿರುವ ಅನೇಕ ನದಿ ಜೋಡಣೆಗಳು ವಿಫಲವಾಗಿರುವ ಅನೇಕ ಉದಾಹರಣೆಗಳಿವೆ. ಸಾವಿರಾರು ಚದರ ಕಿ.ಮೀ.ಗಳಷ್ಟು ನೀರು ನಮ್ಮ ದೇಶದಲ್ಲಿ ಸಮುದ್ರದ ಪಾಲಾಗುತ್ತಿದ್ದರೆ, ಆಫ್ರಿಕಾ ಖಂಡದ ಇಥಿಯೋಪಿಯದಂತಹ ರಾಷ್ಟ್ರಗಳಲ್ಲಿ ಭಾರತದ ಕಂಪೆನಿಗಳು ಕಡಿಮೆ ದರದಲ್ಲಿ ಆಹಾರ ಉತ್ಪಾದನೆಗಾಗಿ ಲಕ್ಷಾಂತರ ಹೆಕ್ಟೇರುಗಳಷ್ಟು ಜಮೀನನ್ನು ಖರೀದಿಸಿವೆ. ಶೇ.೯೦ರಷ್ಟು ಮಂದಿ ನಮ್ಮ ರಾಷ್ಟ್ರದಲ್ಲಿ ವ್ಯವಸಾಯ ಅವಲಂಬಿತರಾಗಿದ್ದರೂ ವ್ಯವಸಾಯಕ್ಕೆ ಬೇಕಿರುವ ನೀರೊನ್ನೊದಗಿಸದೆ ರಾಷ್ಟ್ರಕ್ಕೆ ಅಗತ್ಯವಿರುವ ಧವಸದಾನ್ಯಗಳನ್ನು ಬೆಳೆಯಲಿಕ್ಕಾಗದೆ, ವಿಯೆಟ್ನಾಮ್, ಮಲೇಶಿಯಾದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಭಾರತ ಎದುರಿಸುತ್ತಿದೆ. ಇನ್ನು ಮುಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಬನ್ ಕ್ರೆಡಿಟ್ ಸಹ ಜಾರಿಗೆ ಬರಲಿದೆ. ಅಂದರೆ ಪ್ರತಿ ದೇಶದಲ್ಲಿ ವಾಹನ ಹಾಗೂ ಕೈಗಾರಿಕೆಗಳಿಂದ ಭೂಮಿಗೆ ಉಗುಳುವ ಇಂಗಾಲವನ್ನು ಹೀರಲು ಮರಗಳನ್ನು ಬೆಳೆಸಬೇಕಾಗುತ್ತದೆ. ಆರ್ಥಿಕತೆಗೆ, ಆಹಾರ, ಕಾರ್ಬನ್ ಕ್ರೆಡಿಟ್, ಕೈಗಾರಿಕೆ, ವ್ಯವಸಾಯ ಹಾಗೂ ಮುಖ್ಯವಾಗಿ ಕುಡಿಯುವುದಕ್ಕೆ ನೀರು ಅತ್ಯವಶ್ಯಕ. ಆದುದರಿಂದ ನಾವು ನದಿಜೋಡಣೆ ಒಂದೇ ಅಲ್ಲದೆ, ನೀರನ್ನು ಸಂಗ್ರಹಿಸುವ ಹಾಗೂ ಉಪಯೋಗಿಸುವ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ನದಿಜೋಡಣೆಯ ಬಗ್ಗೆ ಮಾತನಾಡುವವರನ್ನು ಪರಿಸರವಾದಿಗಳು ಅಸ್ಪೃಶ್ಯರಂತೆ ನೋಡುವುದನ್ನು ಬಿಟ್ಟು ಪರಿಸರಕ್ಕೆ ಧಕ್ಕೆಯಾಗದಂತೆ ಈ ರೀತಿಯ ಯೋಜನೆಗಳನ್ನು ಅಳವಡಿಸಲು ಸಹಕರಿಸಬೇಕು. ಮೋಹನ್ ಹೆಗ್ಡೆಯವರು ಈ ಯೋಜನೆಗೆ ರಾಜಕೀಯ ಬಣ್ಣವನ್ನು ಬಳೆದು ಬರ ಪೀಡಿತ ಜಿಲ್ಲೆಗಳ ಜನರ ಬರೆಗಳಿಗೆ ಉಪ್ಪು ಸವರಿದ್ದಾರೆ. ಪರಮಶಿವಯ್ಯನವರ ನೇತ್ರಾವತಿ ಮಳೆ ಕೊಯ್ಲು ಬರಪೀಡಿತ ಜಿಲ್ಲೆಗಳಿಗೆ ಈ ಮುಂದಿನ ಕಾರಣಗಳಿಗಾಗಿ ಅವಶ್ಯಕವಿದೆ.
೪೪೦೦ ಮಿ.ಮೀ. ಮಳೆಯಾಗುವ ಕರಾವಳಿ ಪ್ರದೇಶದಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವವಿರುವಾಗ ಸರಾಸರಿ ೬೭೪ ಮಿ.ಮೀ. ಮಳೆಯಾಗುವ ಬರಡು ಭೂಮಿಯಲ್ಲಿ ಮಳೆಗಾಲದಲ್ಲೂ ನೀರಿಗೆ ಪರದಾಡುವ ಪರಿಸ್ಥಿತಿ ಇದೆಯೆಂದರೆ ಆಶ್ಚರ್ಯವಿಲ್ಲ. ಸರ್ಕಾರದ ಅಂಕಿ ಅಂಶಗಳ ಅನ್ವಯ ಬರಪೀಡಿತ ಜಿಲ್ಲೆಗಳಲ್ಲಿ ೪೮೬ರಿಂದ ೭೦೦ ಮಿ.ಮೀ. ಮಳೆಯಾಗುತ್ತದೆ. ಕನಿಷ್ಠ ೫೦ ಮಿ.ಮೀ. ಮಳೆ ರಭಸವಾಗಿ ಮೂರು ಗಂಟೆ ಕಾಲ ಸುರಿದರೆ ಕೆರೆಗಳಿಗೆ ನೀರು ಬರುತ್ತದೆ. ಈ ಜಿಲ್ಲೆಗಳಲ್ಲಿ ವಾರ್ಷಿಕ ೧೭ರಿಂದ ೪೫ ದಿನಗಳು ಮಳೆಯಾಗುತ್ತದೆ. ಎರಡು ಗಂಟೆಗೂ ಹೆಚ್ಚು ಮಳೆಯಾಗುವ ದಿನಗಳು ತೀರ ವಿರಳ. ಮಳೆಯಾದರೂ ಈ ಬಿಸಿಲುನಾಡಿನಲ್ಲಿ ನೀರು ಆವಿಯಾಗುವುದರಿಂದ, ಭೂಮಿಗೆ ಜಿನುಗುವುದರಿಂದ ಹಾಗೂ ಅಂತರ್ಜಲಕ್ಕೆ ಹಿಂಗುವುದರಿಂದ ಕೆರೆಗಳಲ್ಲಿ ನೀರು ಕೆಲವು ತಿಂಗಳುಗಳಿಗಿಂತ ಹೆಚ್ಚು ನಿಲ್ಲಲಾರದು. ಸತತವಾಗಿ ಹಾಗು ನಿರ್ದಿಷ್ಟ ಕಾಲದಲ್ಲಿ ಮಳೆಯಾಗದ ಕಾರಣ ಹಾಗೂ ಮಳೆಯಾಗುವ ದಿನಗಳು ಕ್ರಮೇಣ ಕಡಿಮೆಯಾಗುತ್ತಿರುವುದರಿಂದ ಕೆರೆಗಳಲ್ಲಿ ನೀರು ಶೇಖರಣೆಯಾಗುತ್ತಿಲ್ಲ. ಈ ಜಿಲ್ಲೆಗಳಲ್ಲಿ ಒಟ್ಟು ೧೫,೪೪೨ ಕೆರೆಗಳಿವೆ. ೨೦೦೬ರಲ್ಲಿ ಶೇ.೯೦ರಷ್ಟು ಕೆರೆಗಳಿಗೆ, ೨೦೦೭ರಲ್ಲಿ ಶೇ.೪೫ ಹಾಗೂ ೨೦೦೮ರಲ್ಲಿ ಶೇ.೭೦ರಷ್ಟು ಕೆರೆಗಳಿಗೆ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಒಂದು ತೊಟ್ಟು ಸಹ ನೀರು ಬಂದಿಲ್ಲ. ೩ ಕೋಟಿ ಜನಸಂಖ್ಯೆಯ ಹಳೆ ಮೈಸೂರಿನ ೧೪ ಬರಪೀಡಿತ ಜಿಲ್ಲೆಗಳ ೮೬ ತಾಲ್ಲೂಕುಗಳು ಹಾಗು ೩,೨೫೦೦೦ ಕೋಟಿ ಗೃಹ ಉತ್ಪನ್ನ ನೀಡುವ ಬೆಂಗಳೂರು ನಗರ ನೀರಿನ ಬವಣೆಯಿಂದ ನರಳುತ್ತಿದೆ. ನಮ್ಮ ರಾಜ್ಯದಲ್ಲಿ ನೀರಿನ ಹಂಚಿಕೆಯ ವಿಷಯದಲ್ಲಿ ಸಾಕಷ್ಟು ಅಸಮತೋಲನ ಆಗಿದೆ. ಹಳೆ ಮೈಸೂರು ಪ್ರಾಂತ್ಯಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ. ಆದುದರಿಂದಲೆ ೧೪ ಜಿಲ್ಲೆಗಳ ೮೬ ತಾಲ್ಲೂಕುಗಳು ಬರಪೀಡಿತವಾಗಿವೆ. ಪರಮಶಿವಯ್ಯನವರ ಯೋಜನೆ ಈ ಅಸಮತೋಲನವನ್ನು ನಿವಾರಿಸುವಲ್ಲಿ ಉಪಯೋಗವಾಗಬಹುದು. ಈ ಯೋಜನೆ ೮೬ ತಾಲ್ಲೂಕುಗಳಲ್ಲದೆ ಬೆಂಗಳೂರು ನಗರಕ್ಕೂ ನೀರನ್ನು ತರಲಿದೆ.

ಹಳೆ ಮೈಸೂರಿನ ೧೪ ಜಿಲ್ಲೆಗಳ ಪೈಕಿ (ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡು) ೩೭.೧೪ ಲಕ್ಷ ಹೆಕ್ಟೇರುಗಳಷ್ಟು ಭೂಮಿ ಬಿತ್ತನೆಯಾಗುವ ಪ್ರದೇಶ, ಅದರಲ್ಲಿ ೭.೬೯ ಲಕ್ಷ ಹೆಕ್ಟೇರುಗಳಷ್ಟು ಅಂದರೆ ಶೇ.೧೯%ರಷ್ಟು ಭೂಮಿಗೆ ನೀರಾವರಿ ದೊರತಿದೆ. ಕಾವೇರಿಯಲ್ಲಿರುವ ಒಟ್ಟು ನೀರು ೭೨೭ ಟಿ.ಎಂ.ಸಿ.ಯಷ್ಟು. ಅದರಲ್ಲಿ ಹಳೆ ಮೈಸೂರಿನ ಜಲಾಯನ ಪ್ರದೇಶದಲ್ಲಿ ಉತ್ಪತ್ತಿಯಾಗುವ ನೀರು ೪೨೫ ಟಿ.ಎಂ.ಸಿ. ಅದರಲ್ಲಿ ಕೇವಲ ೨೭೦ ಟಿ.ಎಂ.ಸಿ.ಯಷ್ಟು ನೀರನ್ನು ಉಪಯೋಗಿಸಲು ಟ್ರಿಬ್ಯೂನಲ್ ಆದೇಶಿಸಿದೆ. ಆದುದರಿಂದ ಕೇವಲ ೭,೬೯,೯೮೮ ಹೆಕ್ಟೇರುಗಳಷ್ಟು ಭೂಮಿಗೆ ನೀರಾವರಿಯಾಗುತ್ತಿದೆ. ಕೆ.ಆರ್.ಎಸ್. ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶದ ವಿವಿಧ ಬೆಳೆಗಳಿಗೆ ೬೧.೨೦ ಟಿ.ಎಂ.ಸಿ.ಯಷ್ಟು ನೀರನ್ನು ನಾವು ಈಗಾಗಲೆ ಉಪಯೋಗಿಸುತ್ತಿದ್ದರೆ ಅದನ್ನು ೩೮.೯೮ ಟಿ.ಎಂ.ಸಿ.ಗೆ ಇಳಿಸಲು ಟ್ರಿಬ್ಯೂನಲ್ ಆದೇಶಿಸಿದೆ. ಕಾವೇರಿ ಟ್ರಿಬ್ಯೂನಲ್ ವರದಿಯಂತೆ ೨೭೦ ಟಿ.ಎಂ.ಸಿ.ಯಷ್ಟು ನೀರು ಕಾವೇರಿಯಿಂದ ದೊರೆತಿದ್ದರೂ ಅದರಲ್ಲಿ ೭೦ ಟಿ.ಎಂ.ಸಿ.ಯಷ್ಟು ನೀರು ಕಾವೇರಿ ಜಲಾಯನ ಪ್ರದೇಶದಲ್ಲಿ ಬರುವ ಕೆರೆಗಳ ಲೆಕ್ಕದಲ್ಲಿದೆ. ನೀರಾವರಿ ಇಲಾಖೆಯ ಅನ್ವಯ ಕೆರೆಗಳಿಂದ ಕೇವಲ ೧೫ ಟಿ.ಎಂ.ಸಿ.ಯಷ್ಟು ನೀರು ಮಾತ್ರ ನಮಗೆ ದೊರಕುತ್ತಿದೆ. ಕೇಂದ್ರ ಸರ್ಕಾರ ಬಿಳೆಗೊಂಡ್ಲುವಿನಲ್ಲಿ ಅಳವಡಿಸಿರುವ ಮಾಪನದ ಅನ್ವಯ ಅಧಿಕ ವರ್ಷಗಳಲ್ಲಿ ೧೪೮ ಟಿ.ಎಂ.ಸಿ.ಯಷ್ಟು ಹೆಚ್ಚುವರಿ ಪ್ರತಿ ಸಾಲು ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ (೧೯೨+೧೪೮). ಅಂದರೆ ತಮಿಳುನಾಡಿಗೆ ಕಾವೇರಿ ಟ್ರಿಬ್ಯೂನಲ್ ವರದಿಯಂತೆ ೧೯೨ ಟಿ.ಎಂ.ಸಿ. ನೀರಲ್ಲದೆ ೧೪೮ ಟಿ.ಎಂ.ಸಿ.ಯಷ್ಟು ಹೆಚ್ಚುವರಿ ನೀರು ಹರಿದು ಹೋಗುತ್ತಿದೆ. ಈ ಹೆಚ್ಚುವರಿ ನೀರು ನ್ಯಾಯಯುತವಾಗಿ ಉತ್ಪತ್ತಿಯಾಗುವ ರಾಜ್ಯಕ್ಕೆ ಸೇರಬೇಕಾದದ್ದು. ಟ್ರಿಬ್ಯೂನಲ್ ವರದಿಯು ಸಹ ಹೆಚ್ಚುವರಿ ನೀರು ಯಾರಿಗೆ ಸೇರಬೇಕೆಂದು ಎಲ್ಲೂ ಹೇಳಿಲ್ಲ. ಆದರೆ ೨೦೦೭ರಲ್ಲಿ ಡಿ.ಎಂ.ಕೆ.ಯನ್ನು ಮೆಚ್ಚಿಸಲು ಯು.ಪಿ.ಎ. ಸರ್ಕಾರ ಹೆಚ್ಚುವರಿ ನೀರನ್ನು ಹೇಗೆ ಹಂಚಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ಸಲಹೆ ಕೇಳಿದೆ. ಈ ವಿಚಾರವನ್ನು ಸರ್ವೋಚ್ಛ ನ್ಯಾಯಾಲಯ ಇನ್ನು ಕೈಗೆತ್ತಿಕೊಂಡಿಲ್ಲ. ತಮಿಳುನಾಡಿಗೆ ಈ ವಿವಾದ ನ್ಯಾಯಾಲಯದಲ್ಲಿ ಹೆಚ್ಚು ದಶಕಗಳು ಉಳಿದಷ್ಟು, ೧೪೮ ಟಿ.ಎಂ.ಸಿ.ಯಷ್ಟು ಹೆಚ್ಚುವರಿ ನೀರು ಪ್ರತಿವರ್ಷ ಹರಿದು ಹೋಗುತ್ತಿರುತ್ತದೆ. ಕಳೆದ ಮೂರು ದಶಕಗಳ ನಮ್ಮ ರಾಷ್ಟ್ರದ ರಾಜಕಾರಣ ಗಮನಿಸಿದರೆ ಯಾವುದೇ ಪಕ್ಷ ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯಬೇಕಾದರೆ ತಮಿಳುನಾಡಿನ ಪಕ್ಷಗಳ ಬೆಂಬಲ ಅತ್ಯಗತ್ಯ. ಅಂದರೆ ಕಾವೇರಿಯಿಂದ ಹಳೆ ಮೈಸೂರಿನ ಬರಪೀಡಿತ ಜಿಲ್ಲೆಗಳು ನೀರು ಪಡೆಯುವುದು ನನಸಾಗದ ಕನಸು.
ಕೃಷ್ಣಾ ನದಿಯಿಂದ ನಮ್ಮ ರಾಜ್ಯಕ್ಕೆ ೭೩೪ ಟಿ.ಎಂ.ಸಿ. ಸ್ಕೀಮ್ `ಎ'ನಿಂದ ಹಾಗೂ ೧೮೩ ಟಿ.ಎಂ.ಸಿ. ಸ್ಕೀಮ್ `ಬಿ'ನಿಂದ ಮಂಜೂರಾಗಿದೆ (ಮಂಜೂರಾಗಲಿದೆ). ಅಂದರೆ ಒಟ್ಟು ೯೧೭ ಟಿ.ಎಂ.ಸಿ.ಯಷ್ಟು ನೀರು. ಇದರಲ್ಲಿ ತುಂಗಾಭದ್ರಾ ನದಿಯ ೪೫೦ ಟಿ.ಎಂ.ಸಿ.ಯಷ್ಟು ನೀರು ಸೇರಿದೆ. ಹಳೆ ಮೈಸೂರಿಗೆ ಸ್ಕೀಮ್ `ಎ'ನಿಂದ ೯೬ ಹಾಗೂ ಸ್ಕೀಮ್ `ಬಿ'ನಿಂದ ೨೨ ಟಿ.ಎಂ.ಸಿ.ಯಷ್ಟು ದೊರೆತಿದೆ. ನ್ಯಾಯಯುತವಾಗಿ ಹಳೆ ಮೈಸೂರಿನ ಪಾಲಿನ ತುಂಗಭದ್ರಾ ನದಿಯ ೪೫೦ರಲ್ಲಿ ಕನಿಷ್ಠ ೨೫೦ ಟಿ.ಎಂ.ಸಿ.ಯಷ್ಟಾದರೂ ನೀರು ಕೊಡಬೇಕಾಗಿತ್ತು. ೯೧೭ ಟಿ.ಎಂ.ಸಿ.ಯಲ್ಲಿ ಶೇ.೭೭%ರಷ್ಟು ಹೈದರಾಬಾದ್ ಕರ್ನಾಟಕಕ್ಕೆ ನಮ್ಮ ಸರ್ಕಾರ ಕೊಟ್ಟರೆ, ಉಳಿದ ಶೇ.೧೧% (೧೦೦ ಟಿ.ಎಂ.ಸಿ) ಆಂಧ್ರಪ್ರದೇಶಕ್ಕೆ ಹೋಗುತ್ತಿದೆ. ಇದಲ್ಲದೆ ತೆಲುಗು ಗಂಗಾ ಅಡಿಯಲ್ಲಿ ತಮಿಳುನಾಡಿನ ಚೆನ್ನೈಗೆ ಕೃಷ್ಣಾ ನದಿಯ ಕರ್ನಾಟಕದ ಪಾಲಿನಲ್ಲಿ ೫ ಟಿ.ಎಂ.ಸಿ. ನೀರು ಹೋಗುತ್ತಿದೆ. ಈಗಾಗಲೆ ಅಣೆಕಟ್ಟುಗಳನ್ನು ಕಟ್ಟಿ ಕಾಲುವೆಗಳ ಮೂಲಕ ನೀರನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಆಂಧ್ರಪ್ರದೇಶವು ರಾಷ್ಟ್ರದ ರಾಜಕಾರಣದಲ್ಲಿ ತಮಿಳುನಾಡಿನಷ್ಟೇ ಬಲಿಷ್ಠವಾದದ್ದು ಹಾಗೂ ಹೈದರಾಬಾದ್ ಕರ್ನಾಟಕ ಪ್ರಾಂತ್ಯ ನಮ್ಮ ರಾಜ್ಯ ರಾಜಕಾರಣದಲ್ಲಿ ಪ್ರಬಲವಾಗಿದೆ. ೧೯೫೬ರ ಕರ್ನಾಟಕ ಏಕೀಕರಣದ ನಂತರ ಸರ್ಕಾರ ೧೨,೦೦೦ ಕೋಟಿಗೂ ಹೆಚ್ಚು ಹಣವನ್ನು ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ವೆಚ್ಚ ಮಾಡಿದೆ. ಏಕೀಕರಣದ ನಂತರ ಬಹುತೇಕ ನೀರಾವರಿಯ ಮುಖ್ಯ ಅಭಿಯಂತರರು ಹಾಗೂ ನೀರಾವರಿ ಸಚಿವರು ಉತ್ತರ ಕರ್ನಾಟಕಕ್ಕೆ ಸೇರಿದವರು. ಮಗದಮ್, ಬಾಳೆಕುಂದ್ರೆ ಹಾಗು ಅಂಗಡಿಯವರು ಮುಖ್ಯ ಅಭಿಯಂತರರಾದರೆ, ಇವರಿಗೆ ಬೆಂಬಲವಾಗಿ ವಿರೇಂದ್ರ ಪಾಟೀಲ್, ಖರ್ಗೆ, ಅಲ್ಲಂ ವೀರಭದ್ರಪ್ಪ, ಹೆಚ್.ಕೆ ಪಾಟೀಲರು ನೀರಾವರಿ ಸಚಿವರಾದರು. ಈಗ ಬೊಮ್ಮಾಯಿ ನೀರಾವರಿ ಸಚಿವರಾದರೆ ದೇಸಾಯಿ ನೀರಾವರಿ ಸಲಹೆಗಾರರಾಗಿದ್ದಾರೆ. ಇದರ ಫಲವಾಗಿ ೧೯೫೬ರಿಂದ ಇದುವರೆಗೆ ೨೦ ಲಕ್ಷ ಹೆಕ್ಟೇರುಗಳಷ್ಟು ಭೂಮಿಗೆ ನೀರಾವರಿ ಸೌಲಭ್ಯ ದೊರೆತಿದೆ. ಕಾಂಗ್ರೆಸ್, ಜೆ.ಡಿ.ಎಸ್ ಹಾಗು ಬಿ.ಜೆ.ಪಿ. ಪಕ್ಷಗಳು ಈ ಪ್ರಾಂತ್ಯದ ಬೆಂಬಲವಿಲ್ಲದೆ ಸರ್ಕಾರ ರಚಿಸಲು ಸಾಧ್ಯವಿಲ್ಲ. ಅಂದರೆ ಬರಪೀಡಿತ ಹಳೆ ಮೈಸೂರು ಪ್ರಾಂತ್ಯದ ಎರಡನೆಯ ಕನಸು ಸಹ ಭಗ್ನವಾದಂತೆ.
ಹೇಮಾವತಿ ನದಿಯಿಂದ ಈಗಾಗಲೆ ೫೫ ಟಿ.ಎಂ.ಸಿ.ಯಷ್ಟು ನೀರನ್ನು ನಾವು ಬಳಸುತ್ತಿದ್ದೇವೆ. ಇದು ಕಾವೇರಿಯ ಉಪನದಿಯಾಗಿರುವುದರಿಂದ ಕಾವೇರಿ ಟ್ರಿಬ್ಯೂನಲ್‌ನ ಭೂತಗನ್ನಡಿಯಡಿಯಲ್ಲಿ ಬರುತ್ತದೆ. ಟ್ರಿಬ್ಯೂನಲ್ ಕೇವಲ ೪೫ ಟಿ.ಎಂ.ಸಿ.ಯಷ್ಟು ನೀರನ್ನು ಮಾತ್ರ ಬಳಸಿ ಎಂದು ಆದೇಶಿಸಿದೆ. ಈಗಾಗಲೆ ಹೇಮಾವತಿ ಯೋಜನೆಯಡಿಯಲ್ಲಿ ಬರುವ ಪ್ರದೇಶಗಳಿಗೆ ನೀರುಣಿಸಲು ಸಾದ್ಯವಾಗುತ್ತಿಲ್ಲ. ಇರುವ ಒಂದೇ ಮಾರ್ಗವೆಂದರೆ ನೇತ್ರಾವತಿಯ ಬೃಹತ್ ಮಳೆ ಕೊಯ್ಲು ಯೋಜನೆ. ಆದುದರಿಂದಲೆ ನಾವು ಈ ಯೋಜನೆಯ ಅನುಷ್ಠಾನಕ್ಕೆ ಒತ್ತಾಯಿಸುತ್ತಿದ್ದೇವೆ. ಆದರೆ ನಮ್ಮನ್ನು ನೀತಿಗೆಟ್ಟವರು ಎಂದು ಕೆಲವರು ಬಣ್ಣಿಸಿದರೆ, ಇನ್ನು ಕೆಲವರು ಪರಿಸರ ವಿರೋಧಿಗಳೆಂಬ ಪಟ್ಟ ಕಟ್ಟಿದ್ದಾರೆ. ಪರಮಶಿವಯ್ಯನವರ ಯೋಜನೆಯಿಂದ ಬರಪೀಡಿತ ಜಿಲ್ಲೆಗಳಲ್ಲದೆ, ಬೆಂಗಳೂರು ನಗರಕ್ಕೂ ನೀರು ದೊರೆಯಲಿದೆ. ಶೇ.೯೦ರಷ್ಟು ಹೋಟೆಲ್ ಉದ್ಯಮದವರಲ್ಲದೆ ಸುಮಾರು ೫ ಲಕ್ಷ ಕರಾವಳಿಯ ಜನರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂಬುದನ್ನು ಅನಗತ್ಯ ಹೇಳಿಕೆಗಳು ಕೊಡುವ ಮುಂಚೆ ಈ ನಾಯಕರು ಯೋಚನೆ ಮಾಡಬೇಕು. ಇತ್ತೀಚಿನ ಬೆಳವಣಿಗೆಗಳ ಪ್ರಕಾರ ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಕರ್ನಾಟಕಕ್ಕೆ ಕರಾವಳಿಯಲ್ಲಿರುವ ನೇತ್ರಾವತಿ ನೀರನ್ನು ಕೊಟ್ಟು, ಕಾವೇರಿಯಲ್ಲಿರುವ ೧೪೮ ಟಿ.ಎಂ.ಸಿ. ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಕೊಡಲು ಆಗ್ರಹಿಸಿದ್ದಾರೆ ಹಾಗೂ ಕೃಷ್ಣಾ ನದಿಯ ಟ್ರಿಬ್ಯೂನಲ್ ಸ್ಕೀಮ್ ಬಿ ಯಲ್ಲಿ ೨೭೮ ಟಿ.ಎಂ.ಸಿ.ಗೆ ಬದಲು ಕೇವಲ ೧೮೩ ಟಿ.ಎಂ.ಸಿ.ಯಷ್ಟು ಮಾತ್ರ ಕರ್ನಾಟಕಕ್ಕೆ ಕೊಡಲು ಆದೇಶ ಮಾಡಲು ಹೊರಟಿದೆ. ನಾನು ಈ ಲೇಖನದಲ್ಲಿ ವಿವರಿಸಿರುವಂತೆ ಬರಪೀಡಿತ ಜಿಲ್ಲೆಗಳ ನೀರಿನ ಬವಣೆಯ ನಿವಾರಣೆಗೆ ಒಂದು ಕಡೆ ತಮಿಳುನಾಡು, ಇನ್ನೊಂದು ಕಡೆ ಆಂಧ್ರ ಪ್ರದೇಶ (ಹಾಗು ಹೈದರಾಬಾದ್ ಕರ್ನಾಟಕ) ಹಾಗೂ ಕರಾವಳಿಯ ಪರಿಸರವಾದಿಗಳ ವಿರೋಧವಿದೆ. ಇದು ಹೇಗಿದೆಯೆಂದರೆ ಇತ್ತ ದರಿ, ಅತ್ತ ಪುಲಿ, ಹಿತ್ತಲಲ್ಲಿ ಮತ್ತೊಂದು ಪುಲಿಯೆಂಬಂತೆ.
ಅಂಕಿ ಅಂಶಗಳ ಪ್ರಕಾರ ಹಳೆ ಮೈಸೂರಿನ ಬರಪೀಡಿತ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ೧೯೯೭ರಲ್ಲಿ ೫೦೦ ಅಡಿಗಳು ಇದ್ದದ್ದು ೨೦೦೪ರಲ್ಲಿ ೧೨೦೦ ಅಡಿಗಳಿಗೆ ಕುಸಿದಿದೆ. ೫೭ ತಾಲ್ಲೂಕುಗಳಲ್ಲಿ ಅಂರ್ತಜಲ ಸಂದಿಗ್ಧ ಮಟ್ಟಕ್ಕೆ ತಲುಪಿದೆ. ೧೪,೨೫೭ ವಸತಿ ಪ್ರದೇಶದಲ್ಲಿ ಫ್ಲೋರೈಡ್ ಹಾಗು ನೈಟ್ರೇಟ್ ಲವಣಗಳು ಹಾನಿಕಾರಕ ಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿವೆ. ೩೧.೨೦ ಲಕ್ಷ ಸಣ್ಣ ಹಾಗೂ ಅತಿ ಸಣ್ಣ ರೈತ ಕುಟುಂಬಗಳು ಜೀವನೋಪಾಯಕ್ಕೆ ವ್ಯವಸಾಯವನ್ನು ಅವಲಂಬಿಸಿವೆ. ವ್ಯವಸಾಯವಿರಲಿ ಕುಡಿಯಲು ಶುದ್ಧ ನೀರಿಲ್ಲದೆ ತವಕಿಸುತ್ತಿವೆ. ಈ ಬರಪೀಡಿತ ಜಿಲ್ಲೆಗಳಿಗೆ ನೀರು ಬರುವ ಎಲ್ಲ ಮಾರ್ಗಗಳು ಮುಚ್ಚಿಹೋಗಿವೆ. ಹಳೆ ಮೈಸೂರಿನಲ್ಲಿ ಕಾವೇರಿಯಿಂದ ೪೨೫ ಟಿ.ಎಂ.ಸಿ ಹಾಗು ತುಂಗಾಭದ್ರಾದಿಂದ ೪೫೦ ಟಿ.ಎಂ.ಸಿ.ಯಷ್ಟು ನೀರು ಉತ್ಪತ್ತಿಯಾದರೂ (ಒಟ್ಟು ೮೭೫ ಟಿ.ಎಂ.ಸಿ) ಕೇವಲ ೩೮೮ ಟಿ.ಎಂ.ಸಿ.ಯಷ್ಟು ನೀರು ಮಾತ್ರ ಹಳೆ ಮೈಸೂರಿಗೆ ಲಭಿಸಿದೆ. ಆದುದರಿಂದ ಹಳೆ ಮೈಸೂರಿನ ಶೇ.೬೭% ಬರಪೀಡಿತ ಪ್ರದೇಶವಾಗಿದೆ. ಈ ಪ್ರದೇಶಕ್ಕೆ ನೀರಿನ ಹಂಚಿಕೆಯ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಭಾರಿ ಅನ್ಯಾಯವಾಗಿದೆ. ಹೃದಯದಲ್ಲಿ ಹೇಗೆ ಟ್ರಿಪಲ್ ವೆಸೆಲ್ ಬ್ಲಾಕ್ ಆದಾಗ ಬೈಪಾಸ್ ಸರ್ಜರಿ ಅಗತ್ಯವೊ ಹಾಗೆ ಬರಪೀಡಿತ ಜಿಲ್ಲೆಗಳು ಸಾಯದೆ ಉಳಿಯ ಬೇಕಾದರೆ ಇರುವ ಒಂದೆ ಮಾರ್ಗ ಯಾವುದಾದರು ನದಿಯ ಬೈಪಾಸ್ ಸರ್ಜರಿ. ಏಕೆಂದರೆ ಬರಪೀಡಿತ ಜಿಲ್ಲೆಗಳಲ್ಲಿ ಅಂತರ್ಜಲ ವೃದ್ಧಿಯಾಗಬೇಕಾದರೆ, ಕೆರೆಗಳಲ್ಲಿ ೩೬೫ ದಿನ ಕನಿಷ್ಠ ೩ ಮೀಟರುಗಳಷ್ಟು ನೀರು ಸತತವಾಗಿ ೧೫ಕ್ಕೂ ಹೆಚ್ಚು ವರ್ಷಗಳು ನಿಲ್ಲಬೇಕು. ಒತ್ತುವರಿಯಾಗಿರುವ ಅರಣ್ಯ ಪ್ರದೇಶವನ್ನು ತೆರುವು ಮಾಡಿ ಶೇ.೮%ರಷ್ಟು ಇರುವ ಅರಣ್ಯ ಪ್ರದೇಶವನ್ನು ಶೇ.೩೦ಕ್ಕೆ ಏರಿಸಬೇಕು. ಇದನ್ನು ಕೇವಲ ನೀರಿನ ಶೇಖರಣೆ, ಮಳೆ ಕೊಯ್ಲು, ಮಿತವಾದ ನೀರಿನ ಬಳಕೆ ಅಥವಾ ಕೆರೆಗಳ ಅಭಿವೃದ್ಧಿಯಿಂದ ಮಾತ್ರ ಮಾಡಲು ಸಾದ್ಯವಿಲ್ಲ. ಇವೆಲ್ಲವೂ ಹೃದ್ರೋಗಿ ಕೊಲೆಸ್ಟ್ರಾಲ್ ತಗ್ಗಿಸುವುದು, ಧೂಮಪಾನ ಬಿಡುವುದು ಹಾಗೂ ದೇಹದ ತೂಕವನ್ನು ಕರಗಿಸುವ ವಿಧಾನಗಳಂತೆ. ಯಾವುದಾದರೂ ನದಿಯಿಂದ ಬೈಪಾಸ್ ಸರ್ಜರಿ ಅತ್ಯಗತ್ಯ ಇರುವಂತೆ, ೧೫,೪೪೨ ಕೆರೆಗಳಿಗೆ ಆಂಜಿಯೊ ಪ್ಲಾಸ್ಟಿಯೂ ಅಗತ್ಯವಿದೆ. ಕೆರೆಗಳ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಕೆರೆಗಳ ಜೀರ್ಣೋದ್ದಾರ ಕಾರ್ಯವು ಪ್ರಾರಂಭವಾಗಬೇಕು. ಯಾವ ನದಿಯಿಂದ ಡಾ.ಯಡ್ಯೂರಪ್ಪನವರು ಬೈಪಾಸ್ ಮಾಡುತ್ತಾರೊ ಇದು ಅವರ ವಿವೇಚನೆಗೆ ಬಿಟ್ಟದ್ದು. ನನಗೆ ಕಂಡುಬರುವಂತೆ ನೇತ್ರಾವತಿ ನದಿಯಲ್ಲದೆ ಬೇರೆ ಮಾರ್ಗ ಅವರಿಗಿಲ್ಲ ಅಥವಾ ಮೂರು ಕೋಟಿ ಜನರನ್ನು ಇನ್ನು ೧೦ ವರ್ಷಗಳಲ್ಲಿ ನೀರಿರುವ ಜಾಗಕ್ಕೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಬೇಕು. ಬರಪೀಡಿತ ಜಿಲ್ಲೆಯ ಜನ ಮೊಸಳೆ ಕಣ್ಣೀರಿನ ಜಾಣ ಉಪಾಯಗಳನ್ನು ರಾಜಕಾರಣಿಗಳು ಹಾಗು ಪರಿಸರವಾದದ ಸೋಗಿನಲ್ಲಿರುವ ಬುದ್ಧಿಜೀವಿಗಳಿಂದ ಪದೇ ಪದೇ ಕೇಳಿ ಬೇಸತ್ತಿದ್ದಾರೆ. ಬಣ್ಣದ ಕನಸೊ, ನನಸಾಗದ ಕನಸೊ ಆದರೆ ನೇತ್ರಾವತಿಯ ತಿರುವೇ ಶಿವ ಶಿವ ಅಥವಾ ದುಸ್ಸಾಹಸ ಎನ್ನುವವರ ದುಃಸ್ವಪ್ನ ಬರಪೀಡಿತ ಜನರಿಗೆ ಬೀಳದಿರಲಿ ಎಂದು ಆಶಿಸುತ್ತೇನೆ.

1 comment:

  1. very good post sir,we shud do something for the district....these politicians do nothing,except begging for votes,they never want to protest for permanent water solutions...ppl also behav like that....just neglegency.....they dont knw,,wt are the problems ppl facing with fluorosis.....sir pls mail me power point presentation of parama shivayya and other reports if you have,so that i wil also try to bring awarenes about it,definitely i wil do my best for my district...suneelkrishna108@gmail.com
    9901996824

    ReplyDelete